ಪ್ರಚಲಿತ

ಕೇವಲ ಹಿಂದೂ ಧರ್ಮದಲ್ಲಿ ಮಾತ್ರವಲ್ಲ,ಬೌದ್ಧ ಧರ್ಮದಲ್ಲೂ ಹಲವಾರು ಪಂಥಗಳಿವೆ ಎಂದು ನಿಮಗೆ ತಿಳಿದಿದೆಯೇ?

ಕಾಲಚಕ್ರವೊಂದು ವೃತ್ತ..ಒಮ್ಮೆ ಮೇಲೇರಿದವರು ಒಮ್ಮೆ ಕೆಳಗಿಳಿಯುತ್ತಾರೆ..ಮತಗಳ ವಿಷಯದಲ್ಲೂ ಹಾಗೆಯೇ ಒಮ್ಮೆ ಉತ್ತುಂಗಕ್ಕೇರಿದ ಮತವು ಇನ್ನೊಂದು ಮತವು ಉತ್ತುಂಗಕ್ಕೇರುವಾಗ ಸ್ವಲ್ಪ ತಣ್ಣಗಾಗುತ್ತದೆ..ಹಾಗೆಯೇ ಬೌದ್ಧ ದರ್ಶನದ ಐತಿಹಾಸಿಕ ವಿಕಾಸವೂ ಬಹಳ ಸುಂದರವಾಗಿದೆ ವಿಕ್ರಮ ಶತಮಾನ ೫ ನೇ ಶತಮಾನದಿಂದ ೧೦ ನೇ ಶತಮಾನದ ವರೆಗೆ ಸುಮಾರು ೧೫೦೦ ವರ್ಷಗಳು ಬೌದ್ಧಮತದ ಮಹತ್ವಪೂರ್ಣವಾದ ಸಮಯವಾಗಿದ್ದವು.ಈ ೧೫೦೦ ವರ್ಷಗಳ ಕಾಲದಲ್ಲಿ ಬೌದ್ಧ ಧರ್ಮವು ಮೂರು ಬಾರಿ ಪರಿವರ್ತಿತವಾಯಿತೆಂದು ಬೌಧ ಆಚಾರ್ಯರು ಅಂಗೀಕರಿಸಿದ್ದಾರೆ. ಅದನ್ನು ತ್ರಿಚಕ್ರವೆಂದು ಕರೆಯುತ್ತಾರೆ.ಪ್ರತಿಯೊಂದು ವಿಭಾಗವೂ ೫೦೦ ವರ್ಷಗಳವರೆಗೆ ಅಸ್ತಿತ್ವ ಹೊಂದಿತ್ತು.ಮೊದಲನೆಯ ೫೦೦ ವರ್ಷಗಳ ಕಾಲದಲ್ಲಿ ಆತ್ಮದ ಅನಸ್ತಿತ್ವದ ಸಿದ್ಧಾಂತವು ಪ್ರಸಿದ್ಧವಾಗಿತ್ತು.ಬಾಹ್ಯ ವಿಷಯಗಳ ಅಸ್ತಿತ್ವವನ್ನು ನಿಷೇಧಿಸಲಾಗುತ್ತಿತ್ತು. ಜಗತ್ತು ಶಕ್ತಿಗಳ ಮೂಲ ಸತ್ತಾವಿಹೀನವಾದ ಒಂದು ಕ್ಷಣಿಕ ಪರಿಣಾಮ ಮಾತ್ರವಾಗಿತ್ತು.ಆಚಾರದ ದ್ರಿಷ್ಟಿಯಿಂದ ವ್ಯಕ್ತಿಗತವಾದ ನಿರ್ಮಾಣವೇ ಜೀವನದ ಅಂತಿಮ ಲಕ್ಷ್ಯವೆಂಬುದಾಗಿ ಸ್ವೀಕರಿಸಿ ಅರ್ಹತ್ ಪದವಿಯ ಪ್ರಾಪ್ತಿಯೇ ಮಾನವ ಮಾತ್ರರ ಕರ್ತವ್ಯವೆಂಬುದಾಗಿ ಅಂಗೀಕರಿಸಲ್ಪಟ್ಟಿತ್ತು.

ಎರಡನೆಯ ಕಾಲ ವಿಭಾಗವು ವಿಕ್ರಮದ ಮೊದಲನೆಯ ಶತಮಾನದಿಂದ ೫ ನೇ ಶತಮಾನದ ವರೆಗೂ ಇದ್ದಿತ್ತು.ಪುದ್ಗಲ ಶೂನ್ಯತೆಯ ಸ್ಥಾನದಲ್ಲಿ ಸರ್ವಧರ್ಮ ಶೂನ್ಯತೆ ಅಥವಾ ಧರ್ಮಣೈರಾತ್ಮ್ಯವಾದವು ಅಂಗೀಕೃತವಾಗಿತ್ತು.ವ್ಯಕ್ತಿಗತವಾದ ಕಲ್ಯಾಣಕ್ಕೆ ಬದಲಾಗಿ ವಿಶ್ವಕಲ್ಯಾಣದ ಉನ್ನತವಾದ ಭಾವನೆಯು ವಿರಾಜಮಾನವಾಯಿತು.ನವೀನವಾದ ಈ ಬೌದ್ಧ ಮತವು ಜಗತ್ತು ತಿರಸ್ಕರಿಸದೆ ಪಾರಮಾರ್ಥಿಕ ದೃಷ್ಟಿಯಿಂದ ಅದನ್ನು ಅಭಾಸವೆಂದು ಅಂಗೀಕರಿಸಿದರು.ಆರ್ಯಸತ್ಯದ ಬದಲಾಗಿ ದ್ವಿವಿಧಗಳಾದ ಸತ್ಯದ(ಸಾಂಸ್ಕೃತಿಕ ಮತ್ತು ಪಾರಮಾರ್ಥಿಕ)ಕಲ್ಪನೆಯು ವಿಶೇಷವಾದ ಮಹತ್ವವನ್ನು ಹೊಂದಿತು.ಮೂಲ ಬೌದ್ದ ಧರ್ಮದ ಬಹುತ್ವವಾದದ ಸ್ಥಾನದಲ್ಲಿ ಶೂನ್ಯಾದ್ವೈತವಾದ ಸಿದ್ಧಾಂತವು ಪ್ರತಿಪಾದಿಸಲ್ಪಟ್ಟಿತು. ಸತ್ಯತೆಯ ನಿರ್ಣಯವನ್ನು ಸಿದ್ದರ ಪ್ರಾತಿಭಾಚಕ್ಷುಸ್ಸೇ ಮಾಡಲು ಸಾಧ್ಯ.ಮಾನವ ಬುದ್ದನಿಗೆ ಬದಲಾಗಿ ಲೋಕೋತ್ತರಬುದ್ದನ ಸಿದ್ಧಾಂತವು ಪ್ರಾರಂಭವಾಯಿತು.ಬೌದ್ಧ ದರ್ಶನದ ಈ ವಿಕಾಸವನ್ನು ಶೂನ್ಯವಾದವೆಂದು ಕರೆಯುತ್ತಾರೆ.

ಮೂರನೆಯ ವಿಕಾಸವು ವಿಕ್ರಮದ ೫ ನೇ ಶತಮಾನದಿಂದ ೧೦ನೇ ಶತಮಾನದವರೆಗೆ ನಡೆಯಿತು.ನ್ಯಾಯವು ಉನ್ನತಿಯನ್ನು ಈ ಸಮಯದ ಪ್ರಧಾನ ದಾರ್ಶನಿಕ ಕಾರ್ಯವಾಗಿರುತ್ತದೆ.ಸರ್ವಶೂನ್ಯತೆಯ ಸಿದ್ದಾಂತವೂದೋಷಯುಕ್ತವಾದುದೆಂದು ಪರಿಗಣಿಸಿ ಅದರ ಸ್ಥಾನದಲ್ಲಿ ವಿಜ್ಞಾನಚೈತನ್ಯ ಚಿತ್ತದ ಸತ್ಯತೆಯು ಅಂಗೀಕೃತವಾಯಿತು.ಬಾಹ್ಯಾರ್ಥದ ನಿಷೇಧವನ್ನು ಸ್ವೀಕರಿಸಿ ಸಮಗ್ರ ಪ್ರಪಂಚವು ಚಿತ್ತದ ಪರಿಣಾಮ ಮಾತ್ರವೆಂದು ಅಂಗೀಕೃತವಾಯಿತು.ವಿಜ್ಞಾನವಾದದ ಮೊದಲ ಆಚಾರ್ಯರಾದ ಆಚಾರ್ಯ ಅಸಂಗ ಮತ್ತು ವಸುಬಂಧುಗಳಿಗೆ ಈ ಕಲ್ಪನೆಯು ಅಂಗೀಕೃತವಾಯಿತು.ಆದರೆ ಅವರ ಶಿಷ್ಯ ಮಂಡಳಿಯು ಆಲಯ ವಿಜ್ಞಾನವನ್ನು ಆತ್ಮನ ನಿಗೂಢ ರೂಪವೆಂಬುದಾಗಿ ಅಂಗೀಕರಿಸಿ ಯುಕ್ತಿಗಳ ಮೂಲಕ ಇದನ್ನು ಖಂಡಿಸಿರುತ್ತಾರೆ.ಬೌದ್ಧ ದರ್ಶನದ ಈ ಮೂರನೆಯ ವಿಕಾಸವು ವಿಜ್ಞಾನವಾದ ಅಥವಾ ಯೋಗಾಚಾರವೆಂಬ ಹೆಸರಿನಿಂದ ಪ್ರಸಿದ್ಧವಾಗಿದೆ.

ಈ ನಾಲ್ಕು ಸಂಪ್ರದಾಯಗಳ ಆಚಾರ್ಯರುಗಳು ಪಾಂಡಿತ್ಯಪೂರ್ಣವಾದ ಗ್ರಂಥಗಳನ್ನು ರಚಿಸಿದ್ದರು.ಬೌದ್ಧದರ್ಶನದಲ್ಲಿ ಬಹಳ ಮಹತ್ವಪೂರ್ಣ ಗ್ರಂಥಗಳಿವೆ,ಆದರೆ ಇಂದು ಅವುಗಳು ಸಂಸ್ಕೃತದಲ್ಲಿಲ್ಲ ಬದಲಾಗಿ ಚೈನಾ ಮತ್ತು ಟಿಬೆಟ್ ಭಾಷೆಗಳಲ್ಲಿವೆ.ಅಭಿಧರ್ಮಜ್ಞಾನ ಪ್ರಸ್ಥಾನಶಾಸ್ತ್ರವು ವೈಭಾಷಿಕ ಸಂಪ್ರದಾಯದ ಸರ್ವಶ್ರೇಷ್ಠ ಗ್ರಂಥ.ಇದನ್ನು ಕಾತ್ಯಾಯನೀಪುತ್ರನು ಬುದ್ದನು ನಿರ್ವಾಣಹೊಂದಿದ ೩೦೦ ವರ್ಷಗಳಾದ ಮೇಲೆ ರಚಿಸಿದರು.ವಿಪುಲಕಾಯವುಳ್ಳ ಈ ಗ್ರಂಥದಲ್ಲಿ ೮ ಪರಿಚ್ಛೇದಗಳೂ ,೮ ವರ್ಗಗಳೂ ಮತ್ತು ೧೫ ಸಾವಿರ ಶ್ಲೋಕಗಳೂ ಇವೆ.ಮೂಲ ಕೃತಿಯು ಸಂಸ್ಕೃತದಲ್ಲಿದ್ದು ನಾಲ್ಕು ಮತ್ತು ಏಳನೇ ಶತಮಾನದಲ್ಲಿಚೈನಾಭಾಷೆಗೆ ಅನುವಾದಿಸಲ್ಪಟ್ಟಿತು.ಕನಿಷ್ಕನ ಸಮಯದಲ್ಲಿನ ನಾಲ್ಕನೆಯ ಸಂಗೀತಿಯಲ್ಲಿ ಈ ಗ್ರಂಥಕ್ಕೆ ಅಭಿಧರ್ಮ ವಿಭಾಷಾಶಾಸ್ತ್ರವೆಂಬ ವ್ಯಾಖ್ಯಾನವು ರಚಿಸಲ್ಪಟ್ಟಿತು.

ವಸುಬಂಧುವಿನ ಅಭಿಧರ್ಮಕೋಶವು ಕಾಶ್ಮೀರದ ವೈಭಾಷಿಕರ ಅತ್ಯಂತ ಆದರಣೀಯ ಮತ್ತು ಮಹತ್ವಪೂರ್ಣ ರಚನೆಯಾಗಿರುತ್ತದೆ.ತನ್ನ ವಿದ್ವತ್ತು,ಉನ್ನತಮಟ್ಟದ ಆಚಾರ ಹಾಗೂ ಆಚಾರ್ಯನಾಗಿದ್ದುದರಿಂದ ಇವರ ಹೆಸರು ಭಾರತೀಯ ದರ್ಶನಗಳ ಇತಿಹಾಸದಲ್ಲಿ ಅತ್ಯಂತ ಗೌರವಾನ್ವಿತ ಸ್ಥಾನವನ್ನು ಹೊಂದಿದ್ದಾರೆ.ತನ್ನ ಜೀವನದ ಆರಂಭದಲ್ಲಿ ವೈಭಾಷಿಕ ಮತಾನುಯಾಯಿಯಾಗಿದ್ದ ವಸುಬಂಧು,ಬಳಿಕ ತನ್ನ ಅಣ್ಣನ ಪ್ರಭಾವದಿಂದ ವಿಜ್ಞಾನವಾದದ ಅನುಯಾಯಿಯಾದನು. ಕುಮಾರ ಜೀವನು ಕ್ರಿಸ್ತಶಕ ನಾಲ್ಕನೇ ಶತಮಾನದ ಆದಿಯಲ್ಲಿ ವಸುಬಂಧುವಿನ ಚರಿತ್ರೆಯನ್ನು ರಚಿಸಿದರು. ನಾಲ್ಕನೆಯ ಶತಮಾನದ ಸಂಘಭಾದ್ರರು ವಸುಬಂಧುವಿನ ಪ್ರತಿಸ್ಪರ್ಧಿಯಾದ ಬೌದ್ದಾಚಾರ್ಯರಾಗಿದ್ದರು. ವಸುಬಂಧುವಿನ ಅಭಿಪ್ರಾಯಗಳನ್ನು ಖಂಡಿಸುವುದಕ್ಕಾಗಿ ಸಂಘಭಾದ್ರರು ಕೋಶಾಕಾರಕಾ ಎಂಬ ಗ್ರಂಥವನ್ನು ರಚಿಸಿದರು.ಸಮಯ ಪ್ರದೀಪಿಕಾ ಎಂಬುದು ವೈಭಾಷಿಕ ಸಿದ್ದಾಂತಗಳ ಸಾರವನ್ನೊಳಗೊಂಡ ಗ್ರಂಥ.ಕಾರಕದಲ್ಲಿ ಏಳುಲಕ್ಷ ಶ್ಲೋಕಗಳೂ ಮತ್ತು ಪ್ರದೀಪಿಕಾ ದಲ್ಲಿ ಹತ್ತುಸಾವಿರ ಶ್ಲೋಕಗಳೂ ಇವೆ.

ನಾಲ್ಕನೇ ಶತಮಾನದ ಪುರುಷಪುರದ ಕೌಶಿಕ ಗೋತ್ರದ ಬ್ರಾಹ್ಮಣನೋರ್ವನ ಪ್ರಥಮ ಪುತ್ರನಾದ ಅಸಂಗನಾಖ್ಯಾತಿಯು ಅವನ ಗುರುವಾದ ಮೈತ್ರೇಯನಿಗಿಂತಲೂ ಅಧಿಕವಾಗಿದೆ.ಇವರು ಸಮುದ್ರಗುಪ್ತನ ಸಮಯದಲ್ಲಿ ಅಯೋಧ್ಯೆಯಲ್ಲಿದ್ದನು. ಗ್ರಂಥವನ್ನು ರಚಿಸಿರುವುದಲ್ಲದೆ ಇವನು ತನ್ನ ಸಹೋದರನಾದ ವಸುಬಂಧುವಿಗೆ ಯೋಗಾಚಾರ ಮತದ ದೀಕ್ಷೆಯನ್ನು ನೀಡಿ ವಿಜ್ಞಾನವಾದದ ಪ್ರಚಾರಾರ್ಥವಾಗಿ ಗ್ರಂಥವನ್ನು ಬರೆಯಿಸಿದನು.ಮಹಾಯಾನ ಸಂಪರಿಗ್ರಹ, ಮಹಾಯಾನ ಅಭಿಧರ್ಮ ಸಂಗೀತಿ ಶಾಸ್ತ್ರ, ಯೋಗಾಚಾರ್ಯ ಭೂಮಿಶಾಸ್ತ್ರ,ಅಭಿಸಮಯಾಲಂಕಾರ ಟೀಕಾ ಗ್ರಂಥಗಳನ್ನು ರಚಿಸಿರುತ್ತಾರೆ. ವಸುಬಂಧುವಿನ ಶಿಷ್ಯರಾದ ಸ್ಥಿರಮತಿ ನಾಲ್ಕನೆಯ ಶತಮಾನದ ಅಂತ್ಯಭಾಗದಲ್ಲಿದ್ದಾರೆಂದು ಇತಿಹಾಸವು ಸಮರ್ಥಿಸುತ್ತದೆ.ತ್ರಿಮಶಿಕಾ ಭಾಷ್ಯ,ಮಧ್ಯಾನಿತ ವಿಭಾಂಗ ಸೂತ್ರಭಾಷ್ಯ ಟೀಕಾ,ಅಭಿಧರ್ಮಕೋಶ ಭಾಷ್ಯವೃತ್ತಿ, ಸೂತ್ರಾಲಂಕಾರ ವೃತ್ತಿಭಾಷ್ಯ ಮತ್ತು ಮೂಲ ಮಾಧ್ಯಮಿಕ ಕಾರಿಕಾವೃತ್ತಿ ಇವರ ಪ್ರಸಿದ್ಧ ಗ್ರಂಥಗಳು.

ಬೌದ್ಧ ಧರ್ಮದ ಪ್ರಸಿದ್ಧ ಆಚಾರ್ಯರಾದ ದಿಗ್ ನಾಗನು ತನ್ನ ಪ್ರಗಲಫವಾದ ವಾಕ್ಚಾತುರ್ಯ ಮತ್ತು ಶಾಸ್ತ್ರಾರ್ಥಕೌಶಲಗಳಿಂದ ವಾದಿವೃಷಭನೆಂಬ ಬಿರುದನ್ನೂ ಪಡೆದಿದ್ದರು.ಇವರು ವಸುಬಂಧುವಿನ ಶಿಷ್ಯರಾಗಿದ್ದರು. ಪ್ರಮಾಣ ಸಮುಚ್ಚಯ,ಪ್ರಮಾಣ ಸಮುಚ್ಚಯ ವೃತ್ತಿ,ನ್ಯಾಯಪ್ರವೇಶ,ಹೇತು ಚಕ್ರಹಾಮರು,ಪ್ರಮಾಣಶಾಸ್ತ್ರ ನ್ಯಾಯದ್ವಾರ ಮತ್ತು ಆಲಂಬನಪರೀಕ್ಷಾ ಇವರ ಪ್ರಸಿದ್ಧ ಗ್ರಂಥಗಳು.೬ ಅಥವಾ ೭ ನೇ ಶತಮಾನದಲ್ಲಿದ್ದ ಧರ್ಮಕೀರ್ತಿ ಪ್ರಮಾಣವಾರ್ತಿಕ ಮತ್ತು ನ್ಯಾಯಬಿಂದು ಇವನ ಸುಪ್ರಸಿದ್ದ ಗ್ರಂಥಗಳು. ೬ ನೇ ಶತಮಾನದ ಆರಂಭಕಾಲದ ಧರ್ಮಪಾಲರು ನಾಲಂದಾ ವಿಶ್ವವಿದ್ಯಾನಿಲಯದ ಅಧಿಪತಿಯಾಗಿದ್ದರು.ಇವರು ಯೋಗಾಚಾರ ಮತ್ತು ಶೂನ್ಯವಾದ ಎರಡು ಮತಗಳ ಗ್ರಂಥಗಳ ಮೇಲೂ ವ್ಯಾಖ್ಯಾನಗಳನ್ನುರಚಿಸಿರುತ್ತಾರೆ.ವಸುಬಂಧುವಿನ ವಿಖ್ಯಾತ ಗ್ರಂಥವಾದ ವಿಜ್ಞಪ್ತಿಮಾತ್ರತಾಸಿದ್ದಿ ವ್ಯಾಖ್ಯಾ ಮತ್ತು ಆರ್ಯದೇವನ ಪ್ರಖ್ಯಾತ ಗ್ರಂಥವಾದ ಶತಶಾಸ್ತ್ರವೈಪುಲ್ಯ ಭಾಷ್ಯ ಎಂಬುದರ ಮೇಲೂ ಟೀಕೆಗಳನ್ನು ರಚಿಸಿದ್ದಾರೆ.

ಆಕರ: ಎಸ್ . ರಾಮಚಂದ್ರಶಾಸ್ತ್ರೀ

-Deepashree M

Tags

Related Articles

FOR DAILY ALERTS
Close