ಪ್ರಚಲಿತ

ಭಾರತದ ಅಭಿವೃದ್ಧಿಯ ಹಿಂದಿನ ಕಾಯಕ ಸಂತ

ಕಾಯಕ ಸಂತ ಪ್ರಧಾನಿ ಮೋದಿ

ನಮ್ಮ ದೇಶವನ್ನು ಕಾಪಾಡುತ್ತಿರುವ ನಿಜವಾದ ಚೌಕೀದಾರ ಪ್ರಧಾನಿ ನರೇಂದ್ರ ಮೋದಿ ಅವರು. ದೇಶದೊಳಗಿದ್ದುಕೊಂಡೇ ದೇಶ ವಿರೋಧಿ ಕೃತ್ಯಗಳನ್ನು ನಡೆಸುತ್ತಿರುವ ಹಲವಾರು ಭ್ರಷ್ಟರ ನಿದ್ದೆಗೆಡಿಸಿರುವ, ಆ ಮೂಲಕ ದೇಶದ ಸಂಪೂರ್ಣ ಕಾಳಜಿ ವಹಿಸುತ್ತಿರುವ ಓರ್ವ ಸಮರ್ಥ ನಾಯಕ ಎಂದು ಪ್ರಧಾನಿ ಮೋದಿ ಅವರನ್ನು ಇಡೀ ರಾಷ್ಟ್ರವೇ ಒಪ್ಪಿಕೊಂಡಿದೆ. ಇಂತಹ ಸಜ್ಜನ ವ್ಯಕ್ತಿಯ ಮೇಲೆ ವಿರೋಧಿಗಳು ಇಲ್ಲಸಲ್ಲದ ಆರೋಪ ಮಾಡುವುದು, ಅವರನ್ನು ನಿಂದಿಸುವುದು ಇವೆಲ್ಲಾ ಸಾಮಾನ್ಯ.

ಕಾಯಕವೇ ಕೈಲಾಸ ಎಂಬ ಉಕ್ತಿಗೆ ಅನುಸಾರವಾಗಿ ಬದುಕಿನ ಕ್ರಮವನ್ನು ಅನುಸರಿಸುತ್ತಿರುವ ಶಕ್ತಿ ಇವರು. ತಮ್ಮ ತಾಯಿಯ ಸಾವಿನ ಸಂದರ್ಭದಲ್ಲಿಯೂ ಒಂದೇ ಒಂದು ರಜೆ ಪಡೆಯದೆ ಕರ್ತವ್ಯ ನಿಷ್ಟೆ ಮೆರೆದ ಪ್ರಧಾನಿ ಮೋದಿ ಅವರ ನಡೆ ನಮ್ಮೆಲ್ಲರಿಗೂ ಮಾದರಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಮೊದಲು ದೇಶ, ಆನಂತರ ಮಿಕ್ಕೆಲ್ಲವೂ ಎಂದು ತಿಳಿದಿರುವ ಮತ್ತು ಅದರಂತೆ ನಡೆಯುತ್ತಿರುವ ಕೆಲವೇ ಕೆಲವು ರಾಜಕೀಯ ನಾಯಕರ ಪೈಕಿ ಪ್ರಧಾನಿ ಮೋದಿ ಅವರೂ ಒಬ್ಬರು ಎನ್ನುವುದು ನಿಸ್ಸಂಶಯ.

ಅಂದ ಹಾಗೆ ಪ್ರಧಾನಿ ಮೋದಿ ಅವರು ನಮ್ಮ ದೇಶದ ಆಡಳಿತ ಚುಕ್ಕಾಣಿ ಹಿಡಿದು ಕಳೆದ ಒಂಬತ್ತು ವರ್ಷಗಳಿಂದ ಭಾರತವನ್ನು ಸಮರ್ಥವಾಗಿ, ಸಮಗ್ರವಾಗಿ ಮುನ್ನಡೆಸುತ್ತಿದ್ದಾರೆ. ಈ ಒಂಬತ್ತು ವರ್ಷಗಳಲ್ಲಿ ಪ್ರಧಾನಿ ಮೋದಿ ಅವರು ಒಂದೇ ಒಂದು ರಜೆ ಪಡೆಯದೆ ದೇಶಕ್ಕಾಗಿ ದುಡಿಯುತ್ತಿದ್ದಾರೆ ಎನ್ನುವುದು ಕಾಯಕ ಸಂತನ ಮಾದರಿ ನಡೆ ಎಂದು ಹೇಳಬಹುದು.

ಪ್ರಧಾನಿ ಮೋದಿ ಅವರು ಈ ದೇಶದ ಆಡಳಿತ ಚುಕ್ಕಾಣಿ ಹಿಡಿದ ಬಳಿಕ ಎಷ್ಟು ಬಾರಿ ರಜೆ ತೆಗೆದುಕೊಂಡಿದ್ದಾರೆ ಎಂಬ ಮಾಹಿತಿ ಹಕ್ಕು ಪ್ರಶ್ನೆಗೆ ಕೇಂದ್ರ ಸರ್ಕಾರ ಪ್ರತಿಕ್ರಿಯೆ ನೀಡಿದ್ದು, ಕಳೆದ ಒಂಬತ್ತು ವರ್ಷಗಳಲ್ಲಿ ಪ್ರಧಾನಿ ಮೋದಿ ಅವರು ಪ್ರಧಾನಿ ಕಚೇರಿಯಲ್ಲಿ ಒಂದೇ ಒಂದು ರಜೆ ಪಡೆದಿಲ್ಲ ಎಂದು ಹೇಳಿದೆ.

ಕಳೆದ ಒಂಬತ್ತು ವರ್ಷಗಳಲ್ಲಿ ಪ್ರಧಾನಿ ಮೋದಿ ಅವರು ದೇಶ, ವಿದೇಶಗಳಲ್ಲಿ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಸಭೆ, ಸಮಾರಂಭ, ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾಗಿ ‌ಆರ್‌ಟಿಐ ತಿಳಿಸಿದೆ. ಭಾರತದಲ್ಲಿನ ನಿರುದ್ಯೋಗ ಸಮಸ್ಯೆ ನಿವಾರಣೆಯ ಹಿನ್ನೆಲೆಯಲ್ಲಿ, ದೇಶದಲ್ಲಿ ಉದ್ಯೋಗ ಸೃಷ್ಟಿ ಮಾಡುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಅವರು ವಿದೇಶಿ ಹೂಡಿಕೆಗಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಮಹತ್ವದ ಕ್ರಮವನ್ನು ಜಿ20 ಶೃಂಗಸಭೆಯ ಮೂಲಕ ಪ್ರಯತ್ನ ನಡೆಸುತ್ತಿರುವ ಬಗೆಗೂ ಆರ್‌ಟಿಐ ಕಾರ್ಯಕರ್ತ ಪ್ರಫುಲ್ ಸರ್ದಾ ಎಂಬವರು ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರದ್ದು ದಣಿವರಿಯದ ಪ್ರಯತ್ನ, ಕಾಯಕ ಎಂದೂ ಅವರು ಬಣ್ಣಿಸಿದ್ದಾರೆ.

2014 ರಿಂದೀಚೆಗೆ ಪ್ರಧಾನಿ ಮೋದಿ ಅವರು ಕಾಯಕವೇ ಕೈಲಾಸ ಎಂಬಂತೆ, ವಿರೋಧಿಗಳ ಯಾವ ಕುತಂತ್ರಕ್ಕೂ ತಲೆ ಕೊಡಿಸಿಕೊಳ್ಳದೆ ಬಲಿಷ್ಠ ಭಾರತ ನಿರ್ಮಾಣದ ತಂತ್ರಗಾರಿಕೆಯಲ್ಲಿ ಮುಳುಗಿದ್ದಾರೆ. ಕಾಯಕವೇ ಕೈಲಾಸ ಎಂಬಂತೆ ದೇಶ, ದೇಶವಾಸಿಗಳ ಅಭ್ಯುದಯದ ನಿಟ್ಟಿನಲ್ಲಿ ದುಡಿಯುತ್ತಿದ್ದಾರೆ. ಹಾಗೆಯೇ ದೇಶ ಪ್ರಗತಿ ಹೊಂದುವುದು, ದೇಶವಾಸಿಗಳು ಪ್ರಗತಿ ಹೊಂದಿದಲ್ಲಿ ಮಾತ್ರ ಎಂಬುದನ್ನು ಮನಗಂಡಿರುವ ಅವರು, ದೇಶದ ದುರ್ಬಲ ವರ್ಗಗಳನ್ನು ಸಶಕ್ತಗೊಳಿಸಲು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಯಾವುದೇ ಷರತ್ತುಗಳಿಲ್ಲದೆ ದೇಶದ ಜನರಿಗೆ ಆ ಯೋಜನೆಗಳ ಸಂಪೂರ್ಣ ಲಾಭ ದೊರೆಯುವ ಹಾಗೆ ಮಾಡಿದ್ದಾರೆ.

ಹಾಗೆಯೇ ಭಾರತವನ್ನು ವಿಶ್ವದ ಅಭಿವೃದ್ಧಿ ಹೊಂದಿದ ಮತ್ತು ಬಲಿಷ್ಠ ರಾಷ್ಟ್ರವನ್ನಾಗಿ ಮಾಡುವ ನಿಟ್ಟಿನಲ್ಲಿಯೂ ಪ್ರಧಾನಿ ಮೋದಿ ಅವರು ತೆಗೆದುಕೊಂಡ ಉಪಕ್ರಮ ಮಾದರಿ ಮತ್ತು ಶ್ಲಾಘನೀಯ. ಪ್ರಧಾನಿ ನರೇಂದ್ರ ಮೋದಿ ಅವರ ದಣಿವರಿಯದ ಆಡಳಿತ ದೇಶವನ್ನು ವಿಶ್ವ ಮಟ್ಟದಲ್ಲಿ ಪ್ರಜ್ವಲಿಸುವ ಹಾಗೆ ಮಾಡಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

Tags

Related Articles

Close