ಕಳೆದ ಒಂಬತ್ತು ವರ್ಷಗಳಲ್ಲಿ ವಿಶ್ವ ಮಟ್ಟದಲ್ಲಿ ಭಾರತದ ಸ್ಥಾನಮಾನ ಬದಲಾಗಿದೆ. ಭಾರತ ತನ್ನ ಅಭಿವೃದ್ಧಿಯ ನಿಲುವುಗಳು ಮತ್ತು ಸಹಕಾರದ ಮನೋಭಾವದ ಮೂಲಕವೇ ಪ್ರಪಂಚದ ಮನ ಗೆದ್ದು, ವಿಶ್ವ ಮಾನ್ಯ ರಾಷ್ಟ್ರವಾಗಿ, ಬಲಿಷ್ಠವಾಗಿ ಬೆಳೆದಿದೆ. ಈ ಎಲ್ಲಾ ಸಕಾರಾತ್ಮಕ ಬೆಳವಣಿಗೆಗಳ ಹಿಂದಿರುವ ಶಕ್ತಿಶಾಲಿ ವ್ಯಕ್ತಿ ಶಕ್ತಿ ಎಂದರೆ ಪ್ರಧಾನಿ ನರೇಂದ್ರ ಮೋದಿ ಎನ್ನುವುದರಲ್ಲಿ ಎರಡು ಮಾತಿಲ್ಲ.
ಭಾರತದ ರಾಜತಾಂತ್ರಿಕತೆ ಮತ್ತು ವೈಜ್ಞಾನಿಕ ಸಾಧನೆಗಳನ್ನು ಕುರಿತು ಪ್ರಧಾನಿ ನರೇಂದ್ರ ಮೋದಿ, ಕಳೆದ ತಿಂಗಳಿನಲ್ಲಿ ಭಾರತ ಈ ಎರಡು ವಿಚಾರಗಳಲ್ಲಿ ಮಹತ್ವದ ಸಾಧನೆ ಮೆರೆದಿದೆ ಎಂಬುದಾಗಿ ಹೇಳಿದ್ದಾರೆ. ಕಳೆದ ಮೂವತ್ತು ದಿನಗಳಲ್ಲಿ ಭಾರತದ ರಾಜತಾಂತ್ರಿಕ ವ್ಯವಸ್ಥೆ ಹೊಸ ಎತ್ತರವನ್ನು ತಲುಪಿರುವುದಾಗಿ ಹೇಳಿರುವ ಅವರು, ಈ ಸಂಬಂಧ ಹರ್ಷ ವ್ಯಕ್ತಪಡಿಸಿದ್ದಾರೆ. ಭಾರತದ ಪ್ರಯತ್ನದ ಫಲ ಎಂಬಂತೆ ಬ್ರಿಕ್ಸ್ ಒಕ್ಕೂಟಕ್ಕೆ ಮತ್ತೆ ಆರು ರಾಷ್ಟ್ರಗಳು ಸೇರಿಕೊಂಡಿರುವುದಾಗಿಯೂ ಮೋದಿ ಹೇಳಿದ್ದಾರೆ.
ಹಾಗೆಯೇ ಭಾರತದ ವೈಜ್ಞಾನಿಕ ಸಾಧನೆಯ ಬಗೆಗೂ ಮಾತನಾಡಿರುವ ಅವರು, ದೇಶದ ಹೆಮ್ಮೆಯ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ವಿಜ್ಞಾನಿಗಳ ಚಂದ್ರಯಾನ -3 ಸಾಧನೆಯನ್ನು ಕೊಂಡಾಡಿದ್ದಾರೆ. ಈ ಸಂಬಂಧ ಇಸ್ರೋ ಸಂಸ್ಥೆಯನ್ನು ಶ್ಲಾಘಿಸಿದ ಅವರು, ಈ ಸಾಧನೆ ಚಂದ್ರನ ಮೇಲೆ ತಲುಪಿದ ವಿಶ್ವದ ನಾಲ್ಕನೇ ರಾಷ್ಟ್ರ ಎಂಬ ಹಿರಿಮೆಯನ್ನು ಭಾರತಕ್ಕೆ ತಂದುಕೊಟ್ಟಿದೆ ಎಂದು ನುಡಿದಿದ್ದಾರೆ. ಚಂದ್ರಯಾನ ಯಶಸ್ವಿಯಾಗಿ, ಭಾರತ ಚಂದ್ರನ ಮೇಲಿದೆ ಎಂದು ಘೋಷಣೆ ಮಾಡಿದಾಗ ಇಡೀ ವಿಶ್ವವೇ ಭಾರತದ ಧ್ವನಿಗೆ ಕಿವಿಯಾದ ಕ್ಷಣವನ್ನು ಅವರು ನೆನಪಿಸಿಕೊಂಡಿದ್ದಾರೆ.
ಭಾರತ ಮಂಟಪವು ಕಳೆದ ಎರಡು ವಾರಗಳ ಹಿಂದೆ ಚಟುವಟಿಕೆಯಿಂದ ಕೂಡಿತ್ತು. ಈ ಭಾರತ ಮಂಟಪದಲ್ಲಿ ನಮ್ಮ ದೇಶದ ಭವಿಷ್ಯ ಇದೆ ಎನ್ನುವುದಾಗಿಯೂ ಅವರು ಹೇಳಿದ್ದಾರೆ. ಹಾಗೆಯೇ ಈ ಬಾರಿ ಜಿ20 ಯ ಆತಿಥ್ಯ ಭಾರತ ವಹಿಸಿದ್ದು, ಭಾರತದ ಆತಿಥ್ಯಕ್ಕೆ ಇಡೀ ವಿಶ್ವವೇ ಬೆರಗಾಗಿ ನೋಡಿದೆ ಎಂದು ಪ್ರಧಾನಿ ಹೇಳಿದ್ದಾರೆ. ಭಾರತದ ಖುವ ಜನರು ಇಂತಹ ಕಾರ್ಯಕ್ರಮಗಳನ್ನು ನಡೆಸುವ ಹೊಣೆ ಹೊತ್ತಾಗ ಅಸಾಧ್ಯ ಎನ್ನುವುದು ಯಾವುದೂ ಇಲ್ಲ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಳೆದ ಎರಡು ವಾರಗಳ ಹಿಂದೆ ಜಿ20 ಶೃಂಗ ಸಭೆಯ ಯಶಸ್ಸು ಮತ್ತು ಅದನ್ನು ನಿರ್ವಿಘ್ನವಾಗಿ ನಡೆಯುವ ಹಾಗೆ ಸರ್ವ ರೀತಿಯ ವ್ಯವಸ್ಥೆಗಳನ್ನು ಮಾಡಿದ ಯುವ ಸಮುದಾಯವನ್ನು ಪ್ರಧಾನಿ ಮೋದಿ ಅವರು ಇದೇ ಸಂದರ್ಭದಲ್ಲಿ ಶ್ಲಾಘಿಸಿದ್ದಾರೆ.
ಒಟ್ಟಿನಲ್ಲಿ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಭಾರತ ಅಸಾಧ್ಯ ಎಂದುಕೊಂಡಿದ್ದ ಸಾಧನೆಗಳನ್ನು ಮಾಡಿ, ವಿಶ್ವದ ಬಲಿಷ್ಠ ರಾಷ್ಟ್ರ ಎಂಬ ಕೀರ್ತಿಗೂ ಭಾಜನವಾಗಿದೆ. ಸ್ವಾತಂತ್ರ್ಯ ನಂತರದ ಹಲವು ದಶಕಗಳ ಕಾಲ ಪ್ರಪಂಚದೆದುರು ಕೈ ಕಟ್ಟಿ ನಿಲ್ಲುವಂತಹ ಪರಿಸ್ಥಿತಿಯಲ್ಲಿ ಇದ್ದ ಭಾರತದ ಮುಮದೆ ಪ್ರಪಂಚವೇ ಕೈ ಮುಗಿದು ನಿಲ್ಲುವ ಹಾಗೆ ಮಾಡಿದ ಸಾಧನೆಯ ಶ್ರೇಯಸ್ಸು ಪ್ರಧಾನಿ ಮೋದಿ ಅವರಿಗೆ ಸಲ್ಲಬೇಕು ಎನ್ನುವುದು ನಿಸ್ಸಂಶಯ.