ಪ್ರಚಲಿತ

ನಿಂಬಾರ್ಕ ಎಂದರೇನು? ಇತರ ವೈಷ್ಣವ ಮತಗಳಿಗೂ ನಿಂಬಾರ್ಕ ಮತಕ್ಕೂ ಇರುವ ವ್ಯತ್ಯಾಸವನ್ನು ತಿಳಿಯಿರಿ.

ಹಲವಾರು ಪಂಥಗಳಿಗೆ ಜನ್ಮ ನೀಡಿದ ಭಾರತದಲ್ಲಿ ನಿಂಬಾರ್ಕ ಮತವೆಂಬ ಮತವೂ ಜನ್ಮ ತಾಳಿತು.ಹರಿಗುರುಸ್ತವ ಮಾಲಾ ಎಂಬ ಗ್ರಂಥದಲ್ಲಿರುವ ಉಲ್ಲೇಖಗಳ ಪ್ರಕಾರ ನಿಂಬಾರ್ಕಮತವನ್ನು ಆಚಾರ್ಯ ಹಂಸನಾರಾಯಣರು ಸ್ಥಾಪಿಸಿದರು.ಇವರು ರಾಧಾಕೃಷ್ಣರ ಯುಗಳ ಮೂರ್ತಿಗಳ ಪ್ರತೀಕವಾಗಿರುತ್ತಾರೆಂಬ ನಂಬಿಕೆ ಇದೆ.ಸಾನಂದಾದಿ ರೂಪದಲ್ಲಿ ಚತುರ್ವ್ಯೂಹಾತ್ಮಕರಾಗಿರುವ ಸಂತ್ಕುಮಾರರಿಗೆ ಇವರು ತಮ್ಮ ಮತದ ದೀಕ್ಷೆಯನ್ನು ನೀಡಿರುತ್ತಾರೆ.ತ್ರೇತಾಯುಗದಲ್ಲಿ ಪ್ರೇಮಭಕ್ತಿಗೆ ಸರ್ವಶ್ರೇಷ್ಠ ಉಪದೇಶಕರಾಗಿದ್ದ ನಾರದರು ಸಂತ್ಕುಮಾರರ ಶಿಷ್ಯರಾಗಿದ್ದರು ಹಾಗೂ ಇವರು ಈ ಮತವನ್ನು ಸುದರ್ಶನ ಚಕ್ರದ ಅವತಾರವಾದ ನಿಂಬಾರ್ಕರಿಗೆ ಉಪದೇಶಿಸಿದರು ಎಂದು ಗ್ರಂಥಗಳು ತಿಳಿಸುತ್ತವೆ.

ನಿಂಬಾರ್ಕ:

ನಿಂಬಾರ್ಕರು ತೆಲುಗು ಬ್ರಾಹ್ಮಣ ಕುಟುಂಬಕ್ಕೆ ಸೇರಿದವರು. ಸಿದ್ದಾಂತ ಜಾನ್ಹವೀ ಎಂಬ ಗ್ರಂಥದ ಅನುಸಾರವಾಗಿ ನಿಯಮಾನಂದ ಎಂಬುದು ಇವರ ಪೂರ್ವಾಶ್ರಮದ ಹೆಸರು.ನಿಂಬ ವೃಕ್ಷದ ಮೇಲೆ ರಾತ್ರೆಯ ಸಮಯದಲ್ಲಿ ಅರ್ಕ(ಸೂರ್ಯ) ನ ಸಾಕ್ಷಾತ್ ದರ್ಶನ ಮಾಡಿಸಿದುದರಿಂದ ಇವರಿಗೆ ನಿಂಬಾರ್ಕ ಅಥವಾ ನಿಂಬಾದಿತ್ಯ ಎಂಬ ಹೆಸರು ಬಂತು.೧)ವೇದಾಂತ ಪಾರಿಜಾತ ಸೌರಭ(ಬ್ರಹ್ಮಸೂತ್ರಗಳಿಗೆ ಸಣ್ಣ ಭಾಷ್ಯ) ೨)ದಶಶ್ಲೋಕೀ (ಸಿದ್ದಾಂತವನ್ನು ಪ್ರತಿಪಾದಿಸುವ ಹತ್ತು ಶ್ಲೋಕಗಳ ಸಂಗ್ರಹ,ಹರಿದಾಸ ಆಚಾರ್ಯ ರು ಇದಕ್ಕೆ ವ್ಯಾಖ್ಯಾನವನ್ನೂ ರಚಿಸಿರುತ್ತಾರೆ),೩) ಶ್ರೀಕೃಷ್ಣಸ್ತವ ರಾಜ-ನಿಂಬಾರ್ಕ ಮತವನ್ನು ಪ್ರತಿಪಾದಿಸುವ ೨೫ ಶ್ಲೋಕಗಳು,ಇದಕ್ಕೆ ಶೃತ್ಯಂತರ ಸುರದ್ರಮ,ಶ್ರುತಿ ಸಿದ್ದಾಂತ ಮಂಜರೀ,ಶ್ರುತ್ಯನ್ತ ಕಲ್ಪವಲ್ಲೀ ಎಂಬ ವಿಸ್ತಾರ ವ್ಯಾಖ್ಯಾನಗಳು) ಇತ್ಯಾದಿ ಗ್ರಂಥಗಳನ್ನು ರಚಿಸಿದ್ದಾರೆ.

ಶ್ರೀನಿವಾಸಾಚಾರ್ಯ: ಇವರು ನಿಂಬಾರ್ಕಆಚಾರ್ಯರ ಸಾಕ್ಷಾತ್ ಶಿಷ್ಯರು.ಇವರು ಪಾರಿಜಾತ ಸೌರಭ ಎಂಬ ಗ್ರಂಥಕ್ಕೆ ವೇದಾಂತ ಕೌಸ್ತುಭ ಎಂಬ ವಿಸ್ತಾರವಾದ ವ್ಯಾಖ್ಯಾನವನ್ನು ರಚಿಸಿ ಭಾಷ್ಯದ ಸಂಕ್ಷಿಪ್ತವಾದ ಹಾಗೂ ನಿಗೂಢವಾದ ಅರ್ಥಗಳ ರಹಸ್ಯಗಳನ್ನು ವಿವರಿಸಿದ್ದಾರೆ.

ಕೇಶವಭಟ್ಟ ಕಾಶ್ಮೀರಿ: ೧೫ ನೇ ಶತಮಾನದಲ್ಲಿ ಜನಿಸಿದ್ದ ಕೇಶವಭಟ್ಟರು ಪ್ರಸ್ತುತ ದರ್ಶನದ ಪ್ರಸಿದ್ಧರಾದ ಗ್ರಂಥಕರ್ತರು.ಕೌಸ್ತುಭಪ್ರಭಾ ಎಂಬುದು ವೇದಾಂತ ಕೌಸ್ತುಭದ ಪಾಂಡಿತ್ಯಪೂರ್ಣ ಹಾಗೂವ್ ಸವಿಸ್ತಾರವಾದ ವ್ಯಾಖ್ಯಾನವಾಗಿದೆ.ತತ್ವಪ್ರಕಾಶಿಕಾ ಎಂಬುದು ನಿಂಬಾರ್ಕ ಮತಾನುಸಾರವಾಗಿ ಗೀತಾಭಾಷ್ಯದ ವ್ಯಾಖ್ಯಾನವಾಗಿದೆ.ತತ್ವಪ್ರಕಾಶಿಕಾ ವೇದಾಸ್ತುತಿ ಎಂಬುದು ಭಾಗವತದ ಹತ್ತನೆಯ ಸ್ಕಂದದ ವ್ಯಾಖ್ಯಾನ,ಕ್ರಮದೀಪಿಕಾ ಪೂಜಾ ಪದ್ದತಿಯನ್ನು ವಿವರಣಾತ್ಮಕ ವರ್ಣಿಸುವ ಪ್ರಸಿದ್ಧ ಗ್ರಂಥ.ಪ್ರಭಾ ಗ್ರಂಥವನ್ನು ಅಭ್ಯಸಿಸುವುದರಿಂದ ಈತನ ಅಗಾಧವಾದ ವಿದ್ವತ್ ಮತ್ತು ಪಾಂಡಿತ್ಯವು ಸ್ಪಷ್ಟವಾಗಿ ಗೋಚರಿಸುತ್ತದೆ.ಚೈತನ್ಯ ಚರಿತಾಮೃತ ಗ್ರಂಥದಲ್ಲಿ ಬರುವ ಚೈತಣ್ಯನೊಂದಿಗೆ ಶಾಸ್ತ್ರಾರ್ಥವನ್ನು ಮಾಡಿದ ಕೇಶವ ಭಟ್ಟರು ಇವರೇ ಎಂಬುವುದು ಖಚಿತವಾಗುತ್ತದೆ.

ಶ್ರೀ ಪುರುಷೋತ್ತಮಾಚಾರ್ಯ : ನಿಂಬಾರ್ಕ ಮಠದಲ್ಲಿ ಅತ್ಯಂತ ಪ್ರತಿಷ್ಠಿತರಾದವರೇ ಪುರುಷೋತ್ತಮಾಚಾರ್ಯ.ಇವರು ಹರಿವ್ಯಾಸ ದೇವಾಚಾರ್ಯರ ಶಿಷ್ಯರು.ಇವರ ರಚನೆಗಳಲ್ಲಿ ಎರಡು ಗ್ರಂಥಗಳು ಪ್ರಸಿದ್ಧವಾಗಿವೆ ೧)ವೇದರತ್ನ ಮಂಜೂಷ ಎಂಬ ದಶ ಶ್ಲೋಕಿಗೆ ಸಿದ್ದಾಂತವನ್ನು ವಿಸ್ತಾರವಾಗಿ ಪ್ರತಿಪಾದಿಸುವ ವ್ಯಾಖ್ಯಾ ಗ್ರಂಥ.೨)ಶ್ರುತ್ಯನ್ತ ಸುರದ್ರುಮ ಎಂಬ ಆಚಾರ್ಯ ಶ್ರೀ ಕೃಷ್ಣಸ್ತವ ರಾಜದ ಶ್ಲೋಕಗಳಿಗೆ ಪಾಂಡಿತ್ಯಪೂರ್ಣವಾದ ವ್ಯಾಖ್ಯಾನ. ದೇವಾಚಾರ್ಯನ ಸಿದ್ದಾಂತ ಜಾನ್ಹವಿ ಗ್ರಂಥದಲ್ಲಿ ವೇದಾಂತ ರತ್ನ ಮಂಜೂಷದ ಉಲ್ಲೇಖವಿದೆ . ಕೃಪಾಚಾರ್ಯರ ಶಿಷ್ಯರಾದ ಶ್ರೀದೇವಾಚಾರ್ಯರ ಶ್ರೇಷ್ಠ ಗ್ರಂಥವು ಸಿದ್ದಾಂತ ಜಾನ್ಹವೀ ಎಂಬುದು.ಬಂಗಾಳದ ಅರುಣಾಘಾಟೀ ಎಂಬ ಗ್ರಾಮದವರಾದ ಮಾಧವಮುಕುಂದರು ಪರಪಕ್ಷ ಗಿರವಜ್ರ ಎಂಬ ಮಹತ್ವಪೂರ್ಣ ಗ್ರಂಥವನ್ನು ರಚಿಸಿದ್ದಾರೆ.

ಜೀವನು ಕರ್ತನಾಗಿರುತ್ತಾನೆ.ಪ್ರತಿಯೊಂದು ದೆಶೆಯಲ್ಲಿಯೂ ಜೀವನು ಕರ್ತನೇ ಆಗಿರುತ್ತಾರೆ.ಸಂಸಾರ ಸ್ಥಿತಿಯಲ್ಲಿ ಕರ್ತನಾಗಿರುವುದು ಅನುಭವ ಗಮ್ಯವಾಗಿರುತ್ತದೆ.ಜೀವನು ತನ್ನ ಜ್ಞಾನ ಮತ್ತು ಭೋಗಗಳನ್ನು ಹೊಂದುವುದಕ್ಕೆ ಸ್ವಂತಂತ್ರನಾಗಿರದೆ ಈಶ್ವರನನ್ನು ಆಶ್ರಯಿಸಿರುತ್ತಾನೆ.ಆದ್ದರಿಂದ ಚೈತನ್ಯಾತ್ಮಕ ಹಾಗೂ ಜ್ಞಾನಾಶ್ರಯ ರೂಪದಿಂದ ಈಶ್ವರನಿಗೆ ಸಮಾನವಾಗಿದ್ದರೂ ಜೀವನಲ್ಲಿ ನಿಯಾಮ್ಯನು.ಅವನು ಈಶ್ವರನಿಗೆ ಸರ್ವದಾ
ಅಧೀನನಾಗಿರುತ್ತಾನೆ.ಭುಕ್ತಸ್ಥಿತಿಯಲ್ಲಿಯೂ ಇವನು ಈಶ್ವರನನ್ನು ಆಶ್ರಯಿಸಿರುತ್ತಾನೆ,ಜೀವನು ನಿಯಾಮ್ಯನಾದರೆ,ಈಶ್ವರನು ನಿಯಂತಾ..ಯಾಕೆಂದರೆ ಜೀವನು ಪರತಂತ್ರನಾಗಿರುತ್ತಾನೆ ಹಾಗೂ ಈಶ್ವರನು ಸ್ವತಂತ್ರನಾಗಿರುತ್ತಾನೆ.ಚೇತನರಹಿತವಾದ ಪದಾರ್ಥವನ್ನು ಅಚಿತ್ ಎಂದು ಕರೆಯಲಾಗುತ್ತದೆ.ಶ್ರುತಿಯಲ್ಲಿ ಪರಮೇವ್ಯೋಮನ್ ,ವಿಷ್ಣುಪದ,ಪರಮಪದ ಮುಂತಾದ ಅನೇಕ ಸಂಜ್ಞೆಗಳಿಂದ ಸೂಚಿತವಾಗುವ ಪರಮಾತ್ಮನ ಲೋಕದಂತೆ ಅಪ್ರಾಕೃತದೊಂದಿಗೆ ಪ್ರಕೃತಿಯ ಯಾವ ಸಂಬಂಧವೂ ಇರುವುದಿಲ್ಲ. ಕಾಲವನ್ನು ಅಚೇತನ ಪದಾರ್ಥವೆಂದು ಅಂಗೀಕರಿಸುತ್ತಾರೆ.ಜಗತ್ತಿನ ಸಮಸ್ತ ಪರಿಣಾಮಗಳನ್ನು ಉಂಟು ಮಾಡುವ ಕಾಲವು ಉಪಾಧಿಗಳ ಕಾರಣದಿಂದ ಅನೇಕ ಪ್ರಕಾರವಾಗಿರುತ್ತದೆ.ಕಾಲವೆಂಬುದು ಜಗತ್ತಿನ ನಿಯಾಮಕವಾಗಿದ್ದರೂ,ಪರಮೇಶ್ವರನ ಅಧೀನದಲ್ಲಿರುತ್ತದೆ.ಕಾಲವು ಅಖಂಡ ರೂಪವಾದುದು,ಸ್ವರೂಪದಿಂದ ಅದು ನಿತ್ಯವಾದರೂ ಕಾರ್ಯರೂಪದಿಂದ ಅನಿತ್ಯವಾಗಿರುತ್ತದೆ.ಕಾಲದ ಕಾರ್ಯವು ಔಷಧಿಕರೂಪವಾದದ್ದು ಇದಕ್ಕೆ ಸೂರ್ಯನ ಭ್ರಮಣ ಕ್ರಿಯೆಯು ಉಪಾಧಿಯಾಗಿರುತ್ತದೆ.

ನಿಂಬಾರ್ಕಮತದಲ್ಲಿ ಬ್ರಹ್ಮನ ಕಲ್ಪನೆಯನ್ನು ಸುಗುಣರೂಪದಲ್ಲೇ ಮಾಡಲಾಗುತ್ತದೆ.ಅವನು ಸಮಸ್ತ ಪ್ರಾಕೃತ ದೋಷಗಳ ರಹಿತನಾಗಿರುತ್ತಾನೆ.ಅಷ್ಟೇ ಅಲ್ಲದೆ ಅಶೇಷ ಜ್ಞಾನ,ಬಲ ಮುಂತಾದ ಕಲ್ಯಾಣಗುಣಗಳ ಆಕಾರನೂ ಆಗಿರುತ್ತಾನೆ.ಈ ಜಗತ್ತಿನಲ್ಲಿ ದೃಷ್ಟಿಗೋಚರವಾಗುವ ಹಾಗೂ ಶೃತಿಗೊಚರವಾಗುವ ಸಮಸ್ತವಸ್ತುಗಳ ಒಳಹೊರಗೆ ನಾರಾಯಣನು ವ್ಯಾಪ್ತಿಯನ್ನು ಹೊಂದಿದ್ದಾನೆ.ಜೀವದಲ್ಲಿ ಎರಡು ದೆಶೆಗಳು ಉಂಟಾಗುತ್ತವೆ.ಜೀವನು ಸಂಸಾರದ ನಾನಾ ದುಃಖಗಳ ಬಂಧನದಲ್ಲಿರುವ ಬದ್ದ ದಶೆ ಮತ್ತು ಎರಡನೆಯದು ಮುಕ್ತದೆಶೆ,ಪರಮಾತ್ಮನ ಅನುಗ್ರಹದಿಂದ ಬಂಧನ ಹಾಗೂ ದುಃಖಗಳಿಂದ ನಿವೃತ್ತಿಯನ್ನು ಹೊಂದಿ ಮುಕ್ತಿಯನ್ನು ಹೊಂದುವುದು.ಬ್ರಹ್ಮ ಮತ್ತು ಜೀವರಲ್ಲಿ ಭೇಧಾಭೇದ ಸಂಬಂಧವು ಸ್ವಾಭಾವಿಕ.ಮುಕ್ತನಾದ ಜೀವನೂ ಕೂಡಾ ತನ್ನ ವಿಶಿಷ್ಟವಾದ ಸ್ವರೂಪವನ್ನೇ ಹೊಂದುತ್ತಾನೆ ಹಾಗೂ ತನ್ನ ವ್ಯಕ್ತಿತ್ವವನ್ನು ಕಳೆದುಕೊಳ್ಳುವುದಿಲ್ಲ ಎಂದು ಚಾಂದೋಗ್ಯ ಉಪನಿಷತ್ತು ಸ್ಪಷ್ಟವಾಗಿ ತಿಳಿಸುತ್ತದೆ.ಮುಕ್ತದೆಶೆಯಲ್ಲಿ ಜೀವನು ಬ್ರಹ್ಮನೊಂದಿಗೆ ಸೇರಿ ಏಕಾಕಾರವನ್ನು ಹೊಂದಿದರೂ ಸ್ವತಂತ್ರತೆಯನ್ನೂ,ತನ್ನ ಸ್ವಂತ ವ್ಯಕ್ತಿತ್ವವನ್ನೂ ಹೊಂದಿರುತ್ತಾನೆ.

ಸಾಧನ ಮಾರ್ಗ

ನಿಂಬಾರ್ಕಮಮತದಲ್ಲಿ ಸಾಧನಮಾರ್ಗವು ಶರಣಾಗತಿಯಾಗಿರುತ್ತದೆ.ಜೀವನು ಪರಮಾತ್ಮನಲ್ಲಿ ಶರಣಾಗತನಾಗದ ವರೆಗೂ ಅವನಿಗೆ ಕಲ್ಯಾಣವಾಗುವುದಿಲ್ಲ.ಶರಣಾಗತನಾದೊಡನೆ ಪರಮಾತ್ಮನು ಜೀವನಿಗೆ ಅನುಗ್ರಹಿಸುತ್ತಾನೆ.ಅನುಗ್ರಹವಾದ ಬಳಿಕ ಪರಮಾತ್ಮನ ವಿಷಯದಲ್ಲಿ ರಾಗಾತ್ಮೀಕವಾದ ಭಕ್ತಿಯು ಉದಯಿಸುತ್ತದೆ.ಪರಮಾಸ್ತ್ಮನ ವಿಷಯದಲ್ಲಿ ಪ್ರೇಮವುಂಟಾಗುವುದು ಸಾಧಾರಣವಲ್ಲ.ಯಾರಮೇಲೆ ಪರಮಾತ್ಮನ ಕೃಪೆಯು ಬೀಳುವುದೋ ಆ ಜೀವವು ಭಗವಂತನೆಡೆಗೆ ಪ್ರೀತಿಯನ್ನು ಹೊಂದುತ್ತಾನೆ.ಈ ಪ್ರೀತಿಪೂರ್ವಕ ಭಕ್ತಿಯ ಫಲವೇ ಪರಮಾತ್ಮನ ಸಾಕ್ಷಾತ್ಕಾರ ಅಥವಾ ಪರಮಾತ್ಮನ ದರ್ಶನ.ಆಗ ಜೀವನು ಪರಮಾತ್ಮನ ಭಾವಗಳಿಂದ ಸ್ವತಃ ವ್ಯಾಪ್ತನಾಗುತ್ತಾನೆ.ಇತರ ವೈಷ್ಣವ ಮತಗಳಂತೆ ನಿಂಬಾರ್ಕಮಠದಲ್ಲಿಯೂ ವಿದೇಹಮುಕ್ತಿಯೂ ಅಂಗೀಕೃತವಾಗಿವೆ.ಆದರೆ ಜೀವನ್ಮುಕ್ತಿಯು ಅಂಗೀಕೃತವಾಗಿಲ್ಲ..ಜನನ ಮರಣಗಳು ಸ್ವಾಭಾವಿಕ ಆದರೆ,ಭಗವಂತನೆಡೆಗೆ ಭಕ್ತಿಯೂ,ಮುಕ್ತಿಯ ಮಾರ್ರ್ಗವು ದುರ್ಲಭವಾದುದು. ನಮ್ಮ ಹಿರಿಯರು ಭಕ್ತಿಯನ್ನೂ,ಮುಕ್ತಿಯ ಮಾರ್ಗವನ್ನೂ ಸುಲಭವಾಗಿಸಿ,ತಮ್ಮ ಜ್ಞಾನವನ್ನು ಮುಂದಿನ ಪೀಳಿಗೆಗಾಗಿ ಉಳಿಸಿ ಹೋಗಿರುತ್ತಾತೆ.ಆದ್ದರಿಂದ ಪಂಥಗಳನ್ನೂ,ಆಚಾರ್ಯರನ್ನೂ,ಗ್ರಂಥಗಳನ್ನೂ ಅರಿಯಬೇಕಾದದ್ದು ನಮ್ಮೆಲ್ಲರ ಕರ್ತವ್ಯವಾಗಿದೆ.

ಆಕರ : ಭಾರತೀಯ ದರ್ಶನ

Deepashree.M.

Tags

Related Articles

FOR DAILY ALERTS
Close