ಪ್ರಚಲಿತ

ರುದ್ರ ಎಂದು ಕರೆಸಿಕೊಳ್ಳುವ ಶಿವನನ್ನು ಆರಾಧಿಸುವ ನಾಲ್ಕು ಸಂಪ್ರದಾಯಗಳು ಯಾವುದು ಮತ್ತು ಹೇಗೆ ಜನಿಸಿತೆಂದು ತಿಳಿದಿದೆಯೇ??

ಪ್ರಾಚೀನ ಕಾಲದಿಂದಲೂ ಹಿಂದೂಗಳು ಬ್ರಹ್ಮ ವಿಷ್ಣು ಮಹೇಶ್ವರ ಹೀಗೆ ತ್ರಿಮೂರ್ತಿಗಳನ್ನು ಆರಾಧಿಸುತ್ತಿದ್ದರು..ಮಾತ್ರವಲ್ಲದೆ ದೇವಿಯನ್ನೂ ಉಪಾಸಿಸುತ್ತಿದ್ದರು.ವಿಷ್ಣುವನ್ನು ಉಪಾಸಿಸುವವರನ್ನು ವೈಷ್ಣವರೆಂದೂ ಶಿವನ ಉಪಾಸಕರನ್ನು ಶೈವರೆಂದೂ ಕರೆಯುವುದು ರೂಢಿ..ಶಿವನನ್ನು ರುದ್ರನೆಂದೂ ಕರೆಯಲಾಗುತ್ತದೆ.ಶಿವ ಅಥವಾ ರುದ್ರನ ಉಪಾಸನೆಯು ವೈದಿಕ ಕಾಲದಿಂದಲೂ ಭಾರತದಲ್ಲಿ ಪ್ರಚಲಿತವಾಗಿತ್ತು.ತೈತ್ತರೀಯ ಅರಣ್ಯಕ ಗ್ರಂಥದಲ್ಲಿ ಸಮಸ್ತ ಜಗತ್ತನ್ನು ರುದ್ರ ರೂಪವೆಂದು ಹೇಳಲಾಗಿದೆ.ಅಥರ್ವ ಶಿರಸ್ ಉಪನಿಷತ್ತಿನಲ್ಲಿ ಮೊಟ್ಟಮೊದಲು ಪಾಶುಪತವ್ರತ,ಪಶು,ಪಾಶ ಮುಂತಾದ ತಂತ್ರ ಶಾಸ್ತ್ರಿಕ ಪರಿಭಾಷೆಗಳು ಲಭ್ಯವಾಗುತ್ತದೆ.ಇದರಿಂದಾಗಿ ಪಾಶುಪತ ಮತವು ಪ್ರಾಚೀನವಾದದ್ದೆಂದು ಅರಿವಾಗುತ್ತದೆ.ವಾಮನ ಪುರಾಣದಲ್ಲಿ ಶೈವರಲ್ಲಿ ನಾಲ್ಕು ವಿಭಿನ್ನ ಸಂಪ್ರದಾಯಗಳಿದ್ದವೆಂದು ಗೋಚರಿಸುತ್ತದೆ ಶೈವ,ಪಾಶುಪತ,ಕಾಲದಮನ ಮತ್ತು ಕಾಪಾಲಿಕ ಎಂಬುದೇ ಈ ನಾಲ್ಕು ಸಂಪ್ರದಾಯಗಳಾಗಿವೆ.ಈ ಧಾರ್ಮಿಕ ಮತಗಳ ಮೂಲ ಗ್ರಂಥವನ್ನು “ಶೈವಾಗಮ” ಎಂದು ಕರೆಯುತ್ತಾರೆ.

ಪಾಶುಪತ ಮತ

ನಕುಲೀಶ ಅಥವಾ ಲುಕಲೇಶ ಎಂಬುವವನು ಈ ಮತವನ್ನು ಸ್ಥಾಪಿಸಿದರು.ಶಿವಪುರಾಣದಲ್ಲಿರುವ ‘ಕಾರಾವಣ ಮಹಾತ್ಮ್ಯ’ ಎಂಬುದರಿಂದ ಭಾರೋಚದ ಹತ್ತಿರದ ಕಾರಬನ ಎಂಬ ಸ್ಥಳದಲ್ಲಿ ಇವರ ಜನನವಾಯಿತೆಂದು ತಿಳಿಯುತ್ತದೆ. ರಾಜಪುತಾನ,ಗುಜರಾತ್ ಮುಂತಾದ ಸ್ಥಳಗಳಲ್ಲಿ ನಕುಲೀಶನ ಮೂರ್ತಿಗಳು ಸಿಗುತ್ತವೆ.ಲಗುಡವನ್ನು ಧರಿಸಿರುವುದರಿಂದ ಇವರ ಹೆಸರನ್ನು ಲಗುಡೇಶ ಅಥವಾ ಲಕುಲೀಶ ಎಂದಾಗಿಯೂ ಹೇಳಲಾಗುತ್ತಿದೆ.ಭಗವಾನ್ ಶಂಕರನ ೧೮ ಅವತಾರಗಳಲ್ಲಿ ನಕುಲೀಶನದು ಮೊದಲನೆಯ ಅವತಾರವೆಂದು ಅಂಗೀಕರಿಸಲಾಗುತ್ತದೆ. ಲಕುಲೀಶ,ಕಾಲಿಕ,ಗಾರ್ಗ್ಯ,ಮೈತ್ರ್ಯ,ಕಾರುಷ,ಈಶಾನ,ಪಾರಗಾರ್ಯ,ಕಪಿಲಾಂಡ,ಮನುಷ್ಯಕ,ಅಪರಾಕುಶಿಕ,ಅತ್ರಿ,ಪಿಂಗಳಾಕ್ಷ,ಪುಷ್ಪಕ,ಬೃಹದಾರ್ಯ,ಆಗಸ್ಟಿ,ಸಂತಾನ,ರಾಶೀಕರ ಮತ್ತು ವಿದ್ಯಾಗುರು ಇವರುಗಳೇ ಶಂಕರನ ಅವತಾರ ಪುರುಷರು.ಎರಡನೇ ವಿಕ್ರಮನ ರಾಜ್ಯಕಾಲಕ್ಕೆ ಸಂಬಂಧಿಸಿದ ಗುಪ್ತಸಂವತ್ ೬೧ ರ ಶಿಕಾಲೇಖವೊಂದನ್ನು ಗಮನಿಸಿದಾಗ ಉಡಿತಾಚಾರ್ಯನೆಂಬ ಪಾಶುಪತ ಮತದವನು ಗುರುಮಂದಿರದಲ್ಲಿ ಉಪಮಿತೇಶ್ವರ ಹಾಗೂ ಕಪಿಲೇಶ್ವರ ಎಂಬ ಶಿವಲಿಂಗಗಳನ್ನು ಸ್ಥಾಪಿಸಿದರೆಂದು ವಿದಿತವಾಗುತ್ತದೆ. ಉದಿತಾಚಾರ್ಯನು ಪೂಜ್ಯ ಕುಷಿಕನಿಂದ ಹತ್ತನೆಯವನೆಂದು ಹೇಳಿಕೊಳ್ಳುತ್ತಾರೆ.ಈ ಪ್ರಕಾರವಾಗಿ ಪೀಳಿಗೆಯೊಂದಕ್ಕೆ ೨೫ ವರ್ಷಗಳ ಅಂತರವನ್ನು ತೆಗೆದುಕೊಂಡರೆ ಲಕುಲೀಶನ ಸಮಯವು ಕ್ರಿಸ್ತ ಶಕ ೧೦೫ ರ ಸುಮಾರು ಎಂದು ಅರಿವಾಗುತ್ತದೆ.ಸರಿ ಸುಮಾರು ಇದೇ ಸಮಯದಲ್ಲಿ ಕುಷಾಣರಾಜನಾದ ಹುವಿಷ್ಕನ ನಾಣ್ಯಗಳ ಮೇಲೆ ಲಗುಡಧಾರಿಯಾದ ಶಿವನ ಮೂರ್ತಿಯು ದೊರಕುತ್ತದೆ.ನ್ಯಾಯವಾರ್ತಿಕೇಯನ್ನು ರಚಿಸಿದ ಉದ್ಯೋತಕರನು ಪಾಶುಪತಾಚಾರ್ಯ ಎಂಬ ಉಪಾಧಿಯೊಂದಿಗೆ ತನ್ನ ಪರಿಚಯವನ್ನು ಮಾಡಿಕೊಡುತ್ತಾನೆ.ಒಂದು ಕಾಲದಲ್ಲಿ ಈ ಮತವು ಪಶ್ಚಿಮ ಭಾರತದಲ್ಲಿ ವಿಶೇಷವಾಗಿ ಪ್ರಚಾರದಲ್ಲಿದ್ದು ಬಹು ಪ್ರಸಿದ್ಧವಾಗಿತ್ತು..

ಶೈವಸಿದ್ಧಾಂತ

ಶೈವಸಿದ್ಧಾಂತವು ದಕ್ಷಿಣ ಭಾರತದ ತಮಿಳು ದೇಶದಲ್ಲಿ ಪ್ರಚಾರದಲ್ಲಿತ್ತು.ಈ ಪ್ರದೇಶವು ಶೈವ ಧರ್ಮಕ್ಕೆ ಪ್ರಧಾನವಾದದ್ದು,ಇಲ್ಲಿನ ಶೈವ ಭಕ್ತರು ಭಗವಾನ್ ಶಂಕರನನ್ನು ಆರಾಧನೆ ಮಾಡಿ,ಭಕ್ತಿರಸಪೂರಿತವಾದ ಭವ್ಯ ಸ್ತೋತ್ರಗಳನ್ನೂ ಹಾಗೂ ಸಿದ್ದಾಂತ ಪ್ರತಿಪಾದಕವಾದ ಗ್ರಂಥಗಳನ್ನು ತಮ್ಮ ಮಾತೃಭಾಷೆಯಾದ ತಮಿಳಿನಲ್ಲಿ ರಚಿಸಿದರು.ಈ ೮೪ ಶೈವ ಸಂತರಲ್ಲಿ ನಾಲ್ಕು ಜನ ಆಚಾರ್ಯರು ಪ್ರಮುಖರು..ಸಂತ ಅಪ್ಪಾರ್,ಸಂತ ಜ್ಞಾನ ಸಂಬಂಧ,ಸಂತ ಸುಂದರಮೂರ್ತಿ ಮತ್ತು ಸಂತ ಮಾಣಿಕ್ಯವಾಚಾರ್..ಇವರು ಶೈವಧರ್ಮದ ನಾಲ್ಕು ಪ್ರಮುಖ ಮಾರ್ಗಗಳಾದ ಚರ್ಯಾ(ದಾಸಮಾರ್ಗ),ಕ್ರಿಯಾ(ಸತ್ಪುತ್ರ ಮಾರ್ಗ),ಯೋಗ(ಸಹಮಾರ್ಗ) ಮತ್ತು ಜ್ಞಾನ(ಸನ್ಮಾರ್ಗ)..ಇವುಗಳನ್ನು ತಮಿಳುದೇಶದಲ್ಲಿ ಸ್ಥಾಪಿಸಿದರು.ಈ ಸಂತರ ಆವಿರ್ಭಾವಕಾಲವು ಏಳು ಅಥವಾ ಎಂಟನೆಯ ಶತಮಾನ.ಇವರ ಮೊದಲು ನಕ್ಕೀರ್,ಸಂತ ಕಣ್ಣಪ್ಪ ಮತ್ತು ತಿರುಮೂಲರ್ ಇವರುಗಳು ಶೈವಧರ್ಮವನ್ನು ವಿಪುಲವಾಗಿ ಪ್ರಚಾರ ಮಾಡಿದ್ದರು.ಭಗವಾನ್ ಶಂಕರನು ತನ್ನ ಭಕ್ತರನ್ನು ಉದ್ದಾರ ಮಾಡುವುದಕ್ಕಾಗಿ ತನ್ನ ೫ ಮುಖಗಳಿಂದ ೨೮ ತಂತ್ರಗಳನ್ನು ಆವಿರ್ಭಾವಗೊಳಿಸಿದನು.ಇವುಗಳಲ್ಲಿ ೧೦ ದ್ವೈತಮೂಲಕವಾದ ತಂತ್ರಗಳು,ಇವುಗಳನ್ನು ಪರಮಶಿವನೇ ಪ್ರಾಣವಾದಿ ಹತ್ತು ಶಿವರಿಗೆ ಉಪದೇಶಿಸಿರುತ್ತಾರೆ.೧೮ ದ್ವೈತ ಪ್ರಧಾನವಾದ ತಂತ್ರವಾಗಿರುತ್ತದೆ.ಇವುಗಳನ್ನು ಪರಮಶಿವನು ಅಘೋರಾದಿ ೧೮ ರುದ್ರರಿಗೆ ಉಪದೇಶಿಸಿದರು.ಈ ಉಪದೇಶವು ಮಹೌಘಕ್ರಮ ಮತ್ತು ಪ್ರತಿಸಂಹಿತಾಕ್ರಮ ಎಂದು ಎರಡು ಪ್ರಕಾರವಾಗಿರುತ್ತದೆ.ಅನೇಕವಾದ ಉಪಾಸಗಮಗಳಿಂದ ಅವರ ಜ್ಞಾನರೂಪವಾದ ವೇದವು ಕೇವಲ ಮುಕ್ತಿಯ ಸಾಧನವಾಗಿರುತ್ತದೆ.ಎಂಟನೆಯ ಶತಮಾನದಲ್ಲಿದ್ದ ಆಚಾರ್ಯ ಸದ್ಯೋಜ್ಯೋತಿ ಶೈವಸಿದ್ಧಾಂತದ ಪ್ರಮುಖ ಆಚಾರ್ಯರು.ಇವರ ಗುರುಗಳು ಉಗ್ರಜ್ಯೋತಿ.೧೧ ನೇ ಶತಮಾನದಲ್ಲಿದ್ದ ಹರದತ್ತ ಶಿವಾಚಾರ್ಯರು ವಿಶಿಷ್ಟವಾದ ಆಚಾರ್ಯರಾಗಿದ್ದರು.ಇವರ ಶ್ರುತಿ ಸೂಕ್ತಿಮಾಲಾ ಅಥವಾ ಚತುರ್ವೇದ ತಾತ್ಪರ್ಯ ಸಂಗ್ರಹ ಎಂಬ ಗ್ರಂಥವು ವೇದ ವೇದಾಂತದ ತಾತ್ಪರ್ಯವಾದ ಶಿವಮಹಿಮೆಯನ್ನು ಪ್ರತಿಪಾದಿಸುತ್ತದೆ.ಇದಕ್ಕೆ ಶಿವಲಿಂಗಭೂಪ ಎಂಬವರು ಸುಂದರವಾದ ವ್ಯಾಖ್ಯಾನವನ್ನು ರಚಿಸಿರುತ್ತಾರೆ.

ವೀರಶೈವ ಮತ

ವೀರಶೈವ ಮತದ ಅನುಯಾಯಿಗಳನ್ನು ಲಿಂಗಾಯಿತ ಅಥವಾ ಜಂಗಮರೆಂದು ಕರೆಯುತ್ತಾರೆ.ಇವರ ಆಚಾರವು ವಿಶಿಷ್ಟವಾಗಿದೆ.ಈ ಮತದ ಆದ್ಯ ಪ್ರವರ್ತಕನು ಬ್ರಾಹ್ಮಣನಾಗಿದ್ದರೂ ಇವರು ವರ್ಣ ವ್ಯವಸ್ಥೆಯನ್ನು ಅಂಗೀಕರಿಸುವುದಿಲ್ಲ.ಇವರು ಈಶ್ವರನ ಲಿಂಗವನ್ನು ಯಾವಾಗಲೂ ಕುತ್ತಿಗೆಯಲ್ಲಿ ಹಾಕಿಕೊಂಡಿರುತ್ತಾರೆ. ವೀರಶೈವ ಮತವು ಕರ್ನಾಟಕದಲ್ಲಿ ಪ್ರಚಲಿತವಾಗಿದೆ.ಈ ಮತದ ಆದ್ಯ ಪ್ರವರ್ತಕರು ೧೨ ನೇ ಶತಮಾನದ ಬಸವ ಎಂಬವರು.ಇವರು ಕುಲಚೂರಿವಂಶದ ರಾಜನಾದ ಬಿಜ್ಜಳನ ಮಂತ್ರಿಯಾಗಿದ್ದನೆಂದು ಹೇಳುತ್ತಾರೆ.ಈ ಮತವು ಅತ್ಯಂತ ಪ್ರಾಚೀನವಾದುದೆಂದು ವೀರಶೈವರು ತಿಳಿಸುತ್ತಾರೆ.ಬೇರೆ ಬೇರೆ ಸಮಯದಲ್ಲಿ ೫ ಮಹಾಪುರುಷರು ಈ ಮತವನ್ನು ಉಪದೇಶಿಸಿದರು. ರೇಣುಕಾಚಾರ್ಯ, ದಾರುಕಾಚಾರ್ಯ, ಏಕೋರಾಮಾಚಾರ್ಯ,ಪಂಡಿತಾರಾಧ್ಯ ಮತ್ತು ವಿಶ್ವಾರಾಧ್ಯ ಇವರುಗಳು ಕ್ರಮವಾಗಿ ಸೋಮೇಶ್ವರ,ಸಿದ್ದೇಶ್ವರ,ರಾಮನಾಥ,ಮಲ್ಲಿಕಾರ್ಜುನ ಮತ್ತು ವಿಶ್ವನಾಥ ಎಂಬ ಪ್ರಸಿದ್ಧ ಶಿವಲಿಂಗಗಳಿಂದ ಆವೀರಭೂತರಾಗಿ ಶೈವಧರ್ಮವನ್ನು ಪಸರಿಸಿದರು.ಇವರು ಕ್ರಮವಾಗಿ ವೀರ ಸಿಂಹಾಸನವನ್ನು ರಂಭಾಪುರಿಯಲ್ಲಿಯೂ,ಸದ್ಧರ್ಮ ಸಿಂಹಾಸನವನ್ನು ಉಜ್ಜಯನಿಯಲ್ಲಿಯೂ,ವೈರಾಗ್ಯ ಸಿಂಹಾಸನವನ್ನು ಕೇದಾರನಾಥದ ಸಮೀಪದಲ್ಲಿರುವ ಓಖೀಮಠದಲ್ಲಿಯೂ,ಸೂರ್ಯ ಸಿಂಹಾಸನವನ್ನು ಶ್ರೀಶೈಲದಲ್ಲಿಯೂ ಮತ್ತು ಜ್ಞಾನ ಸಿಂಹಾಸನವನ್ನು ಕಾಶೀಯಲ್ಲಿಯೂ ಸ್ಥಾಪಿಸಿದರು.ಶ್ರೀ ಶಿವಯೋಗೀ ಶಿವಾಚಾರ್ಯರ ಸಿದ್ದಾಂತ ಶಿಖಾಮಣಿಯೇನೆಂಬ ಗ್ರಂಥವು ವೀರಶೈವರಲ್ಲಿ ಆದರಣೀಯ ಗ್ರಂಥವಾಗಿದೆ..

ಪ್ರತ್ಯಭಿಜ್ಞಾದರ್ಶನ

ಕಾಶ್ಮೀರದಲ್ಲಿ ಪ್ರಚಲಿತವಾಗಿರುವ ಶೈವ ಆಗಮವನ್ನು ಪ್ರತ್ಯಭಿಜ್ಞಾ,ಸ್ಪಂದ ಅಥವಾ ತ್ರಿಕದರ್ಶನವೆಂದು ಕರೆಯುತ್ತಾರೆ.ಈ ತಂತ್ರದ ವಿಶಿಷ್ಟವಾದ ಆಧ್ಯಾತ್ಮಿಕ ತತ್ವವೇ ಇದಕ್ಕೆ ಸ್ಪಂದ ಅಥವಾ ಪ್ರತ್ಯಭಿಜ್ಞಾ ಎಂಬ ಹೆಸರು ಬರಲು ಕಾರಣ.ಈ ದರ್ಶನದಲ್ಲಿ ಪಶು,ಪತಿ,ಪಾಶ ಎಂಬ ಮೂರು ತತ್ವಗಳು ಪ್ರಧಾನವಾಗಿ ವರ್ಣಿಯವಾಗಿರುವುದರಿಂದ ಅಥವಾ ೯೨ ಆಗಮಗಳಲ್ಲಿ ಸಿದ್ದಾ,ನಾಮಕ ಹಾಗೂ ಮಾಲಿನೀತಂತ್ರ ಎಂಬುದು ಅಧಿಕ ಮಹತ್ವಶಾಲಿ ಆದ್ದರಿಂದ ಈ ದರ್ಶನಕ್ಕೆ ತ್ರಿಕ ಅಥವಾ ಶದರ್ಧ ಶಾಸ್ತ್ರ ಎಂಬ ಹೆಸರು ಬರಲು ಕಾರಣವಾಗಿದೆ.ತಂತ್ರಲೋಕದ ವ್ಯಾಖ್ಯಾನದಲ್ಲಿ ಈ ದರ್ಶನದ ಆವಿರ್ಭಾವ ಹಾಗೂ ಪ್ರಚಾರದ ಇತಿಹಾಸವು ಸಂಕ್ಷಿಪ್ತವಾಗಿ ಉಲ್ಲೇಖಿತವಾಗಿರುತ್ತದೆ.ಭಗವಾನ್ ಪರಮಶಿವನು ತನ್ನ ೫ ಮುಖಗಳಿಂದ ಉತ್ಪನ್ನವಾದ ಶೈವಾಗಮಗಳಿಗೆ ದ್ವೈತಪರವಾದ ವ್ಯಾಖ್ಯಾನವಿರುವುದನ್ನು ಗಮನಿಸಿ ಈ ಶೈವ ಶಾಸನವನ್ನು ಪ್ರಚಾರಮಾಡುವಂತೆ ದೂರ್ವಾಸ ಮಹರ್ಷಿಗೆ ಅಪ್ಪಣೆ ನೀಡಿದರು.ತ್ರಯಂಬಕ,ಆಮರ್ದಕ ಮತ್ತು ಶ್ರೀನಾಥ ಎಂಬ ಮಾನಸ ಪುತ್ರರನ್ನು ಸೃಷ್ಟಿಸಿ ಅವರಿಗೆ ಅದ್ವೈತ,ದ್ವೈತ ಮತ್ತು ದ್ವೈತಾದ್ವೈತ ದರ್ಶನಗಳನ್ನು ದೂರ್ವಾಸರು ಉಪದೇಶಿಸಿದರು.ತ್ರಯಂಬಕರು ಪ್ರಚಾರಿಸಿದ ಈ ಮತವನ್ನು ತ್ರಯಂಬಕ ಮತವೆಂದೂ ಹೇಳುತ್ತಾರೆ.

ಆಕರ : ಭಾರತೀಯ ದರ್ಶನ

-Deepashree M

Tags

Related Articles

FOR DAILY ALERTS
Close