ಪ್ರಚಲಿತ

ಜಪಾನಿನ ಬಸ್ ಚಾಲಕರ ಪ್ರತಿಭಟನೆಯ ಪರಿಗೆ ದಂಗಾದ ವಿಶ್ವ!! ಪ್ರಯಾಣಿಕರಿಗೆ ಉಚಿತ ಪ್ರವಾಸ ನೀಡಿ ಪ್ರತಿಭಟನೆಯ ಸಮಯದಲ್ಲೂ ಕಾರ್ಯತತ್ಪರತೆ ಮೆರೆದ ಚಾಲಕರು!!

ಪ್ರತಿಭಟನೆಯ ಸಮಯದಲ್ಲೂ ಕಾರ್ಯನಿರತರಾಗಿರುವವರ ಬಗ್ಗೆ ಎಲ್ಲಿಯಾದರೂ ಕೇಳಿದ್ದೀರಾ? ಈಗ ಕೇಳಿ. “ಕರ್ತವ್ಯವೆ ದೇವರು” ಎನ್ನುವುದನ್ನು ಅಕ್ಷರಶ ಪಾಲಿಸುವ ದೇಶ ಜಪಾನ್. ಒಂದರೆಘಳಿಗೆಯೂ ಸುಮ್ಮನೆ ಕೂರದ ಜಪಾನಿಗರು ತಮ್ಮ ಕಾರ್ಯತತ್ಪರತೆಗೆ ವಿಶ್ವದಲ್ಲೆ ಪ್ರಸಿದ್ದಿ ಪಡೆದಿದ್ದಾರೆ. ಅಂತಹ ಜಪಾನಿನಲ್ಲಿ ಪ್ರತಿಭಟನೆಗಳು ನಡೆಯುವುದು ವಿರಳ. ಆದರೆ ಈ ಬಾರಿ ಬಸ್ ಚಾಲಕರು ತಮ್ಮ ಬೇಡಿಕೆ ಈಡೇರಿಸುವ ಸಲುವಾಗಿ ಪ್ರತಿಭಟನೆ ಕೈಗೊಂಡರು. ತಮ್ಮ ಪ್ರತಿಭಟನೆಯಿಂದ ಜನಜೀವನ ಅಸ್ತವ್ಯಸ್ತವಾಗಕೂಡದೆಂದು ಪ್ರತಿಭಟನೆಯ ದಿನವೂ ಕರ್ತವ್ಯಕ್ಕೆ ಹಾಜರಾದರು ಮಾತ್ರವಲ್ಲ, ಪ್ರಯಾಣಿಕರಿಂದ ಹಣವನ್ನೆ ತೆಗೆದುಕೊಳ್ಳದೆ ಉಚಿತ ಪ್ರಯಾಣವನ್ನೂ ನೀಡಿದರು!! ಪ್ರತಿಭಟನೆಯ ಸಮಯದಲ್ಲೂ ಕರ್ತವ್ಯ ಪರಾಯಣತೆ ಮೆರೆದ ಜಪಾನಿಗರ ಬಗ್ಗೆ ವಿಶ್ವವೆ ಮೆಚ್ಚುಗೆ ವ್ಯಕ್ತ ಪಡಿಸುತ್ತಿದೆ.

ರೈಯೋಬಿ ಗ್ರೂಪ್ ಕಂಪನಿಯ ಬಸ್ ಚಾಲಕರು ತಾವು ನಿತ್ಯ ಚಲಾಯಿಸುವ ಮಾರ್ಗದಲ್ಲಿ ಮೆಗ್ರಿನ್ ಎನ್ನುವ ವಿರೋಧಿ ಬಸ್ ಕಂಪನಿಗಳು ತಮ್ಮದೆ ಸಮಯದಲ್ಲಿ ತಮಗಿಂತಲೂ ಕಡಿಮೆ ದರದಲ್ಲಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿರುವುದರ ವಿರುದ್ದ ಪ್ರತಿಭಟನೆ ನಡೆಸಿದರು. ಬೆದರಿಕೆಗೆ ಒಳಗಾಗಿ ಮತ್ತು ಹೆಚ್ಚುವರಿ ಸ್ಪರ್ಧೆಯ ಅಡಿಯಲ್ಲಿ ಅವರ ಉದ್ಯೋಗ ಸುರಕ್ಷತೆಯ ಸುಧಾರಣೆಗಾಗಿ ನಿರ್ವಹಣೆ ಕೇಳುತ್ತಾ ರೈಯೋಬಿ ಚಾಲಕರು ಬೀದಿಗಿಳಿದರು.

ಆದರೆ ಭಾರತದಲ್ಲಾಗುವಂತೆ ಕರ್ತವ್ಯಕ್ಕೆ ಗೈರು ಹಾಜರಾಗುವುದು, ಸಾರ್ವಜನಿಕ ಆಸ್ತಿ ಪಾಸ್ತಿಗಳನ್ನು ನಷ್ಟ ಮಾಡುವುದು, ಬಸ್, ಕಾರು ಹಾಗೂ ಇತರರ ವಾಹನಗಳ ಮೇಲೆ ಕಲ್ಲು ತೂರುವುದು, ಅಂಗಡಿ ಮುಂಗಟ್ಟುಗಳನ್ನು ಪುಡಿಗಟ್ಟುವುದು, ಊರಿಗೇ ಬೆಂಕಿ ಹಚ್ಚಿ ಬಿಡುವುದು, ತರಕಾರಿ, ಹಾಲು ಮತ್ತು ಹಣ್ಣು ಹಂಪಲುಗಳನ್ನು ರಸ್ತೆಗೆಸೆಯುವುದು ಇದ್ಯಾವುದನ್ನೂ ಆ ಚಾಲಕರು ಮಾಡಲೆ ಇಲ್ಲ!! ನಮ್ಮಲ್ಲಿ ಪ್ರತಿಭಟನೆ ಎಂದರೆ ಈ ದೃಶ್ಯಗಳು ಸರ್ವೆ ಸಾಮಾನ್ಯ. ಒಂದೆರಡು ಗಲಭೆ, ನಾಲ್ಕೈದು ಗೋಲೀಬಾರ್, ಹತ್ತು ಹನ್ನೆರಡು ಲಾಠೀ ಚಾರ್ಜ್ ಮತ್ತು ಜನರ ಹೆಣ ಬೀಳದಿದ್ದರೆ ನಮ್ಮಲ್ಲಿ ಪ್ರತಿಭಟನೆ ರಂಗೇರುವುದೇ ಇಲ್ಲ.

ಸಾರ್ವಜನಿಕ ಆಸ್ತಿ ಪಾಸ್ತಿಗೆ ಹಾನಿ ಮಾಡುವಾಗ, ಅಲ್ಲಿ ನಮ್ಮದೆ ತೆರಿಗೆಯ ಹಣ ಪೋಲಾಗುವುದೆನ್ನುವ ಪರಿವೆಯೆ ನಮ್ಮ ಜನರಿಗಿರುವುದಿಲ್ಲ. ಪ್ರತಿಭಟನೆಯ ಹೆಸರಿನಲ್ಲಿ ತಿನ್ನುವ ವಸ್ತುಗಳನ್ನು ರಸ್ತೆಗೆ ಎಸೆಯುವಾಗ ಅದರಿಂದ ಎಷ್ಟೋ ಬಡ ಜನರ ಹೊಟ್ಟೆ ತುಂಬುತ್ತಿತ್ತು ಎನ್ನುವ ಪರಿಜ್ಞಾನ ಕೂಡಾ ಇರುವುದಿಲ್ಲ. ನಮ್ಮ ಪ್ರತಿಭಟನೆಗೂ ಜಪಾನಿನ ಪ್ರತಿಭಟನೆಗೂ ಎಷ್ಟು ಅಂತರ!! ಇಲ್ಲಿ ಬಂದ್ ಆಚರಿಸುವುದು ಸರ್ವೆ ಸಾಮಾನ್ಯ. ತಿಂಗಳಿಗೊಂದರಂತೆ ನಡೆಯುವ ಈ ಬಂದ್ ಗಳಿಂದ ಜನಜೀವನ ಅಸ್ತವ್ಯಸ್ತವಾಗುತ್ತದೆ, ದೇಶದ ಬೊಕ್ಕಸಕ್ಕೆ ಎಷ್ಟು ಕೋಟಿ ರುಪಾಯಿ ನಷ್ಟವಾಗುತ್ತದೆ ಎಂದು ಯಾರೂ ಯೋಚಿಸುವುದಿಲ್ಲ. ಆದರೆ ಜಪಾನ್ ಹಾಗಲ್ಲ, ತಮ್ಮಿಂದಾಗಿ ಜನರ ದಿನ ನಿತ್ಯದ ಕಾರ್ಯಕ್ರಮಗಳಲ್ಲಿ ವ್ಯತ್ಯಾಸ ಆಗಬಾರದೆಂದು ಪ್ರತಿಭಟನೆ ನಡೆಸುತ್ತಲೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ!!

ಜಪಾನಿನ ಚಾಲಕರು ಬೇಡಿಕೆ ಇಟ್ಟಿದ್ದು ಕಂಪನಿಯ ನಿರ್ವಹಣಾ ಮಂಡಳಿಯ ಮುಂದೆ. ನಿರ್ವಹಣಾ ಮಂಡಳಿ ತಮ್ಮನ್ನು ಜನರ ಮುಂದೆ ಅಪರಾಧಿಗಳಂತೆ ಬಿಂಬಿಸಿ ಅವರ ವೇತನವನ್ನು ತಡೆಗಟ್ಟಬಹುದೆಂಬ ಅನುಮಾನದಿಂದ ಕರ್ತವ್ಯಕ್ಕೆ ಹಾಜರಾದ ಚಾಲಕರು ಪ್ರಯಾಣಿಕರಿಂದ ಕವಡೆ ಕಾಸೂ ತೆಗೆದುಕೊಂಡಿಲ್ಲ. ಇದರಿಂದ ಕಂಪನಿಯ ಆದಾಯಕ್ಕೆ ಕೊಕ್ ಬೀಳುತ್ತದೆ ಮತ್ತು ಚಾಲಕರ ಬೇಡಿಕೆ ಈಡೇರಿಸಲೆ ಬೇಕಾಗುತ್ತದೆ!! ಎಂತಹ ಉಪಾಯ ಚಾಲಕರದ್ದು. ನಮ್ಮಲ್ಲಿ ಬಸ್ ಪ್ರಯಾಣಿಸುವ ಸಮಯದಲ್ಲಿ ಒಂದು ಸೆಕುಂಡಿನಷ್ಟು ವ್ಯತ್ಯಾಸವಾದರೂ ಮಾರಾಮಾರಿ ಏರ್ಪಡುತ್ತದೆ. ಬಸ್ ಚಾಲಕರು ಕೈ ಕೈ ಮಿಲಾಯಿಸಿ ರಸ್ತೆ ಬದಿಯಲ್ಲಿ ಜಗಳಗಳು ಶುರುವಾಗುತ್ತವೆ. ಆದರೆ ಅಲ್ಲಿ ಅಂಥದ್ದೇನೂ ನಡೆಯಲಿಲ್ಲ.

ಭಾರತ ಮತ್ತು ಭಾರತದ ನಾಗರಿಕರು ಜಪಾನ್ ನಂತಹ ಪುಟ್ಟ ದೇಶದಿಂದ ಕಲಿಯುವುದು ಬೇಕಾದಷ್ಟಿದೆ. ಜನರ ಜೀವನದ ಜೊತೆ ಚೆಲ್ಲಾಟವಾಡುವ ಪ್ರತಿಭಟನೆ ಮಾಡುವ ಪಕ್ಷಗಳ “ಪ್ರಾಯೋಜಿತ ಪ್ರತಿಭಟನಾಕಾರರು” ಜಪಾನಿನ ಬಸ್ ಚಾಲಕರನ್ನು ನೋಡಿ ಕಲಿಯಬೇಕು. ನಮ್ಮದೆ ದೇಶದ ಮಹಾರಾಷ್ಟ್ರದಲ್ಲಿ ಕೆಲವು ತಿಂಗಳುಗಳ ಹಿಂದೆ ಕೃಷಿಕರು ಮೈಲುಗಟ್ಟಲೆ ನಡೆದು ಯಾರಿಗೂ ತೊಂದರೆಯಾಗದಂತೆ ಪ್ರತಿಭಟನೆ ನಡೆಸಿರುವುದು ನೆನಪಿರಬಹುದು. ದೇಶದ ಅನ್ನದಾತ ಮತ್ತು ಜಪಾನಿನ ಬಸ್ ಚಾಲಕರಂತವರು ನಮಗೆ ಮಾದರಿಯಾಗಬೇಕು ಹೊರತು ಪ್ರತಿಭಟನೆಯ ಹೆಸರಲ್ಲಿ ದಂಗೆ ಎಬ್ಬಿಸುವವರಲ್ಲ.

-ಶಾರ್ವರಿ

Tags

Related Articles

Close