ಪ್ರಚಲಿತ

ಪ್ರಧಾನಿ ಮೋದಿ ಸರ್ಕಾರದ ನಿರ್ಧಾರಕ್ಕೆ ಮಹಿಳೆಯರು ಫುಲ್ ಖುಷ್

ಮಹಿಳಾ ಮೀಸಲಾತಿ ಮಸೂದೆಯನ್ನು ಲೋಕಸಭೆಯಲ್ಲಿ ನಿನ್ನೆ ಅಂಗೀಕಾರ ಮಾಡಲಾಗಿದೆ. ಪಕ್ಷಾತೀತವಾಗಿ ಈ ಮಸೂದೆ ಗೆ ಬೆಂಬಲ ಸೂಚಿಸಿ ಮತ ಚಲಾಯಿಸಿದ ಸಂಸದರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ.

ಮಹಿಳೆಯರಿಗೆ 33% ಸ್ಥಾನಗಳನ್ನು ನೀಡುವ ಮಹಿಳಾ ಮೀಸಲಾತಿ ಮಸೂದೆಯನ್ನು ಲೋಕಸಭೆಯಲ್ಲಿ ಸರ್ವ ಪಕ್ಷಗಳ ಬೆಂಬಲದ ಜೊತೆಗೆ ಅಂಗೀಕಾರ ಮಾಡಲಾಗಿದೆ. ಈ ಸಂಬಂಧ ಪ್ರಧಾನಿ ಮೋದಿ ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಮಸೂದೆಯನ್ನು ಬೆಂಬಲಿಸಿದ ಎಲ್ಲರಿಗೂ ಪಕ್ಷಾತೀತವಾಗಿ ಧನ್ಯವಾದ ಸಮರ್ಪಿಸುವುದಾಗಿಯೂ ಅವರು ತಿಳಿಸಿದ್ದಾರೆ.

ಅದ್ಭುತ ಬೆಂಬಲದ ಜೊತೆಗೆ ಲೋಕಸಭೆಯಲ್ಲಿ ಸಂವಿಧಾನದ (128 ನೇ ತಿದ್ದುಪಡಿ) ಮಸೂದೆ, 2023 ಅಂಗೀಕೃತವಾಗಿರುವುದು ಸಂತಸ ತಂದಿದೆ. ನಾರಿ ಶಕ್ತಿ ವಂದನ್ ಅಧಿನಿಯಮ ಎಂಬುದು ಒಂದು ಐತಿಹಾಸಿಕ ಶಾಸನವಾಗಿದ್ದು, ಮಹಿಳೆಯರ ಸಬಲೀಕರಣ ಹೆಚ್ಚುವುದಕ್ಕೂ ಇದು ಕಾರಣವಾಗುತ್ತದೆ ಎನ್ನುವ ವಿಶ್ವಾಸವನ್ನು ಪ್ರಧಾನಿ ಮೋದಿ ಅವರು ವ್ಯಕ್ತಪಡಿಸಿದ್ದಾರೆ. ಭಾರತದ ರಾಜಕೀಯ ಪ್ರಕ್ರಿಯೆಯಲ್ಲಿಯೂ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸುವಲ್ಲಿ ಈ ಮಸೂದೆ ಪ್ರಮುಖ ಪಾತ್ರ ವಹಿಸಲಿರುವುದಾಗಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಕಾಯ್ದೆಯ ಜೊತೆಗೆ ಹೊಸ ಸದನ ಉತ್ತಮ ಆರಂಭವನ್ನೇ ಪಡೆದಿದೆ. ದೇಶದಲ್ಲಿ ಮಹಿಳೆಯರ ಅಭ್ಯುದಯ, ಮಹಿಳಾ ನೇತೃತ್ವದ ಅಭಿವೃದ್ಧಿಗೆ ಇದು ಹೆಚ್ಚಿನ ವೇಗವನ್ನು ಒದಗಿಸಲಿದೆ. ಹಾಗೆಯೇ ಈ ಮಸೂದೆಗೆ ಪಕ್ಷಾತೀತವಾಗಿ ಎಲ್ಲಾ ಸಂಸದರು ಅದ್ಭುತ ಬೆಂಬಲ ನೀಡಿದ್ದಾರೆ. ಈ ಮಸೂದೆ ಸ್ವಾವಲಂಬಿ ಭಾರತ ನಿರ್ಮಾಣದ ವಿಷಯದಲ್ಲಿ, ಆ ಸಂಕಲ್ಪವನ್ನು ನನಸಾಗಿಸುವ ನಿಟ್ಟಿನಲ್ಲಿ ಒಂದು ಮೈಲಿಗಲ್ಲಾಗಲಿದೆ ಎನ್ನುವುದು ಸಾಬೀತಾಗಿದೆ. ಈ ಕಾಯಿದೆಗೆ ಬೆಂಬಲ ಸೂಚಿಸಿದ ಎಲ್ಲಾ ಸಂಸದರಿಗೂ ಮನ ಜಾಲದ ಅಭಿನಂದನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಮಹಿಳಾ ಮೀಸಲಾತಿ ಮಸೂದೆ 213 ಸಂಸದರ ಬೆಂಬಲದ ಅಗತ್ಯವಿತ್ತು. ಅಷ್ಟು ಮತಗಳು ಚಲಾವಣೆಯಾದಲ್ಲಿ ‌ಮಾತ್ರ ಈ ಮಸೂದೆ ಅಂಗೀಕಾರ ಸಾಧ್ಯವಿತ್ತು. ಆದರೆ ನಿರೀಕ್ಷೆಗೂ ಮೀರಿದ ಹಾಗೆ 454 ಸಂಸದರು ಈ ಕಾಯ್ದೆಯ ಪರ ಮತ ಚಲಾಯಿಸಿದ್ದು, ಯಾವುದೇ ವಿವಾದಗಳಿಲ್ಲದೆ ಈ ಕಾಯ್ದೆ ಅಂಗೀಕೃತವಾಗಿದೆ. ಆದರೆ ಈ ಕಾಯ್ದೆಯ ವಿರುದ್ಧ ಇಬ್ಬರು ಸಂಸದರು ಮತ ಚಲಾವಣೆ ಮಾಡಿದ್ದರು.

ಹಾಗೆಯೇ, ಈ ಮಹತ್ವದ ಕಾಯ್ದೆ ಅಂಗೀಕಾರವಾದ ಹಿನ್ನೆಲೆಯಲ್ಲಿ ದೇಶದೆಲ್ಲೆಡೆ ಮಹಿಳೆಯರು ಸಂಭ್ರಮಿಸಿದ್ದಾರೆ. ಕರ್ನಾಟಕದಲ್ಲಿಯೂ ಮಹಿಳೆಯರಲ್ಲಿ ಹರ್ಷ ಮನೆ ಮಾಡಿದ್ದು, ಬಿಜೆಪಿಯ ಮಹಿಳಾ ಸದಸ್ಯರಂತೂ ಈ ಕಾಯ್ದೆ ಅಂಗೀಕೃತವಾದ ಹಿನ್ನೆಲೆಯಲ್ಲಿ ಸಂಭ್ರಮಾಚರಣೆ ನಡೆಸಿದ್ದಾರೆ.

Tags

Related Articles

Close