ಪ್ರಚಲಿತ

ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣೆಯಲ್ಲಿ ನಮ್ಮ ಹೆಮ್ಮೆಯ ಸೇನೆ

ಭಾರತೀಯ ಸೇನೆಯೇ ಹಾಗೆ. ಒಂದು ಕಡೆಯಲ್ಲಿ ದೇಶಕ್ಕೆ ಸಂಚಕಾರ ತಂದೊಡ್ಡುವ ದುಷ್ಟ ಶಕ್ತಿಗಳ ವಿರುದ್ಧ ಎದೆ ಸೆಟೆದು ತಾಕತ್ತು ತೋರುತ್ತದೆ. ಇನ್ನೊಂದು ಕಡೆಯಲ್ಲಿ ದೇಶದಲ್ಲಿ ಯಾವುದೇ ರೀತಿಯ ಪ್ರಾಕೃತಿಕ, ಮಾನವ ನಿರ್ಮಿತ ಸಮಸ್ಯೆಗಳಾಗಲಿ, ಜನರು ಸಂಕಷ್ಟಕ್ಕೆ ಸಿಲುಕಲಿ, ಅವರನ್ನು ಮಾನವೀಯ ನೆಲೆಯಲ್ಲಿ ರಕ್ಷಣೆ ಮಾಡುವ ಕೆಲಸಕ್ಕೂ ‌ಸೈ ಎಂಬಂತೆ ಆಪತ್ಬಾಂದವನಾಗಿ ದೇಶ ಸೇವೆ ಸಲ್ಲಿಸುತ್ತದೆ.

ನಮ್ಮ ಸೈನಿಕರು ಈಗ ಮತ್ತೊಂದು ಮಾನವೀಯ ಕಾರ್ಯಕ್ಕೆ ಮುಂದಾಗಿದ್ದು, ಉತ್ತರ ಕಾಶಿಯಲ್ಲಿನ ಸಿಲ್ಕ್ಯಾರಾ ಸುರಂಗ ಕುಸಿತದಿಂದಾಗಿ ಅದರೊಳಗೆ ಸಿಲುಕಿಕೊಂಡಿರುವ ನಲವತ್ತೊಂದು ಕಾರ್ಮಿಕರ ರಕ್ಷಣೆಗೆ ಧಾವಿಸಿದ್ದಾರೆ‌.

ಸುರಂಗದೊಳಗೆ ಕಳೆದ ನವೆಂಬರ್ 12 ರಿಂದ ಸಿಲುಕಿ ಒದ್ದಾಡುತ್ತಿರುವ ಕಾರ್ಮಿಕರನ್ನು ಹೊರ ತರುವುದು ಮತ್ತು ಈ ಘಟನೆಯಿಂದ ಆತಂಕಿತರಾಗಿರುವ ಅವರ ಕುಟುಂಬಗಳ ಜೊತೆಗೆ ಮತ್ತೆ ಅವರನ್ನು ಸೇರಿಸುವ ಕಾರ್ಯಕ್ಕೆ ಸೇನೆ ತೊಡಗಿದೆ. ಈಗಾಗಲೇ ಸುರಂಗದ ಬಳಿ ತಲುಪಿರುವ‌‌ ಸೇನೆ, ಪಾರಂಪರಿಕ ವಿಧಾನವನ್ನು ಅನುಸರಿಸು, ಸುರಂಗ ಕೊರೆದು, ಅದರೊಳಗೆ ಸಿಲುಕಿರುವ ‌ಕಾರ್ಮಿಕರನ್ನು ರಕ್ಷಣೆ ಮಾಡುವ ಪಣ ಕೊಟ್ಟಿದೆ.

ಸುರಂಗವನ್ನು ತಲುಪುವ ನೆಲೆಯಲ್ಲಿ ಈಗಾಗಲೇ ಲಂಬವಾಗಿ ಕೊರೆಯುವಿಕೆ ಆರಂಭವಾಗಿದೆ. ಈ ಕೆಲಸಕ್ಕೆ ಮ್ಯಾನ್ಯುಯಲ್ ಡ್ರಿಲ್ಲಿಂಗ್ ಕೆಲಸಕ್ಕೆ ಭಾರತೀಯ‌ ಸೇನೆಯ ಇಂಜಿನಿಯರ್ ಕಾರ್ಪ್ಸ್ ಸಹಾಯ ಮಾಡಲಿದೆ. ಆ ಬಳಿಕ ರ
ಕೈಯಿಂದ ಕೊರೆಯುವ ಕೆಲಸವನ್ನು ಸಹ ಭಾರತೀಯ ರಕ್ಷಣಾ ಪಡೆಗಳು ಮಾಡುವ ಮೂಲಕ ಆಪತ್ತಿನಲ್ಲಿರುವ ಕಾರ್ಮಿಕರನ್ನು ಸುರಕ್ಷಿತವಾಗಿ ಹೊರತರಲು ಪ್ರಯತ್ನ ನಡೆಸಲಿವೆ.

ಈ ಸುರಂಗದಲ್ಲಿ ಸಿಕ್ಕಿ ಹಾಕಿಕೊಂಡಿರುವ ಕಾರ್ಮಿಕರನ್ನು ತಲುಪಲು ನಿನ್ನೆಯೇ ಲಂಬ ಕೊರೆಯುವಿಕೆ ಆರಂಭವಾಗಿದೆ. ಯಾವುದೇ ಅಡಿ ತಡೆ ಇಲ್ಲದೆ ಈ ಕಾರ್ಯ ನಡೆದಲ್ಲಿ ಮುಂದಿನ ನೂರು ಗಂಟೆಗಳಲ್ಲಿ ಕಾರ್ಮಿಕರನ್ನು ಸುರಕ್ಷಿತವಾಗಿ ತಲುಪಿ, ಹೊರ ಕರೆತರುವ ವಿಶ್ವಾಸವನ್ನು ಸಹ ಸೇನೆ ನೀಡಿದೆ.

ನಮ್ಮ ಸೇನೆ ನಮ್ಮ ಹೆಮ್ಮೆ. ಆದರೆ ದೊರೆ ನಮ್ಮ ದೇಶದ ಮೇಲೆ, ಸೇನೆಯ ಮೇಲೆ ಕೀಳರಿಮೆ ಹೊಂದಿದ ನಾಲಾಯಕುಗಳು ನಮ್ಮ ನಡುವೆ ಇದ್ದಾರೆ. ಹೊಟ್ಟೆಪಾಡಿಗಾಗಿ ಸೈನ್ಯಕ್ಕೆ ಸೇರುತ್ತಾರೆ ಎನ್ನುವ ತಲೆಬುಡವಿಲ್ಲದ ವಿವಾದಾತ್ಮಕ ಹೇಳಿಕೆಗಳ ಮೂಲಕ ತಮ್ಮ ಮಾನಸಿಕತೆ ಎಷ್ಟು ಕೆಳ ಮಟ್ಟದ್ದು ಎಂದು ಸಾಬೀತು ಮಾಡಿದವರಿದ್ದಾರೆ. ಅಂತಹ ನಾಮರ್ಧರಿಗೆ ನನ್ನ ಸೈನಿಕರ ಈ ಮಾನವೀಯ ಕಾರ್ಯ ತಕ್ಕ ಉತ್ತರವಾಗಿದೆ.

ದೇಶಕ್ಕಾಗಿ ಮಿಡಿಯುವ, ದುಡಿಯುವ ಮೂಲಕ ನಮ್ಮೆಲ್ಲರ ನೆಮ್ಮದಿಯ ನಿದ್ದೆಗೆ ಕಾರಣವಾಗಿರುವ ನಮ್ಮ ಸೈನಿಕರಿಗೆ ನಾವು ಕೃತಜ್ಞರಾಗಿರಲೇಬೇಕು.

Tags

Related Articles

Close