ಪ್ರಚಲಿತ

ಧರ್ಮದ ಹೆಸರಿನಲ್ಲಿ ಸಮಾಜ ಒಡೆಯುತ್ತಿದೆ ಕಾಂಗ್ರೆಸ್: ಪ್ರಧಾನಿ ಮೋದಿ

ತೆಲಂಗಾಣದಲ್ಲಿಯೂ ಚುನಾವಣಾ ಕಾವು ಏರುತ್ತಿದೆ. ಪ್ರತಿಯೊಂದು ಪಕ್ಷಗಳು ಸಹ ತಮ್ಮ ಅಭ್ಯರ್ಥಿಯ ಪರ ಭರ್ಜರಿ ಬ್ಯಾಟಿಂಗ್ ನಡೆಸುತ್ತಿವೆ. ತಮ್ಮ ಎದುರಾಳಿ ಅಭ್ಯರ್ಥಿಗಳನ್ನು ವಿರೋಧಿಸುವ ಕೆಲಸವೂ ದೊಡ್ಡ ಮಟ್ಟದಲ್ಲಿ ನಡೆಯುತ್ತಿವೆ.

ಬಿಜೆಪಿ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ನಡೆಸಿದ ಪ್ರಧಾನಿ ಮೋದಿ ಅವರು, ಅಲ್ಲಿನ ಕಾಂಗ್ರೆಸ್ ಪಕ್ಷ ಮತ್ತು ಭಾರತೀಯ ರಾಷ್ಟ್ರ ಸಮಿತಿ ಪಕ್ಷಗಳ ಮೇಲೆ ವಾಗ್ದಾಳಿ ‌ನಡೆಸಿದ್ದಾರೆ. ತೆಲಂಗಾಣ ರಾಜ್ಯವನ್ನು ಅಧಃಪತನದತ್ತ ತಳ್ಳುವಲ್ಲಿ ಈ ಎರಡೂ ಪಕ್ಷ ಗಳಿಗೂ ಸಮಾನವಾದ ಪಾಲು ಇರುವುದಾಗಿ ಅವರು ಹೇಳಿದ್ದಾರೆ.

ತೆಲಂಗಾಣದ ಜನರು ಈ ಚುನಾವಣೆಯಲ್ಲಿ ಸಮಸ್ಯೆಯನ್ನು ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ವರ್ಗಾವಣೆ ಮಾಡಲು ಬಯಸಲಾರರು. ಒಂದು ರೋಗ ಇನ್ನೊಂದು ರೋಗವನ್ನು ಗುಣ ಪಡಿಸುವುದು ಸಾಧ್ಯವೇ ಇಲ್ಲದ ಮಾತು. ಈ ಭಾವನೆ ಜನರಲ್ಲಿ ತುಂಬಿರುವುದನ್ನು ನಾನು ಗಮನಿಸಿದ್ದೇನೆ. ಜನರು ಭಾರತೀಯ ಜನತಾ ಪಕ್ಷದ ಮೇಲೆ ಭರವಸೆ ಹೊಂದಿದ್ದಾರೆ ಎಂದು ಪಿ ಎಂ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳು ಜಯಭೇರಿ ಭಾರಿಸುತ್ತಾರೆ ಎನ್ನುವ ಸಂಪೂರ್ಣ ವಿಶ್ವಾಸ ನಮಗಿದೆ. ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಹಿಂದುಳಿದ ವರ್ಗದ ವ್ಯಕ್ತಿಯನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಲಾಗುವುದು. ತೆಲಂಗಾಣಕ್ಕೆ ಸಹಾಯ ಮಾಡುವ ಮತ್ತು ರಾಜ್ಯದ ಪುನಶ್ಚೇತನ ಮಾಡುವ ಶಕ್ತಿ ಬಿಜೆಪಿ‌ಗೆ ಇರುವುದಾಗಿ ಅವರು ತಿಳಿಸಿದ್ದಾರೆ. ಪ್ರಸ್ತುತ ಕಾಂಗ್ರೆಸ್ ಪಕ್ಷ ಮತ್ತು ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರು ತೆಲಂಗಾಣಕ್ಕೆ ದ್ರೋಹ ಎಸಗಿದ್ದಾರೆ ಎಂದೂ ಪ್ರಧಾನಿ ಮೋದಿ ಆರೋಪಿಸಿದ್ದಾರೆ.

ಕಾಂಗ್ರೆಸ್ ಪಕ್ಷಕ್ಕಿಂತ, ಬಿಆರ್‌ಎಸ್ ಪಕ್ಷದ ನಾಲ್ಕು ಚಕ್ರಗಳು ಮತ್ತು ಕಾರಿನ ಸ್ಟೇರಿಂಗ್ ಭಿನ್ನವಾಗಿಲ್ಲ. ಈ ಎರಡೂ ರಾಜ್ಯದ ಜನರಿಗೆ ಮೋಸ ಮಾಡಿವೆ.‌ ದ್ರೋಹ ಎಸಗಿವೆ ಎಂದು ಅವರು ಕಿಡಿ ಕಾರಿದ್ದಾರೆ.

ಧರ್ಮದ ಆಧಾರದಲ್ಲಿ ಜನರನ್ನು, ಸಮಾಜವನ್ನು ಒಡೆಯುವ ಕೆಲಸವನ್ನು ಕಾಂಗ್ರೆಸ್ ಮತ್ತು ಬಿಆರ್‌ಎಸ್ ಪಕ್ಷಗಳು ಮಾಡುತ್ತಲೇ ಬಂದಿವೆ. ಇವೆರಡೂ ತುಷ್ಟೀಕರಣ ರಾಜಕೀಯದಲ್ಲಿ ತೊಡಗಿಸಿಕೊಂಡಿವೆ. ಈ ಎರಡೂ ಪಕ್ಷಗಳ ಭ್ರಷ್ಟಾಚಾರವೂ ಹೆಚ್ಚಾಗಿದೆ. ರಾಜವಂಶದ ರಾಜಕೀಯವನ್ನು ಉತ್ತೇಜಿಸುವಲ್ಲಿಯೂ ಈ ಎರಡೂ ಪಕ್ಷಗಳು ತೊಡಗಿಸಿಕೊಂಡಿರುವುದಾಗಿ ಅವರು ಹೇಳಿದ್ದಾರೆ.

Tags

Related Articles

Close