ದೇಶಪ್ರಚಲಿತ

ನಡೆದಾಡುವ ದೇವರು ನಡೆದುಬಂದ‌ ಹಾದಿ ಇದು! ತನಗೆ ತಾಯಿ ಇಲ್ಲದಿದ್ದರೂ ಸಾವಿರಾರು ಮಕ್ಕಳಿಗೆ ಅಮ್ಮನ‌ ಸ್ಥಾನ ತುಂಬಿದ ಮಹಾಪುರುಷ ಈತ!

 ಒಬ್ಬನ ಬಗ್ಗೆ ಮಾತನಾಡಬೇಕಾದರೆ ಆತ ಒಂದೋ ತುಂಬಾ ಒಳ್ಳೆಯ ವ್ಯಕ್ತಿ ಆಗಿರಬೇಕು ಅಥವಾ ಆತ ಕೆಟ್ಟ ವ್ಯಕ್ತಿ ಆಗಿರಬೇಕು.‌ ಒಳ್ಳೆಯ ವ್ಯಕ್ತಿ ಆದರೆ ಆತನ‌ ಬಗ್ಗೆ ಲೋಕವೇ ನಾಲ್ಕು ಒಳ್ಳೆಯ ಮಾತುಗಳನ್ನಾಡುತ್ತದೆ ಅದೇ ರೀತಿ ಆತನಿಂದ ಕೇಡಾಗಿದ್ದರೆ ಆತ ಬದುಕಿರುವಾಗಲೇ ಯಾವಾಗ ಸಾಯುತ್ತಾನೋ‌ ಎಂದು ಶಾಪ ಹಾಕುತ್ತಾರೆ. ‌ಇದಿಷ್ಟು ಜೀವನದ ಒಂದು ಭಾಗವಾದರೆ, ಇವೆರಡನ್ನೂ ಹೊರತುಪಡಿಸಿ ಇಡೀ ಲೋಕಕ್ಕೆ ಒಳಿತನ್ನು ಬಯಸುವವರು ತುಂಬಾ ಕಡಿಮೆ. ಆದರೆ ಅಂತಹ ಬೆರಳೆಣಿಕೆಯಷ್ಟು ಜನರಲ್ಲಿ ನಮ್ಮದೇ ದೇಶದ ನಮ್ನದೇ ರಾಜ್ಯದ, ನಡೆದಾಡುವ ದೇವರು ಎಂದೇ ಕರೆಯಲ್ಪಡುವ ತ್ರಿವಿಧ ದಾಸೋಹಿ ಸಿದ್ದಗಂಗಾ ಮಠದ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳು ಇಂದು ಲಕ್ಷಾಂತರ ಭಕ್ತರನ್ನೂ ಹಾಗೂ ಇಡೀ ಜಗತ್ತನ್ನು ಬಿಟ್ಟು ದೇವರ ಪಾದ ಸೇರಿದ್ದಾರೆ.

ತನ್ನ ಬದುಕಿನ ಉದ್ದಕ್ಕೂ ಜನರಿಗಾಗಿಯೇ ಬದುಕಿದ, ಸಮಾಜದ ಏಳಿಗೆಗಾಗಿಯೇ ಶ್ರಮಿಸಿದ ಶ್ರೀಗಳು ಇಂದು ಇಡೀ ಭಕ್ತ ಸಮೂಹವನ್ನು ಬಿಟ್ಟು ಅಗಲಿದ್ದಾರೆ. ಕಳೆದ ಕೆಲ‌ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀಗಳು ಪವಾಡ ಎಂಬಂತೆ ಚೇತರಿಸಿಕೊಂಡಿದ್ದರು.‌ ಸ್ವತಃ ವೈದ್ಯ ಲೋಕವೇ ಶ್ರೀಗಳ ಆರೋಗ್ಯ ಸ್ಥಿತಿ ಕಂಡು ದಿಗ್ಬ್ರಮೆಗೊಂಡಿತ್ತು. ಆಸ್ಪತ್ರೆಯಲ್ಲಿ ಇರುವಾಗ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು, ಆದರೆ ಮಠಕ್ಕೆ ಕರೆತರುತ್ತಿದ್ದಂತೆ ಮತ್ತೆ ಚೇತರಿಕೆ ಕಂಡಿದ್ದ ಶ್ರೀಗಳ ಆರೋಗ್ಯದಲ್ಲಿ ಇಂದು ಬೆಳಿಗ್ಗೆಯಿಂದಲೇ ಏರುಪೇರು ಉಂಟಾಗಿತ್ತು. ಆದರೆ ಕೊನೆಗೂ ಇಹಲೋಕ ತ್ಯಜಿಸಿದ ಶ್ರೀಗಳು ಇಂದಿಗೆ ತಮ್ಮ ಭೂಮಿಯ ಮೇಲಿನ ಯಾತ್ರೆಗೆ ಕೊನೆಹಾಡಿದ್ದಾರೆ.‌ ಇಡೀ ಭಕ್ತಸಮೂಹವನ್ನೇ ಕಣ್ಣೀರ ಕಡಲಲ್ಲಿ ತೇಲುವಂತೆ ಮಾಡಿದ ಶ್ರೀಗಳ ಲೋಕಕಲ್ಯಾಣಕ್ಕಾಗಿ ಮಾಡಿದ ಸೇವೆ ಅಪಾರ.!

ಬಡಕುಟುಂಬದ ಬಾಲಕನೊಬ್ಬ “ದೇವರು” ಹೇಗಾದ?

ಹುಟ್ಟುವಾಗಲೇ ದೈವೀ ಶಕ್ತಿ ಪಡೆದುಕೊಂಡು ಹುಟ್ಟಿದ ವ್ಯಕ್ತಿ ಅಲ್ಲ ಈ ಶ್ರೀಗಳು ಆದರೆ ಇಂದು ಇಡೀ ಮಾನವ ಕುಲಕ್ಕೆ ದೇವರಾಗಿ ನಿಂತಿದ್ದಾರೆ ಎಂದರೆ ಅವರ ಶಕ್ತಿ ಏನೆಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು.‌ ಬಡಕುಟುಂಬ ಒಂದರಲ್ಲಿ ಜನಿಸಿದ ಶ್ರೀಗಳ ಮೊದಲ ಹೆಸರು “ಶಿವಣ್ಣ” ಎಂದು. ‌ಎಲ್ಲರಂತೆಯೇ ಮಕ್ಕಳಾಟದಿಂದಲೇ ಬೆಳೆದಿದ್ದ ಇವರ ತಾಯಿ ಸಣ್ಣ ವಯಸ್ಸಿನಲ್ಲೇ ತೀರಿ ಹೋಗಿದ್ದರು. 1907ರ ಎಪ್ರಿಲ್ 1ರಂದು ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ವೀರಾಪುರ ಎಂಬ ಗ್ರಾಮದಲ್ಲಿ ಹೊನ್ನಪ್ಪ ಮತ್ತು ಗಂಗಮ್ಮ ದಂಪತಿಯ 13ನೇ ಮಗನೇ ಈ ಶಿವಣ್ಣ. ಬೆಂಗಳೂರಿನ ತೋಟದಪ್ಪ ವಿದ್ಯಾರ್ಥಿ ನಿಲಯದಲ್ಲಿಯೇ ಇದ್ದು ವಿದ್ಯಾಭ್ಯಾಸ ಮಾಡಿದ ಶ್ರೀಗಳು ಸೆಂಟ್ರಲ್ ಕಾಲೇಜಿನಲ್ಲಿ ಬಿಎ ಪದವಿ ಕೂಡ ಪಡೆದಿದ್ದಾರೆ. ವಿದ್ಯಾಭ್ಯಾಸ ಆಗುತ್ತಿದ್ದಂತೆ 1930ರ ಮಾರ್ಚ್ 3ರಂದು ಮಠದ ಜವಾಬ್ದಾರಿ ಹೊತ್ತ ಶ್ರೀಗಳು ಕೇವಲ ಒಂದು ಧರ್ಮದ ಕಾರ್ಯಕ್ಕೆ ಮಾತ್ರ ಸೀಮಿತವಾಗಿರದೆ, ಇಡೀ ಮಾನವ ಕುಲವನ್ನೂ ಒಂದೇ ಎಂದು ನಂಬಿದ್ದರು. ಶಿವಣ್ಣ ಎಂಬ ಹೆಸರು ಶಿವಕುಮಾರ ಎಂದು ಬದಲಾಗಲು ಕಾರಣ ಇವರಿಗೆ ದೀಕ್ಷೆ ನೀಡಿದ ಶ್ರೀಗಳು. 1930ರಲ್ಲಿ ಉದ್ಧಾನ‌ ಶ್ರೀಗಳು ಶಿವೈಕ್ಯರಾದ ಸಂದರ್ಭದಲ್ಲಿ ಸಮಾಧಿ ಕಾರ್ಯಕ್ಕೆ ಆಗಮಿಸಿದ ಶಿವಣ್ಣನನ್ನು ಕಂಡು ಶ್ರೀಗಳು ಮಠದ ಮುಂದಿನ ಉತ್ತರಾಧಿಕಾರಿಯಾಗಿ ಘೋಷಣೆ ಮಾಡುತ್ತಾರೆ. ಸಾಮಾನ್ಯನಾಗಿ ಬಂದಿದ್ದ ಶಿವಣ್ಣ ಖಾವಿಧಾರಿಯಾಗಿ ಅಧಿಕಾರ ಸ್ವೀಕರಿಸುತ್ತಾರೆ. ಸಂಪೂರ್ಣ ಸನ್ಯಾಸತ್ವ ಸ್ವೀಕರಿಸಿದ ನಂತರವೂ ತಮ್ಮ ವಿದ್ಯಾಭ್ಯಾಸ ಮುಂದುವರೆಸಿದ ಶ್ರೀಗಳು ವಿದ್ಯಾಭ್ಯಾಸ ಮುಗಿಸಿ ನಂತರ ತಮ್ಮ ಸಂಪೂರ್ಣ ಜೀವನವನ್ನೇ ಮಠಕ್ಕಾಗಿ ಮುಡಿಪಾಗಿಟ್ಟಿದ್ದರು.

ಕೂಲಿ ಮಠದಲ್ಲಿ ಮರಳಿನ ಮೇಲೆ ಅಕ್ಷರ ತಿದ್ದಿದ ಇವರು ಲೋಕಕಲ್ಯಾಣಕ್ಕಾಗಿ ಮಾಡಿದ ಸೇವೆ ಅಪಾರ. ಪಾಲಹಳ್ಳಿಯ ಶಾಲೆಯೊಂದರಲ್ಲಿ ಪ್ರಾಥಮಿಕ ಶಿಕ್ಷಣ ನಡೆಸಿದ ಶ್ರೀಗಳು, 1941ರಲ್ಲಿ ಮಠದ ಸಂಪೂರ್ಣ ಜವಾಬ್ದಾರಿ ವಹಿಸಿಕೊಳ್ಳುತ್ತಾರೆ. ಅದೇ ರೀತಿ ಮಠದ ನೇತೃತ್ವದಲ್ಲಿ ಮಕ್ಕಳಿಗಾಗಿ ತುಮಕೂರಿನಲ್ಲಿ 1944ರಲ್ಲಿ ಸಿದ್ದಗಂಗಾ ಎಂಬ ಹೆಸರಿನ ಪ್ರೌಢ ಶಾಲೆಯನ್ನು ಸ್ಥಾಪಿಸಿತ್ತಾರೆ. 1956ರಲ್ಲಿ ಸಿದ್ದಗಂಗಾ ಸಂಸ್ಕೃತ ಕಾಲೇಜು ಆರಂಭಿಸಿದ ಶ್ರೀಗಳು, 1962ರಲ್ಲಿ ಸಿದ್ದಗಂಗಾ ವಿದ್ಯಾಸಂಸ್ಥೆಯನ್ನೇ ಆರಂಭಿಸುತ್ತಾರೆ. ಇವಿಷ್ಟು ಶ್ರೀಗಳು ವಿದ್ಯಾ ಕ್ಷೇತ್ರಕ್ಕೆ ನೀಡಿದ ಕೊಡುಗೆಯಾದರೆ ಲಕ್ಷಾಂತರ ಮಕ್ಕಳಿಗೆ ಆಶ್ರಯ ನೀಡಿದ ಮಹಾನ್ ಚೇತನ ಈತ.!

Related image

 

1962ರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದ ಅಧ್ಯಕ್ಷತೆ ಕೂಡ ವಹಿಸಿಕೊಂಡಿದ್ದ ಶ್ರೀಗಳು ಎಲ್ಲಾ ಜಾತಿ ಎಲ್ಲಾ ಧರ್ಮದ ಜನರೊಂದಿಗೂ ಉತ್ತಮ‌ ಒಡನಾಟ ಹೊಂದಿದ್ದ ಶ್ರೀಗಳಿಗೆ ಮುಸಲ್ಮಾನರು ಸೇರಿದಂತೆ ಎಲ್ಲಾ ಧರ್ಮದ ಭಕ್ತರೂ ಇದ್ದಾರೆ. ಅದೇ ರೀತಿ 1965ರಲ್ಲಿ ಕರ್ನಾಟಕ ವಿವಿ’ಯಿಂದ ಗೌರವ ಡಿ.ಲಿಟ್ ಪದವಿ ಕೂಡ ಶ್ರೀಗಳು ಪಡೆದುಕೊಂಡಿದ್ದು, ಜಾಗತಿಕ ಮಟ್ಟದಲ್ಲಿ ತಮ್ಮ ಹೆಸರು ರಾರಾಜಿಸುವಂತೆ ಮಾಡಿದ ಮಹಾಪುರುಷ. 1966ರಲ್ಲಿ ತುಮಕೂರಿನಲ್ಲಿ ಕಾಲೇಜು ಸ್ಥಾಪಿಸಿದ ಶ್ರೀಗಳು, ಸಿದ್ದಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ಆರಂಭಿಸಿದ್ದಾರೆ. ಅದೇ ರೀತಿ 1967ರಲ್ಲಿ ತುಮಕೂರಿನಲ್ಲಿಯೇ ಸಿದ್ದಗಂಗಾ ಸಂಜೆ ಕಾಲೇಜು ಕೂಡ ಆರಂಭಿಸುತ್ತಾರೆ. 1984ರಲ್ಲಿ ನೆಲಮಂಗಲದಲ್ಲಿ ಪ್ರಥಮ ದರ್ಜೆ ಕಾಲೇಜು ಆರಂಭಿಸಿದ ಶ್ರೀಗಳು 1995ರಲ್ಲಿ ತುಮಕೂರಿನಲ್ಲಿ ಸಿದ್ದಗಂಗಾ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಕೂಡ ಸ್ಥಾಪನೆ ಮಾಡುತ್ತಾರೆ. 2007ರಲ್ಲಿ ಶ್ರೀಗಳಿಗೆ ಕರ್ನಾಟಕ ರತ್ನ‌ ಪ್ರಶಸ್ತಿ ಕೂಡ ಲಭಿಸಿದ್ದು, 2015ರಲ್ಲಿ ಪದ್ಮಭೂಷಣ ಪ್ರಶಸ್ತಿ ಕೂಡ ಲಭಿಸಿದೆ. ಶ್ರೀಗಳ ಸೇವೆ ಹೇಳಿದಷ್ಟು ಮುಗಿಯದ ಕಥೆ ಎಂದರೆ ತಪ್ಪಾಗದು.!

Image result for siddaganga swamiji hd images

ಶ್ರೀಗಳ ಅಗಲುವಿಕೆಗೆ ಗಣ್ಯರೆಲ್ಲರೂ ಸಂತಾಪ ಸೂಚಿಸಿದ್ದು, ಇಡೀ ದೇಶವೇ ಶೋಕಾಚರಣೆಯಲ್ಲಿ ತೊಡಗಿದೆ.‌ ನಾಳೆ ಅಂತಿಮ ವಿಧಿ ವಿಧಾನಗಳು ನಡೆಯಲಿದ್ದು ಅಪಾರ ಸಂಖ್ಯೆಯ ಭಕ್ತರು ಈಗಾಗಲೇ ಮಠದ ಬಳಿ ಸೇರಿದ್ದು, ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.!

ಪಿ ಆರ್ ಶೆಟ್ಟಿ

Tags

Related Articles

FOR DAILY ALERTS
Close