ಪ್ರಚಲಿತ

ಖಲೀಸ್ತಾನಿಗಳ ಉರಿ ಹೆಚ್ಚಿಸಿದ ಪ್ರಧಾನಿ ಮೋದಿ ಆಡಳಿತ

ಖಲಿಸ್ತಾನಿಗಳಿಂದ ಇತ್ತೀಚೆಗೆ ಭಾರತ ವಿರೋಧಿ ಪ್ರತಿಭಟನೆಗಳು ಹೆಚ್ಚಾಗಿವೆ. ಬ್ರಿಟನ್ನಿನ ಲಂಡನ್‌ನಲ್ಲಿರುವ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಭಾರತ ವಿರೋಧಿ, ಈ ದೇಶದ ಪ್ರಜಾಪ್ರಭುತ್ವ‌ವನ್ನು ಅವಹೇಳನ ಮಾಡುವಂತಹ ಮಾತುಗಳನ್ನಾಡಿದ ಬಳಿಕ, ಲಂಡನ್ನಿನಲ್ಲಿರುವ ಭಾರತೀಯ ಹೈಕಮಿಷನ್‌ನಲ್ಲಿದ್ದ ಭಾರತದ ಧ್ವಜವನ್ನು ಖಲಿಸ್ತಾನಿ ಪ್ರತಿಭಟನಾಕಾರರು ಇಳಿಸಿ, ಅವಮಾನಗೊಳಿಸಿದ್ದ ಘಟನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

ಇದರ ಜೊತೆಗೆ ಖಲೀಸ್ತಾನಿ ಗಲಭೆಕೋರರು ಅಮೆರಿಕ, ಆಸ್ಟ್ರೇಲಿಯಾಗಳಲ್ಲಿಯೂ ಭಾರತ ವಿರೋಧಿ ಕೃತ್ಯಗಳನ್ನು ನಡೆಸುವ ಮೂಲಕ ಭಾರತದ, ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕಳೆದ ಎರಡು ದಿನಗಳಲ್ಲಿ ಬ್ರಿಟನ್, ಆಸ್ಟ್ರೇಲಿಯಾ, ಅಮೆರಿಕಗಳಲ್ಲಿ ಭಾರತ ವಿರೋಧಿ ಪ್ರತಿಭಟನೆ ನಡೆಸಿ, ಭಾರತದ ಧ್ವಜವನ್ನು ಇಳಿಸಿ, ಖಲೀಸ್ತಾನಿ ಧ್ವಜವನ್ನು ಹಾರಿಸುವ ಮೂಲಕ ಭಾರತಕ್ಕೆ, ಭಾರತದ ತಿರಂಗಾಕ್ಕೆ ಅವಮಾನ ಮಾಡಿದ್ದು, ಇದು ಭಾರತೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಅಮೆರಿಕದ ಫ್ರಾನ್ಸಿಸ್ಕೊದಲ್ಲಿಯೂ ಭಾರತೀಯ ರಾಯಭಾರ ಕಚೇರಿಯ ಮೇಲೆ ದಾಳಿ ನಡೆಸಿ, ಅಲ್ಲಿ ಖಲಿಸ್ತಾನಿ ಧ್ವಜ ಹಾರಿಸುವ ಮೂಲಕವೂ ದಾಂದಲೆ ಎಸಗಿದ್ದಾರೆ. ಆಸ್ಟ್ರೇಲಿಯಾದ ಕ್ಯಾನ್‌ಬೆರಾದಲ್ಲಿ ಸಂಸತ್ ಎದುರು ಖಲೀಸ್ತಾನಿ ಹೋರಾಟಗಾರರು ಭಾರತ‌ ವಿರೋಧಿ ಪ್ರತಿಭಟನೆ ನಡೆಸಿದ್ದು, ಭಾರತದಲ್ಲಿ ಖಲೀಸ್ತಾನಿ ತೀವ್ರವಾದಿ ಅಮೃತ್‌ಪಾಲ್ ಬಂಧನದ ಯತ್ನವನ್ನು ಖಂಡಿಸಿರುವುದಾಗಿಯೂ ತಿಳಿಸಿದ್ದಾರೆ. ಈ ಹಿಂದೆಯೂ ಆಸ್ಟ್ರೇಲಿಯಾ ಮತ್ತು ಕೆನಡಾಗಳಲ್ಲಿ ಹಿಂದೂ ದೇವಾಲಯಗಳ ಮೇಲೆ ದಾಳಿ ನಡೆಸಿದ್ದ ಖಲೀಸ್ತಾನಿ ಉಗ್ರರು, ಭಾರತ, ಪ್ರಧಾನಿ ಮೋದಿ ಅವರ ವಿರುದ್ಧ ಬರಹ, ಭಾರತೀಯ ಮೂಲದ ಹಿಂದೂ, ಸಿಖ್ಖರ ಮೇಲೆಯೂ ದೌರ್ಜನ್ಯ ನಡೆಸಿದ್ದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು.

ಈ ಹಿಂದೆ ಭಾರತದಲ್ಲಿ ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ನಕಲಿ ಹೋರಾಟಗಾರ ರಾಕೇಶ್ ಟಿಕಾಯತ್ ನೇತೃತ್ವದಲ್ಲಿ ನಡೆದ ರೈತರ ಹೋರಾಟದ ಸಂದರ್ಭದಲ್ಲಿಯೂ ಖಲೀಸ್ತಾನಿ ಧ್ವಜ ಹಾರಾಡಿಸಿದ ಘಟನೆ ನಡೆದಿತ್ತು. ಒಟ್ಟಿನಲ್ಲಿ ಪ್ರಧಾನಿ ಮೋದಿ ಅವರು ಭಾರತದ ಆಡಳಿತ ಚುಕ್ಕಾಣಿ ಹಿಡಿದ ಬಳಿಕ ಕೆಲವು ದೇಶ ವಿರೋಧಿಗಳಿಗೆ ಬದುಕುವ ನೆಲೆ ಇಲ್ಲದಂತಾಗಿದ್ದು, ಅವರಿಂದ ಇಂತಹ ಕೃತ್ಯಗಳು ನಡೆಯುವಂತಾಗಿದೆ. ಪ್ರಧಾನಿ ಮೋದಿ ಅವರ ಭಾರತದ ಅಭಿವೃದ್ಧಿ ವಿರೋಧಿಗಳ ಉರಿ ಹೆಚ್ಚಿಸಿ, ಭಾರತ ವಿರೋಧಿ ಚಟುವಟಿಕೆಗಳನ್ನು ನಡೆಸುವಂತೆ ಮಾಡುತ್ತಿರುವುದಂತೂ ಸುಳ್ಳಲ್ಲ.

Tags

Related Articles

Close