ಪ್ರಚಲಿತ

ಕಾಶ್ಮೀರದಲ್ಲಿ ಉಗ್ರರಿಗೆ ಆರ್ಥಿಕ ನೆರವು ನೀಡುತ್ತಿದ್ದವರ ಮನೆಗಳ ಮೇಲೆ ಎನ್‌ಐಎ ದಾಳಿ

ದಕ್ಷಿಣ ಕಾಶ್ಮೀರದ ಶೋಪಿಯಾನ್ ಮತ್ತು ಪುಲ್ವಾಮಾದಲ್ಲಿ ಎನ್‌ಐಎಯು ದಾಳಿ ನಡೆಸಿ, ತನಿಖೆ ಮಾಡುತ್ತಿದೆ. ಭಯೋತ್ಷಾದನಾ ಕೆಲಸಗಳಿಗೆ ಆರ್ಥಿಕ ನೆರವು ಒದಗಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆಸಲಾಗುತ್ತಿದೆ.

ನಕಲಿ ಹೆಸರುಗಳನ್ನಿರಿಸಿಕೊಂಡು ಕಾರ್ಯಾಚರಣೆ ಮಾಡುತ್ತಿರುವ ಉಗ್ರಗಾಮಿ ಸಂಘಟನೆಗಳು, ಪಾಕಿಸ್ತಾನಿ ಹ್ಯಾಂಡ್ಲರ್‌ಗಳು, ಭಯೋತ್ಪಾದಕ ನಿಧಿಗಳು ನಡೆಸುತ್ತಿರುವ ಕ್ರಿಮಿನಲ್ ಪಿತೂರಿಗಳಿಗೆ ಸಂಬಂಧಿಸಿದ ಹಾಗೆ ಎನ್ಐಎ ಈ ಕಾರ್ಯಾಚರಣೆಗೆ ತೊಡಗಿಸಿಕೊಂಡಿದೆ. ಉಗ್ರಗಾಮಿ ಸಂಘಟನೆಗಳಿಗೆ ನೆರವು ನೀಡುತ್ತಿರುವ ಸಂದೇಹವುಳ್ಳವರ ಮನೆಗಳ ಮೇಲೆ ಈ ದಾಳಿಯನ್ನು ನಡೆಸಲಾಗುತ್ತಿದೆ.

ಕೆಲ ದಿನಗಳ ಹಿಂದಷ್ಟೇ ಕಾನ್ಸಿಪೊರಾದ ಅಬ್ದುಲ್ ಕಾಲಿಕ್ ರೆಗು, ಸೈಯದ್ ಕರೀಮ್‌‌ನ ಜಾವಿದ್ ಅಹ್ಮದ್ ದೋಬಿ, ಬಾರಾಮುಲ್ಲಾದ ಸಂಗ್ರಿಯಲ್ಲಿರುವ ಶೋಯೆಬ್ ಅಹ್ಮದ್ ಚುರ್ ಎಂಬ ಶಂಕಿತರ ಮನೆಗಳ ಮೇಲೆ ತನಿಖಾ ಸಂಸ್ಥೆ ದಾಳಿ ನಡೆಸಿತ್ತು. ಉಗ್ರವಾದಿ ಚಟುವಟಿಕೆಗಳಿಗೆ ಸಂಚು ನಡೆಸಿದ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿತ್ತು.

ಕಾಶ್ಮೀರದ ಕುಪ್ವಾರಾ, ಪೂಂಚ್, ಶ್ರೀನಗರ, ರಚೌರಿ ಮೊದಲಾದ ಪ್ರದೇಶಗಳಲ್ಲಿ ಭಯೋತ್ಪಾದಕರಿಗೆ ಆರ್ಥಿಕ ನೆರವಿನ ಜೊತೆಗೆ ಇನ್ನಿತರ ರೀತಿಯ ನೆರವು ನೀಡುತ್ತಿರುವವರ ಮನೆಗಳನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗುತ್ತಿದೆ. ಆ ಮೂಲಕ ಉಗ್ರಗಾಮಿಗಳ ಸಂಚು ಬೇಧಿಸಲು ತನಿಖಾ ಸಂಸ್ಥೆ ಅಗತ್ಯ ಕ್ರಮ ಕೈಗೊಂಡಿದೆ. ರಚೌರಿ ಮತ್ತು ಪೂಂಚ್ ಸೆಕ್ಟರ್‌ನ ಹಲವು ಪ್ರದೇಶಗಳಲ್ಲಿ ಉಗ್ರ ಸಂಚಿನ ವಾಸನೆ ಬಡಿದಿದ್ದು, ಈ ಹಿನ್ನೆಲೆಯಲ್ಲಿ ಈ ದಾಳಿ ಪ್ರಾಮುಖ್ಯತೆ ಪಡೆದಿದೆ.

Tags

Related Articles

Close