ಪ್ರಚಲಿತ

ವಿಶ್ವದೆದುರು ಬಿಕ್ಷುಕನಾದ ಪಾಕಿಸ್ತಾನ

ಭಾರತದ ಶತ್ರು ರಾಷ್ಟ್ರ ಪಾಕಿಸ್ತಾನದ ವಿರುದ್ಧ ಪಾಕಿಸ್ತಾನಿ ಪ್ರಜೆಗಳು ಕೆಲ ಸಮಯದ ಹಿಂದೆ ಮಾತನಾಡುತ್ತಿದ್ದರು. ಇದೀಗ ಪಾಕ್‌ನ ಮಾಜಿ ಪ್ರಧಾನಿ ನವಾಜ್ ಷರೀಫ್ ಸಹ ಪಾಕಿಸ್ತಾನದ ವಿರುದ್ಧ ಹೇಳಿಕೆ ನೀಡಿದ್ದು, ಭಾರತವನ್ನು ಪ್ರಶಂಸಿಸಿದ್ದಾರೆ.

ಪಾಕಿಸ್ತಾನ ಪ್ರಪಂಚದ ಮುಂದೆ ಬಿಕ್ಷೆ ಬೇಡುವ ಸ್ಥಿತಿ ತಲುಪಿದೆ. ಆದರೆ ಭಾರತ ಚಂದ್ರನನ್ನು ತಲುಪಿದೆ ಎನ್ನುವ ಮೂಲಕ ಭಾರತದ ಸಾಧನೆಯನ್ನು ಒಪ್ಪಿಕೊಂಡಿದ್ದರೆ, ಪಾಕಿಸ್ತಾನದ ಪ್ರಸ್ತುತ ಸ್ಥಿತಿ ಗತಿ ಏನು?, ಪಾಕಿಸ್ತಾನ ಎಷ್ಟರ ಮಟ್ಟಿಗೆ ದಿವಾಳಿಯಾಗಿದೆ ಎನ್ನುವುದನ್ನು ಬಿಚ್ಚಿಟ್ಟಿದ್ದಾರೆ.

ಮುಸ್ಲಿಂ ಲೀಗ್‌ನ ಮುಖ್ಯಸ್ಥ ನವಾಜ್ ಷರೀಫ್, ಚಂದ್ರನಂಗಳಕ್ಕೆ ತಲುಪಿದ ಭಾರತದ ಈ ಸಾಧನೆಗೆ 1990 ರಲ್ಲಿ ಉದಾರೀಕರಣ, ಖಾಸಗೀಕರಣ ನಿಯಮಗಳನ್ನು ಅಳವಡಿಸಿಕೊಂಡಿರುವುದೇ ಕಾರಣ ಎಂಬುದಾಗಿಯೂ ಹೇಳಿದ್ದಾರೆ. ಆದರೆ ಸದ್ಯದ ಪಾಕಿಸ್ತಾನದ ಸ್ಥಿತಿ ಹೇಗಿದೆ ಎಂದರೆ ಆರ್ಥಿಕ ನೆರವನ್ನು ಯಾಚಿಸಿ ಪ್ರಪಂಚದ ಬೇರೆ ಬೇರೆ ರಾಷ್ಟ್ರಗಳ ಮುಂದೆ ಕೈಚಾಚುವುದಾಗಿದೆ. ಆದರೆ ಭಾರತ ಚಂದ್ರನನ್ನೇ ತಲುಪಿದೆ. ಜೊತೆಗೆ ಜಿ20 ಶೃಂಗಸಭೆಯನ್ನು ಆಯೋಜಿಸಿದೆ ಎನ್ನುವ ಮೂಲಕ ಭಾರತ ಮತ್ತು ಪಾಕ್‌ನ ಅಂತರವನ್ನು ಜಗತ್ತಿನೆದುರು ಬಿಚ್ಚಿಟ್ಟಿದ್ದಾರೆ.

ಪಾಕಿಸ್ತಾನ ಸದ್ಯ ಎದುರಿಸುತ್ತಿರುವ ಈ ದುರಂತ ಸ್ಥಿತಿಗೆ ಯಾರು ಕಾರಣ ಎಂಬುದನ್ನು ತಿಳಿದುಕೊಳ್ಳಬೇಕಾಗಿದೆ. ಹಾಗೆಯೇ ಭಾರತದ ಅಭಿವೃದ್ಧಿ ಬಗೆಗೂ ಮಾತನಾಡಿರುವ ಅವರು, ಹಿಂದೆ ಭಾರತದ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಸಮಯದಲ್ಲಿ ಭಾರತದ ಬಜೆಟ್ ಒಂದು ಬಿಲಿಯನ್ ಡಾಲರ್ ಆಗಿತ್ತು. ಆದರೆ ಪ್ರಸ್ತುತ ಭಾರತದ ವಿದೇಶಿ ವ್ಯವಹಾರ 600 ದಶಲಕ್ಷ ಡಾಲರ್‌ಗೆ ಏರಿದೆ ಎಂದು ಬಣ್ಣಿಸುವ ಮೂಲಕ ಪಾಕಿಸ್ತಾನಕ್ಕೆ ಮುಖಭಂಗವಾಗುವಂತೆ ಮಾತನಾಡಿದ್ದಾರೆ.

ಪಾಕಿಸ್ತಾನದ ಇಂದಿನ ಈ ಪರಿಸ್ಥಿತಿಗೆ ಅಲ್ಲಿನ ಮಾಜಿ ಜನರಲ್‌ಗಳು, ನ್ಯಾಖಾಧೀಶರನ್ನು ಅವರು ದೂಷಿಸಿದ್ದಾರೆ. ಹಲವು ತಿಂಗಳುಗಳಿಂದ ಪಾಕಿಸ್ತಾನ ಆರ್ಥಿಕ ಬಿಕ್ಕಟ್ಟು ಅನುಭವಿಸುತ್ತಿದೆ. ಗಗನಮುಖಿಯಾಗುತ್ತಿರುವ ಹಣದುಬ್ಬರ, ಇಂಧನ ಬೆಲೆ ಏರಿಕೆ, ಇಂಧನದ ಕೊರತೆಯಿಂದಾಗಿ ಬಡ ಜನರ ಮೇಲೆ ಒತ್ತಡ ಸೃಷ್ಟಿಯಾಗುವಂತೆ ಮಾಡಿರುವುದಾಗಿಯೂ ಅವರು ತಿಳಿಸಿದ್ದಾರೆ.

ಪ್ರಸ್ತುತ ಭಾರತ‌ ‌ಸಾಧನೆ ಮೆರೆಯುತ್ತಿದ್ದು, ಇಂತಹ ಸಾಧನೆಯನ್ನು ಪಾಕಿಸ್ತಾನ ಮಾಡಲು ಏಕೆ ಸಾಧ್ಯವಾಗುತ್ತಿಲ್ಲ ಎಂದು ನವಾಜ್ ಷರೀಫ್ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಯಾರು ಹೊಣೆ ಎಂಬುದಾಗಿ ಕೇಳಿದ್ದಾರೆ. ಭಾರತ‌ ಸರ್ಕಾರ ಸುಧಾರಣೆಗಳನ್ನು ಅನುಸರಿಸಿದೆ. ಆದರೆ ಪಾಕಿಸ್ತಾನ ಮಾತ್ರ ಇನ್ನೂ ಹಾಗೆಯೇ ಇದೆ ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ಪಾಕಿಸ್ತಾನದ ಪ್ರಸ್ತುತ ವಸ್ತು‌ ಸ್ಥಿತಿಯ ಬಗ್ಗೆ ನಿಜಾಂಶವನ್ನು ಷರೀಫ್ ತೆರೆದಿಟ್ಟಿದ್ದಾರೆ. ಕೇವಲ ಭಯೋತ್ಪಾದನೆ, ಭಾರತ ವಿರೋಧಿ ಕೃತ್ಯಗಳನ್ನು ಪೋಷಿಸುತ್ತಿರುವ ಪಾಕ್ ತನ್ನ ಅಭಿವೃದ್ಧಿಯ ಕಡೆಗೆ ಗಮನ ನೀಡದೇ ಇದ್ದು, ಈ‌ ಕಾರಣದಿಂದಲೇ ಪ್ರಪಂಚದೆದುರು ಭಿಕ್ಷುಕ ರಾಷ್ಟ್ರವಾಗಿ ಬಿಂಬಿತವಾಗಿರುವುದು ಸತ್ಯ. ಪಾಕಿಸ್ತಾನದ ಈ ಸ್ಥಿತಿಯಿಂದ ಬೇಸತ್ತ ಅಲ್ಲಿನ ಜನತೆ ಸಹ ನಮಗೂ ಭಾರತದ ಪ್ರಧಾನಿ ಮೋದಿ ಅವರಂತಹ ನಾಯಕನಿದ್ದರೆ ಎಂದು ಹೇಳುವ ಮೂಲಕ ಕೆಲ ಸಮಯದ ಹಿಂದೆ ಪಾಕ್‌ನ ಅಧಃಪತನಕ್ಕೆ ಅಲ್ಲಿನ ಆಡಳಿತ ವೈಫಲ್ಯವೇ ಕಾರಣ ಎಂಬುದನ್ನು ಪರೋಕ್ಷವಾಗಿ ಹೇಳಿದ್ದನ್ನು ನಾವಿಲ್ಲಿ‌ ನೆನಪಿಸಿಕೊಳ್ಳಬಹುದು.

Tags

Related Articles

Close