ಪ್ರಚಲಿತ

ಕಾಂಗ್ರೆಸ್‌ ವೇದಿಕೆಯಲ್ಲಿ ಮುಸ್ಲಿಂ ಮಹಿಳೆ ಕಿಕ್ ಔಟ್: ಏನಿದು ಹೊಸ ಡ್ರಾಮಾ?

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಕೆಲ ದಿನಗಳ ಹಿಂದಷ್ಟೇ ನಡೆಸಿದ ‘ನಾ ನಾಯಕಿ’ ಹೆಸರಿನ ಮಹಿಳಾ ಸಮಾವೇಶ ಎಲ್ಲರಿಗೂ ನೆನಪಿರಬಹುದು. ಮಹಿಳಾ ಕೇಂದ್ರಿತವಾಗಿ ಕಾಂಗ್ರೆಸ್ ಈ ಸಮಾವೇಶ ನಡೆಸಿದ್ದು, ಇದರಲ್ಲಿ ಮಹಿಳೆಯೊಬ್ಬರಿಗೆ ಅವಮಾನಿಸಲಾಗಿದೆ. ಮಹಿಳೆ ಮುಸ್ಲಿಂ ಎಂಬ ಕಾರಣಕ್ಕೆ ಅವರನ್ನು ವೇದಿಕೆ ಏರಲು ಬಿಡಲಿಲ್ಲ ಎನ್ನುವ ಗಂಭೀರ ಆರೋಪವನ್ನು ಸಹ ಅವರು ಮಾಡಿದ್ದಾರೆ.

ಈ ಸಮಾವೇಶದಲ್ಲಿ ತಮಗಾದ ಅನ್ಯಾಯದ ಬಗ್ಗೆ ಸ್ವತಃ ಮಾಜಿ ಸಚಿವೆ ನಫೀಸಾ ಫಸಲ್ ಅವರೇ ಮಾತನಾಡಿದ್ದು, ಕಾರ್ಯಕ್ರಮದಲ್ಲಿ ತಾವು ವೇದಿಕೆ ಏರಲು ಹೋದಾಗ ಕಾಂಗ್ರೆಸ್ ನಾಯಕರು ಮತ್ತು ಪೊಲೀಸ್ ಕಾರ್ಯಕರ್ತರು ತಮ್ಮ ಮೇಲೆ ಹಲ್ಲೆ ನಡೆಸಿ, ವೇದಿಕೆಯಿಂದ ಕೆಳಗೆ ಎಳೆದುಕೊಂಡು ಬಂದಿರುವುದಾಗಿ ಆರೋಪಿಸಿದ್ದಾರೆ. ತಮ್ಮ ಜೊತೆ ಕಾಂಗ್ರೆಸ್ ನಾಯಕರು ಮತ್ತು ಪೊಲೀಸರು ತೋರಿರುವ ಅನುಚಿತ ವರ್ತನೆ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಗಮನಕ್ಕೂ ತರಲಿರುವುದಾಗಿ ಫಸಲ್ ಹೇಳಿದ್ದು, ಆ ಮೂಲಕ ಕಾಂಗ್ರೆಸ್ ಪಕ್ಷದಿಂದ ತಮಗಾದ ಅನ್ಯಾಯ, ಅವಮಾನದ ವಿರುದ್ಧ ಆಕ್ರೋಶ ಹೊರಗಾಕಿದ್ದಾರೆ.

ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ಸಿನ ಮಾಜಿ ಸಚಿವೆಯರ ಜೊತೆಗೆ ತಾನೂ ಸಹ ವೇದಿಕೆಯಲ್ಲಿ ಕುಳಿತುಕೊಳ್ಳಲು ತೆರಳಿದ್ದು, ಈ ಸಂದರ್ಭದಲ್ಲಿ ತಮ್ಮನ್ನು ವೇದಿಕೆಯಿಂದ ಕೆಳಗಿಳಿಸುವ ಮೂಲಕ ಅವಮಾನ ಮಾಡಿದ್ದಾರೆ. ತಮಗೆ ಸಾಮಾನ್ಯ ಪಾಸ್ ನೀಡಿದ್ದು, ಎಲ್ಲರಿಗೂ ಇದೇ ಪಾಸ್ ನೀಡಲಾಗಿದೆ ಎನ್ನುವ ಮಾಹಿತಿ ದೊರೆತ ಕಾರಣ ನಾನು ವೇದಿಕೆಯಲ್ಲಿ ಕುಳಿತುಕೊಳ್ಳಲು ತೆರಳಿದ್ದೆ. ಆದರೆ ಅದಕ್ಕಾಗಿ ವಿಶೇಷ ಪಾಸ್ ನೀಡಿರುವ ಬಗ್ಗೆ ನನಗೆ ಬಳಿಕವಷ್ಟೇ ತಿಳಿಯಿತು. ಹೀಗೆ ಎಂದು ಮೊದಲೇ ತಿಳಿದಿದ್ದರೆ ತಾನು ವೇದಿಕೆ ಹತ್ತುತ್ತಲೇ ಇರಲಿಲ್ಲ ಎಂದು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

ಹಾಗೆಯೇ ನಾನು ಬಿಜೆಪಿ ಪಕ್ಷ ಸೇರಿರುವ ಬಗ್ಗೆ ಪಕ್ಷದಲ್ಲಿ ಊಹಾಪೋಹಗಳು ಹರಿದಾಡುತ್ತಿವೆ. ಆದರೆ ಇವೆಲ್ಲ ಸುಳ್ಳು. ನಾನು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆದಿದ್ದೇನೆ ಎಂದು ಹೇಳಿದ್ದಾರೆ. ಹಾಗೆಯೇ ಕಾಂಗ್ರೆಸ್ ಪಕ್ಷದ ಎಲ್ಲಾ ಮಾಜಿ ಮಹಿಳಾ ಮಂತ್ರಿಗಳೂ ವೇದಿಕೆಯಲ್ಲಿದ್ದರು. ಆದರೆ ನನ್ನನ್ನು ಮಾತ್ರ ಕೈ ಬಿಡಲಾಗಿದೆ. ನನ್ನನ್ನು ಏಕೆ ಹೊರಗಿಡಲಾಗಿದೆ?, ಏಕೆಂದರೆ ನಾನು ಮುಸ್ಲಿಂ ಎಂಬ ಕಾರಣಕ್ಕಾಗಿಯೇ? ಎಂದು ಅವರು ಪ್ರಶ್ನಿಸಿದ್ದಾರೆ. ಈ ಬಗ್ಗೆ ಅವರು ಬೆಂಗಳೂರು ಪೊಲೀಸ್ ಕಮಿಷನರ್‌ಗೂ ಪತ್ರ ಬರೆದಿದ್ದು ತಮ್ಮನ್ನು ಹಿಂಸಿಸಿ ಎಳೆದೊಯ್ಯಲು ಆದೇಶ ನೀಡಿದವರ್ಯಾರು ಎಂದು ಕೇಳಿದ್ದಾರೆ. ನನಗೆ ಅನಾರೋಗ್ಯ ಇದ್ದು ನನ್ನನ್ನು ಹಿಂಸಿಸಬೇಡಿ ಎಂದು ಬೇಡಿಕೊಂಡೆ. ಹಿರಿಯ ನಾಗರಿಕರ ಜೊತೆಗೆ ನಡೆದುಕೊಳ್ಳುವ ವರ್ತನೆ ಇದಲ್ಲ ಎಂದು ಅವರು ಕಾಂಗ್ರೆಸ್ ‌ಗೆ ತಿಳಿಸಿದ್ದಾರೆ.

ಒಟ್ಟಿನಲ್ಲಿ ಮಹಿಳೆಯರನ್ನು ನಾಯಕಿ ಮಾಡಲು ಹೊರಟ ಸಮಾರಂಭದಲ್ಲಿ ಹಿರಿಯ ಮಹಿಳಾ ನಾಗರಿಕರೊಬ್ಬರಿಗೆ, ಅದರಲ್ಲೂ ಮುಸ್ಲಿಂ ಮಹಿಳೆಗೆ ಅವಮಾನ ಎಸಗಿರುವ ಕಾಂಗ್ರೆಸ್ ಪಕ್ಷದ ನಾಯಕರು, ಸಾಮಾನ್ಯ ಮಹಿಳೆಗೆ ನ್ಯಾಯ ಒದಗಿಸಲು ಸಾಧ್ಯವೇ ಎಂಬ ಪ್ರಶ್ನೆ ಈಗ ಸಾರ್ವಜನಿಕರದ್ದು.

Tags

Related Articles

Close