ಅಂಕಣ

ಸ್ಕಾಟ್ಲೆಂಡಿನಲ್ಲಿ ಒಂದು ದ್ವೀಪವನ್ನೆ ಖರೀದಿಸಿದ ಯೋಗ ಗುರು ಬಾಬಾ ರಾಮದೇವ್ ಗೆ ಪತಂಜಲಿಯ ಉತ್ಪಾದನಾ ಘಟಕಗಳನ್ನು ತಮ್ಮಲ್ಲಿ ಸ್ಥಾಪಿಸಲು ಯುಕೆ-ಯೂರೋಪ್ ಗಳು ದಂಬಾಲು ಬೀಳುತ್ತಿವೆ!!

ಅಂದು ಕಾವಿ ತೊಟ್ಟ ಒಬ್ಬ ಸಂನ್ಯಾಸಿ ಅಮೇರಿಕಾದ ಅಂಗಳದಲ್ಲಿ ನಿಂತು ಸನಾತನ ಧರ್ಮದ ಮಹಾನತೆಯನ್ನು ವಿಶ್ವಕ್ಕೆ ಸಾರಿದರು. ಸನಾತನ ಧರ್ಮವನ್ನು ವಿಶ್ವಕ್ಕೆ ಹೊಸ ದೃಷ್ಟಿಕೋನದೊಂದಿಗೆ ಸ್ವಾಮಿ ವಿವೇಕಾನಂದರು ಪರಿಚಯಿಸಿದರೆ, ಇಂದು ಮತ್ತೊಬ್ಬ ಕಾವಿ ತೊಟ್ಟ ಸಂನ್ಯಾಸಿ ಸನಾತನದ ಯೋಗವನ್ನು ವಿಶ್ವದಾದ್ಯಂತ ಪ್ರಸಾರ ಮಾಡುತ್ತಿದ್ದಾರೆ. ಧರ್ಮ ಉತ್ಥಾನಕ್ಕಾಗಿ ಭಗವಂತ ಯಾವುದಾದರೊಂದು ರೂಪದಲ್ಲಿ ಬಂದೆ ಬರುತ್ತಾನೆ ಎನ್ನುವುದು ಸತ್ಯ.

ಅದೊಂದು ಕಾಲವಿತ್ತು, ಯೋಗ-ಆಯುರ್ವೇದ ಎಂದರೆ ಭಾರತೀಯರು ಮೂಗು ಮುರಿಯುತ್ತಿದ್ದರು. ಆದರೆ ಅದೆ ಯೋಗ-ಆಯುರ್ವೇದ ಇಂದು ವಿಶ್ವಸಂಸ್ಥೆಯಿಂದಲೆ ಗುರುತಿಸಲ್ಪಟ್ಟು ಅಂತರಾಷ್ಟ್ರೀಯ ಮಟ್ಟದಲ್ಲಿ ಆಚರಿಸಲ್ಪಡುತ್ತಿದೆ ಎಂದರೆ ಭಾರತ ಸನಾತನ ಜ್ಞಾನದ ಬಗ್ಗೆ ಹೆಮ್ಮೆ ಎನಿಸುತ್ತಿದೆ. ಹಿತ್ತಿಲ ಗಿಡ ಮದ್ದಲ್ಲ ಎನ್ನುವ ಗಾದೆಯಂತೆ ನಮ್ಮ ಮನೆಯ ಹಿತ್ತಿಲಲ್ಲಿದ್ದ ಗಿಡ ಮೂಲಿಕೆಗಳನ್ನು ಕಡಿದು ಬಿಸಾಕಿ, ವಿದೇಶೀ ಉತ್ಪನ್ನಗಳ ಮೊರೆ ಹೋಗಿ ದೇಶದ ಕೋಟ್ಯಂತರ ರುಪಾಯಿ ವಿದೇಶೀ ಕಂಪನಿಗಳ ಪಾಲಾಗುವಂತೆ ಮಾಡುತ್ತಿದ್ದೆವು. ವಿದೇಶೀ ಕಂಪನಿಗಳ ಹಾವಳಿಯಿಂದ ಭಾರತ ಮತ್ತೊಮ್ಮೆ ಪಾರತಂತ್ರ್ಯದ ಬೇಡಿ ತೊಟ್ಟುಕೊಳ್ಳುವ ಭೀತಿ ಎದುರಿಸುತ್ತಿದ್ದಾಗಲೇ ಭಾರತ ಉತ್ಥಾನಕ್ಕಾಗಿ “ಆಜಾದಿ ಬಚಾವೋ” ಆಂದೋಳನಕ್ಕೆ ಮುನ್ನುಡಿ ಬರೆದರು ರಾಜೀವ್ ದೀಕ್ಷಿತ್.

ರಾಜೀವ್ ದೀಕ್ಷಿತರ ಆಜಾದೀ ಬಚಾವೋ ಆಂದೋಳನಕ್ಕೆ ಧುಮುಕಿ, ಅವರಿಗೆ ಸಂಪೂರ್ಣ ಸಹಕಾರ ನೀಡಿದವರೆ ಯೋಗ ಗುರು ಬಾಬಾ ರಾಮದೇವ್. ಬಹುರಾಷ್ಟ್ರೀಯ ಕಂಪನಿಗಳ ನಡು ಮುರಿದಿದ್ದರಿಂದ ಈ ಜೋಡಿ ಯೂಪಿಎ ಸರಕಾರ ಮತ್ತು ವಿದೇಶೀ ಕಂಪನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಕೇಂದ್ರದಲ್ಲಿ ಯೂಪಿಎ ಸರಕಾರ(2010)ದ ಕಾಣದ “ಕೈ”ಗಳ ಶಡ್ಯಂತ್ರದಿಂದಾಗಿ ದುರದೃಷ್ಟವಶಾತ್ ರಾಜೀವ್ ದೀಕ್ಷಿತರನ್ನು ಕಳೆದುಕೊಳ್ಳಬೇಕಾಯಿತು. ತನ್ನ ಆಪ್ತ ಸಖನ ಅಗಲುವಿಕೆಯ ನಂತರವೂ ಬಾಬಾ ರಾಮದೇವ್ ಸ್ವದೇಶಿ ಆಂದೋಳನವನ್ನು ಕೈ ಬಿಡಲಿಲ್ಲ. ತಮ್ಮ ಗುರಿ ಸಾಧನೆಗೆ ಎಡೆ ಬಿಡದೆ ಪ್ರಯತ್ನ ಪಡುತ್ತಲೆ ಇದ್ದರು. ಬಾಬಾ ರಾಮದೇವ್ ಅವರ ಶ್ರಮ ನಿರರ್ಥಕವಾಗಲಿಲ್ಲ, ದಶಕಗಳ ಪರಿಶ್ರಮಕ್ಕೆ ಕೊನೆಗೂ ಫಲ ದೊರಕಿತು. ಇವತ್ತು ಪಂತಂಜಲಿ ಎಂದರೆ ಸಾಕು ವಿಶ್ವವೆ ಕೈ ಎತ್ತಿ ಮುಗಿಯುತ್ತದೆ. ಪುಸ್ತಕದಲ್ಲಿ ಗೆದ್ದಲು ತಿನ್ನುತ್ತಿದ್ದ ಯೋಗವನ್ನು ಮನೆ ಮನೆಗೆ ತಲುಪಿಸಿದ ಶ್ರೇಯ ಬಾಬಾರಿಗೆ ಸಲ್ಲುತ್ತದೆ.

ತವರಿನಲ್ಲೆ ಘೋರ ನಿರ್ಲಕ್ಷ್ಯಕ್ಕೊಳಗಾಗಿದ್ದ ಸನಾತನ ಜ್ಞಾನವಾದ ಯೋಗ ಮತ್ತು ಆಯುರ್ವೇದವನ್ನು ಪ್ರಪಂಚವೆ ಒಪ್ಪಿಕೊಳ್ಳುವಂತೆ ಮಾಡಿದ ಮತ್ತು ಭಾರತದ ಉತ್ಪನ್ನಗಳನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ರಾಜೀವ್ ದೀಕ್ಷಿತ್-ಬಾಬಾ ರಾಮ್ ದೇವ್-ಬಾಲಕೃಷ್ಣ ಆಚಾರ್ಯರಿಗೆ ಒಂದು ದೀರ್ಘ ದಂಡ ನಮಸ್ಕಾರ. ಭಾರತದ ಕಾವಿ ಉಟ್ಟ ಸಂನ್ಯಾಸಿಯೊಬ್ಬ ದೂರದ ಸ್ಕಾಟ್ಲೆಂಡಿನಲ್ಲಿ ಒಂದು ದ್ವೀಪವನ್ನೆ ಖರೀದಿಸಿ, ಅದಕ್ಕೆ ‘ಶಾಂತಿ ದ್ವೀಪ’ ಎನ್ನುವ ಹೆಸರಿಟ್ಟಿದ್ದಾರೆಂದರೆ ಆ ಯೋಗಿಯ ಪರಿಶ್ರಮದ ಪರಿ ಎಂಥದ್ದಿರಬೇಕು? ಸ್ಕಾಟ್ಲೆಂಡ್ ನ ಮೀನುಗಾರಿಕೆ ಪಟ್ಟಣವಾದ ಲಾರ್ಗ್ ನ ಲಿಟಲ್ ಕುಂಬ್ರೀ ದ್ವೀಪವನ್ನು ತನ್ನ ಅಂತರಾಷ್ಟೀಯ ಯೋಗ ಮಂಚವಾಗಿ 2 ಮಿಲಿಯನ್ ಪೌಂಡ್ ಗಳಿಗೆ ಖರೀದಿಸಿರುವ ಬಾಬಾ ರಾಮ್ ದೇವ್ ಅಲ್ಲಿ ಯೋಗದ ಬೋಧನೆಗಳನ್ನು ದೇಹ ಮತ್ತು ಮನಸ್ಸನ್ನು ಶುದ್ಧೀಕರಿಸುವ ಸಾಧನವಾಗಿ ಜನಪ್ರಿಯಗೊಳಿಸುತ್ತಿದ್ದಾರೆ.

ಪತಂಜಲಿ ಯೋಗ ಪೀಠ ಯುಕೆ ಟ್ರಸ್ಟ್ ಮುಖಾಂತರ ಬ್ರಿಟನ್ ನಲ್ಲಿ ಇದುವರೆಗೂ ತನ್ನ ಆಯುರ್ವೇದ ಉದ್ಯಮದಿಂದ ಸುಮಾರು 140 ಉತ್ಪನ್ನಗಳನ್ನು ಪ್ರಸ್ತುತಪಡಿಸಿರುವ ಬಾಬಾ ರಾಮ್ ದೇವ್ ಅವರಿಗೆ ಯುಕೆ ಮತ್ತು ಯುರೋಪಿನಲ್ಲಿ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಹಲವಾರು ಪ್ರಸ್ತಾವನೆಗಳು ಬರುತ್ತಿವೆ! ಹಿಂದೆ ವಿದೇಶೀ ಕಂಪನಿಗಳು ಭಾರತದಲ್ಲಿ ಉತ್ಪಾದನಾ ಘಟಕಗಳನ್ನು ತೆರೆದು ಭಾರತದ ಹಣವನ್ನು ಕೊಳ್ಳೆ ಹೊಡೆಯುತ್ತಿದ್ದವು. ಆದರೆ ಈಗ ಅಪ್ಪಟ ಭಾರತೀಯ ಕಂಪನಿಯೊಂದು ಬ್ರಿಟನ್ ಮತ್ತು ಯೂರೋಪಿನಲ್ಲಿ ತನ್ನ ಉತ್ಪಾದನಾ ಘಟಕಗಳನ್ನು ತೆರೆಯುವ ಬಗ್ಗೆ ಯೋಚಿಸುತ್ತಿದೆ ಎಂದರೆ ಪತಂಜಲಿಯ ಸಾಧನೆ ಬಗ್ಗೆ ಹೆಮ್ಮೆ ಎನಿಸುತ್ತದೆ. ಪತಂಜಲಿಯನ್ನು ಈ ಮಟ್ಟಕ್ಕೆ ಬೆಳೆಸಿದ ಬಾಬಾ ರಾಮ ದೇವ್ ಮತ್ತು ಆಚಾರ್ಯ ಬಾಲಕೃಷ್ಣರ ಬಗ್ಗೆ ಹೆಮ್ಮೆ ಎನಿಸುತ್ತಿದೆ. ಪತಂಜಲಿ ಉತ್ಪನ್ನಗಳಿಂದಾಗಿ ಇವತ್ತು ಬಹುರಾಷ್ಟ್ರೀಯ ಕಂಪನಿಗಳ ಹೊಟ್ಟೆಗೆ ಕಲ್ಲು ಬೀಳುತ್ತಿದೆ. ಕಡಿಮೆ ದರದಲ್ಲಿ ಉನ್ನತ ಗುಣ ಮಟ್ಟದ ಪತಂಜಲಿ ಉತ್ಪನ್ನಗಳ ವಿರುದ್ದ ಸೆಣಸಾಡಲು ವಿದೇಶೀ ಕಂಪನಿಗಳು ಹರಸಾಹಸ ಪಡುತ್ತಿವೆ!

“ಯುಕೆ-ಯುರೋಪ್ ಮಾರುಕಟ್ಟೆಗಳಲ್ಲಿ ಪತಂಜಲಿ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆಯಿದೆ ಮತ್ತು ಅಲ್ಲಿನ ಜನರು ಉತ್ಪನ್ನಗಳನ್ನು ಖರೀದಿಸಲು ಉತ್ಸುಕರಾಗಿದ್ದಾರೆ. ಭಾರತೀಯ ಕಾನೂನಿನಿಂದ ಭಿನ್ನವಾಗಿರುವ ಈ ನಿರ್ದಿಷ್ಟ ರಾಷ್ಟ್ರಗಳ ಕಾನೂನಿಗೆ ಅನುಗುಣವಾಗಿ ನಾವು ಶೀಘ್ರದಲ್ಲೇ ತೀರ್ಮಾನ ತೆಗೆದುಕೊಳ್ಳುತ್ತೇವೆ “ಎಂದು ಬಾಬಾ ರಾಮ್ ದೇವ್ ಹೇಳಿದ್ದಾರೆ. ಇಷ್ಟು ಮಾತ್ರವಲ್ಲ, ಶೀಘ್ರದಲ್ಲೇ ಲಂಡನ್ನಲ್ಲಿರುವ ವಿಶ್ವ ಪ್ರಸಿದ್ಧ ಮ್ಯಾಡಮ್ ಟುಸ್ಸಾಡ್ಸ್ ವಸ್ತು ಸಂಗ್ರಹಾಲಯದಲ್ಲಿ ಬಾಬಾ ರಾಮ್ ದೇವ್ ಅವರ ಮೇಣದ ಪ್ರತಿಮೆ ಅನಾವರಣಗೊಳ್ಳಲಿದೆ. ಯೋಗ ಮತ್ತು ಭಾರತೀಯ ಸಂಪ್ರದಾಯವಾದಿ ವಿಜ್ಞಾನಗಳ ಮೂಲಕ ಜಗತ್ತಿಗೆ ನೀಡಿದ ಕೊಡುಗೆಗಾಗಿ ತನ್ನ ಅತ್ಯುನ್ನತ ಪದವಿಯಾದ ಗೌರವ ಫೆಲೋಶಿಪ್ ಅನ್ನು ಯುಕೆಯ NISAU ಬಾಬಾರವರಿಗೆ ನೀಡಿದೆ. ಇದು ಭಾರತದ ಯೋಗಿಯೊಬ್ಬರಿಗೆ ಸಂದಿರುವ ಅತಿ ದೊಡ್ಡ ಗೌರವವೆಂದೆ ಹೇಳಬೇಕು!!

ಇನ್ನೂರು ವರ್ಷಗಳವರೆಗೆ ನಮ್ಮ ಮೇಲೆ ದಬ್ಬಾಳಿಕೆ ಮಾಡಿದ, ತನ್ನದೆಲ್ಲವನ್ನೂ ನಮ್ಮ ಮೇಲೆ ಹೇರಿ, ನಮ್ಮದೆಲ್ಲವನ್ನೂ ಕೊಳ್ಳೆ ಹೊಡೆದ ದೇಶ ಬ್ರಿಟನ್, ಇವತ್ತು ಭಾರತದ ಯೋಗಿಯ ಮುಂದೆ ಮಂಡಿಯೂರಿ ಕುಳಿತಿದೆ ಎಂದರೆ ಧನ್ಯತಾ ಭಾವ ಮೂಡುತ್ತದೆ. ವಿದೇಶೀ ಕಂಪನಿಗಳು ಭಾರತವನ್ನು ಕೊಳ್ಳೆಹೊಡೆದು ಸಂಪಾದಿಸುವ ಕಾಲ ಮುಗಿದಿದೆ. ಇನ್ನೇನಿದ್ದರೂ ಭಾರತದ ಶಕೆ. ಜಗತ್ತಿನಾದ್ಯಂತ ಭಾರತದ ಜ್ಞಾನ-ವಿಜ್ಞಾನದ ಭಂಡಾರ ಪ್ರಸಾರವಾಗಲಿದೆ. ಮತ್ತೊಮ್ಮೆ ವಿಶ್ವ ಗುರುವಾಗುವತ್ತ ಸಾಗುತ್ತಿದೆ ಭಾರತ.

-ಶಾರ್ವರಿ

Tags

Related Articles

Close