ಅಂಕಣ

ತುರ್ತು ಪರಿಸ್ಥಿತಿಯ ಸಮಯದಲ್ಲಿ ಸರ್ದಾರ್ ವೇಷ ತೊಟ್ಟು ಸಂಘದ ಪ್ರಚಾರ-ಪ್ರಸಾರ ಮಾಡುತ್ತಿದ್ದ 25ರ ತರುಣ ಮುಂದೊಂದು ದಿನ ಭಾರತದ ಪ್ರಧಾನಿ ಆಗುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ!!

ನಲ್ವತ್ತ ಮೂರು ವರ್ಷಗಳ ಹಿಂದೆ ಇಂದಿರಾಗಾಂಧಿ ಭಾರತದ ಮೇಲೆ ತುರ್ತು ಪರಿಸ್ಥಿತಿ ಹೇರಿದ್ದಾಗ, ನರೇಂದ್ರ ಮೋದಿಗೆ 25ರ ಹರೆಯ. ಬಿಸಿ ರಕ್ತದ ತರುಣ ಮೋದಿ ಎಲ್ಲರಂತೆಯೆ ತುರ್ತು ಪರಿಸ್ಥಿತಿಯ ವಿರುದ್ದ ಚಳುವಳಿಯಲ್ಲಿ ಭಾಗಿಯಾಗಿದ್ದರು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಹಲವಾರು ಬಿ.ಜೆ.ಪಿ ನಾಯಕರನ್ನು ಬಂಧಿಸಿ ಸೆರೆಮನೆಗೆ ತಳ್ಳಲಾಗಿತ್ತು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೇಲೂ ನಿರ್ಬಂಧ ಹೇರಲಾಗಿತ್ತು. ಆ ಕಾಲದಲ್ಲಿ ನರೇಂದ್ರ ಮೋದಿ ಅವರು ಸಂಘದ ಪ್ರಚಾರಕರಾಗಿ ಕೆಲಸ ಮಾಡುತ್ತಿದ್ದರು. ಆದರೆ ಇಂದಿರಾ ಸರಕಾರಕ್ಕೆ ಅವರನ್ನು ಬಂಧಿಸಲು ಸಾಧ್ಯವಾಗಿರಲಿಲ್ಲ. ಏಕೆಂದರೆ ಅವರು ಆಗ ನರೇಂದ್ರ ಮೋದಿ ಆಗಿರಲಿಲ್ಲ ಬದಲಿಗೆ ಸರ್ದಾರ್ ನರೇಂದ್ರ ಸಿಂಗ್ ಆಗಿದ್ದರು!

ಸರ್ದಾರ್ ಮಾರುವೇಷದಲ್ಲಿದ್ದ ಮೋದಿ ಅವರು ನಿಷೇಧಿತ ಸಾಹಿತ್ಯವನ್ನು ದೆಹಲಿಗೆ ಸಾಗಿಸುತ್ತಿದ್ದರು ಮತ್ತು ಜನ ಸಂಘದ ನಾಯಕರನ್ನು ಜೈಲಿನಲ್ಲಿ ಗುಪ್ತವಾಗಿ ಭೇಟಿಯಾಗುತ್ತಿದ್ದರು ಎಂದು ಒಂದು ವರದಿ ಹೇಳುತ್ತದೆ. ಕೆಲವೊಮ್ಮೆ ಸನ್ಯಾಸಿಯ ವೇಷ ಧರಿಸಿ ಜಾರ್ಜ್ ಫೆರ್ನಾಂಡೀಸ್ ಮತ್ತು ಇತರ ನಾಯಕರನ್ನು ಸುರಕ್ಷಿತವಾಗಿ ಮನೆಗಳಿಗೆ ಕರೆದೊಯ್ಯುತ್ತಿದ್ದರು. ತುರ್ತು ಪರಿಸ್ಥಿತಿಯ ಸಮಯದಲ್ಲಿ ಒಂದು ಸಣ್ಣ ನಾಯಕನಾಗಿದ್ದ ಮೋದಿಯವರ ಕೆಲಸವು ಉನ್ನತ ನಾಯಕರ ನಡುವೆ ಸಂಪರ್ಕ ಕೊಂಡಿ ಆಗಿ ಕಾರ್ಯನಿರ್ವಹಿಸುವುದು ಮತ್ತು ನಿಷೇಧಿತ ಸಾಹಿತ್ಯವನ್ನು ಪ್ರಸಾರ ಮಾಡುವುದಾಗಿತ್ತು.

ತನ್ನ ವೇಷ ಮರೆಸುವ ಜೊತೆಗೆ ಅವರು ಪ್ರಕಾಶ್ ಎನ್ನುವ ಗುಪ್ತನಾಮವನ್ನು ಕೂಡಾ ಹೊಂದಿದ್ದರು. ತುರ್ತು ಪರಿಸ್ಥಿತಿಯ ಸಮಯದಲ್ಲಿ ಮೋದಿ ಅವರ ಭೂಗತ ಚಟುವಟಿಕೆಗಳು ಅವರಲ್ಲಿರುವ ನಾಯಕತ್ವ ಗುಣವನ್ನು ಹೊರತರುವಲ್ಲಿ ಸಹಾಯ ಮಾಡಿದ್ದವು. ಎಂತಹ ವಿಷಮ ಪರಿಸ್ಥಿಯನ್ನೂ ಸಮರ್ಥವಾಗಿ ನಿಭಾಯಿಸುವ ಛಾತಿ ಅವರಿಗೆ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಒದಗಿತ್ತು ಎನ್ನುವುದು ಉತ್ಪ್ರೇಕ್ಷೆಯಾಗಿರಲಿಕ್ಕಿಲ್ಲ. ಪೋಲಿಸರ ಕಣ್ಣಿಗೆ ಮಣ್ಣೆರಚಿ ಸಂಘದ ಪ್ರಚಾರ-ಪ್ರಸಾರ ಕಾರ್ಯದಲ್ಲಿ ತೊಡಗುವುದು ಸಾಮಾನ್ಯದ ಮಾತಲ್ಲ. ಒಂದು ವೇಳೆ ಮೋದಿ ಏನಾದರೂ ಸಿಕ್ಕಿ ಬಿದ್ದಿದ್ದರೆ ಅವರೂ ಕೂಡಾ ಇತರಂತೆಯೆ ಜೈಲು ವಾಸ ಅನುಭವಿಸಬೇಕಾಗುತ್ತಿತ್ತು.

ಇಂದಿರಾ ಗಾಂಧಿಯಂತ ಸರ್ವಾಧಿಕಾರಿ ಸರಕಾರದ ವಿರುದ್ದ ಕೆಲಸ ಮಾಡಲು ಸಿಂಹದ ಗುಂಡಿಗೆಯೆ ಬೇಕು. ಸಂಘರ್ಷವನ್ನು ಸಾಧನೆಯ ಮೆಟ್ಟಿಲಾಗಿಸುವ ಕಲೆ ಮೋದಿ ಅವರಿಗೆ ಚಿಕ್ಕಂದಿನಿಂದಲೇ ಕರಗತವಾಗಿರುವುದರಿಂದಲೆ ಇವತ್ತು ಸಾಧನೆಯ ಶಿಖರವನ್ನೇರಿ ಕುಳಿತಿರುವುದು. ತುರ್ತು ಪರಿಸ್ಥಿತಿಯನ್ನು ತೆಗೆಯುವ ಹೊತ್ತಿಗೆ, ಮೋದಿಯವರ ದೃಷ್ಟಿ ವಿಸ್ತಾರವಾಗಿತ್ತು. ಸಾಮಾನ್ಯ ಪ್ರಚಾರಕನಿಂದ ಒಬ್ಬ ನಾಯಕನ ಭೂಮಿಕೆಯನ್ನು ನಿಭಾಯಿಸಿ ಸಂಘದ ವಲಯದಲ್ಲಿ ಹೆಸರು ಸಂಪಾದಿಸಿದ್ದರು ತರುಣ ಮೋದಿ.

ಸಂಘದ ಬೆಂಬಲಿಗರನ್ನು ಸುರಕ್ಷಿತವಾಗಿಡುವುದು, ಸಂಘಕ್ಕೆ ಆರ್ಥಿಕ ಸಹಾಯ ಒದಗಿಸುವುದು, ಉನ್ನತ ನಾಯಕರುಗಳ ಜೊತೆ ಮತ್ತು ಪ್ರಚಾರಕರ ಮಧ್ಯೆ ಸಂಪರ್ಕ ಸ್ಥಾಪಿಸುವುದು, ಪೋಲಿಸರ ಗೂಢಾಚಾರಿಕೆಯ ಕಣ್ಣುಗಳಿಂದ ತಪ್ಪಿಸಿಕೊಂಡು ಸಭೆಗಳನ್ನು ಸಂಘಟಿಸುವುದು, ನಿಷೇಧಿತ ಸಾಹಿತ್ಯವನ್ನು ಸಾಗಿಸುವುದು, ತುರ್ತುಪರಿಸ್ಥಿತಿ ವಿರೋಧಿ ಗುಂಪುಗಳೊಂದಿಗೆ ಜಾಲಬಂಧ ಏರ್ಪಡಿಸುವುದು ಇವೆ ಮೊದಲಾದ ಕೆಲಸಗಳಿಂದಾಗಿ ಮೋದಿ ಅವರು ಒಂದು ಪೂರ್ಣ ಪ್ರಮಾಣದ ನಾಯಕರಾಗಿ ಬೆಳೆಯಲು ಸಾಧ್ಯವಾಯಿತು. ಇವೆ ಕಾರಣಗಳಿಗಾಗಿ ಸಂಘದ ವಲಯದಲ್ಲಿ ಮೋದಿ ಒಬ್ಬ “ಥಿಂಕಿಂಗ್ ಮ್ಯಾನ್” ಆಗಿ ಹೊರಹೊಮ್ಮುತ್ತಾರೆ. ಬಹುಷಃ ತುರ್ತು ಪರಿಸ್ಥಿತಿಯ ಸಮಯದಲ್ಲಿ ಮೋದಿ ಅವರ ಈ ಎಲ್ಲಾ ಗುಣಗಳನ್ನು ಅಟಲ್ ಜಿ ಅವರು ಸೂಕ್ಷವಾಗಿ ಅವಲೋಕಿಸಿದ್ದಿರಬಹುದು. ಹಾಗಾಗಿಯೆ ಗುಜರಾತ್ ಮುಖ್ಯಮಂತ್ರಿ ಪದವಿಗೆ ಮೋದಿ ಅವರೆ ಸೂಕ್ತ ಅಭ್ಯರ್ಥಿ ಎಂದು ಅವರಿಗೆ ಅನಿಸಿದ್ದಿರಬಹುದು.

ಹದಿನಾರು ವರ್ಷಗಳ ಹಿಂದೆ ಅಟಲ್ ಜಿ ಅವರು ತಮ್ಮ ಮೆಚ್ಚಿನ ಶಿಷ್ಯನನ್ನು ಗುಜರಾತ್ ಮುಖ್ಯಮಂತ್ರಿಯಾಗಿಸುವ ನಿರ್ಧಾರ ತೆಗೆದುಕೊಂಡಿದ್ದರಿಂದ ಇವತ್ತು ಭಾರತಕ್ಕೆ ಒಬ್ಬ ಶ್ರೇಷ್ಠ ಪ್ರಧಾನ ಮಂತ್ರಿ ದೊರೆಯುವಂತಾಯಿತು. 43 ವರ್ಷಗಳ ಹಿಂದೆ ಹೇರಿದ್ದ ತುರ್ತು ಪರಿಸ್ಥಿತಿಯಿಂದಾಗಿ ಸಾಮಾನ್ಯ ತರುಣನೊಬ್ಬ ನಾಯಕತ್ವ ಗುಣಗಳನ್ನು ಪಡೆದುಕೊಂಡು ದೇಶದ ಚುಕ್ಕಾಣಿಯನ್ನು ಸಮರ್ಥವಾಗಿ ನಿಭಾಯಿಸುವಂತಾದದ್ದು ಅಚ್ಚರಿಯೆ ಸೈ. ಗುಜರಾತಿನ ಪುಟ್ಟ ಊರಿನಲ್ಲಿ ಚಹಾ ಮಾರುತ್ತಿದ್ದ ಹುಡುಗ, ಸಂಘ ಪ್ರಚಾರಕರಾಗಿದ್ದ ತರುಣನೊಬ್ಬ ಮುಂದೊಂದು ದಿನ ಭಾರತದ ಪ್ರಧಾನ ಮಂತ್ರಿಯಾಗಿ ವಿಶ್ವ ನಾಯಕನ ವರ್ಚಸ್ಸು ಪಡೆಯುತ್ತಾರೆ ಎಂದು ಯಾರೂ ಊಹಿಸಿರಲಿಕ್ಕಿಲ್ಲ. ಸಂಘ ಯಾರನ್ನೂ ತುಳಿಯುವುದಿಲ್ಲ ಬದಲಾಗಿ ಬೆಳೆಯಗೊಡುತ್ತದೆ ಎನ್ನುವುದಕ್ಕೆ ಮೋದಿಯೆ ನಿದರ್ಶನ.

ದೇಶದಲ್ಲಿ ಕುಟುಂಬ ರಾಜಕಾರಣ ಮಾಡದ ಏಕೈಕ ಪಕ್ಷ ಭಾಜಪಾ. ಭಾಜಪಾದಲ್ಲಿ ಮಾತ್ರ ಒಬ್ಬ ಸಾಮಾನ್ಯ ಕಾರ್ಯಕರ್ತ ದೆಹಲಿ ಗದ್ದುಗೆಯಲ್ಲಿ ಕುಳಿತು ದೇಶ ಆಳಬಹುದು ಹೊರತು ಬೇರಾವುದೇ ಪಕ್ಷದಲ್ಲಿ ಇದು ಕನಸಿನಲ್ಲೂ ಸಾಧ್ಯವಿಲ್ಲ. ಸಂಘವೆ ಒಂದು ಪರಿವಾರ. ಇಲ್ಲಿ ಪರಿವಾರ ಪಕ್ಷಗಳಂತೆ ಒಂದೇ ಕುಟುಂಬದ ಕುಳಗಳಿಗೆ ಮಣೆ ಹಾಕುವ ಪರಿಪಾಠವೆ ಇಲ್ಲ. ಸಂಘ ತಾನೂ ಬೆಳೆಯುತ್ತದೆ ತನ್ನ ಪರಿವಾರದ ಜನರನ್ನೂ ಬೆಳೆಸುತ್ತದೆ. ಸಂಘ ವಿಶಾಲ ವಟ ವೃಕ್ಷವಿದ್ದಂತೆ, ಅರಸಿ ಬಂದವರಿಗೆ ಸದಾ ತಂಬೆಲರು ನೀಡುತ್ತಿರುತ್ತದೆ.

-ಶಾರ್ವರಿ

Tags

Related Articles

Close