ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ತತ್‌ಕ್ಷಣದ ಪಾವತಿ ವ್ಯವಸ್ಥೆಯ ಮೂಲಕ ಈ ವರ್ಷದ ಆಗಸ್ಟ್‌ನಲ್ಲಿ ಮೊದಲ ಬಾರಿಗೆ ಹತ್ತು ಬಿಲಿಯನ್ ವಹಿವಾಟುಗಳ ಗಡಿ ದಾಟಿದ್ದು, ಈ ಸಾಧನೆಗಾಗಿ ಪ್ರಧಾನಿ ಮೋದಿ ಅವರು ಶ್ಲಾಘಿಸಿದ್ದಾರೆ.
ಪ್ರಧಾನಿ ಮೋದಿ ಅವರು ಸಾಮಾಜಿಕ ಮಾಧ್ಯಮದಲ್ಲಿ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿರುವ ಅವರು, ಈ ವಿಚಾರವನ್ನು ಅಸಾಧಾರಣ ವಿಷಯ ಎಂಬುದಾಗಿ ಬಣ್ಣಿಸಿದ್ದಾರೆ. ಭಾರತೀಯರು ಡಿಜಿಟಲ್ ಪ್ರಗತಿಯನ್ನು ಸ್ವೀಕಾರ ಮಾಡುತ್ತಿದ್ದಾರೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಭಾರತೀಯರು ಡಿಜಿಟಲ್ ಪ್ರಗತಿಯತ್ತ ಮುಖ ಮಾಡಿರುವುದು ನಮ್ಮ ದೇಶದ ಜನರ ಕೌಶಲಕ್ಕೆ ಹಿಡಿದ ಕೈಗನ್ನಡಿ ಮತ್ತು ನೀಡುತ್ತಿರುವ ಗೌರವವಾಗಿದೆ ಎಂದು ಪ್ರಧಾನಿ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿಯೂ ಭಾರತದಲ್ಲಿ ಇದೇ ರೀತಿಯ ಪ್ರವೃತ್ತಿ ಮುಂದುವರಿಯಲಿ ಎಂಬುದಾಗಿಯೂ ಅವರು ಹಾರೈಸಿದ್ದಾರೆ.
ಆಗಸ್ಟ್ ತಿಂಗಳಿಗೆ ಸಂಬಂಧಿಸಿದ ಹಾಗೆ ಯುಪಿಐ ವೇದಿಕೆಯಲ್ಲಿ 10.5 ಶತಕೋಟಿ ವಹಿವಾಟುಗಳನ್ನು ದಾಖಲಿಸಿರುವ ಬಗ್ಗೆ ಎನ್‌ಪಿಸಿಐ ಡೆಟಾವು ಮಾಹಿತಿ ನೀಡುತ್ತದೆ. ಗೂಗಲ್ ಪೇ, ಫೋನ್ ಪೇ, ಪೇಟಿಎಂ ವೇದಿಕೆಗಳು ದೇಶದಲ್ಲಿ ದೊಡ್ಡ ಮಟ್ಟಿನ ವಹಿವಾಟುಗಳು ನಡೆಯುವುದಕ್ಕೆ ಕಾರಣವಾಗಿದೆ. ಕಳೆದ ವರ್ಷದ ಜುಲೈ ತಿಂಗಳಿನಲ್ಲಿ ಫೋನ್‌ಪೇಯು ಸುಮಾರು 4.7 ಶತಕೋಟಿ ವಹಿವಾಟು ಗಳಿಗೆ ಸಾಕ್ಷಿಯಾಗಿದೆ. ಗೂಗಲ್ ಪೇ ಯು 3.7 ಶತಕೋಟಿ ವ್ಯವಹಾರಗಳನ್ನು ನಡೆಸಿದೆ.ಆ ಮೂಲಕ ಭಾರತದಲ್ಲಿ ಡಿಜಿಟಲ್ ಪೇಮೆಂಟ್ ವ್ಯವಸ್ಥೆಯು ದೊಡ್ಡ ಮಟ್ಟದ ಗೆಲುವಿಗೆ ಸಾಕ್ಷಿಯಾಗಿದೆ.
ಈ ಸಂಬಂಧ ಎನ್‌ಪಿಸಿಐ ಅಧಿಕಾರಿಗಳು ಮಾಹಿತಿ ನೀಡಿದ್ದು, ಭಾರತವು ಎರಡು ತಂತ್ರಗಳನ್ನು ಅನುಕರಣೆ ಮಾಡುತ್ತಿದೆ. ಮೊದಲನೆಯದು ತನ್ನ ಪಾಲುದಾರ ರಾಷ್ಟ್ರಗಳಿಗೆ ಡಿಜಿಟಲ್ ಮೂಲಸೌಕರ್ಯ ಮತ್ತು ಫ್ಲ್ಯಾಟ್‌ಫಾರ್ಮ್ ನಿರ್ಮಿಸಲು ಸಹಾಯ ಮಾಡುವುದು, ಭಾರತೀಯ ಪ್ರಯಾಣಿಕರು ಮತ್ತು ವಲಸಿಗರಿಗೆ ಪಾವತಿ ವ್ಯವಸ್ಥೆಗಳನ್ನು ಸರಳ ಮತ್ತು ಸುಲಭಗೊಳಿಸಲು ಈಗಾಗಲೇ ಅಸ್ತಿತ್ವದಲ್ಲಿರುವ ಹಣಕಾಸು ವೇದಿಕೆಗಳ ಜೊತೆಗೆ ವಾಣಿಜ್ಯ ವ್ಯವಹಾರಗಳನ್ನು ಮತ್ತು ಪಾಲುದಾರಿಕೆಗಳನ್ನು ಪ್ರವೇಶಿಸುವುದು ಈ ತಂತ್ರಗಾರಿಕೆಯಾಗಿದೆ.
ಒಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಡಿಜಿಟಲ್ ಇಂಡಿಯಾ ಉಪಕ್ರಮ ಕೈಗೊಂಡ ನಂತರದಲ್ಲಿ ಭಾರತದಲ್ಲಿ ಮಹತ್ವದ ಬೆಳವಣಿಗೆಗಳಾಗಿವೆ. ಡಿಜಿಟಲ್ ಇಂಡಿಯಾ ವ್ಯವಸ್ಥೆಯು ಭಾರತದ ಆರ್ಥಿಕ ಪ್ರಗತಿ ಸಾಧ್ಯವಾಗಿದೆ ಎನ್ನುವುದು ಶ್ಲಾಘನೀಯ.