ಪ್ರಚಲಿತ

ಅಧ್ಯಾಯ 3 – ಊರಿನ ಮಹಿಳೆಯರ ಕಷ್ಟವನ್ನರಿತು ಗಂಗೆಯನ್ನು ಒಲಿಸಿ ನೀರಿನ ಬವಣೆಯನ್ನು ತೀರಿಸಿದ್ದ ಶಂಕರಾಚಾರ್ಯರು.!

ಗುರುಕುಲದಲ್ಲಿ ಶಂಕರನ ವಿದ್ಯಾಭ್ಯಾಸ ಸಾಗಿತ್ತು.ಅಲ್ಪ ಕಾಲದ ಅವಧಿಯಲ್ಲಿಯೇ ಶಂಕರನು ಸಮಸ್ತ ಶಾಸ್ತ್ರಗಳ ಅಧ್ಯಯನವನ್ನು ಮುಗಿಸಿದ್ದನು.ನಾಲ್ಕು ವೇದಗಳು,ಹತ್ತು ಉಪನಿಷತ್ತುಗಳು ಶಂಕರನ ನಾಲಗೆಯ ಮೇಲೆ ತಾಂಡವವಾಡುತ್ತಿದ್ದವು.ವಯಸ್ಸು ಸಣ್ಣದಾದರೂ ಶಂಕರನು ಅಪಾರ ಜ್ಞಾನವನ್ನು ಹೊಂದಿದ್ದನು.ವಿದ್ಯಾಭ್ಯಾಸ ಮುಗಿದೊಡನೆಯೇ ಶಂಕರನಿಗೆ ಗುರುಗಳು ಮನೆಗೆ ಹಿಂತಿರುಗುವ ಅನುಮತಿಯನ್ನು ನೀಡಿದ್ದರು.ಗುರುಗಳು ಹಾಗೂ ಸಹಪಾಠಿಗಳಿಂದ ಬೀಳ್ಕೊಂಡ ಶಂಕರನು ಕಾಲಟಿಗೆ ಬಂದು ಸೇರಿದನು.ಮನೆಯಲ್ಲಿದ್ದ ತಾಯಿಯ ಬಳಿ ಆಶೀರ್ವಾದವನ್ನು ಕೋರಿದಾಗ ಸಣ್ಣ ವಯಸ್ಸಿನಲ್ಲೇ ಅಗಾಧವಾದ ಪಾಂಡಿತ್ಯವನ್ನು ಗಳಿಸಿದ್ದ ಮಗನನ್ನು ಕಂಡು ಸಂತೋಷಗೊಂಡ ಆರ್ಯಾಂಬೆ ತುಂಬು ಹೃದಯದಿಂದ ಪುತ್ರನನ್ನು ಹರಸಿದಳು.ವಿದ್ಯೆಯ ಬಗ್ಗೆ ಅಪಾರ ಆಸಕ್ತಿಯನ್ನು ಹೊಂದಿದ್ದ ಶಂಕರನು ಸುಮ್ಮನೆ ಕೂರಲಿಲ್ಲ..ತನ್ನ ಮನೆಯನ್ನೇ ವಿದ್ಯಾಲಯವನ್ನಾಗಿಸಿ ವಿದ್ಯಾದಾನ ನೀಡಲು ಪ್ರಾರಂಭಿಸಿದನು..ಹೀಗೆ ದಿನಗಳು ಸಾಗುತ್ತಿದ್ದಂತೆ ಶಂಕರನ ಮನೆಯೇ ಒಂದು ದೊಡ್ಡ ಗುರುಕುಲವಾಗಿ ಮಾರ್ಪಟ್ಟಿತು.ಅತ್ಯಂತ ಕಿರಿಯ ವಯಸ್ಸಿನ ಪುಟ್ಟ ಶಂಕರ ಪ್ರಖ್ಯಾತ ಆಚಾರ್ಯನಾಗಿ ಪ್ರಸಿದ್ಧನಾದ. ಹೀಗೆ ಆಚಾರ್ಯ ಶಂಕರರ ಪ್ರತಿಭೆ ಕೀರ್ತಿಗಳು ಕೇರಳದ ಅರಸರಾದ ರಾಜಶೇಖರ ವರ್ಮರ ವರೆಗೂ ತಲುಪಿತು.

ಈ ಪುಟ್ಟ ವಟುವಿನ ಪ್ರತಿಭೆಯನ್ನು ಪ್ರತ್ಯಕ್ಷವಾಗಿ ಕಂಡರಿಯಲು ರಾಜಶೇಖರ ವರ್ಮನು ಹಂಬಲಿಸಿದನು.ಶಂಕರನನ್ನು ತನ್ನ ಅರಮನೆಗೆ ಕರೆತರಲು ತನ್ನ ಆಪ್ತ ಸಚಿವನನ್ನೇ ಕರೆಯೋಲೆಯೊಂದಿಗೆ ಕಾಲಟಿಯ ಶಂಕರನ ಮನೆಗೆ ಸಂಪತ್ತಿನ ರಾಶಿಯೊಂದಿಗೆ ಕಳುಹಿಸಿದನು.ಅರಸನ ಆಪ್ತ ಸಚಿವರೇ ತನ್ನ ಮನೆಯ ಬಳಿಗೆ ಬಂದ ವಿಚಾರ ಅರಿತ ಶಂಕರನು ಸಚಿವರನ್ನು ಆದರದಿಂದ ಸ್ವಾಗತಿಸಿದನು.ಸಚಿವರು ತಾನು ಬಂದ ಉದ್ದೇಶವನ್ನು ತಿಳಿಸಿ ರಾಜನು ನೀಡಿದ್ದ ಕರೆಯೋಲೆಯನ್ನು ಶಂಕರನ ಕಯ್ಯಲ್ಲಿ ನೀಡಿ ಜೊತೆಯಲ್ಲಿ ತಂದಿದ್ದ ಸಂಪತ್ತಿನ ರಾಶಿಯನ್ನು ಶಂಕರನ ಮುಂದೆ ಇರಿಸಿದನು.ಶಂಕರ ಕರೆಯೋಲೆಯನ್ನು ಓದಿದನು.ಮರುಕ್ಷಣವೇ ಎದುರಿಗಿದ್ದ ಸಂಪತ್ತಿನ ರಾಶಿಯ ಕಡೆ ತಾತ್ಸಾರದ ದೃಷ್ಟಿಯಿಂದ ನೋಡಿದನು.ಹಣ ಕಂಡೊಡನೆ ಬಾಚಿ ತಬ್ಬಿಕೊಳ್ಳುತ್ತಾನೆ ಎಂದು ನಿರೀಕ್ಷಿಸಿದ್ದ ಸಚಿವರಿಗೆ ಎಂಟು ವರ್ಷದ ಬಾಲಕನ ವರ್ತನೆ ಅಚ್ಚರಿಯನ್ನು ಮೂಡಿಸಿತು.ರಾಜನೇ ಅರಮನೆ ಆಹ್ವಾನಿಸಿದರೂ ಸಂತೋಷದಿಂದ ಕುಣಿದಾಡದ,ಸಂಪತ್ತು ನೋಡಿ ಬಾಚಿಕೊಳ್ಳದ ಶಂಕರನು ತನ್ನಲ್ಲಿದ್ದ ಅಪಾರವಾದ ವಿದ್ಯೆಯನ್ನು ಮಾತ್ರವೇ ಸಂಪತ್ತೆಂದು ಭಾವಿಸಿದ್ದನೆಂಬುದು ಇದರಿಂದ ತಿಳಿದುಬರುತ್ತದೆ.ಶಂಕರನು ಮುಗುಳು ನಗೆಯೊಂದಿಗೆ “ಪ್ರಧಾನಿಗಳೇ,ರಾಜ ಸನ್ಮಾನದ ಬಯಕೆ ನನಗಿಲ್ಲ.ಅರಮನೆಯ ಭೋಗಭಾಗ್ಯಗಳ ಗೊಡವೆಯಂತೂ ಖಂಡಿತಾ ಬೇಡ.ಆದ್ದರಿಂದ ನಾನು ಅರಮನೆಗೆ ಬರುವುದು ಆಗದ ಮಾತು.ನಿಮ್ಮ ಈ ಪ್ರಯತ್ನ ವ್ಯರ್ಥ” ಎಂದು ಹೇಳಿಬಿಟ್ಟನು.

ಆಗ ರಾಜನು ಕಳುಹಿಸಿರುವ ಸಂಪತ್ತನ್ನಾದರೂ ಪರಿಗ್ರಹಿಸಬೇಕೆಂದು ಸಚಿವನು ಕೇಳಿಕೊಂಡಾಗಲೂ ನಿರಾಕರಣೆಯೊಂದೇ ಶಂಕರನ ಉತ್ತರವಾಗಿತ್ತು.ಆ ಸಂಪತ್ತಿನ ರಾಶಿಯನ್ನು ಶಂಕರನು ಕೈಯಿಂದಲೂ ಮುಟ್ಟಲಿಲ್ಲ..ಜೊತೆಯಲ್ಲಿ ತಂದಿದ್ದ ಸಂಪತ್ತಿನೊಂದಿಗೆ ಸಚಿವರು ಅರಮನೆಗೆ ಹಿಂತಿರುಗಿದರು.ರಾಜನ ಬಳಿ ಹೋಗಿ ಕಾಲಟಿಯಲ್ಲಿ ನಡೆದುದೆಲ್ಲವನ್ನೂ ವಿವರಿಸಿದ ಸಚಿವರು ಪೆಚ್ಚು ಮೋರೆಯೊಂದಿಗೆ ನಿಂತುಕೊಂಡರು.ಕಿರಿಯ ಬಾಲಕ ಶಂಕರ ತನ್ನ ಆಹ್ವಾನವನ್ನು ನಿರಾಕರಿಸಿದನೆಂದು ರಾಜನು ಕೋಪಗೊಳ್ಳಲಿಲ್ಲ.ಬದಲಾಗಿ ಆ ವಟುವಿನ ನಿರ್ಭೀತಿಯನ್ನೂ,ನಿರ್ಮೋಹವನ್ನೂ ಮೆಚ್ಚಿದ.ಮತ್ತು ತಾನೇ ಹೋಗಿ ಬಾಲಕ ಶಂಕರನನ್ನು ಕಾಣಬೇಕೆಂದು ನಿರ್ಧರಿಸಿ ಕಾಲಟಿಯತ್ತ ಪ್ರಯಾಣ ಬೆಳೆಸಿದನು.ಶಂಕರನಿಂದ ಮಹಾರಾಜರಿಗೂ ನಿರಾಡಂಬರವಾದ ಆದರೆ ಆದರದ ಸ್ವಾಗತ ದೊರಕಿತು.ಬಾಲಬ್ರಹ್ಮಚಾರಿಯ ದರ್ಶನದಿಂದ ಪುನೀತನಾದ ಮಹಾರಾಜನು ತಾನು ರಚಿಸಿದ ಮೂರು ನಾಟಕಗಳನ್ನು ಶಂಕರರಿಗೆ ತೋರಿಸಿದನು.ಶಂಕರನು ಅವುಗಳನ್ನು ಓದಿ ವಿಮರ್ಶಿಸಿದಾಗ ರಾಜಾ ರಾಜಶೇಖರ ವರ್ಮನು ಕೃತಾರ್ಥಭಾವನೆಯಿಂದ ಅರಮನೆಗೆ ಹಿಂತಿರುಗಿದನು.

ಹೀಗೆ ಸಮಯವೂ ಮುಂದೆ ಸಾಗುತ್ತಿತ್ತು.ಕಾಲಟಿಯ ಗ್ರಾಮಸ್ಥರಿಗೆ ಪೂರ್ಣಾ ನದಿಯೇ ಜೀವನಾಧಾರವಾಗಿತ್ತು. ಮಹಿಳೆಯರು ಸ್ನಾನ,ಬಟ್ಟೆ ಒಗೆಯುವುದು,ಪಾತ್ರೆ ತೊಳೆಯುವುದು ಹೀಗೆ ದೈನಂದಿನ ಕಾರ್ಯಗಳಿಗೆ ನದಿಯ ನೀರನ್ನೇ ಅವಲಂಬಿಸಿದ್ದರು.ದಿನಬೆಳಗಾದರೆ ನದೀ ತ್ರೀರದಲ್ಲಿ ಮಹಿಳೆಯರ ದೊಡ್ಡ ಗುಂಪು ಅಲ್ಲಿ ನೆರೆದಿರುತ್ತಿತ್ತು.ನದಿಯಾದರೋ ಅಗ್ರಹಾರದಿಂದ ಬಹಳಷ್ಟು ದೂರವಿತ್ತು.ಹೀಗಿರುವಾಗ ಬೇಸಿಗೆಯ ಒಂದು ದಿನ ನೆರೆಹೊರೆಯ ಹೆಂಗಸರೆಲ್ಲರೂ ನದಿಗೆ ಹೋಗಿ ತಮ್ಮ ತಮ್ಮ ಕೆಲಸಗಳನ್ನು ಮುಗಿಸಿಕೊಂಡು ಬಂದರೂ ಆರ್ಯಾಂಬೆಯ ಮನೆಕೆಲಸವು ಮುಗಿಯದಿದ್ದ ಕಾರಣ ಆಕೆಗೆ ಅರಿವಿಲ್ಲದಂತೆ ಹೊತ್ತು ಮೀರಿ ಹೋಗಿತ್ತು.ಹೊತ್ತು ಮೀರಿ ಹೋಯಿತು ಎಂದು ಅಂದುಕೊಳ್ಳುತ್ತಲೇ ಆರ್ಯಾಂಬೆ ನದಿಯತ್ತ ಹೊರಟಳು.ಕಾಡು ಬೇಸಿಗೆಯಲ್ಲಿ ಬಿಸಿಲು ಆಗಲೇ ನೆತ್ತಿಗೇರಿತ್ತು.ಹೆಂಗಸರೆಲ್ಲ ತಮ್ಮ ಕೆಲಸಗಳನ್ನು ಮುಗಿಸಿ ಬಿಂದಿಗೆಗಳಲ್ಲಿ ನೀರು ತುಂಬಿಕೊಂಡು ಮನೆಯತ್ತ ಹೊರಟಿದ್ದರು.ನದಿಯಲ್ಲಿ ಆರ್ಯಾಂಬೆ ಒಬ್ಬಂಟಿಯಾದಳು.ಆದಷ್ಟು ಬೇಗ ತನ್ನ ಕೆಲಸಗಳನ್ನು ಮುಗಿಸಿದರೂ ಸೂರ್ಯ ನೆತ್ತಿಯಮೇಲೇರಿದ್ದ..ಕೆಲಸ ಮುಗಿಸಿ ಬರುವಾಗ ಕಂಕುಳಲ್ಲಿ ಒಗೆದ ವಸ್ತ್ರಗಳು ತಲೆಯ ಮೇಲೆ ತಂಬಿಗೆ ತುಂಬಾ ನೀರು.ತಲೆಯ ಮೇಲೆ ಬಿರು ಬಿಸಿಲಿದ್ದಾರೆ ಬಿಸಿಯಾದ ನೆಲದ ಮೇಲೆ ನಡೆಯುವಾಗ ಕಾಲುಗಳು ಸುತ್ತು ಬೊಬ್ಬೆಗಳು ಬರತೊಡಗಿತ್ತು,

ಇತ್ತ ಮನೆಯಲ್ಲಿ ಪುಟ್ಟ ಶಂಕರನು ತನ್ನ ವ್ಯಾಸಂಗದಲ್ಲಿ ನಿರತನಾಗಿದ್ದನು.ವ್ಯಾಸಾಂಗವೂ ಮುಗಿಯಿತು,ಕಲಿಯಲು ಬಂದ ವಿದ್ಯಾರ್ಥಿಗಳೂ ತಮ್ಮ ತಮ್ಮ ಮನೆಗೆ ಹೊರಟುಹೋದರು.ಹೊಟ್ಟೆಯು ಚುರುಗುಟ್ಟಲು ಪ್ರಾರಂಭವಾದಾಗ ಶಂಕರನಿಗೆ ತಾಯಿಯ ನೆನಪಾಗಿ ಅಡಿಗೆ ಮನೆಯತ್ತ ಹೋದರೂ,ಮನೆಯೆಲ್ಲ ಸುತ್ತಾಡಿದರೂ ತಾಯಿಯ ಸುಳಿವೇ ಇಲ್ಲ.ನದಿಗೆ ಹೋದ ತಾಯಿ ಹಿಂತಿರುಗಿ ಬರಲಿಲ್ಲವೇ ಎಂದುಕೊಳ್ಳುತ್ತಾ ನೆರೆಹೊರೆಯ ಮಹಿಳೆಯರನ್ನು ವಿಚಾರಿಸುವಾಗ ಅವರು ನದಿಯಬಳಿ ಆರ್ಯಾಂಬೆಯನ್ನು ಕಂಡದ್ದಾಗಿ ತಿಳಿಸಿದರು..ಇನ್ನೂ ಸ್ವಲ್ಪ ಹೊತ್ತು ಕಾದರೂ ತಾಯಿ ಬರದಾದಾಗ ಹಸಿವಿನಿಂದ ಕಂಗಾಲಾದ ಪುಟ್ಟ ಶಂಕರನು ತಾಯಿಯನ್ನು ಕರೆತರಲು ನದೀ ತೀರದೆಡೆಗೆ ಹೊರಟನು..ಅರ್ಧ ದಾರಿ ಕ್ರಮಿಸುವಷ್ಟರಲ್ಲೇ ಬಿಸಿಲಿನ ಬೇಗೆಯನ್ನು ತಡಿಯಲಾರದೆ ನಡುರಸ್ತೆಯಲ್ಲಿ ಕಂಗಾಲಾಗಿ ಬಿದ್ದಿದ್ದ ತಾಯಿಯನ್ನು ಕಂಡ ಶಂಕರನು ಜ್ಞಾನ ತಪ್ಪಿದ್ದ ತಾಯಿಯನ್ನು ಎಚ್ಚರಿಸುವ ಸಲುವಾಗಿ ಉರುಳಿ ಬಿದ್ದ ಬಿದ್ದಿದ್ದ ತಂಬಿಗೆಯಲ್ಲಿ ಉಳಿದಿದ್ದ ಅಲ್ಪ ನೀರಿನಿಂದ ತಾಯಿಯನ್ನು ಎಚ್ಚರಿಸಿದನು.ಬಿಂದಿಗೆಯನ್ನೂ,ಬಟ್ಟೆಯನ್ನೂ ತಾನೇ ತೆಗೆದುಕೊಂಡು ಕಂಗೆಟ್ಟಿದ್ದ ತಾಯಿಯನ್ನು ನಿಧಾನವಾಗಿ ಮನೆಗೆ ಕರೆತಂದನು..ಬಿಸಿಲಿನ ತಾಪಕ್ಕೆ ಬಳಲಿದ್ದ ತಾಯಿಯನ್ನು ಕಂಡ ಶಂಕರನ ಮನಸ್ಸು ಕರಗಿ ನೀರಾಗಿತ್ತು.

ಮಾರನೆಯ ದಿನ ಕಾಲಡಿ ಗ್ರಾಮದಲ್ಲಿ ಅದ್ಭುತವಾದ ಪವಾಡವೊಂದು ನಡೆದುಹೋಗಿತ್ತು.ಪೂರ್ಣಾ ನದಿಯು ಇದ್ದಕ್ಕಿದ್ದಂತೆ ತನ್ನ ದಿಕ್ಕು ಬದಲಿಸಿ ಊರೊಳಗೆ ಹರಿಯಲು ಪ್ರಾರಂಭಿಸಿತ್ತು. ಊರಿನ ಹೆಂಗಸರು ಅತೀವ ಸಂತಸದಿಂದ ಪವಾಡವನ್ನು ನೋಡಲು ಉತ್ಸುಕರಾಗಿದ್ದರು.ಆರ್ಯಾಂಬೆಯೂ ಸಂತೋಷದಿಂದ ಶಂಕರನನ್ನು ಎಬ್ಬಿಸಿ ವಿಷಯವನ್ನು ಅರುಹಿದಳು ಆಗ ಶಂಕರನು “ ನಾನು ನಿನ್ನೆ ಸಂಜೆ ನದಿಯ ಬಳಿ ಹೋಗಿ ಗಂಗೆಯನ್ನು ಪ್ರಾರ್ಥಿಸಿದಾಗ ಗಂಗೆ ಪ್ರತ್ಯಕ್ಷಳಾದಳು,ನಾನು ಗಂಗೆಯ ಬಳಿ ನನ್ನ ತಾಯಿ ಮತ್ತು ಊರಿನ ಇತರ ತಾಯಿಯರ ಕಷ್ಟ ಪರಿಹಾರವಾಗಲು ನದಿ ನಮ್ಮ ಮನೆಯ ಬಳಿಯಲ್ಲೇ ಹರಿಯಬೇಕು ಎಂದು ಪ್ರಾರ್ಥಿಸಿದೆ.ಮತ್ತು ಗಂಗೆಯು ಸಮ್ಮತಿಸಿದಳು”ಎಂದನು.ಸಮಾಚಾರವು ಗಾಳಿಗಿಂತ ವೇಗವಾಗಿ ಊರಿನೆಲ್ಲೆಡೆ ಹರಡಿತು.ತಮ್ಮ ಕಷ್ಟ ಪರಿಹರಿಸಿದ ಶಂಕರನನ್ನು ಊರಿನ ಮಹಿಳೆಯರು ಮನದುಂಬಿ ಹರಸಿದರು.

Chapter 1:

ಶಂಕರಾಚಾರ್ಯರಿಗೆ ಭಿಕ್ಷೆ ನೀಡಲೂ ಏನೂ ಇಲ್ಲದಾದಾಗ ಒಂದು ನೆಲ್ಲಿಕಾಯಿ ತಂದುಕೊಟ್ಟ ಆ ಬಡ ಮಹಿಳೆಗೆ ಶಂಕರಾಚಾರ್ಯರು ನೀಡಿದ ಉಡುಗೊರೆ ಏನಾಗಿತ್ತು.? ಬಂಗಾರದ ನೆಲ್ಲಿಕಾಯಿ ಕೊಟ್ಟ ಆ ದೇವಿ ಯಾರು.?

chapter 2:

ವೇದಾಂತ, ದಾರ್ಶನಿಕ ರಂಗದಲ್ಲಿ ಮಾತ್ರವಲ್ಲದೆ ಸಾಹಿತ್ಯದಲ್ಲೂ ಪ್ರೌಢಿಮೆ ಮೆರೆದಿದ್ದರು ಶಂಕರಾಚಾರ್ಯರು.! ಅವರು ಬರೆದಿರುವ ಕೃತಿಗಳು ಯಾವುವು.?

-Deepashree M

Tags

Related Articles

FOR DAILY ALERTS
Close