ಕೆಲ ದಿನಗಳ ಹಿಂದಷ್ಟೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ರಾಜಧಾನಿ ದೆಹಲಿಯಲ್ಲಿರುವ ‘ನೆಹರೂ ಸ್ಮಾರಕ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯ’ ಸಂಸ್ಥೆಯನ್ನು ಮರುನಾಮಕರಣ ಮಾಡಿ ‘ಪ್ರಧಾನ ಮಂತ್ರಿಗಳ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯ ಸಂಸ್ಥೆ’ ಎಂದು ಮರು ನಾಮಕರಣ ಮಾಡಲು ಮುಂದಾಗಿತ್ತು. ಈ ಸಂಬಂಧ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೂ ಪ್ರಸ್ತಾವನೆ ಸಲ್ಲಿಸಿತ್ತು.
ಕೇಂದ್ರ ಸರ್ಕಾರದ ಈ ಪ್ರಸ್ತಾಪವನ್ನು ಅಂಗೀಕರಿಸಿ ಈಗ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಸ್ತಾವನೆಗೆ ಹಸ್ತಾಕ್ಷರ ಹಾಕುವ ಮೂಲಕ ಹೆಸರು ಬದಲಾವಣೆಗೆ ಸಮ್ಮತಿ ಸೂಚಿಸಿದ್ದಾರೆ. ಆ ಮೂಲಕ ದೆಹಲಿಯ ತೀನ್ ಮೂರ್ತಿ ಭವನದ ಆವರಣದಲ್ಲಿರುವ ನೆಹರೂ ಸ್ಮಾರಕ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯ ಸಂಸ್ಥೆ ಇನ್ನು ಮುಂದೆ ‘ಪ್ರಧಾನ ಮಂತ್ರಿ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯ ಸಂಸ್ಥೆ’ ಎಂಬ ಹೆಸರಿನಲ್ಲಿ ಕಾರ್ಯ ನಿರ್ವಹಿಸಲಿದೆ. ಈ ಬಗ್ಗೆ ರಾಷ್ಟ್ರಪತಿ ಭವನ ಗೆಜೆಟ್ ಅಧಿಸೂಚನೆಯನ್ನು ಹೊರಡಿಸಿರುವುದಾಗಿಯೂ ಮೂಲಗಳು ತಿಳಿಸಿವೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈ ಅಧಿಸೂಚನೆಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರದ ಪ್ರಸ್ತಾವನೆಗೆ ಅಧಿಕೃತವಾಗಿ ಅಂಕಿತ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಇನ್ನು ಮುಂದಿನ ದಿನಗಳಲ್ಲಿ ದೆಹಲಿಯ ನೆಹರೂ ಮ್ಯೂಸಿಯಂ ‘ಪ್ರಧಾನ ಮಂತ್ರಿ ಮ್ಯೂಸಿಯಂ’ ಎಂಬುದಾಗಿ ಕಂಗೊಳಿಸಲಿದೆ. ಪ್ರಧಾನ ಮಂತ್ರಿ ಮ್ಯೂಸಿಯಂ ಎಂಬ ಹೆಸರಿನಲ್ಲಿಯೇ ಸೇವೆಗಳನ್ನು ಒದಗಿಸಲಿದೆ. ಕೆಲ ಸಮಯದ ಹಿಂದಷ್ಟೇ ಈ ಮ್ಯೂಸಿಯಂ ಹೆಸರು ಬದಲಾವಣೆಗೆ ಸಂಬಂಧಿಸಿದ ಹಾಗೆ ಕೇಂದ್ರ ಸರ್ಕಾರ ನಿರ್ಣಯವನ್ನು ಕೈಗೊಂಡಿತ್ತು.
ಈ ಮರುನಾಮಕರಣವು ಆಗಸ್ಟ್ 14 ರಿಂದಲೇ ಜಾರಿಗೆ ಬಂದಿರುವುದಾಗಿದೆ. ಕೇಂದ್ರದ ಪ್ರಧಾನಿ ಮೋದಿ ಸರ್ಕಾರವು ಆಗಸ್ಟ್ ಹದಿನಾಲ್ಕರಂದು ನೆಹರೂ ಸ್ಮಾರಕ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯ ಸಂಸ್ಥೆಗೆ ‘ಪ್ರಧಾನಮಂತ್ರಿ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯ ಸಂಸ್ಥೆ’ ಎಂದು ಹೆಸರು ಬದಲಾಯಿಸಿ ಆಜ್ಞೆ ಹೊರಡಿಸಿತ್ತು. ಈ ಬದಲಾವಣೆಯನ್ನು ಪ್ರಜಾಪ್ರಭುತ್ವೀಕರಣ ಮತ್ತು ವೈವಿದ್ಯೀಕರಣಕ್ಕೆ ಅನುಗುಣವಾಗಿ ಮಾಡಲಾಗಿದೆ ಎಂಬುದಾಗಿಯೂ ಕೇಂದ್ರ ಸರ್ಕಾರದ ಮೂಲಗಳು ತಿಳಿಸಿದ್ದವು.
ಕೇಂದ್ರ ಸರ್ಕಾರದ ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ಅವರ ನೇತೃತ್ವದಲ್ಲಿ ಜೂನ್ ಹದಿನೇಳರಂದು ನಡೆದ ಸಭೆಯಲ್ಲಿ ಹೆಸರು ಬದಲಾವಣೆಗೆ ಸಂಬಂಧಿಸಿದ ಹಾಗೆ ಚರ್ಚೆ ನಡೆಸಿ ನಿರ್ಣಯ ಕೈಗೊಳ್ಳಲಾಗಿತ್ತು.
ತೀನ್ ಮೂರ್ತಿ ಭವನವು ದೇಶದ ಮೊದಲ ಪ್ರಧಾನಿ ನೆಹರೂ ಅವರ ಅಧಿಕೃತ ನಿವಾಸವಾಗಿತ್ತು. ಸುಮಾರು ಹದಿನಾರು ವರ್ಷಗಳಿಗೂ ಅಧಿಕ ಕಾಲ ಈ ನಿವಾಸದಲ್ಲಿ ಅವರು ವಾಸವಿದ್ದರು. ಅವರ 75 ನೇ ಜನ್ಮದಿನದ ಸಂದರ್ಭದಲ್ಲಿ ಈ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯ ಸಂಸ್ಥೆಯನ್ನು ನೆಹರೂ ಹೆಸರಿನಲ್ಲಿ ಸ್ಥಾಪನೆ ಮಾಡಲಾಗಿತ್ತು. ಆ ಬಳಿಕ ಇದಕ್ಕೆ ಸ್ವಾಯತ್ತ ಸ್ಥಾನ ಮಾನ ನೀಡಲಾಗಿತ್ತು. ಈ ಮ್ಯೂಸಿಯಂಗೆ ಈಗ ಬೇರೆ ಹೆಸರಿಟ್ಟು ಕೇಂದ್ರ ಸರ್ಕಾರ ಮರುನಾಮಕರಣ ಮಾಡಿದೆ.