ಪ್ರಚಲಿತ

ಕರ್ನಾಟಕದಲ್ಲಿ ಕಾಂಗ್ರೆಸ್ ತುಘಲಕ್ ಸರ್ಕಾರದ ಸಾಧನೆ ಏನು?: ಬಿಜೆಪಿ ವ್ಯಂಗ್ಯ

ಕರ್ನಾಟಕದ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸಲು ಆರಂಭಿಸಿ‌ ನೂರು ದಿನಗಳು ಕಳೆದಿವೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸಂಭ್ರಮಾಚರಣೆಯಲಿದ್ದರೆ, ಬಿಜೆಪಿ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ, ಉಚಿತ ಗ್ಯಾರಂಟಿಗಳ ಪುಂಗಿ ಊದಿ, ಅವುಗಳನ್ನು ಸರಿಯಾಗಿ ಜಾರಿಗೊಳಿಸುವಲ್ಲಿ ಎಡವಿದೆ. ಹಾಗೆಯೇ, ಅವುಗಳ ಸಮರ್ಪಕ ಅನುಷ್ಠಾನವೂ ಆಗಿಲ್ಲ. ಗ್ಯಾರಂಟಿಗಳ ಅನುಷ್ಠಾನಕ್ಕೂ ಮೊದಲೇ ಕರ್ನಾಟಕದಲ್ಲಿ ಕಲೆಕ್ಷನ್ ಏಜೆಂಟ್ ಸುರ್ಜೇವಾಲ ಅವರ ದರ್ಬಾರ್ ಆರಂಭ ಆಗಿದೆ. ಉನ್ನತ ಇಲಾಖೆಗಳ ಸರ್ಕಾರಿ ಅಧಿಕಾರಿಗಳ ಜೊತೆಗೆ ಸಭೆ ನಡೆಸಿ ರಾಜ್ಯದಲ್ಲಿ ಅಧಿಕಾರ ನಡೆಸಿದ್ದರು. ಆ ಮೂಲಕ ಕಾಂಗ್ರೆಸ್ ರಾಜ್ಯದ ಬೊಕ್ಕಸದಿಂದ ತನ್ನ ಹೈ ಕಮಾಂಡ್ ‌ಗೆ ಎಷ್ಟು ಸಂದಾಯ ಮಾಡಿದೆ ಎನ್ನುವುದನ್ನು ಕಾಂಗ್ರೆಸ್ ಸರ್ಕಾರದ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರೇ ಹೇಳಬೇಕಷ್ಟೇ ಎಂಬುದಾಗಿ ವ್ಯಂಗ್ಯ ಮಾಡಿದೆ.

ಕರ್ನಾಟಕದಲ್ಲಿ ಕಾಂಗ್ರೆಸಿಗರು ಸರ್ಕಾರ ನಡೆಸಲು ಆರಂಭ ಮಾಡಿ, ತುಘಲಕ್ ಸರ್ಕಾರ ರಚನೆ ಮಾಡಲು ಆರಂಭಿಸಿ ತನ್ನ ದರ್ಬಾರ್‌ನ ನೂರನೇ ದಿನವನ್ನು ಆಚರಣೆ ಮಾಡುತ್ತಿದೆ. ಈ ಶತಕೋತ್ಸವದಲ್ಲಿ ಸಿದ್ದರಾಮಯ್ಯ ಮಾಡಿದ ಸಾಧನೆಯಾದರೂ ಏನು? ಎಂದು ಪ್ರಶ್ನೆ ಮಾಡಿದೆ. ಕಾಂಗ್ರೆಸ್ ಸರ್ಕಾರದ ಆಡಳಿತವನ್ನು ಹುಡುಕಿದರೆ ನೂರಕ್ಕೂ ಹೆಚ್ಚು ಹಳವಂಡೆಗಳೇ ಕಾಣುತ್ತವೆ. ಅಧಿಕಾರಿಗಳ ದುರುಪಯೋಗ, ಕಲೆಕ್ಷನ್ ಏಜೆಂಟ್ ಸುರ್ಜೇವಾಲಾ, ಶ್ಯಾಡೋ ಸಿ ಎಂ, ಹಣಕ್ಕಾಗಿ ಪೋಸ್ಟಿಂಗ್, ಮರಳು ಮಾಫಿಯಾ, ರೈತರ ಆತ್ಮಹತ್ಯೆ, ಜನತೆಗೆ ಕಲುಷಿತ ನೀರು, ಕಳಪೆ ಗುಣಮಟ್ಟದ ಆಹಾರ ವಸ್ತುಗಳ ವಿತರಣೆ, ಉಡುಪಿಯಲ್ಲಿ ನಡೆದ ಅಮಾನುಷ ಘಟನೆ, ಅಬ್ಬಬ್ಬಾ! ಹೀಗೆ ಒಂದಾ, ಎರಡಾ… ನೋಡುತ್ತಾ ಹೋದರೆ ಭಂಡ ಕಾಂಗ್ರೆಸ್ ಪಕ್ಷದ ನೂರು ಕರ್ಮಕಾಂಡಗಳು ತೆರೆದುಕೊಳ್ಳುತ್ತಾ ಹೋಗುತ್ತವೆ ಎಂಬುದಾಗಿ ಬಿಜೆಪಿ ನೂರು ದಿನಗಳ ಕಾಂಗ್ರೆಸ್‌ನ ಆಡಳಿತದ ಹುಳುಕುಗಳನ್ನು ಹುಡುಕಿ ಟೀಕಿಸಿದೆ.

ರಾಜ್ಯದಿಂದ ಗಂಟು ತೆಗೆದುಕೊಂಡು ಸುರ್ಜೇವಾಲಾ ವಿಮಾನ ಹತ್ತುತ್ತಿದ್ದಂತೆ ಇಲ್ಲಿ ಅಸಲಿ ಆಟ ಶುರು ಮಾಡಿಕೊಂಡದ್ದು ಸಿದ್ದರಾಮಯ್ಯ ಮತ್ತು ಅವರ ಪುತ್ರ ಯತೀಂದ್ರ. ಒಂದೇ ಹುದ್ದೆಗೆ ನಾಲ್ಕು ಅಧಿಕಾರಿಗಳಿಗೆ ಶಿಫಾರಸು ಪತ್ರವನ್ನು ಹಂಚಿ ಅಧಿಕಾರ ದುರುಪಯೋಗ ಮಾಡಿಕೊಂಡದ್ದು ಮಾತ್ರವಲ್ಲದೆ ಹಣಕ್ಕಾಗಿ ಕರ್ನಾಟಕದಲ್ಲಿ ಕಮಿಷನ್ ದಂಧೆಯನ್ನೇ ಹೊಸ ಉದ್ಯಮ ಎಂಬಂತೆ ಆರಂಭ ಮಾಡಿತು ಎಂದು ಬಿಜೆಪಿ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ಚುನಾವಣೆಯ ಸಂದರ್ಭದಲ್ಲಿ ಫ್ರೀ ಎಂದ ಸಿದ್ದರಾಮಯ್ಯ, ನಂತರ ಅದಕ್ಕೆ ಕಂಡೀಷನ್ ಅಪ್ಲೈ ಎಂಬ ಬಾಣ ಬಿಟ್ಟಿದ್ದಾರೆ. ಅಕ್ಕಿ ನೀಡುವ ಶಕ್ತಿ ಇಲ್ಲದೆ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸವನ್ನು ಮಾಡುತ್ತಿದೆ. ಶಕ್ತಿ ಯೋಜನೆಯಿಂದ ತೊಂದರೆಗೆ ಒಳಗಾಗಿದ್ದು ಕಾಂಗ್ರೆಸ್ ಸರ್ಕಾರ ಅಲ್ಲ, ಬದಲಾಗಿ ರಾಜ್ಯದ ಜನರು. ಗೃಹ ಜ್ಯೋತಿ ಹೆಸರಲ್ಲಿ ರಾಜ್ಯದ ಜನತೆಗೆ ಕರೆಂಟ್ ಶಾಕ್, ಮಳೆ ಇಲ್ಲದಿದ್ದರೂ ರಾಜ್ಯದ ರೈತರ ಸಂಕಟ ಕೇಳೋದು ಬಿಟ್ಟು, ತಮಿಳುನಾಡಿಗೆ ನೀರು ಬಿಡಲು ಹೊರಟಿರುವುದು ಇತ್ಯಾದಿ ಅಸ್ತ್ರಗಳ ಮೂಲಕ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಬಿಜೆಪಿ ಟೀಕಾ ಪ್ರಹಾರ ನಡೆಸಿದೆ.

ಒಟ್ಟಿನಲ್ಲಿ ಬಿಟ್ಟಿಗಳ ಮೂಲಕವೇ ಸರ್ಕಾರ ರಚನೆ ಮಾಡಿದ ಕಾಂಗ್ರೆಸ್‌ನ ಜನ್ಮ ಜಾಲಾಡುವ ಮೂಲಕ ಬಿಜೆಪಿ, ಕಾಂಗ್ರೆಸ್ ಕರ್ಮಕಾಂಡಗಳನ್ನು ಸರ್ಕಾರದ ಮುಂದಿರಿಸುವ ಕೆಲಸವನ್ನು ಮಾಡಿದೆ ಎಂದರೆ ತಪ್ಪಾಗಲಾರದೇನೋ.

Related Articles

Close