ಪ್ರಚಲಿತ

ಪಾಕಿಸ್ತಾನದ ತಾಕತ್ತಿನ ಬಗ್ಗೆ ಪ್ರಧಾನಿ ಮೋದಿ ಉತ್ತರಕ್ಕೆ ಕಾಂಗ್ರೆಸ್ ತತ್ತರ

ಭಾರತದ ತಾಕತ್ತು, ಶಕ್ತಿ ಏನು ಎಂಬುದು ವಿಶ್ವದ ಅರಿವಿಗೆ ಬರಬೇಕಾದರೆ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಆಡಳಿತ ಚುಕ್ಕಾಣಿ ಹಿಡಿಯಬೇಕಾಗಿ ಬಂತು. ಕಳೆದ ಹತ್ತು ವರ್ಷಕ್ಕೂ ಹಿಂದೆ ಭಾರತ ಸರ್ಕಾರವನ್ನು ಮುನ್ನಡೆಸಲು ಸರಿಯಾದ, ಗಟ್ಟಿಯಾದ ನಾಯಕನಿಲ್ಲದ ಕಾರಣ ವಿಶ್ವದೆದುರು ಭಾರತ ಏನು?, ಭಾರತಕ್ಕಿರುವ ಸಾಮರ್ಥ್ಯ ಏನು? ಎನ್ನುವುದು ಯಾರಿಗೂ ಗೊತ್ತಿರಲಿಲ್ಲ. ಆದರೆ ಇಂತಹ ಪರಿಸ್ಥಿತಿಯಿಂದ ಭಾರತವನ್ನು ಮೇಲಕ್ಕೆ ಎತ್ತಿದ ಕೀರ್ತಿ ಸಂಪೂರ್ಣವಾಗಿ ಪ್ರಧಾನಿ ಮೋದಿ ಸರ್ಕಾರಕ್ಕೆ ಸಲ್ಲಬೇಕು ಎನ್ನುವುದರಲ್ಲಿ ಸಂದೇಹವಿಲ್ಲ.

ಎಪ್ಪತ್ತು ದಶಕಗಳ ಕಾಲ ಕಾಂಗ್ರೆಸ್ ಪಕ್ಷ ಈ ದೇಶವನ್ನು ಆಳಿದ್ದರೂ ಸಹ, ದೇಶದ ಅಭಿವೃದ್ಧಿ, ಶಕ್ತಿ ಸಾಮರ್ಥ್ಯ ಏನು ಎಂಬುದನ್ನು ವಿಶ್ವಕ್ಕೆ ಅರಿವಾಗಿಸುವಲ್ಲಿ ಎಡವಿತ್ತು ಎನ್ನಬಹುದು. ಶತ್ರು ರಾಷ್ಟ್ರ ಪಾಕಿಸ್ತಾನಕ್ಕೆ ಬೇಕಾದಂತೆ ನಮ್ಮ ದೇಶವನ್ನು ನಡೆಸಿಕೊಳ್ಳುವುದು, ಭಯೋತ್ಪಾದಕರ ಜೊತೆಗೆ ನಂಟು, ದೇಶ ವಿರೋಧಿ ಶಕ್ತಿಗಳ ಜೊತೆಗೆ ಸಂಬಂಧ, ದೇಶದ ಸಂಪತ್ತು ಲೂಟುವುದು, ಭ್ರಷ್ಟರಿಗೆ ನೆರವಾಗುವುದು ಮೊದಲಾದ ಹಲವಾರು ಸಮಾಜ ವಿರೋಧಿ ಕೃತ್ಯಗಳನ್ನೇ ಆಡಳಿತ ಎಂದುಕೊಂಡು ಬದುಕಿದ ಪಕ್ಷ ಕಾಂಗ್ರೆಸ್ ಎಂದರೆ ತಪ್ಪಾಗಲಾರದು.

ಭಾರತದ ಆಡಳಿತದ ಕೀಲಿ ಕೈ ಕಾಂಗ್ರೆಸ್ ನಾಯಕರಲ್ಲಿದ್ದ ಸಂದರ್ಭದಲ್ಲಿ ದೇಶ ಭಯೋತ್ಪಾದಕರ ಕೃತ್ಯಗಳಿಗೆ, ಹಿಂಸಾಚಾರಕ್ಕೆ ಹೆಚ್ಚೆಚ್ಚು ಬಲಿಯಾಗುವ ಪರಿಸ್ಥಿತಿ ಇತ್ತು. ಅಬೇಪಾರಿ ಪಾಕಿಸ್ತಾನಕ್ಕೂ ಭಾರತ ಹೆದರಿ ಬದುಕುವ ಪರಿಸ್ಥಿತಿ ಇತ್ತು ಎನ್ನುವುದಕ್ಕಿಂತ ಕಾಂಗ್ರೆಸ್ ಅಂತಹ ಸ್ಥಿತಿಯನ್ನು ನಿರ್ಮಾಣ ಮಾಡಿತ್ತು ಎನ್ನುವುದು ಹೆಚ್ಚು ಸೂಕ್ತ. ಗಡಿ ಭಾಗಗಳಲ್ಲಿ ಪಾಕ್ ಉಗ್ರರ ಅಟ್ಟಹಾಸವನ್ನು ಮಟ್ಟ ಹಾಕುವ ಅನುಮತಿಯನ್ನು ಸಹ ಕಾಂಗ್ರೆಸ್ ನಮ್ಮ ರಕ್ಷಣಾ ಸಚಿವಾಲಯಕ್ಕೆ, ಸೇನೆಗೆ ನೀಡಿರಲಿಲ್ಲ ಎಂದರೆ ನಾವು ಎಂತಹ ದುರಂತ ಸ್ಥಿತಿಯಲ್ಲಿ ಇದ್ದೆವು ಎನ್ನುವುದನ್ನು ಒಂದು ಬಾರಿ ಊಹಿಸಿ ನೋಡಿ. ಆಗ ಕಾಂಗ್ರೆಸ್ ಪಕ್ಷದ ಕರ್ಮಕಾಂಡ ಎಂತದ್ದು ಎನ್ನುವುದರ ಅರಿವು ನಮಗಾಗುತ್ತದೆ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ.

ಕಾಂಗ್ರೆಸ್ ಪಕ್ಷದ ಕೆಲವು ನಾಯಕರು ಈಗಲೂ ಸಹ ಭಯೋತ್ಪಾದಕರಿಗೆ, ಭಾರತದ ಆಜನ್ಮ ಶತ್ರು ರಾಷ್ಟ್ರ ಪಾಕಿಸ್ತಾನಕ್ಕೆ ಬಹಿರಂಗ ಬೆಂಬಲ ಸೂಚಿಸುತ್ತಾರೆ ಎನ್ನುವುದು ದುರಂತ. ಕೆಲ ದಿನಗಳ ಹಿಂದಷ್ಟೇ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಎನಿಸಿಕೊಂಡ ಮಣಿಶಂಕರ್ ಅಯ್ಯರ್, ‘ಪಾಕಿಸ್ತಾನದ ಬಳಿ ಅಣು ಬಾಂಬ್ ಇದೆ. ಆ ರಾಷ್ಟ್ರಕ್ಕೆ ಭಾರತ ಭಯ ಪಡಬೇಕು’ ಎನ್ನುವ ಹೇಳಿಕೆ ನೀಡಿ ಸಾಾರ್ವಜನಿಕರ ಆಕ್ರೋಶಕ್ಕೆ ಗುರಿಯಾದ ವಿಷಯ ಇನ್ನೂ ಹಸಿಹಸಿಯಾಗೇ ಇದೆ.

ಕಾಂಗ್ರೆಸ್ ಪಕ್ಷದ ಪಾಕ್ ಪ್ರೇಮಕ್ಕೆ ಸಂಬಂಧಿಸಿದ ಹಾಗೆ ಪ್ರಧಾನಿ ನರೇಂದ್ರ ಮೋದಿ ಅವರು ವಾಗ್ದಾಳಿ ನಡೆಸಿದ್ದು, ನಾನು ಪಾಕಿಸ್ತಾನದ ಲಾಹೋರ್‌ಗೆ ತೆರಳಿ ಆ ರಾಷ್ಟ್ರದ ಪರಿಸ್ಥಿತಿ ಏನು, ತಾಕತ್ತು ಏನು ಎನ್ನುವುದನ್ನು ನೋಡಿಕೊಂಡು ಬಂದಿದ್ದೇನೆ ಎಂದಿದ್ದಾರೆ. ಆದರೆ ಮೂಲಕ ಪಾಕ್ ಪ್ರೇಮ ಮೆರೆದ ಅಯ್ಯರ್‌ಗೆ ಟಾಂಗ್ ನೀಡಿದ್ದಾರೆ.

ನಾನು ಪಾಕಿಸ್ತಾನಕ್ಕೆ ಹೋಗಿದ್ದ ಸಂದರ್ಭದಲ್ಲಿ ಹಲವಾರು ಪತ್ರಕರ್ತರು ನನ್ನನ್ನು ಪ್ರಶ್ನೆ ಮಾಡಿದ್ದರು. ಪಾಕಿಸ್ತಾನಕ್ಕೆ ವಿಸಾ ಇಲ್ಲದೆ ಹೇಗೆ ಬಂದಿರಿ ಎಂದು ಕೇಳಿದ್ದರು. ಆ ಸಂದರ್ಭದಲ್ಲಿ ನಾನು ಅವರಿಗೆ ಉತ್ತರ ನೀಡಿದ್ದೆ. ಹಿಂದೆ ಪಾಕಿಸ್ತಾನ ನಮ್ಮ ದೇಶದ ಭಾಗವೇ ಆಗಿತ್ತು ಎಂದು ಉತ್ತರಿಸಿದ್ದೆ ಎಂದಿದ್ದಾರೆ.

ಇದೇ ಸಂದರ್ಭದಲ್ಲಿ ಜಮ್ಮು ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸಿದ್ದ ಆರ್ಟಿಕಲ್ 370 ರದ್ದತಿಯ ಬಗ್ಗೆ, ಮುಸ್ಲಿಂ ಮೀಸಲಾತಿಗೆ ‌ಸಂಬಂಧಿಸಿದ ಹಾಗೆ ಪ್ರಧಾನಿ ಮೋದಿ ಅವರು ಬಹಿರಂಗವಾಗಿಯೇ ವಿರೋಧಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎನ್ನುವ ಪ್ರತಿಪಕ್ಷಗಳ ಆರೋಪಕ್ಕೂ ಅವರು ಪ್ರತ್ಯುತ್ತರ ನೀಡಿದ್ದಾರೆ.

ಹಾಗೆಯೇ ಪ್ರತಿಪಕ್ಷಗಳು ಭಾರತದ ವಿದೇಶಾಂಗ ನೀತಿಗೆ ಸಂಬಂಧಿಸಿದ ಹಾಗೆ ನನ್ನನ್ನು ಪ್ರಶ್ನೆ ಮಾಡುತ್ತಿದ್ದರು. ಜೊತೆಗೆ ವಿದೇಶಾಂಗ ವ್ಯವಹಾರಗಳನ್ನು ತಮ್ಮಿಂದ ಸಾಧ್ಯವೇ ಎನ್ನುವ ಸಂದೇಹವನ್ನು ಸಹ ವ್ಯಕ್ತಪಡಿಸಿದ್ದವು. ಆದರೆ ಪ್ರಸ್ತುತ ನಮ್ಮ ಸರ್ಕಾರ ವಿಶ್ವದ ಅಧಿಕೃತ ನಾಯಕರ ಜೊತೆಗೆ ಸರ್ಕಾರಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಉತ್ತಮ ಬಾಂಧವ್ಯ ಹೊಂದುವುದರ ಜೊತೆಗೆ, ವೈಯಕ್ತಿಕವಾಗಿಯೂ ಉತ್ತಮ ಬಾಂಧವ್ಯ ಹೊಂದಿದ್ದಾಗಿ ಅವರು ತಿಳಿಸಿದ್ದಾರೆ.

ಒಟ್ಟಿನಲ್ಲಿ ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ಅಪನಂಬಿಕೆ ಹೊಂದಿದವರು, ಅಪಪ್ರಚಾರ ಮಾಡುವವರ ಬಾಯಿ ಮುಚ್ಚಿಸುವ ಹಾಗೆ ಮತ್ತು ಜನ ಮೆಚ್ಚುವ ಹಾಗೆ ಉತ್ತಮ ಆಡಳಿತವನ್ನು ನೀಡುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಾಡುತ್ತಿದ್ದಾರೆ.

ಪ್ರಧಾನಿ ಮೋದಿ ಅವರ ನೇರ, ದಿಟ್ಟ ನಿಲುವುಗಳು ಭಾರತದೊಳಗೇ ಇದ್ದುಕೊಂಡು ದೇಶ ವಿರೋಧಿ ಚಟುವಟಿಕೆಗಳನ್ನು ನಡೆಸುವವರು, ಮಸಲತ್ತು ಮಾಡುವವರು, ದೇಶ ವಿರೋಧಿ ಪಕ್ಷಗಳ ಜೊತೆಗೆ ಭಾರತ ವಿರೋಧಿ ರಾಷ್ಟ್ರಗಳಿಗೆ, ಭಯೋತ್ಪಾದಕರಿಗೆ ನಡುಕ ಹುಟ್ಟಿಸಿದೆ ಎನ್ನುವುದರಲ್ಲಿ ಸಂಶಯವಿಲ್ಲ.

Tags

Related Articles

Close