ದೇಶ

ಬಿಜೆಪಿ‌ಯನ್ನು ಟೀಕಿಸಲು ಹೋಗಿ ತಾನೇ ಬೆತ್ತಲಾದ ಕಾಂಗ್ರೆಸ್

ಸಂಸತ್ತಿನಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನ‌ದಲ್ಲಿ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೋಲಾಹಲ ಎಬ್ಬಿಸಿದ್ದಾರೆ. ಈ ಹೇಳಿಕೆಗೆ ತಿರುಗಿ ಬಿದ್ದಿರುವ ಬಿಜೆಪಿ ಸದಸ್ಯರು, ಖರ್ಗೆ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ ಘಟನೆ ನಡೆದಿದೆ.

ಬಿಜೆಪಿಯವರು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ‌ಯ ಭಾರತ್ ಜೋಡೋ ಯಾತ್ರೆ‌ಯನ್ನು ‘ಭಾರತ್ ತೋಡೋ ಯಾತ್ರೆ’ ಎಂಬುದಾಗಿ ಲೇವಡಿ ಮಾಡಿದ್ದರು. ಇದಕ್ಕೆ ತಿರುಗೇಟು ನೀಡುವ ಭರದಲ್ಲಿ ಖರ್ಗೆ ವಿವಾದವನ್ನು ಮೈಮೇಲೆಳೆದುಕೊಂಡಿದ್ದಾರೆ. ವಿವಾದಾತ್ಮಕ ಪದಗಳನ್ನಾಡುವ ಮೂಲಕ ಇದೀಗ ಬಿಜೆಪಿ‌ಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ನಿಮ್ಮ ಮನೆಯ ನಾಯಿಯಾದರೂ ಈ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದೆಯೇ ಎಂದು ಬಿಜೆಪಿ ವಿರುದ್ಧ ನಾಲಿಗೆ ಹರಿಯಬಿಟ್ಟಿದ್ದಾರೆ. ದೇಶಕ್ಕೆ ಕಾಂಗ್ರೆಸ್ ಸ್ವಾತಂತ್ರ್ಯ ತಂದುಕೊಟ್ಟಿದೆ. ಇಂದಿರಾ ಗಾಂಧಿ, ರಾಜೀವ್ ಗಾಂಧಿ ಸೇರಿದಂತೆ ಅನೇಕರು ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ಆದರೆ ಕೊನೇ ಪಕ್ಷ ಈ ದೇಶಕ್ಕಾಗಿ ನಿಮ್ಮ ಮನೆಯ ನಾಯಿಯಾದರೂ ಪ್ರಾಣಾರ್ಪಣೆ ಮಾಡಿದೆಯೇ ಎಂದು ಪ್ರಶ್ನಿಸಿದ್ದಾರೆ. ಹಾಗಿದ್ದರೂ ಬಿಜೆಪಿಗರು ದೇಶಭಕ್ತರು ಎಂದು ಹೇಳಿಕೊಳ್ಳುತ್ತಾರೆ. ಕಾಂಗ್ರೆಸ್ ಏನೇ ಮಾಡಿದರೂ ಅದನ್ನು ದೇಶದ್ರೋಹಿ ಎಂದು ಕರೆಯುತ್ತಾರೆ ಎಂದು ಖರ್ಗೆ ಹೇಳಿದ್ದಾರೆ.

ಹಾಗೆಯೇ ಚೀನಾ – ಭಾರತ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಸಂಸತ್ತಿನ‌ಲ್ಲಿ ಮಾತನಾಡಲು ಅವಕಾಶ ನೀಡದ ಹಿನ್ನೆಲೆಯಲ್ಲಿ, ಬಿಜೆಪಿ ಸರ್ಕಾರ ಹೊರ ನೋಟಕ್ಕೆ ಸಿಂಹದಂತೆ ಮಾತಡುತ್ತದೆ. ಆದರೆ ಇಲಿಯಂತೆ ಇರುತ್ತಾರೆ ಎನ್ನುವ ಮೂಲಕ ನಾಲಿಗೆ ಹರಿಯ ಬಿಟ್ಟಿದ್ದಾರೆ.

ಖರ್ಗೆ ಅವರ ಈ ವಿವಾದಾತ್ಮಕ ಹೇಳಿಕೆಗೆ ಬಿಜೆಪಿ ಕ್ಷಮೆಯಾಚಿಸುವಂತೆ ಆಗ್ರಹಿಸಿದೆ. ಅಲ್ವಾರ್‌ನಲ್ಲಿ ನಿಂದನಾತ್ಮಕ ಭಾಷೆ ಬಳಕೆ ಮಾಡಿರುವುದಕ್ಕೆ ಖರ್ಗೆ ಕ್ಷಮೆ ಕೋರಲೇ ಬೇಕು ಎಂದು ಬಿಜೆಪಿ ಪಟ್ಟು ಹಿಡಿದಿದೆ. ಕಾಂಗ್ರೆಸ್ ಪಕ್ಷಕ್ಕೆ ಇತಿಹಾಸದ ಅರಿವಿಲ್ಲ. ಇತಿಹಾಸ‌ವನ್ನು ಮರೆತಿದೆ. ಕಾಂಗ್ರೆಸ್ ಕಾರಣಕ್ಕೆ ಜಮ್ಮು ಕಾಶ್ಮೀರದ ಸ್ಥಿತಿ ಹೇಗಾಗಿತ್ತು?, ಪಾಕಿಸ್ತಾನ‌ದ ಬೆದರಿಕೆ, ಚೀನಾದ ಆಕ್ರಮಣ, ಈ ದೇದ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರಿಗೆ ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲರಿಗೆ ಆದ ಅವಮಾನ ಕಾಂಗ್ರೆಸ್‌ಗೆ ನೆನಪಿಲ್ಲ ಎಂದು ತಿರುಗೇಟು ನೀಡಿದೆ.

ರಾಜೀವ್ ಗಾಂಧಿ, ಇಂದಿರಾ ಗಾಂಧಿ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಾಣ ತ್ಯಾಗ ಮಾಡಿದ್ದು ಯಾವಾಗ ಎನ್ನುವ ಪ್ರಶ್ನೆ, ಅಖಂಡ ಭಾರತವನ್ನೇ ಖಂಡ ತುಂಡವನ್ನಾಗಿಸಿದ ಕಾಂಗ್ರೆಸ್ ‘ಭಾರತವನ್ನು ಜೋಡಿಸುವ’ ಕೆಲಸ ಮಾಡಿಸಿದೆ ಎನ್ನುವುದಕ್ಕೆ ದೇಶಭಕ್ತರು ಉತ್ತರ ಹುಡುಕುವಂತಾಗಿದೆ. ಒಟ್ಟಿನಲ್ಲಿ ಈ ದೇಶದ ಘನವೆತ್ತ ಪ್ರಧಾನಿ ಮೋದಿ ಅವರನ್ನು ರಾವಣನಿಗೆ ಹೋಲಿಸಿದ, ಭಯೋತ್ಪಾದಕರಿಗೆ ಬೆಂಬಲ ನೀಡುವ, ಅವರನ್ನು ಸಹೋದರರು ಎಂದು ಸಂಬೋಧನೆ ಮಾಡುವ, ಚೀನಾದೊಂದಿಗೆ ಬಾಯಿ – ಬಾಯಿ ಸಂಬಂಧ ಹೊಂದಿದ್ದ ಕಾಂಗ್ರೆಸ್ ಇಂದು ಸ್ವಾತಂತ್ರ್ಯ‌ದ ಬಗ್ಗೆ ಮಾತನಾಡುತ್ತಿರುವುದು ಸಾರ್ವಜನಿಕ ವಲಯದಲ್ಲಿ ಹಾಸ್ಯಾಸ್ಪದ ಎನಿಸಿದೆ. ಈ ದೇಶದ ರಾಷ್ಟ್ರಗೀತೆಗೆ ಅವಮಾನ ಎಸಗಿರುವ ಕಾಂಗ್ರೆಸ್, ದೇಶಭಕ್ತ‌ರನ್ನೊಳಗೊಂಡ ಬಿಜೆಪಿ‌ಗೆ ಟೀಕೆ ಮಾಡುವ ಭರದಲ್ಲಿ ತಾನೇ ಬೆತ್ತಲಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

Tags

Related Articles

Close