ಪ್ರಚಲಿತ

ಭಾರತೀಯರ ಶೌರ್ಯ ದೇಶ ಭಯೋತ್ಪಾದನೆಯ ಅಗ್ನಿ ಪರೀಕ್ಷೆ ಗೆಲ್ಲುವಂತೆ ಮಾಡಿದೆ: ಪ್ರಧಾನಿ ಮೋದಿ

ಭಾರತ, ಭಾರತೀಯರ ಶೌರ್ಯವೇ ದೇಶವನ್ನು ಭಯೋತ್ಪಾದನೆ ಎಂಬ ಅಗ್ನಿಪರೀಕ್ಷೆಗಳಿಂದ ಹೊರಬರುವಂತೆ ಮಾಡಿದ್ದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ.

ನಿನ್ನೆ ತಮ್ಮ ತಿಂಗಳ ರೆಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ನಲ್ಲಿ ಮಾತನಾಡಿದ ಅವರು, 26/11 ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಜನರಿಗೆ ಶ್ರದ್ಧಾಂಜಲಿ ಸಲ್ಲಿಸಿ‌ ‌ಮಾತನಾಡಿದರು. ಈ ಕರಾಳ ದಿನವನ್ನು ರಾಷ್ಟ್ರ ಮರೆಯಲು ಸಾಧ್ಯವಿಲ್ಲ. ನವೆಂಬರ್ 26 ರಂದೇ ದೇಶ ಭೀಕರ ಭಯೋತ್ಪಾದಕ ದಾಳಿಗೆ ತುತ್ತಾಯಿತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಪ್ರಸ್ತುತ ಭಾರತ ಭಯೋತ್ಪಾದನೆಯನ್ನು ಸಂಪೂರ್ಣ ಉತ್ಸಾಹದಿಂದ ನಿಗ್ರಹ ಮಾಡುತ್ತಿದೆ. ನಮ್ಮ ದೇಶದ ಶೌರ್ಯದ ಕಾರಣದಿಂದಲೇ ಭಯೋತ್ಪಾದನೆಯ ಅಗ್ನಿಪರೀಕ್ಷೆಯಿಂದ ನಾವು ಗೆದ್ದು ಬರುವಂತೆ ಮಾಡಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಮುಂಬೈ ದಾಳಿಯ ಸಂದರ್ಭದಲ್ಲಿ ಸರ್ವೋಚ್ಚ ತ್ಯಾಗ ಮಾಡಿದ ವೀರರನ್ನು ಭಾರತ ಸದಾ ಸ್ಮರಿಸುತ್ತದೆ ಎಂದು ಅವರು ನುಡಿದಿದ್ದಾರೆ.

ನಮ್ಮ ದೇಶದ ಸಂವಿಧಾನವನ್ನು ನವೆಂಬರ್ 26, 1949 ರಲ್ಲಿ ಸಂವಿಧಾನ ಸಭೆಯು ಅಂಗೀಕಾರ ಮಾಡಿತು‌. ಈ ಕಾರಣದಿಂದಲೂ ನವೆಂಬರ್ 26 ಮಹತ್ವ ಪಡೆದಿದೆ. ಡಾ. ಬಿ. ಆರ್. ಅಂಬೇಡ್ಕರ್ ಅವರ 125 ನೇ ಜನ್ಮದಿನ 2015 ರಲ್ಲಿ ನಡೆದಿದ್ದು, ಆ ದಿನದಂದೇ ನವೆಂಬರ್ 26 ನ್ನು ದೇಶದ ಸಂವಿಧಾನ ದಿನ ಎಂಬುದಾಗಿ ಆಚರಣೆ ಮಾಡಲು ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡಿತು. ಈ ಹಿನ್ನೆಲೆಯಲ್ಲಿ ಎಲ್ಲಾ ದೇಶವಾಸಿಗಳಿಗೂ ಅವರು ಶುಭಾಶಯಗಳನ್ನು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಭಾರತವು ಜನರ ಕರ್ತವ್ಯಗಳ ಆದ್ಯತೆಗೆ ಅನುಗುಣವಾಗಿ ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪವನ್ನು ಖಂಡಿತವಾಗಿಯೂ ಸಾಧಿಸುತ್ತದೆ ಎನ್ನುವ ದೃಢ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.

ನಮ್ಮ ದೇಶದ ಸಂವಿಧಾನದ ಕರಡನ್ನು ಸುಮಾರು ಅರವತ್ತಕ್ಕೂ ಅಧಿಕ ದೇಶಗಳ ಸಂವಿಧಾನವನ್ನು ಸೂಕ್ಷ್ಮವಾಗಿ ಅಧ್ಯಯನ ನಡೆಸಿದ ಬಳಿಕ ರೂಪಿಸಲಾಗಿದೆ. ಸಂವಿಧಾನವನ್ನು ಅಂತಿಮ ರಚನೆಯಾಗಿ ರೂಪಿಸುವುದಕ್ಕೂ ಮೊದಲು ಸುಮಾರು ಎರಡು ಸಾವಿರಕ್ಕೂ ಅಧಿಕ ತಿದ್ದುಪಡಿಗಳನ್ನು ಮರು ಸಂಯೋಜನೆ ಮಾಡಲಾಗಿದೆ. ಸಂವಿಧಾನ ಜಾರಿಯಾದಂದಿನಿಂದ ಈ ವರೆಗೆ ಸುಮಾರು ನೂರ ಆರು ತಿದ್ದುಪಡಿ ಗಳನ್ನು ಮಾಡಲಾಗಿದೆ. ಸಮಯ, ಸಂದರ್ಭ ಮತ್ತು ಅವಶ್ಯಕತೆಗೆ ಅನುಗುಣವಾಗಿ ಸಂವಿಧಾನವನ್ನು ತಿದ್ದುಪಡಿ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಅವರು ದೀಪಾವಳಿ ಸಮಯದಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆ ಹೆಚ್ಚು ಬಳಕೆಯಾಗಿದ್ದಾಗಿ ತಿಳಿಸಿದ್ದು, ಹರ್ಷ ವ್ಯಕ್ತಪಡಿಸಿದ್ದಾರೆ. ಹಾಗೆ ರೇ ವೋಕಲ್ ಫಾರ್ ಲೋಕಲ್, ಸ್ವಚ್ಛ ಭಾರತ ಅಭಿಯಾನವನ್ನು ಸಹ ಶ್ಲಾಘಿಸಿದ್ದಾರೆ.

Tags

Related Articles

Close