ಪ್ರಚಲಿತ

ಪಾಕ್ ಪಠ್ಯಪುಸ್ತಕದಲ್ಲಿ ಭಾರತದ ಬಗ್ಗೆ ಸುಳ್ಳಿನ ಕಂತೆ

ಸದಾ ಭಾರತದ ವಿರುದ್ಧ ಕುತಂತ್ರವನ್ನೇ ನಡೆಸುತ್ತಿರುವ ಪಾಕಿಸ್ತಾನದ ಬಣ್ಣ ಮತ್ತೊಮ್ಮೆ ಬಯಲಾಗಿದೆ. ಉಗ್ರವಾದ, ಪಿತೂರಿ ಗಳ ಮೂಲಕ ಭಾರತದ ಮೇಲೆ ವಿಷ ಕಕ್ಕುವ ಪಾಕಿಸ್ತಾನ ಇದೀಗ ಮಕ್ಕಳ ಪಠ್ಯಪುಸ್ತಕದಲ್ಲಿಯೂ ಭಾರತದ ಬಗ್ಗೆ ಸುಳ್ಳು ಮಾಹಿತಿ ಬಿತ್ತರಿಸುವ ಮೂಲಕ ಮತ್ತೊಮ್ಮೆ ತಾನು ನಂಬಿಕೆಗೆ ಅರ್ಹನಲ್ಲ ಎಂಬುದನ್ನು ಸಾಬೀತುಪಡಿಸಿದೆ.

ಪಾಕ್‌ನ ಪಠ್ಯ ಪುಸ್ತಕಗಳಲ್ಲಿ ಗಾಂಧೀಜಿ ಬಗೆಗೂ ಸುಳ್ಳು ಮಾಹಿತಿಗಳನ್ನು ನೀಡಲಾಗಿದೆ. ಭಾರತದ ಮೇಲೆ, ಭಾರತೀಯ ಹಿಂದೂಗಳ ಮೇಲೆಯೂ ಇಲ್ಲಸಲ್ಲದ ವಿಷಯಗಳನ್ನು ಹೇಳಿ, ಮಕ್ಕಳ ಮನದಲ್ಲಿ ವಿಷಬೀಜ ಬಿತ್ತುವವ ಕೆಲಸವನ್ನು ಪಾಪಿ ಪಾಕಿಸ್ತಾನ ಮಾಡಿದೆ. ಪಾಕ್‌ನ ನ್ಯಾಷನಲ್ ಫೆಡರೇಷನ್‌ ಪ್ರಕಟ ಮಾಡಿರುವ ಎಂಟು ಮತ್ತು ಒಂಬತ್ತನೇ ತರಗತಿ ಪಠ್ಯಪುಸ್ತಕಗಳಲ್ಲಿ ಪಾಕಿಸ್ತಾನ ಇಂತಹ ಒಂದು ವಿಕೃತಿ ಮೆರೆದಿದೆ.

ಗಾಂಧಿ ಅವರ ಬಗ್ಗೆ, ಅವರು ಹಿಂದೂ ಹಿತಾಸಕ್ತಿ ಹೊಂದಿದ್ದ ಸ್ವಾತಂತ್ರ್ಯ ಹೋರಾಟದ ನಾಯಕ, ಅವರಿಗೆ ಮುಸ್ಲಿಮರ ಮೇಲೆ ಕಾಳಜಿ ಇರಲಿಲ್ಲ ಎಂದು ಬರೆಯಲಾಗಿದೆ. ಕಾಂಗ್ರೆಸ್ ಪಕ್ಷದ ನೇತೃತ್ವವನ್ನು ಗಾಂಧಿ ಮತ್ತವರ ಹಿಂಬಾಲಕರು ಹಿಡಿದ ಬಳಿಕ ಹಿಂದೂಪರ ನಿಲುವನ್ನೇ ಹೆಚ್ಚು ವಿಷದಪಡಿಸುತ್ತಿದ್ದರು. ಮುಸ್ಲಿಂ ಹಕ್ಕುಗಳ ಬಗ್ಗೆ ಗೌರವ ಇರಲಿಲ್ಲ. ಈ ಕಾರಣದಿಂದಲೇ ದ್ವೇಷ, ಅಸೂಯೆ, ಸಣ್ಣತನಗಳ ಆರಂಭವಾಯಿತು ಎಂದು ಪಾಕ್ ಪಠ್ಯದಲ್ಲಿ ವಿದ್ಯಾರ್ಥಿಗಳ ತಲೆ ಕೆಡಿಸುವ ಕೆಲಸವನ್ನು ಮಾಡಿದೆ.

ಇನ್ನು ಎಂಟನೇ ತರಗತಿ ಪಠ್ಯ ಪುಸ್ತಕದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆಯ ಬಗ್ಗೆ ಪಠ್ಯ ಇದ್ದು, ಇದರಲ್ಲಿ ಹಲವರು ಭಾರತೀಯ ರಾಷ್ಟ್ರೀಯವಾದವನ್ನು ಬೆಂಬಲಿಸಲು ಕಾಂಗ್ರೆಸ್ ಸೇರಿಕೊಂಡರು. ಅದು ಮುಖ್ಯವಾಗಿ ಹಿಂದೂ ಧರ್ಮವನ್ನೇ ತನ್ನ ಆದ್ಯತೆಯಾಗಿರಿಸಿತ್ತು. ಆದ್ದರಿಂದ ಕಾಂಗ್ರೆಸ್ ಇಡೀ ರಾಷ್ಟ್ರದ ಧ್ವನಿಯಾಗುವ ಬದಲು ಹಿಂದೂ ಪರ ಪಕ್ಷವಾಗಿತ್ತು ಎಂದು ಹೇಳಲಾಗಿದೆ.

ಒಟ್ಟಿನಲ್ಲಿ ಪಾಕಿಸ್ತಾನವನ್ನು ಹೊಗಳುತ್ತಿದ್ದವರಿಗೆ ಈ ಪಠ್ಯಗಳು ಇನ್ನಾದರೂ ಪಾಕ್‌ನ ನರಿ ಬುದ್ಧಿಯನ್ನು ದರ್ಶನ ಮಾಡಿಸಲಿ. ಪಾಕ್ ಪ್ರೇಮಿಗಳಿಗೆ ಆ ದೇಶದ ನಿಜ ಬಣ್ಣ ಇನ್ನಾದರೂ ಅರಿವಾಗಲಿ ಎನ್ನುವುದು ನಮ್ಮ ಕಾಳಜಿ.

Tags

Related Articles

Close