ಪ್ರಚಲಿತ

ಗಂಗಾ ಮಾತೆಗೆ ಗೌರವ ಸಂದಾಯ: ಪವಿತ್ರ ನದಿ ತಟದಲ್ಲಿ ನಡೆಯುತ್ತಿದೆ ಮೋದಿ‌ ಮ್ಯಾಜಿಕ್!

ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆಯಷ್ಟೇ ‘ಗಂಗಾ ವಿಲಾಸ್’ ಎನ್ನುವ ವಿಶ್ವದ ಅತಿ ಉದ್ದದ ನದಿ ಕ್ರೂಸ್ ಹಡಗನ್ನು ಲೋಕಾರ್ಪಣೆ ಮಾಡಿದ್ದಾರೆ.

ಈ ಹಡಗು ವಾರಣಾಸಿಯ ಗಂಗಾ ನದಿಯಿಂದ ತನ್ನ ಪ್ರಯಾಣವನ್ನು ಆರಂಭ ಮಾಡಿ, ಬಾಂಗ್ಲಾದೇಶ ಮಾರ್ಗವಾಗಿ ಚಲಿಸಿ, ಅಸ್ಸಾಂನ ಧಿಬ್ರುಗಢದಲ್ಲಿ ತನ್ನ ಪ್ರಯಾಣವನ್ನು ಕೊನೆಗೊಳಿಸಲಿದೆ. ಈ ವಿಶೇಷ ಹಡಗು ೩೨೦೦ ಕಿಮೀ ದೂರದವರೆಗೆ ಸಂಚರಿಸಲಿದ್ದು, ಸುಮಾರು ೫೦ ಪ್ರವಾಸಿ ತಾಣಗಳಲ್ಲಿ ತಂಗಲಿದೆ. ಅಂದ ಹಾಗೆ ಈ ಹಡಗಿನ ಮೊದಲ ಯಾನ ಜನವರಿ ೧೩ ಕ್ಕೆ ಆರಂಭವಾಗಿ, ಮಾರ್ಚ್ ೧ ರಂದು ಕೊನೆಗೊಳ್ಳಲಿದೆ. ಗಂಗಾ, ಬ್ರಹ್ಮಪುತ್ರ ನದಿಗಳನ್ನೊಳಗೊಂಡಂತೆ ೨೭ ನದಿಗಳಲ್ಲಿ ಈ ವಿ ಲಾ ಸಿ ಹಡಗು ಸಂಚರಿಸಲಿದೆ.

ಇದರಲ್ಲಿ ೩೬ ಜನರಿಗೆ ಸಂಚರಿಸುವ ಅವಕಾಶ ಇದ್ದು, ೫೧ ದಿನಗಳ ಕಾಲ ಒಂದು ಬಾರಿಯ ಯಾನ ನಡೆಯಲಿದೆ. ಅನೇಕ ಪ್ರೇಕ್ಷಣೀಯ, ಪಾರಂಪರಿಕ ಸ್ಥಳಗಳಿಗೆ ಈ ಹಡಗು ಯಾನಿಗಳನ್ನು ಕರೆದೊಯ್ಯಲಿದೆ. ೫೧ ದಿನಕ್ಕೆ ೧೨.೫ ಲಕ್ಷ ರೂ. ಟಿಕೆಟ್ ದರವನ್ನು ನಿಗದಿ ಮಾಡಲಾಗಿದ್ದು, ಇದು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಜೊತೆಗೆ, ಸರ್ಕಾರ ಕ್ಕೂ ಉತ್ತಮ ಆದಾಯ ಒದಗಿಸಲಿದೆ.

ಬಿಹಾರ್‌ನ ಪಾಟ್ನಾ, ಜಾರ್ಖಂಡ್‌ನ ಸಾಹಿಬ್ ಗಂಜ್, ಪಶ್ಚಿಮ ಬಂಗಾಳದ ಕೋಲ್ಕತಾ, ಬಾಂಗ್ಲಾದೇಶದ ಡಾಕಾ, ಅಸ್ಸಾಂ‌ನ ಗುವಾಹಟಿಯನ್ನು ಈ ಯಾನಿಗಳು ವೀಕ್ಷಿಸಬಹುದಾಗಿದೆ. ಬಾಂಗ್ಲಾದೇಶದಲ್ಲಿ ೧೫ ದಿನ ಸಂಚರಿಸಲಿರುವ ಈ ಹಡಗು ಆ ಬಳಿಕ ಮತ್ತೆ ಭಾರತಕ್ಕೆ ಪ್ರವೇಶಿಸಲಿದೆ.

ಈ ಹಡಗಿನಲ್ಲಿ ವಿಶಿಷ್ಟ ವಿನ್ಯಾಸದ ಜೊತೆಗೆ, ಭವಿಷ್ಯವನ್ನು ದೃಷ್ಟಿಯಲ್ಲಿರಿಸಿಕೊಂಡು ನಿರ್ಮಾಣ ಮಾಡಲಾಗಿದೆ. ಇದರಲ್ಲಿ ೩ ಡೆಕ್ ಮತ್ತು ೧೮ ಸೂಟ್‌ಗಳಿದ್ದು, ಏಕಕಾಲದಲ್ಲಿ ೩೬ ಪ್ರವಾಸಿಗರನ್ನು ಹೊತ್ತೊಯ್ಯಲಿದೆ. ಇದರಲ್ಲಿ ಸಂಗೀತ ವ್ಯವಸ್ಥೆ, ವೈಯಕ್ತಿಕ ಬಾಣಸಿಗ, ಸಾಂಸ್ಕೃತಿಕ ಕಾರ್ಯಕ್ರಮ, ಜಿಮ್, ಸ್ಪಾ, ವೀಕ್ಷಣಾಲಯ ಮೊದಲಾದ ಅನುಕೂಲಗಳನ್ನು ಸಹ ಒದಗಿಸಲಾಗಿದೆ. ಈ ಹಡಗು ೬೨ ಮೀ. ಉದ್ದವಿದೆ. ೧೨ ಮೀ. ಅಗಲವಿದೆ. ೫೦ ಪ್ರವಾಸಿ ತಾಣಗಳನ್ನು ಇದರ ಯಾನಿಗಳಿಗೆ ತೋರಿಸಲು ಯೋಜನೆ ಕೈಗೊಳ್ಳಲಾಗಿದೆ.

ಒಟ್ಟಿನಲ್ಲಿ ಕೇಂದ್ರ ಸರ್ಕಾರ ಪ್ರವಾಸೋದ್ಯಮವನ್ನು ಉತ್ತೇಜಿಸುವ ದೃಷ್ಟಿಯಲ್ಲಿ ಹಲವಾರು ಮಹತ್ವದ ಹೆಜ್ಜೆಗಳನ್ನು ಇರಿಸುತ್ತಿದ್ದು, ಗಂಗಾ ವಿಲಾಸ್ ಹಡಗಿನ ಮೂಲಕವೂ ಪ್ರವಾಸೋದ್ಯಮ ಕ್ಷೇತ್ರವನ್ನು ಅಭಿವೃದ್ಧಿ ಮಾಡಲು ಹೊರಟಿದೆ. ಭಾರತದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಇದೊಂದು ಮಹತ್ವದ ಮೈಲಿಗಲ್ಲಾಗಲಿದೆ.

Tags

Related Articles

Close