ಮಹಿಳೆಯರಿಗೆ ದೇಶದಲ್ಲಿ ಹೆಚ್ಚು ಪ್ರಾತಿನಿಧ್ಯವನ್ನು ನೀಡುವ ಮಹಿಳಾ ಮೀಸಲಾತಿ ಮಸೂದೆ ಕಾಯ್ದೆಯನ್ನು ಸಂಸತ್ತಿನಲ್ಲಿ ಮೊನ್ನೆಯಷ್ಟೇ ಅಂಗೀಕರಿಸಲಾಗಿದೆ. ಈ ಮಸೂದೆಯನ್ನು ಬೆಂಬಲಿಸಿದ ಎಲ್ಲರಿಗೂ ಪ್ರಧಾನಿ ನರೇಂದ್ರ ಮೋದಿ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.
ಹಾಗೆಯೇ, ಸಾಮಾಜಿಕ ಜಾಲತಾಣದಲ್ಲಿ ‘ನಾರಿ ಶಕ್ತಿ ವಂದನ್’ ಅಧಿನಿಯಮದ ಬಗ್ಗೆ ಪ್ರಧಾನಿ ಅಭಿಪ್ರಾಯ ಹಂಚಿಕೊಂಡಿದ್ದು, ಈ ನಿರ್ಣಯದ ಅಂಗೀಕಾರವು ದೇಶದ ಪ್ರಜಾಸತ್ತಾತ್ಮಕ ಪ್ರಯಾಣದಲ್ಲಿ ನಿರ್ಣಾಯಕ ಕ್ಷಣವಾಗಿದೆ ಎಂದು ಅವರು ಹೇಳಿದ್ದಾರೆ. ಹಾಗೆಯೇ ಇದೇ ಸಂದರ್ಭದಲ್ಲಿ ನಾಗರಿಕರಿಗೂ ಪ್ರಧಾನಿ ಮೋದಿ ಅವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಸಂಸತ್ತಿನಲ್ಲಿ ಈ ಮಹತ್ವದ ಮಸೂದೆಯನ್ನು ಅಂಗೀಕರಿಸುವ ಮೂಲಕ ಮಹಿಳೆಯರ ಶಕ್ತಿ ಹೆಚ್ಚಿಸಲಾಗಿದೆ. ದೇಶದಲ್ಲಿ ಮಹಿಳಾ ಪ್ರಾಬಲ್ಯತೆ ಹೆಚ್ಚಿಸಲು, ಮಹಿಳಾ ಸಬಲೀಕರಣದ ದೃಷ್ಟಿಯಿಂದ ಈ ಮಸೂದೆ ಮಹತ್ವ ಪಡೆದಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಇದು ದೇಶದಲ್ಲಿ ಮಹಿಳಾ ಪ್ರಾಬಲ್ಯದ, ಮಹಿಳಾ ಸಬಲೀಕರಣದ ಯುಗಕ್ಕೆ ಮುನ್ನುಡಿ ಬರೆಯಲಿದೆ ಎಂದು ಅವರು ತಿಳಿಸಿದರು.
ಈ ಮಸೂದೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶಾಸನ ವಾಗಿ ಮಾತ್ರವಲ್ಲದೆ, ರಾಷ್ಟ್ರ ನಿರ್ಮಾಣ ಮಾಡಿದ ಮತ್ತು ಸ್ಥಿತಿ ಸ್ಥಾಪಕತ್ವ, ಕೊಡುಗೆಗಳಿಂದ ದೇಶವನ್ನು ಶ್ರೀಮಂತಗೊಳಿಸಿದ ಅಸಂಖ್ಯಾತ ಸ್ತ್ರೀಯರಿಗೆ ನೀಡಿದ ಗೌರವ ಎಂಬುದಾಗಿಯೂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭಾರತದ ಎಲ್ಲಾ ಮಹಿಳೆಯರಿಗೂ ಈ ಮಸೂದೆಯು ಶಕ್ತಿ, ಧೈರ್ಯ ಮತ್ತು ಅದಮ್ಯ ಮನೋಭಾವವನ್ನು ನೀಡಲಿರುವುದಾಗಿಯೂ ಪ್ರಧಾನಿ ಮೋದಿ ಅವರು ಹೇಳಿದ್ದಾರೆ.
ಈ ಮಸೂದೆಯನ್ನು ಸಂಸತ್ತಿನಲ್ಲಿ ಅಂಗೀಕಾರ ಮಾಡಿರುವುದು ಐತಿಹಾಸಿಕ ಕ್ರಮ ಎಂಬುದಾಗಿ ಬಣ್ಣಿಸಿದ್ದಾರೆ. ಮಹಿಳೆಯರ ಧ್ವನಿಯನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿಯೂ ಇದು ಕಾರ್ಯ ನಿರ್ವಹಿಸಲಿದೆ ಎನ್ನುವ ಭರವಸೆಯನ್ನು ಅವರು ವ್ಯಕ್ತಪಡಿಸಿದ್ದಾರೆ.
ಈ ಮಸೂದೆಯನ್ನು ಪಕ್ಷಾತೀತವಾಗಿ ಹೆಚ್ಚಿನ ಸಂಸದರು ಒಪ್ಪಿಕೊಂಡು ಮತ ಚಲಾವಣೆ ಮಾಡುವ ಮೂಲಕ ಈ ಕಾಯ್ದೆ ಸಂಸತ್ತಿನಲ್ಲಿ ಅಂಗೀಕಾರವಾಗಿತ್ತು. ಇಬ್ಬರು ಸಂಸದರು ಈ ಕಾಯ್ದೆಯ ವಿರುದ್ಧ ಮತ ಚಲಾಯಿಸಿದ್ದರು.