ಪ್ರಚಲಿತ

ಕಿಂಗ್ ಮೇಕರ್ ಆಗುತ್ತಾರಾ ಜನಾರ್ಧನ ರೆಡ್ಡಿ.? ಅಧಿಕಾರ ಇಲ್ಲದಿದ್ರೂ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಪ್ರವಾಸ ಮಾಡುತ್ತಿರೋದ್ಯಾಕೆ..?

ಅದೊಂದು ಕಾಲವಿತ್ತು. ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬರಬೇಕು, ದಕ್ಷಿಣ ಭಾರತದಲ್ಲಿ ಕಮಲ ಅರಳಬೇಕೆಂದರೆ ಅದಕ್ಕೆ ಬಳ್ಳಾರಿ ಗಾಲಿ ಜನಾರ್ಧನ ರೆಡ್ಡಿ ಹಾಗೂ ಶ್ರೀ ರಾಮುಲು ಬೇಕೇ ಬೇಕು ಎಂದು. ಅಂತೆಯೇ ಅವರದ್ದೇ ಮುಂದಾಳತ್ವದಲ್ಲಿ ಒಮ್ಮೆ ರಾಜ್ಯದಲ್ಲಿ ಕಮಲ ಅರಳಿಯೇ ಬಿಟ್ಟಿತ್ತು. ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯೂ ಆಗಿದ್ದರು. ಯಡಿಯೂರಪ್ಪನವರ ಸಚಿವ ಸಂಪುಟದಲ್ಲಿ ಗಾಲಿ ಜನಾರ್ಧನ ರೆಡ್ಡಿಯವರು ಪ್ರವಾಸೋಧ್ಯಮ ಸಚಿವರಾಗಿಯೂ ಹಾಗೂ ಶ್ರೀ ರಾಮುಲು ಅವರು ಆರೋಗ್ಯ ಸಚಿವರಾಗಿಯೂ ಕೆಲಸ ಮಾಡಿದ್ದರು. ಆದರೆ ಅಂದು ಕೇಂದ್ರದಲ್ಲಿ ಸರ್ಕಾರ ನಡೆಸುತ್ತಿದ್ದ ಯುಪಿಎ (ಕಾಂಗ್ರೆಸ್) ತನ್ನ ಕಪಿಮುಷ್ಟಿಯಲ್ಲಿದ್ದ ಸಿಬಿಐ ಅಸ್ತ್ರವನ್ನು ಬಳಸಿಕೊಂಡು ಜನಾರ್ಧನ ರೆಡ್ಡಿಯವರನ್ನು ಬಂಧಿಸಿ ಜೈಲಿನಲ್ಲಿರಿಸಿತ್ತು.

ಯಾವಾಗ ಜನಾರ್ಧನ ರೆಡ್ಡಿ ಜೈಲುಪಾಲಾದರೋ ಅಂದಿನಿಂದ ಭಾರತೀಯ ಜನತಾ ಪಕ್ಷದ ಸ್ಥಿತಿಯೇ ಅಲ್ಲೋಲ ಕಲ್ಲೋಲವಾಗಿ ಪರಿವರ್ತನೆಯಾಗಿತ್ತು. ಭಾರತೀಯ ಜನತಾ ಪಕ್ಷದ ಆಂತರಿಕ ಕಲಹಗಳಿಂದ ಬೇಸತ್ತು ಪಕ್ಷ ತೊರೆದು ಕೆಜೆಪಿ ಎಂಬ ಹೊಸ ಪಕ್ಷವನ್ನು ಸ್ಥಾಪಿಸಿದ್ದರೆ, ಜನಾರ್ಧನ ರೆಡ್ಡಿಯವರನ್ನು ಕಡೆಗಣಿಸಿದ್ದಕ್ಕೆ ಶ್ರೀ ರಾಮುಲು ಬಿಎಸ್‍ಆರ್ ಪಕ್ಷವನ್ನು ಸ್ಥಾಪಿಸಿ ಭಾರತೀಯ ಜನತಾ ಪಕ್ಷಕ್ಕೆ ಸೆಡ್ಡು ಹೊಡೆದಿದ್ದರು. ಇದು ಭಾರತೀಯ ಜನತಾ ಪಕ್ಷಕ್ಕೆ ಭಾರೀ ಹಿನ್ನೆಡೆಯನ್ನೇ ತಂದಿಟ್ಟಿತ್ತು.

ಲೋಕಸಭೆ ಚುನಾವಣೆಯಲ್ಲಿ ಸೃಷ್ಟಿಯಾಗಿತ್ತು ಇತಿಹಾಸ…

ಇನ್ನು ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಜಾಗವೇ ಇಲ್ಲ ಎಂದೇ ಹೇಳಲಾಗುತ್ತಿತ್ತು. ಆದರೆ ಕಳೆದ ಬಾರಿ ನಡೆದ ಲೋಕಸಭಾ ಚುನಾವಣೆ ಕರ್ನಾಟಕದ ಭಾರತೀಯ ಜನತಾ ಪಕ್ಷಕ್ಕೆ ಹೊಸ ಇತಿಹಾಸವನ್ನೇ ಸೃಷ್ಟಿಸುವಂತೆ ಭಾಸವಾಗಿತ್ತು. ಬೇರೆ ಪಕ್ಷ ಕಟ್ಟಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಶ್ರೀ ರಾಮುಲು ಮರಳಿ ಮಾತೃ ಪಕ್ಷಕ್ಕೆ ಸೇರುವ ಮೂಲಕ ಕಾಂಗ್ರೆಸ್ ಮುಕ್ತ ಕರ್ನಾಟಕಕ್ಕೆ ಮುನ್ನುಡಿಯಿಟ್ಟಿದ್ದರು. ಜನಾರ್ಧನ ರೆಡ್ಡಿಯವರ ನಿರ್ಧೇಶನದಂತೆ ಶ್ರೀ ರಾಮುಲು ಅವರು ಭಾರತೀಯ ಜನತಾ ಪಕ್ಷದಿಂದ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುತ್ತಾರೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುತ್ತಾರೆ. ಈ ಮೂಲಕ 3 ಹೋಳಾಗಿದ್ದ ಭಾರತೀಯ ಜನತಾ ಪಕ್ಷ ಮತ್ತೆ ಒಂದು ಕುಟುಂಬವಾಗುತ್ತದೆ. ಬರೋಬ್ಬರಿ 19 ಸ್ಥಾನಗಳನ್ನು ಗೆಲ್ಲುವ ಮೂಲಕ ಭಾರತೀಯ ಜನತಾ ಪಕ್ಷ ಕಾಂಗ್ರೆಸ್ ಕೋಟೆಯನ್ನು ಪುಡಿಗಟ್ಟುತ್ತದೆ. ಈ ಮೂಲಕ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ತಮ್ಮದೇ ಸರ್ಕಾರ ಎಂದ ಸ್ಪಷ್ಟ ಸಂದೇಶವನ್ನು ಸಾರಿಬಿಡುತ್ತಾರೆ.

Related image

ಬಿಡುಗಡೆಯಾಗುತ್ತಾರೆ ಗಣಿಧನಿ..!

ಕೆಲವೇ ದಿನಗಳಲ್ಲಿ ಜನಾರ್ಧನ ರೆಡ್ಡಿಯವರು ಜೈಲಿನಿಂದ ಬಿಡುಗಡೆಯಾಗುತ್ತಾರೆ. ಮತ್ತೆ ಕರ್ನಾಟಕ ಚುನಾವಣಾ ಅಖಾಡಕ್ಕೆ ಧುಮುಕುತ್ತಾರೆ. ಹೊರಬರುತ್ತಿದ್ದಂತೆಯೇ ಕಾಂಗ್ರೆಸ್ ಮುಕ್ತ ಕರ್ನಾಟಕವೇ ನನ್ನ ಮುಂದಿನ ಗುರಿ ಎಂದು ಸಿಡಿದೇಳುತ್ತಾರೆ. ಕಾಂಗ್ರೆಸ್ ಸರ್ಕಾರ ತನ್ನನ್ನು ಜೈಲಿನಲ್ಲಿರಿಸಿ ಕುತಂತ್ರೀ ನೀತಿಯನ್ನು ಅನುಸರಿಸಿದ್ದರ ವಿರುದ್ಧ ತೊಡೆ ತಟ್ಟುತ್ತಾರೆ. ಭಾರತೀಯ ಜನತಾ ಪಕ್ಷವನ್ನು ಗೆಲ್ಲಿಸಿಯೇ ತೀರುತ್ತೇವೆ ಎಂದು ಶಪಥಗೈಯುತ್ತಾರೆ.

ಆದರೆ ಕರ್ನಾಟಕ ರಾಜ್ಯ ವಿಧಾನ ಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕೆಲ ಕಾನೂನು ತೊಡಕುಗಳ ಕಾರಣ ಜನಾರ್ಧನ ರೆಡ್ಡಿಯವರಿಗೆ ಟಿಕೆಟ್ ಸಿಗಲಿಲ್ಲ. ಆದರೆ ಅವರು ಕಿಂಗ್ ಮೇಕರ್ ಆಗಿ ಮೆರೆಯುತ್ತಿದ್ದಾರೆ. ತನ್ನ ಆಪ್ತಮಿತ್ರ ಶ್ರೀ ರಾಮುಲು ಹಾಗೂ ತನ್ನ ಆಪ್ತರಿಗೆಲ್ಲರಿಗೂ ಟಿಕೆಟ್ ಸಿಗುವಂತೆ ಮಾಡುತ್ತಾರೆ. ಸಹೋದರ ಸೋಮಶೇಖರ್ ರೆಡ್ಡಿ ಸಹಿತ ಎಲ್ಲರಿಗೂ ಭಾರತೀಯ ಜನತಾ ಪಕ್ಷ ಟಿಕೆಟ್ ಘೋಷಣೆ ಮಾಡುತ್ತದೆ.

ರಾಮುಲು ಟಿಕೆಟ್-ರೆಡ್ಡಿ ಆಟ..!

ಶ್ರೀ ರಾಮುಲು ಟಿಕೆಟ್ ವಿಚಾರದಲ್ಲಿ ಜನಾರ್ಧನ ರೆಡ್ಡಿಯವರು ಸಖತ್ತಾಗಿಯೇ ಆಟ ಆಡುತ್ತಾರೆ. ಜನಾರ್ಧನ ರೆಡ್ಡಿಯವರ ಪ್ರಕರಣವನ್ನು ಈಗಲೂ ಸಿಬಿಐ ವಿಚಾರಣೆ ನಡೆಸುತ್ತಿರುವುದರಿಂದ ಅವರಿಗೆ ಬಳ್ಳಾರಿಗೆ ಕಾಲಿಡುವಂತಿಲ್ಲ. ಈ ಕಾರಣದಿಂದಾಗಿ ಬಳ್ಳಾರಿಯಲ್ಲಿ ಶ್ರೀ ರಾಮುಲುಗೆ ಟಿಕೆಟ್ ನೀಡಿದರೆ ಜನಾರ್ಧನ ರೆಡ್ಡಿಯವರಿಗೆ ಶ್ರೀ ರಾಮುಲು ಪರ ಪ್ರಚಾರ ಕೈಗೊಳ್ಳಲು ಸಾಧ್ಯವಾಗೋದಿಲ್ಲ. ಈ ಕಾರಣಕ್ಕಾಗಿಯೇ ಶ್ರೀ ರಾಮುಲು ಅವರಿಗೆ ಚಿತ್ರದುರ್ಗದ ಮೊಳಕಾಲ್ಮೂರು ಕ್ಷೇತ್ರದಿಂದ ಟಿಕೆಟ್ ಘೋಷಣೆ ಮಾಡಲಾಗುತ್ತದೆ. ಹೈದರಬಾದ್ ಕರ್ನಾಟಕ, ಅಂದರೆ ಬಳ್ಳಾರಿ ಹಾಗೂ ಚಿತ್ರದುರ್ಗ ಜಿಲ್ಲೆಯಲ್ಲಿ ಒಟ್ಟು 15 ವಿಧಾನ ಸಭಾ ಕ್ಷೇತ್ರಗಳನ್ನು ಗೆಲ್ಲುಬೇಕು ಎನ್ನುವ ಧೃಷ್ಟಿಕೋನವನ್ನು ಇಟ್ಟುಕೊಂಡು ಚಿತ್ರದುರ್ಗದ ಮೊಳಕಾಲ್ಮೂರು ಕ್ಷೇತ್ರದಲ್ಲಿ ಶ್ರೀ ರಾಮುಲುಗೆ ಟಿಕೆಟ್ ನೀಡಲಾಗುತ್ತದೆ.

ಯಾವಾಗ ಮೊಳಕಾಲ್ಮೂರು ಕ್ಷೇತ್ರದಲ್ಲಿ ಶ್ರೀ ರಾಮುಲು ಟಿಕೆಟ್ ಗಿಟ್ಟಿಸಿಕೊಳ್ಳುತ್ತಾರೋ ಅಂದಿನಿಂದ ಜನಾರ್ಧನೆ ರೆಡ್ಡಿಯವರು ಸಕ್ರಿಯರಾಗಿ ಚುನಾವಣಾ ರಂಗಕ್ಕೆ ಇಳಿಯುತ್ತಾರೆ. ಎಷ್ಟರ ಮಟ್ಟಿಗೆ ಎಂದರೆ ಕಾಂಗ್ರೆಸ್‍ನಲ್ಲಿದ್ದ ಹಾಲಿ ಶಾಸಕ ಎನ್.ಗೋಪಾಲಕೃಷ್ಣರನ್ನೇ ಭಾರತೀಯ ಜನತಾ ಪಕ್ಷದ ತೆಕ್ಕೆಗೆ ಬೀಳುವಂತೆ ಮಡುತ್ತಾರೆ. ಅಲ್ಲಿಗೆ ಭಾರತೀಯ ಜನತಾ ಪಕ್ಷದ ಗೆಲುವು ಮತ್ತಷ್ಟು ಸುಲಭವಾಗುವತ್ತ ಸಾಗುತ್ತದೆ.

ಸಂಸದರಿಗಿಲ್ಲದ ಟಿಕೆಟ್ ಶ್ರೀ ರಾಮುಲುಗೆ ಮಾತ್ರ ಫಿಕ್ಸ್!

ಹೌದು. ಈ ಮೊದಲೇ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಆದೇಶ ರಾಜ್ಯದ ಟಿಕೆಟ್ ಆಕಾಂಕ್ಷಿತ ಸಂಸದರಿಗೆ ಮುಟ್ಟಿಯಾಗಿತ್ತು. ಈ ಬಾರಿಯ ವಿಧಾನ ಸಭಾ ಚುನಾವಣೆಯ ಟಿಕೆಟ್ ರಾಜ್ಯದ ಯಾವ ಸಂಸದರಿಗೂ ನೀಡಲಾಗುವುದಿಲ್ಲ ಎಂಬುವುದು ಸ್ಪಷ್ಟ ಸಂದೇಶವಾಗಿತ್ತು. ಮುಂದಿನ ಸರ್ಕಾರದ ಮುಖ್ಯಮಂತ್ರಿ ಅಭ್ಯರ್ಥಿಯಾದ ಕಾರಣ ಯಡಿಯೂರಪ್ಪನಬವರಿಗೆ ಟಿಕೆಟ್ ಘೋಷಣೆ ಮಾಡಿತ್ತು. ಆದರೆ ಮತ್ಯಾವ ಸಂಸದರಿಗೂ ಇಲ್ಲದ ಟಿಕೆಟ್ ಭಾಗ್ಯ ಬಳ್ಳಾರಿ ಸಂಸದ ಶ್ರೀ ರಾಮುಲು ಅವರಿಗೆ ನೀಡಿ ಆಗಿತ್ತು. ಈ ಮೂಲಕ ಉಳಿದೆಲ್ಲಾ ಸಂಸದರಿಗೂ ಅಚ್ಚರಿ ಮೂಡಿಸಿತ್ತು. ಆದರೆ ಇದರ ಹಿಂದಿರುವ ಮಾಸ್ಟರ್ ಮೈಂಡ್ ಗಾಲಿ ಜನಾರ್ಧನ ರೆಡ್ಡಿ ಅನ್ನೋದು ಮಾತ್ರ ಗುಟ್ಟಾಗಿ ಉಳಿದಿಲ್ಲ.

ಅಧಿಕೃತವಾಗಿ ಇಲ್ಲದಿದ್ದರೂ ತೆರೆಮರೆಯಲ್ಲಿ ಜನಾರ್ಧನ ರೆಡ್ಡಿಯವರು ರಾಜಕೀಯ ಆಟವನ್ನಾಡಿ ಮುಂದಿನ ಸರ್ಕಾರದಲ್ಲಿ ತನ್ನದು ಪ್ರಮುಖ ಪಾತ್ರ ಎಂಬುವುದನ್ನು ನಿರೂಪಿಸುತ್ತಿದ್ದಾರೆ. ಅಧಿಕಾರ ಇಲ್ಲದಿದ್ದರೂ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ತಿರುಗಾಡುತ್ತಿರುವ ಜನಾರ್ಧನ ರೆಡ್ಡಿ ಈ ಮೊದಲೇ ಹೇಳಿದಂತೆ ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡಿಯೇ ಸಿದ್ಧ ಎಂದು ಪಣತೊಟ್ಟಿದ್ದಾರೆ. ಚಿತ್ರದುರ್ಗ ಜಿಲ್ಲೆಯಾದ್ಯಂತ ಪ್ರವಾಸ ಕೈಗೊಂಡಿರುವ ಜನಾರ್ಧನ ರೆಡ್ಡಿ ಈ ಬಾರಿ ರಾಜ್ಯ ಭಾರತೀಯ ಜನತಾ ಪಕ್ಷದಲ್ಲಿ ಕಿಂಗ್ ಮೇಕರ್ ಆಗಲಿರುವುದುಂತು ಸುಳ್ಳಲ್ಲ.

-ಸುನಿಲ್ ಪಣಪಿಲ

Tags

Related Articles

Close