ಪ್ರಚಲಿತ

ವೈದ್ಯಕೀಯ ವಲಯದ ಸಂಶೋಧನೆಗೆ ಹೊಸ ಯೋಜನೆಗೆ ಮುಂದಾಗಿದೆ ಕೇಂದ್ರ ಸರ್ಕಾರ

ವೈದ್ಯಕೀಯ ವಲಯಕ್ಕೆ ಸಂಬಂಧಿಸಿದ ಹಾಗೆ ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಹಲವಾರು ಅಭಿವೃದ್ಧಿ ಉಪಕ್ರಮಗಳನ್ನು ಕೈಗೊಳ್ಳುತ್ತಿದೆ. ಕೊರೋನಾ ನಂತರದಲ್ಲಂತೂ ಆರೋಗ್ಯ ವಲಯಕ್ಕೆ ಸಂಬಂಧಿಸಿದ ಹಾಗೆ ದೇಶದಲ್ಲಿ ಮಹತ್ವದ ಪ್ರಗತಿ ಕಾರ್ಯಗಳು ನಡೆದುಕೊಂಡೇ ಬರುತ್ತಿರುವುದು ಶ್ಲಾಘನೀಯ. ವೈದ್ಯಕೀಯ ವಲಯದ ಅಭಿವೃದ್ಧಿಯ ವಿಚಾರದಲ್ಲಿ ಕೇಂದ್ರ ಸರ್ಕಾರ ತೆಗೆದುಕೊಳ್ಳುತ್ತಿರುವ ನಿರ್ಣಯಗಳು ಮಹತ್ವಪೂರ್ಣವೂ ಹೌದು.

ದೇಶದಲ್ಲಿ ಮೆಡ್ – ಫಾರ್ಮಾ ವಲಯದಲ್ಲಿ ಸಂಶೋಧನೆ ಮತ್ತು ಆವಿಷ್ಕಾರಗಳನ್ನು ನಡೆಸಲು ಉತ್ತೇಜನ ನೀಡುವ ಸಲುವಾಗಿ ಹೊಸ ಯೋಜನೆಗಳನ್ನು ಸುಮಾರು ಐದು ಸಾವಿರ ಕೋಟಿ ರೂ. ವೆಚ್ಚದಲ್ಲಿ ಕೇಂದ್ರ ಸರ್ಕಾರ ಆರಂಭ ಮಾಡಲಿದೆ ಎಂದು ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ ಅವರು ತಿಳಿಸಿದ್ದಾರೆ.

ಕೇಂದ್ರ ಸಚಿವ ಸಂಪುಟವು ಕಳೆದ ತಿಂಗಳು 2023-24 ರಿಂದ 2027-28 ರ ವರೆಗಿನ ಐದು ವರ್ಷಗಳ ಅವಧಿಗೆ ಸಂಬಂಧಿಸಿದ ಹಾಗೆ ಈ ಯೋಜನೆಗೆ ಕಳೆದ ತಿಂಗಳಷ್ಟೇ ಅನುಮೋದನೆ ನೀಡಿತ್ತು. ಭಾರತದಲ್ಲಿ ಸಂಶೋಧನಾ ವಲಯಕ್ಕೆ ಸಂಬಂಧಿಸಿದ ಹಾಗೆ ಮೂಲಸೌಕರ್ಯಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಭಾರತೀಯ ಫಾರ್ಮಾ ಮೆಡ್ ಟೆಕ್ ವಲಯವನ್ನು ವೆಚ್ಚ ಆಧಾರಿತ ಸ್ಪರ್ಧಾತ್ಮಕತೆಯಿಂದ ನಾವೀನ್ಯತೆ ಆಧಾರಿತ ಬೆಳವಣಿಗೆಗೆ ಪರಿವರ್ತನೆ ಮಾಡುವುದೇ ಈ ಯೋಜನೆಯ ಉದ್ದೇಶವಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಈ ಯೋಜನೆಯ ಸಮರ್ಪಕ ಅನುಷ್ಠಾನಕ್ಕಾಗಿ ಮೀಸಲಿರಿಸಲಾದ ಐದು ಸಾವಿರ ಕೋಟಿ ರೂ. ಗಳಲ್ಲಿ ,700 ಕೋಟಿ ರೂ.ಗಳನ್ನು ಮೊಹಾಲಿ, ಅಹಮದಾಬಾದ್, ಹೈದರಾಬಾದ್, ಕೋಲ್ಕತಾ ಸೇರಿದಂತೆ ಅಸ್ತಿತ್ವ ದಲ್ಲಿರುವ ಏಳು ರಾಷ್ಟ್ರೀಯ ಔಷಧೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳಲ್ಲಿ ಶ್ರೇಷ್ಠತೆಯ ಕೇಂದ್ರಗಳ ಮೂಲಕ ಸಂಶೋಧನಾ ಮೂಲಸೌಕರ್ಯಗಳನ್ನು ಬಲಗೊಳಿಸಲು ಬಳಕೆ ಮಾಡುವುದಕ್ಕೆ ಕೇಂದ್ರ ಸರ್ಕಾರ ನಿರ್ಧರಿಸುವುದಾಗಿಯೂ ಅವರು ಮಾಹಿತಿ ನೀಡಿದ್ದಾರೆ.

ಭಾರತದಲ್ಲಿ ವೈದ್ಯಕೀಯ ವಲಯಕ್ಕೆ ಸಂಬಂಧಿಸಿದ ಹಾಗೆ ಫಾರ್ಮ್ ಉದ್ಯಮ ಕ್ಷೇತ್ರದ ಪ್ರಗತಿಯನ್ನು ಮತ್ತಷ್ಟು ಬಲಪಡಿಸುವುದು, ಔಷಧೀಯ ಉತ್ಪಾದನೆಯನ್ನು ಹೆಚ್ಚಿಸುವುದು ಮತ್ತು ಈ ಕ್ಷೇತ್ರಕ್ಕೆ ಸಂಬಂಧಿಸಿದ ಹಾಗೆ ಸಂಶೋಧನೆ ಮತ್ತು ಆವಿಷ್ಕಾರಗಳನ್ನು ಹೆಚ್ಚು ಮಾಡುವುದು ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ಬಹು ಮುಖ್ಯ ಗುರಿಯಾಗಿದೆ. ಈ ಅಂಶವನ್ನು ಗಮನದಲ್ಲಿರಿಸಿಕೊಂಡು ತಲಾ ಒಂದು ಸಾವಿರ ಕೋಟಿ ರೂ. ಗಳ ವೆಚ್ಚದಲ್ಲಿ ಮೂರು ಬಲ್ಕ್ ಡ್ರಗ್ ಪಾರ್ಕ್ ಗಳನ್ನು ಸ್ಥಾಪನೆ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿರುವುದಾಗಿಯೂ ಅವರು ಹೇಳಿದ್ದಾರೆ.

ಈ ಸಂಬಂಧ ಬೃಹತ್ ಉದ್ಯಾನಗಳನ್ನು ಗುಜರಾತ್, ಹಿಮಾಚಲ ಪ್ರದೇಶ, ಆಂಧ್ರ ಪ್ರದೇಶಗಳಲ್ಲಿ ಆರಂಭಿಸಲಾಗುವುದು. ಹಾಗೆಯೇ ದೇಶದಲ್ಲಿ ವೈದ್ಯಕೀಯ ಸಲಕರಣೆಗಳನ್ನು ಉತ್ಪಾದನೆ ಮಾಡುವ ವಿಚಾರದಲ್ಲಿ ಉತ್ತೇಜನ ನೀಡಲು ನಾಲ್ಕು ವೈದ್ಯಕೀಯ ಸಾಧನ ಉದ್ಯಾನವನಗಳನ್ನು ಸಹ ಆರಂಭ ಮಾಡಲಾಗುತ್ತದೆ. ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ತಮಿಳುನಾಡು, ಮಧ್ಯ ಪ್ರದೇಶಗಳಲ್ಲಿ ವೈದ್ಯಕೀಯ ಸಂಶೋಧನೆಗೆ ಸಂಬಂಧಿಸಿದ ಪಾರ್ಕ್‌ ಗಳ ನಿರ್ಮಾಣ ಮಾಡುವ ಗುರಿ ಇರುವುದಾಗಿಯೂ ಮಾಂಡವಿಯಾ ಮಾಹಿತಿ ನೀಡಿದ್ದಾರೆ.

Tags

Related Articles

Close