ಪ್ರಚಲಿತ

ಮೂಲ್ಕಿ-ಮೂಡಬಿದಿರೆ ಯಾರಿಗೆ ಮಣೆ ಹಾಕುತ್ತಾರೆ ಮತದಾರರು?

ಮೂಲ್ಕಿ-ಮೂಡಬಿದಿರೆ ಯಾರಿಗೆ ಮಣೆ ಹಾಕುತ್ತಾರೆ ಮತದಾರರು?

ಇನ್ನೇನು ಕೆಲವೇ ದಿನಗಳಲ್ಲಿ ಕರ್ನಾಟಕ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಈಗಾಗಲೇ ರಾಜ್ಯದಲ್ಲಿರುವ ಎಲ್ಲಾ ಪಕ್ಷಗಳು ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಸಹ ಬಿಡುಗಡೆ ಮಾಡಿವೆ. ಯಾವ ಕ್ಷೇತ್ರದಲ್ಲಿ ಯಾವ ಅಭ್ಯರ್ಥಿ ಸ್ಪರ್ಧಿಸಿದರೆ ಗೆಲ್ಲಬಹುದು?, ಯಾರ ವಿರುದ್ಧ ಯಾರು ಸ್ಪರ್ಧೆ ಮಾಡಿದಲ್ಲಿ ಜಯ ಗಳಿಸಬಹುದು ಎನ್ನುವ ಸೋಲು ಗೆಲುವಿನ ಲೆಕ್ಕಾಚಾರವನ್ನು ಸಹ ಎಲ್ಲಾ ಪಕ್ಷಗಳು ಮಾಡುತ್ತಿವೆ.

ಮೂಲ್ಕಿ – ಮೂಡುಬಿದಿರೆ ಕ್ಷೇತ್ರದಲ್ಲಿಯೂ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಪೈಪೋಟಿ ಜೋರಾಗಿದೆ. ಸ್ವಾತಂತ್ರ್ಯದ ಬಳಿಕ ಕಳೆದ ಐದು ವರ್ಷಗಳನ್ನು ಹೊರತುಪಡಿಸಿದಂತೆ ಈ ಕ್ಷೇತ್ರದಲ್ಲಿ ಆಡಳಿತದಲ್ಲಿದ್ದದ್ದು ಕಾಂಗ್ರೆಸ್. ಆದರೆ ಆ ಅವಧಿಯಲ್ಲಿ ಅಲ್ಲಿನ ಅಭಿವೃದ್ಧಿ ಮಾತ್ರ ಆಮೆಗತಿಯದ್ದಾಗಿತ್ತು. ಆದರೆ ಕಳೆದ ೫ ವರ್ಷದಲ್ಲಿ ಈ ಕ್ಷೇತ್ರದ ಮತದಾರರು ಬಿಜೆಪಿ ಪರ ಒಲವು ತೋರಿಸಿದ್ದು, ಬಿಜೆಪಿ ಆಡಳಿತಾವಧಿಯಲ್ಲಿ ಅಭಿವೃದ್ಧಿಯ ನಡಿಗೆ ವೇಗ ಪಡೆದಿತ್ತು. ೨೦ ವರ್ಷಗಳಿಂದ ಕಾಂಗ್ರೆಸ್ ಆಡಳಿತದಲ್ಲಿ ಕಾಣದ ಅಭಿವೃದ್ಧಿ ಕಳೆದೈದು ವರ್ಷದ ಬಿಜೆಪಿ ಆಡಳಿತದಲ್ಲಿ ಈ ಕ್ಷೇತ್ರದಲ್ಲಾಗುವ ಮೂಲಕ ಅಭಿವೃದ್ಧಿಯ ಗಾಳಿ ಬೀಸಿತ್ತು. ಈ ಕ್ಷೇತ್ರದಲ್ಲಿ ಈ ಹಿಂದೆ ಎಂಎಲ್ಎ ಆಗಿದ್ದ ಕಾಂಗ್ರೆಸ್ ಪಕ್ಷದ ಅಭಯಚಂದ್ರ ಜೈನ್ ಅವರೇ ಬಿಜೆಪಿ ಅಧಿಕಾರಾವಧಿಯಲ್ಲಿ ಈ ಕ್ಷೇತ್ರದಲ್ಲಾದ ಬದಲಾವಣೆಯನ್ನು ಮೆಚ್ಚಿ ಹೊಗಳಿದ್ದನ್ನೂ ನಾವಿಲ್ಲಿ ‌ಸ್ಮರಿಸಿಕೊಳ್ಳಬಹುದು.

ಕಳೆದ ಐದು ವರ್ಷಗಳಲ್ಲಿ ಇಲ್ಲಿನ ಶಾಸಕರಾಗಿ ಜನಸ್ನೇಹಿ ಕಾರ್ಯಗಳನ್ನು ನಡೆಸಿ, ಮೂಲ್ಕಿ – ಮೂಡಬಿದಿರೆಯ ಮನೆ ಮಗನೆನಿಸಿಕೊಂಡವರು ಸರಳ ವ್ಯಕ್ತಿತ್ವದ ಸಜ್ಜನ ರಾಜಕಾರಣಿ ಉಮಾನಾಥ್ ಕೋಟ್ಯಾನ್ ಅವರು. ಯಾವುದೇ ಜಾತಿ, ಧರ್ಮ, ಮತಕ್ಕೂ ಮೀಸಲಾಗದೆ ತಮ್ಮ ಕ್ಷೇತ್ರದ ಜನರ ಅಭಿವೃದ್ಧಿಯೇ ಮುಖ್ಯ ಎಂಬಂತೆ ಸೇವೆ ಸಲ್ಲಿಸಿದ ವ್ಯಕ್ತಿತ್ವ ಕೋಟ್ಯಾನರದ್ದು. ಕಳೆದೈದು ವರ್ಷದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳ ಜೊತೆಗೆ ದೊಡ್ಡ ಮಟ್ಟದಲ್ಲಿ ಅಂದರೆ ಸುಮಾರು ೮೦೦೦ ಬಡ ಜನರಿಗೆ ಹಕ್ಕು ಪತ್ರ ಗಳನ್ನು ಒದಗಿಸಿ ಕೊಡುವ ಮೂಲಕ ಬಡವರ ಕಣ್ಣೀರು ಒರೆಸಿದವರು‌. ಕಾಂಗ್ರೆಸ್ ಆಡಳಿತಾವಧಿಯಲ್ಲಿ ನಿವೇಶನ ವಂಚಿತರು ಹಕ್ಕುಪತ್ರಕ್ಕಾಗಿ ಕಣ್ಣೀರು ಹಾಕಿಕೊಂಡು ಬೇಡಿದರೂ ನಡೆಯದಿದ್ದ ಕಾರ್ಯವನ್ನು ಕೇವಲ ಐದೇ ವರ್ಷದೊಳಗೆ ಸಾಧಿಸಿದ ಜನಪರ ನಾಯಕ ಉಮಾನಾಥ್ ಕೋಟ್ಯಾನ್.

ಈ ಬಾರಿಯೂ ಈ ಕ್ಷೇತ್ರಕ್ಕೆ ಸಂಬಂಧಿಸಿದ ಹಾಗೆ ಬಿಜೆಪಿ ಉಮಾನಾಥ ಕೋಟ್ಯಾನ್ ಅವರಿಗೆಯೇ ಟಿಕೆಟ್ ನೀಡಿ, ಚುನಾವಣೆಗೆ ಮತ್ತೊಮ್ಮೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ದುರಾಡಳಿತಕ್ಕೆ ಬೇಸತ್ತಿದ್ದ ಮತದಾರರು ಉಮಾನಾಥ್ ಕೋಟ್ಯಾನ್ ಅವರಿಗೆ ಮತ ನೀಡುವ ಮೂಲಕ ಅವರಿಗೆ ಸೇವೆ ಮಾಡುವ ಅವಕಾಶವನ್ನು ನೀಡಿತ್ತು. ಈ ಬಾರಿ ಉಮಾನಾಥ್ ಕೋಟ್ಯಾನ್ ಅವರು ತಮ್ಮ ಹಿಂದಿನ ಆಡಳಿತದ ಅವಧಿಯಲ್ಲಿ ನಡೆಸಿದ ಸಾಲು ಸಾಲು ಜನಸ್ನೇಹಿ ಅಭಿವೃದ್ಧಿಗಳ ಪಟ್ಟಿಯೇ ಮತದಾರರ ಮುಂದಿದೆ.

ವಿದ್ಯಾ ಕಾಶಿ, ಜೈನ ಕಾಶಿ ಎಂದೇ ಪ್ರಖ್ಯಾತಿ ಪಡೆದ ಕ್ಷೇತ್ರ ಮೂಲ್ಕಿ – ಮೂಡಬಿದ್ರೆ. ಇಲ್ಲಿನ ಕಡಲಕೆರೆ ಸೇರಿದಂತೆ ಹಲವಾರು ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಯಲ್ಲಿಯೂ ಕೋಟ್ಯಾನರದ್ದು ಸಿಂಹಪಾಲಿದೆ. ಈ ಚುನಾವಣೆಯಲ್ಲಿ ಕೋಟ್ಯಾನರ ಅಭಿವೃದ್ಧಿ ಕಾರ್ಯಗಳಿಗೆ ಜನತೆ ಮಣೆ ಹಾಕುತ್ತಾರಾ ಅಥವಾ ವಿರೋಧಿಗಳ ಅಪಪ್ರಚಾರ ಜನರ ಹಾದಿ ತಪ್ಪಿಸಬಹುದಾ ಎನ್ನುವ ಕುತೂಹಲವು ಎಲ್ಲರದ್ದು. ಹೀಗಿರುವಾಗ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಈ ಕ್ಷೇತ್ರದಲ್ಲಿ ಯಾರಿಗೆ ಮಣೆ ಹಾಕುತ್ತಾರೆ. ಯಾವೆಲ್ಲಾ ಅಂಶಗಳು ಈ ಬಾರಿಯ ಮತದಾನಕ್ಕೆ ಪೂರಕವಾಗಬಹುದು. ಈ ಬಾರಿಯೂ ಜನತೆ ಉಮಾ ನಾಥ್ ಕೋಟ್ಯಾನ್ ಅವರಿಗೆ ಜೈ ಎನ್ನುತ್ತಾರಾ? ಎಂಬುದನ್ನು ಕಾದು ನೋಡಬೇಕಿದೆ.

Tags

Related Articles

Close