ಅಂಕಣ

ಬ್ರಹ್ಮನೇ ಸೃಷ್ಟಿಸಿದ ಈ ರಾಜಧಾನಿಯಲ್ಲಿ ಕದಂಬರ ಆಳ್ವಿಕೆ!! ಇತಿಹಾಸದ ಪುಟಗಳಲ್ಲಿ ಕದಂಬರ ನಾಡಿನ ವಿಶೇಷತೆ ನಿಜಕ್ಕೂ ಅದ್ಭುತ!!

ರ್ನಾಟಕದ ಇತಿಹಾಸ ಪ್ರಾರಂಭವಾಗುವುದೇ ಬನವಾಸಿಯಿಂದ ಎಂದು ಹಿರಿಯ ಇತಿಹಾಸತಜ್ಞರು ದಾಖಲಿಸಿದ್ದು, ಇತಿಹಾಸದ ಪುಟಗಳನ್ನು ತೆರೆದಾಗ ಅನೇಕ ವಿಶಿಷ್ಟ ಸಂಗತಿಗಳು ಗೋಚರವಾಗುತ್ತವೆ. ವೈಜಯಂತಿಪುರವಾಗಿ ಇತಿಹಾಸದಲ್ಲಿ ದಾಖಲಾದ ಬನವಾಸಿಯು ಪೌರಾಣಿಕ ವಿಶೇಷತೆ, ಐತಿಹಾಸಿಕ ಮಹತ್ವದೊಂದಿಗೆ ಕನ್ನಡದ ಪ್ರಥಮ ರಾಜಧಾನಿಯಾಗಿ ನಾಡಿನಲ್ಲಿಯೇ ಪ್ರಾಮುಖ್ಯತೆಯನ್ನು ಪಡೆದಿದೆ. ಇಂತಹ ಕದಂಬ ರಾಜರ ರಾಜಧಾನಿಯಾದ ಬನವಾಸಿಯ ವೈಭೋಗವನ್ನು ತಿಳಿದುಕೊಳ್ಳಬೇಕಾಗಿರುವುದು ಅತೀ ಮುಖ್ಯ!!

ಮಹಾಭಾರತದಲ್ಲಿ ಬನವಾಸಿಯನ್ನು ವನವಾಸಕ ಎಂದು ಉಲ್ಲೇಖಿಸಿದ ಪ್ರತೀತಿಯಿದೆ. ಪರಶುರಾಮ ಸೃಷ್ಟಿಯೆನಿಸಿದ ಪಶ್ಚಿಮ ಘಟ್ಟದಲ್ಲಿಯ ಬನವಾಸಿ, ಗೋಕರ್ಣ, ಯಾಣ, ದಾಂಡೇಲಿ, ಸುಪಾ ಮೊದಲಾದ ಸ್ಥಳಗಳನ್ನು ರಾಮಾಯಣ ಮತ್ತು ಮಹಾಭಾರತಗಳಲ್ಲಿ ಪರೋಕ್ಷವಾಗಿ ಉಲ್ಲೇಖಿಸಲಾಗಿದೆ. ಸಾಕ್ಷಾತ್ ಬ್ರಹ್ಮದೇವನೇ ಬನವಾಸಿ ಸ್ಥಳವನ್ನು ಪ್ರಥಮ ಸೃಷ್ಟಿಯಲ್ಲೇ ಸಷ್ಟಿಸಿದ ಎಂಬ ಅಂಶವಿದೆ. ಶಿವೇತರ ದೇವತಾರ್ಚಕರನ್ನು ಮಧು ಎಂಬ ರಕ್ಕಸನು ಶಿಕ್ಷಿಸುತ್ತಿರಲಾಗಿ, ಸಾಕ್ಷಾತ್ ಪರಮೇಶ್ವರನೇ ವಿಷ್ಣುವಿನ ಮುಖಾಂತರ ವಧುವಿನ ವಧೆ ಮಾಡಿಸಿ, ಅನಂತರ ಮಧುಕೇಶ್ವರ ತೀರ್ಥಲಿಂಗದಲ್ಲಿ, ಪವಿತ್ರ ಬನವಾಸಿ ಕ್ಷೇತ್ರದಲ್ಲಿ ವಾಸ ಮಾಡಿಕೊಂಡಿರುವುದಾಗಿ ಸಮಸ್ತ ದೇವತೆಗಳಿಗೆ ಅರುಹಿದನು ಎನ್ನುವುದಾಗಿ ಬನವಶಿ ಕೈಫಿಯತ್‍ನಲ್ಲಿ ದಾಖಲಾಗಿದೆ.

10ನೇ ಶತಮಾನದಲ್ಲಿದ್ದ ಆದಿಕವಿ ಪಂಪನು ಬನವಾಸಿಯನ್ನು ಸ್ವರ್ಗ ಎಂದು ಬಣ್ಣಿಸಿದ್ದ!! ಆತನ ಪ್ರಕಾರ, “ಚಾಗದ ಭೋಗದಕ್ಕರದ ಗೇಯದ ಗೊಟ್ಟಿಯಲಂಪಿನಿಂಪುಗ ಳ್ಗಾಗರವಾದ ಮಾನಸೆರೆ ಮಾನಸರಂತವಾಗಿ ಪುಟ್ಟಲೇ!! ನಾಗಿಯುಮೇನೋ ತೀರ್ದಪುದೆ ತೀರದೊಡಂ ಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ಬನವಾಸಿ ದೇಶದೊಳ್” – ಅಂದರೆ ತ್ಯಾಗ, ಭೋಗ, ವಿದ್ಯೆ, ಸಂಗೀತ, ಕೂಟಗಳು ಇವುಗಳಿಂದ ಕೂಡಿರುವ ಜೀವನವನ್ನು ಸಾಗಿಸುವವರೇ ನಿಜವಾದ ಮನುಷ್ಯರು. ಅಂತವರಾಗಿ ಹುಟ್ಟಬೇಕು. ಹಾಗಾಗದಿದ್ದರೆ ಬನವಾಸಿಯಲ್ಲಿ ಮರಿದುಂಬಿಯಾಗಿಯೋ ಅಥವಾ ಕೋಗಿಲೆಯಾಗಿಯೋ ಹುಟ್ಟಬೇಕು ಎಂದಿದ್ದಾನೆ!!

Related image

ಕರ್ನಾಟಕದಲ್ಲಿ ಕದಂಬರು ಪ್ರಥಮ ಬಾರಿಗೆ ಪ್ರವರ್ಧಮಾನಕ್ಕೆ ಬಂದು ಬನವಾಸಿಯನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದರು ಎಂದು ನಮಗೆ ಇತಿಹಾಸದ ಮೂಲಕ ತಿಳಿದುಬರುತ್ತದೆ. ಬೌದ್ಧ ಧರ್ಮ ಪ್ರಸಾರಕ್ಕಾಗಿ ಅಶೋಕ ಚಕ್ರವರ್ತಿ ಕಳುಹಿಸಿದ ಬೌದ್ಧ ಭಿಕ್ಷು ರಖ್ಖಿತನೆಂಬಾತ ಬನವಾಸಿ ಪ್ರಾಂತಕ್ಕೆ ಬಂದಿದ್ದನೆಂದು ಮಹಾವಂಶ ಎಂಬ ಬೌದ್ಧಗ್ರಂಥದಿಂದ ತಿಳಿದುಬರುತ್ತದೆ. ಐತಿಹಾಸಿಕ ಪ್ರಾಮುಖ್ಯತೆಯುಳ್ಳ, ಸಾಹಸ ಬಯಸುವ ಪ್ರವಾಸಿಗರಿಗೆ ಇಷ್ಟವಾಗುವ ಹಾಗೂ ಧಾರ್ಮಿಕವಾಗಿ ಆಕರ್ಷಿಸುವ ಹಲವಾರು ಸ್ಥಳಗಳನ್ನೂ ಸಹ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಣಬಹುದು. ಐತಿಹಾಸಿಕವಾಗಿ ಹೇಳಬೇಕೆಂದರೆ ಶಿರಸಿ ತಾಲೂಕಿನಲ್ಲಿರುವ ಬನವಾಸಿಯು ಸಾಕಷ್ಟು ಪ್ರವಾಸಿಗರನ್ನು ಆಕರ್ಷಿಸುವ ಸುಂದರ ಸ್ಥಳವಾಗಿದೆ.

ವಿವಿಧ ರಾಜವಂಶಗಳು ಆಳಿದ ಕಾರಣ, ಹಲವು ದೇಶದ ವಿದ್ವಾಂಸರು ಬೇಟಿ ನೀಡಿದ ಕಾರಣದಿಂದಾಗಿ ಬನವಾಸಿಗೆ ವನವಾಸಿಕ, ಜಯಂತಿಪುರ, ಕೊಂಕಣಪುರ, ನಂದನವನ, ಕನಕಾವತಿ, ಜಲದುರ್ಗಾ, ಸಂಜಯಂತಿ ಇವು ಬನವಾಸಿಗೆ ಇದ್ದ ಹಲವು ಹೆಸರುಗಳು!! ಈ ಊರಿನ ಬಗ್ಗೆ ಗ್ರೀಕ್-ರೋಮನ್ ಬರಹಗಾರ ಟಾಲೆಮಿ 2ನೇ ಶತಮಾನದಲ್ಲೇ ತನ್ನ ಬರಹಗಳಲ್ಲಿ ಕೊಂಡಾಡಿದ್ದಾನೆ. ಅಲ್ಲದೇ ಪರ್ಷಿಯನ್ ವಿದ್ವಾಂಸನಾದ ಆಲ್ಬರೂನಿ ಕೂಡ ಇಲ್ಲಿರುವ ಸುಂದರ ದೇವಸ್ಥಾನಗಳ ಬಗ್ಗೆ, ವರದಾ ನದಿ, ಕೋಟೆಗಳ ಬಗ್ಗೆ, ಜೊತೆಗೆ ಅಲ್ಲಿ ಸಿಗುವ ಊಟತಿಂಡಿ ಎಲ್ಲದರ ವಿಚಾರವಾಗಿ ತನ್ನ ಗ್ರಂಥಗಳಲ್ಲಿ ಬರೆದಿದ್ದಾನೆ!! ಇದೊಂದು ಮಾಯಾ ನಗರ ಎನ್ನುವುದು ಚಾಮರಸ ಮತ್ತೆ ಕಾಳಿದಾಸರ ಪದ್ಯದಲ್ಲಿ ಕಂಡು ಬರುವ ಸಾಲುಗಳು!!

ಅಷ್ಟೆ ಅಲ್ಲದೇ, ಸಿಂಹಳ (ಇಂದಿನ ಶ್ರೀಲಂಕಾ) ಬೌದ್ಧ ಭಿಕ್ಷುಗಳೂ ಸಹ ಧರ್ಮ ಪ್ರಸಾರಕ್ಕಾಗಿ ಬನವಾಸಿಗೆ ಬಂದಿದ್ದರೆಂದು ತಿಳಿದುಬರುತ್ತದೆ. ಕ್ರಿ.ಶ. ಎರಡನೇಯ ಶತಮಾನದಲ್ಲಿ ಭಾರತದ ಪ್ರವಾಸಕ್ಕೆಂದು ಬಂದಿದ್ದ ಗ್ರೀಕ್ ದೇಶದ ಪ್ರವಾಸಿ ಟಾಲೆಮಿ ಎಂಬಾತನು ತಾನು ಬರೆದಿರುವ ಪುಸ್ತಕದಲ್ಲಿ ಬನವಾಸಿಯನ್ನು “ಬನೌಸಿ” ಎಂದು ಉಲ್ಲೇಖಿಸಿರುವುದು ಕಂಡುಬರುತ್ತದೆ. ಇನ್ನು, ಕದಂಬ ವಾಸ್ತುಶೈಲಿಯು ವಿಶಿಷ್ಟವಾಗಿದ್ದು ತನ್ನದೆ ಆದ ಗುಣ ಲಕ್ಷಣ ಹೊಂದಿದೆ. ಬನವಾಸಿಯಲ್ಲಿರುವ ಮಧುಕೇಶ್ವರ ದೇವಸ್ಥಾನವು ಕದಂಬ ಶೈಲಿಯ ವಾಸ್ತು ಶಿಲ್ಪಕ್ಕೆ ಸಾಕ್ಷಿಯಾಗಿದೆ. ಈ ದೇವಾಲಯವೇ ಬನವಾಸಿಯ ಅತ್ಯಂತ ಪ್ರೇಕ್ಷಣೀಯ ಹಾಗು ಐತಿಹಾಸಿಕ ಸ್ಥಳವಾಗಿದೆ.

Image result for kadambas in banavasi

ಬನವಾಸಿಯಿಂದ ಶ್ರೀಲಂಕಾಕ್ಕೆ ಕ್ರಿಸ್ತಪೂರ್ವ ಮೂರನೆಯ ಶತಮಾನಕ್ಕೆ ಸಂಬಂಧಿಸಿದ ಕೆಲವು ದಾಖಲೆಗಳು ಬನವಾಸಿಯ ಪ್ರಾಚೀನತೆಯನ್ನು ಐತಿಹಾಸಿಕವಾಗಿ ಸುಮಾರು 2,300 ವರ್ಷಗಳಷ್ಟು ಹಿಂದಕ್ಕೆ ಕೊಂಡೊಯ್ಯುತ್ತದೆ. ಮೌರ್ಯ ಸಾಮ್ರಾಜ್ಯದ ಸಾಮ್ರಾಟ್ ಅಶೋಕನು ರಖ್ಖಿತನೆಂಬ ಬೌದ್ಧ ಸನ್ಯಾಸಿಯನ್ನು ಬನವಾಸಿಗೆ ಬೌದ್ಧ ಧರ್ಮದ ಪ್ರಚಾರ ಮಾಡುವದಕ್ಕೆಂದು ಕಳಿಸಿದ್ದನೆಂಬ ಸಂಗತಿಯು ಶ್ರೀಲಂಕಾದ ದೀಪವಂಸ ಮತ್ತು ಮಹಾವಂಶ ಗ್ರಂಥಗಳಿಂದ ತಿಳಿದು ಬರುತ್ತದೆ. ಅಲ್ಲದೇ ಆಗಲೇ ಸಾವಿರಾರು ಬೌದ್ಧ ಭಿಕ್ಷುಗಳು ಮಹಾಥೇರ ಚಂದ್ರಗುಪ್ತನ ಜತೆಯಲ್ಲಿ ಹೊನ್ನಾವರದ ಬಂದರು ಮೂಲಕ ಸಿಂಹಳದ (ಶ್ರೀಲಂಕಾ) ಅರಸನೊಬ್ಬ ಕಟ್ಟಿಸಿದ ಮಹಾಸ್ತೂಪದ ಆರಂಭೋತ್ಸವಕ್ಕೆ ಹೋಗಿದ್ದರೆನ್ನುವ ಉಲ್ಲೇಖವಿದ್ದು, ಇದು ವಿಶಿಷ್ಟ ದಾಖಲೆಗಳಾಗಿವೆ.

ಸುತ್ತಮುತ್ತಲು ದಟ್ಟವಾದ ವನ್ಯಸಂಪತ್ತಿನಿಂದ ಕೂಡಿರುವ ಬನವಾಸಿಯು ತನ್ನ ಮೂರು ಕಡೆಗಳಲ್ಲಿ ವರದಾ ನದಿ ಹರಿಯುತ್ತದೆ!! ಇದಲ್ಲದೆ ಸ್ವಾದಿ ಅರಸರು ಕಟ್ಟಿಸಿದ ಶಿಲಾಮಂಟಪವೂ ಸಹ ವೈಶಿಷ್ಟ್ಯಪೂರ್ಣವಾಗಿದೆ. ಮಧುಕೇಶ್ವರನಾಗಿ ಶಿವನು ನೆಲೆಸಿರುವ ಈ ದೇವಾಲಯದಲ್ಲಿ ಉಮಾ ದೇವಿ, ಶಾಂತಲಕ್ಶ್ಮಿ ನರಸಿಂಹ ಅಲ್ಲದೆ ಇತರೆ ಹಲವಾರು ದೇವತೆಗಳ ವಿಗ್ರಹಗಳು ಕಾಣಸಿಗುವುದು. ದೇವಾಲಯದ ಗರ್ಭಗುಡಿಯ ಬಾಗಿಲಲ್ಲಿ ಪುರುಷಾಮೃಗವನ್ನು ಅಧ್ಭುತವಾಗಿ ಕೆತ್ತಲಾಗಿದೆಯಲ್ಲದೇ, ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಪ್ರವರ್ಧಮಾನಕ್ಕೆ ಬಂದ ಕದಂಬರ ಗೌರವಾರ್ಥವಾಗಿ ಕರ್ನಾಟಕ ಸರಕಾರ ಪ್ರತಿ ವರ್ಷವೂ ಕದಂಬೋತ್ಸವವನ್ನು ವಿಜೃಂಭಣೆಯಿಂದ ಆಚರಿಸುತ್ತ ಬಂದಿದೆ.

– ಅಲೋಖಾ

Tags

Related Articles

FOR DAILY ALERTS
Close