ಪ್ರಚಲಿತ

ಪ್ರಧಾನಿ ಮೋದಿ ಅವರು ಹಳೆಯ ಸಂಸತ್ ಭವನ ನಮಗೆ ಪ್ರೇರಣೆ ಎಂದಿದ್ದೇಕೆ ಗೊತ್ತಾ?

ಭಾರತೀಯರು ಮೆರೆಯುತ್ತಿರುವ ಸಾಧನೆಗಳು ಇಡೀ ವಿಶ್ವದಲ್ಲಿಯೇ ಸದ್ದು ಮಾಡುತ್ತಿದೆ. ಭಾರತೀಯರ ಸಾಧನೆ ಬಗ್ಗೆ ಪ್ರಪಂಚವೇ ಚರ್ಚಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ಲೋಕಸಭಾ ವಿಶೇಷ ಅಧಿವೇಶನದಲ್ಲಿ ‘ಸಂವಿಧಾನ ಸಭೆಯಿಂದ ಆರಂಭವಾದ ಎಪ್ಪತೈದು ವರ್ಷಗಳ ಸಂಸತ್ತಿನ ಪಯಣ, ಸಾಧನೆಗಳು, ಅನುಭವಗಳು, ನೆನಪುಗಳು ಮತ್ತು ಕಲಿಕೆ’ ಕುರಿತಂತೆ ಚರ್ಚೆ ನಡೆಸಿದ ಅವರು, ದೇಶದ ಸಂಸತ್ತಿನ ಎಪ್ಪತೈದು ವರ್ಷಗಳ ಇತಿಹಾಸದಲ್ಲಿ ಭಾರತದ ಬಗ್ಗೆ ಜಗತ್ತು ಚರ್ಚೆ ನಡೆಸುತ್ತಿರುವುದು ಭಾರತೀಯರ ಒಗ್ಗಟ್ಟಿನ ಫಲವಾಗಿದೆ ಎಂದು ಅವರು ತಿಳಿಸಿದ್ದಾರೆ.

ನಮ್ಮ ದೇಶದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ನಡೆಸಿದ ಚಂದ್ರಯಾನ-3 ಸಾಧನೆಯು ಕೇವಲ ಭಾರತ ಮಾತ್ರವಲ್ಲ ಇಡೀ ವಿಶ್ವವೇ ಸಂಭ್ರಮ ಪಡುವುದಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ. ವಿಜ್ಞಾನ, ತಂತ್ರಜ್ಞಾನ ಇವುಗಳ ಜೊತೆಗೆ ನಮ್ಮ ವಿಜ್ಞಾನಿಗಳ ಸಾಮರ್ಥ್ಯ ಮತ್ತು 140 ಕೋಟಿ ಭಾರತೀಯರ ಸಂಪರ್ಕ ಹೊಂದಿದ ಭಾರತೀಯ ಶಕ್ತಿಯ ಹೊಸ ರೂಪವನ್ನು ಚಂದ್ರಯಾನ -3 ಎತ್ತಿ ತೋರಿಸಿದೆ ಎಂದು ಹೇಳಿದ್ದಾರೆ.

ಇಂದಿನಿಂದ ಸಂಸತ್ತು ಹೊಸ ಕಟ್ಟಡಕ್ಕೆ ಸ್ಥಳಾಂತರ ಆಗಲಿದೆ. ಈ ಸಂಬಂಧವೂ ಅಭಿಪ್ರಾಯ ವ್ಯಕ್ತ ಪಡಿಸಿ ಇರುವ ಪ್ರಧಾನಿ, ನಾವೆಲ್ಲರೂ ಐತಿಹಾಸಿಕ ಕಟ್ಟಡಕ್ಕೆ ವಿದಾಯ ಹೇಳುತ್ತಿದ್ದೇವೆ. ಸ್ವಾತಂತ್ರ್ಯ ಪೂರ್ವದಲ್ಲಿ ಈ ಸದನ ಇಂಪೀರಿಯಲ್ ಲೆಜಿಸ್ಲೇಟಿವ್ ಕೌನ್ಸಿಲ್‌ಗೆ ಸ್ಥಳವಾಗಿತ್ತು. ಆ ಬಳಿಕ ಸ್ವಾತಂತ್ರ್ಯ ದೊರೆತ ನಂತರ ಹಳೆಯ ಕಟ್ಟಡ ಸಂಸತ್ ಭವನವಾಗಿ ಮಾನ್ಯತೆ ಪಡೆಯಿತು. ಈ ಹಳೆಯ ಕಟ್ಟಡದ ನಿರ್ಮಾಣವನ್ನು ವಿದೇಶಿಗರೇ ಮಾಡಿರಬಹುದು. ಆದರೆ ಈ ಕಟ್ಟಡ ನಿರ್ಮಾಣದ ಹಿಂದೆ ಭಾರತೀಯರ ಶ್ರಮ, ಬೆವರಿನ ಅಂಶವೂ ಇದೆ ಎಂದು ಅವರು ನುಡಿದಿದ್ದಾರೆ.

ಹಳೆಯ ಸಂಸತ್ ಭವನ ನಿರ್ಮಾಣದ ಶ್ರಮ, ಹಣ ಎಲ್ಲವೂ ನನ್ನ ದೇಶವಾಸಿಗಳದ್ದು ಎಂದು ಅವರು ತಿಳಿಸಿದ್ದಾರೆ. ಈ ಕಾರಣದಿಂದಲೇ ಹಳೆಯ ಸಂಸತ್ ಭವನ ನಮ್ನೆಲ್ಲರಿಗೂ ಪ್ರೇರಣೆ ಎಂದು ಅವರು ಹೇಳಿದ್ದಾರೆ. 

ಹಾಗೆಯೇ ಕೆಲ ದಿನಗಳ ಹಿಂದೆ ರಾಷ್ಟ್ರ ರಾಜಧಾನಿಯಲ್ಲಿ ನಡೆದ ಜಿ20 ಶೃಂಗ ಸಭೆಯ ಬಗೆಗೂ ಮಾತನಾಡಿದ್ದಾರೆ. ಭಾರತದ ಸಾಧನೆಗೆ ಸಂಬಂಧಿಸಿದ ಹಾಗೆ ಎಲ್ಲಾ ಕಡೆಯಲ್ಲಿಯೂ ಚರ್ಚೆಗಳು ನಡೆಯುತ್ತಿವೆ. ಇದು ನಮ್ಮೆಲ್ಲರ ಒಗ್ಗಟ್ಟಿನ ಫಲವಾಗಿದೆ. ಹಾಗೆಯೇ ಚಂದ್ರಯಾನದಂತಹ ಮಹತ್ ಸಾಧನೆಗೆ ಶ್ರಮ ವಹಿಸಿದ ವಿಜ್ಞಾನಿಗಳನ್ನು ಸಹ ಪ್ರಧಾನಿ ಮೋದಿ ಅವರು ಇದೇ ಸಂದರ್ಭದಲ್ಲಿ ಅಭಿನಂದಿಸಿದ್ದಾರೆ.

Tags

Related Articles

Close