ಕೆಲವು ರಾಜಕಾರಣಿಗಳು ಜಾತಿ ಹೆಸರಲ್ಲಿ ಜನರ ನಡುವೆ ದ್ವೇಷ ಬಿತ್ತುತ್ತಾ ತಮ್ಮ ಬೇಳೆ ಬೇಯಿಸಿ, ತಮಾಷೆ ನೋಡುವ ಕೆಲಸವನ್ನು ಮಾಡುತ್ತಾರೆ. ಅದರಲ್ಲೂ ಹಿಂದೂಗಳನ್ನು ಒಡೆದು ಓಟು ಗಿಟ್ಟಿಸಲು ತಂತ್ರ ಹೂಡುವವರಿಗೇನೂ ಕಮ್ಮಿ ಇಲ್ಲ. ಇಂತದ್ದೇ ಕೆಲಸಕ್ಕೆ ಜೆ ಡಿ ಎಸ್ ಪಕ್ಷದ ಕುಮಾರಸ್ವಾಮಿ ಇಳಿದಿದ್ದಾರೆ. ಮತ ಪಡೆಯಲು ಹಿಂದೂಗಳ ನಡುವೆ ಜಾತಿ ಜೀವ ಬಿತ್ತಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವಂತಹ ಹೇಳಿಕೆಯೊಂದನ್ನು ಎಚ್ ಡಿ ಕೆ ನೀಡುವ ಮೂಲಕ ಸಮಾಜದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಗಾಂಧಿಯನ್ನು ಕೊಂದ ಬ್ರಾಹ್ಮಣರು, ಆರ್ ಎಸ್ ಎಸ್ ನವರು ಈ ದೇಶವನ್ನು ಹಾಳು ಮಾಡುತ್ತಾರೆ ಎನ್ನುವ ಮೂಲಕ ತಮ್ನ ನಕಲಿ ಜಾತ್ಯಾತೀತತೆಯನ್ನು ಬೆತ್ತಲಾಗಿಸಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಪ್ರಲ್ಹಾದ ಜೋಶಿ ಅವರೇ ಮುಖ್ಯಮಂತ್ರಿ ಆಗುತ್ತಾರೆ. ಬಿಜೆಪಿ ಅಧಿಕಾರಕ್ಕೆ ಬಾರದ ಹಾಗೆ ತಡೆಯಬೇಕು ಎಂಬುದಾಗಿ ಕುಮ್ಮಿ ಕೆಮ್ಮಿದ್ದಾರೆ.
ಎಚ್ ಡಿ ಕೆ ಅವರ ಈ ಹೇಳಿಕೆಗೆ ಬಿಜೆಪಿ ನಾಯಕರಾದ ಸಿ ಟಿ ರವಿ, ಪ್ರಲ್ಹಾದ ಜೋಶಿ, ಶ್ರೀರಾಮುಲು, ಪೇಜಾವರ ಶ್ರೀಗಳು ಮೊದಲಾದವರೆಲ್ಲರೂ ಕುಮಾರಸ್ವಾಮಿ ಕ್ಷಮೆ ಕೇಳುವಂತೆ ಆಗ್ರಹಿಸಿದ್ದಾರೆ. ಕುಮಾರಸ್ವಾಮಿ ಅವರು ಬ್ರಾಹ್ಮಣ ವರ್ಗಕ್ಕೆ ಅವಮಾನ ಮಾಡಿದ್ದು, ಇದು ಖಂಡನೀಯ. ಇಂತಹ ಹೇಳಿಕೆ ನೀಡಿರುವ ಅವರು ಜನರ ಮುಂದೆ ಕ್ಷಮೆ ಕೇಳಬೇಕು ಎಂದು ಹೇಳಿದ್ದಾರೆ.
ಒಂದೋ ಕಣ್ಣೀರು ಹಾಕಿ ಮತ ಯಾಚಿಸುವುದು ಅಥವಾ ಹಿಂದೂಗಳ ನಡುವೆ ಜಾತಿಯನ್ನು ಎಳೆದು ಹಾಕಿ, ಅವರನ್ನು ಜಾತಿ ಹೆಸರಲ್ಲಿ ಒಡೆದು ಮತ ಗಿಟ್ಟಿಸುವ ಪ್ರಯತ್ನವನ್ನು ಕುಮ್ಮಿ ಮತ್ತು ಅವರ ಪರಿವಾರ ಹಿಂದಿನಿಂದಲೂ ಮಾಡುತ್ತಲೇ ಬಂದಿದೆ. ಈಗಲೂ ಅದೇ ಸಂಸ್ಕೃತಿಯನ್ನು ಮುಂದುವರಿಸಿಕೊಂಡು ಬಂದಿದೆ. ಅಧಿಕಾರ ಇದ್ದಾಗಲೂ ಜಾತಿ ಹೆಸರಲ್ಲಿ ಜನರನ್ನು ಒಡೆಯುವ ಕೆಲಸ ಮಾಡುತ್ತಿದ್ದವರು, ಮತ ಪಡೆಯುವುದಕ್ಕೂ ಜಾತಿ ಹೆಸರಲ್ಲಿ ರಾಜಕಾರಣ ಮಾಡುತ್ತಿದ್ದು, ಇವರ ಇಂತಹ ನಕಲಿ ಜಾತ್ಯಾತೀತತೆಗೆ ಮತದಾರರೇ ಚುನಾವಣೆಯಲ್ಲಿ ತಕ್ಕ ಶಾಸ್ತಿ ಮಾಡಲಿದ್ದಾರೆ.
ತನ್ನ ಪಕ್ಷವನ್ನೇ ಸರಿಯಾಗಿ ನಿಭಾಯಿಸಲು ಬಾರದ ಕುಮಾರಣ್ಣ ಘಟಾನುಘಟಿಗಳಿರುವ ಬಿಜೆಪಿ ಬಗ್ಗೆ ಮಾತನಾಡುತ್ತಿರುವುದು ಹಾಸ್ಯಾಸ್ಪದ. ಬಿಜೆಪಿಯಲ್ಲಿ ಯಾವ ಸ್ಥಾನ ಯಾರಿಗೆ ನೀಡಬೇಕು ಎನ್ನುವುದನ್ನು ನಿರ್ಧರಿಸಲು ಸಮರ್ಥ ನಾಯಕರಿದ್ದಾರೆ. ಇನ್ನು ದೇಶ ಸೇವೆಯೇ ಉಸಿರಾಗಿರುವ ಆರ್ ಎಸ್ ಎಸ್ ಬಗ್ಗೆ ಮಾತನಾಡುವ ಯೋಗ್ಯತೆ ಕುಮಾರಸ್ವಾಮಿಗಿದೆಯೇ ಎಂಬುದು ಸಾರ್ವಜನಿಕರ ಪ್ರಶ್ನೆ.