ಪ್ರಚಲಿತ

ಕಾಂಗ್ರೆಸ್‌‌ಗೆ ದೇಶದ ಅಭಿವೃದ್ಧಿ ಸಹಿಸಲಾಗುತ್ತಿಲ್ಲ: ಪ್ರಧಾನಿ ಮೋದಿ

ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿಂದೀಚೆ ಕಾಂಗ್ರೆಸ್ ಪಕ್ಷ ಈ ದೇಶವನ್ನಾಳಿದೆ. ಬಹುಕಾಲದ ಕಾಂಗ್ರೆಸ್ ಆಡಳಿತದಲ್ಲಿ ಕುಟುಂಬ ರಾಜಕಾರಣ, ಭ್ರಷ್ಟಾಚಾರದ ಹೊರತಾಗಿ ದೇಶದ ಅಭಿವೃದ್ಧಿ, ದೇಶದ ಜನರ ಜೀವನ ಮಟ್ಟ ಸುಧಾರಣೆ, ಮೂಲಭೂತ ಸೌಕರ್ಯಗಳ ವಿತರಣೆ ಹೀಗೆ ಯಾವು ದರ ಬಗೆಗೂ ಕಾಂಗ್ರೆಸ್ ಗಮನ ಹರಿಸಿಲ್ಲ ಎನ್ನುವುದು ಸತ್ಯ.

ಆದರೆ ಕಳೆದ ಒಂಬತ್ತು ವರ್ಷಗಳಿಂದೀಚೆಗೆ ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಒಕ್ಕೂಟ ಈ ದೇಶದ ಆಡಳಿತ ಚುಕ್ಕಾಣಿ ಹಿಡಿದಿದ್ದು, ಇಡೀ ಪ್ರಪಂಚವೇ ಭಾರತವನ್ನು ತಿರುಗಿ ನೋಡುವ ಹಾಗೆ, ಮೂಗಿಗೆ ಬೆರಳಿಟ್ಟು ಬೆರಗಾಗುವ ಹಾಗೆ ಭಾರತ ಬದಲಾಗಿದೆ ಎನ್ನುವುದು ಎಲ್ಲರೂ ಬಲ್ಲರು. ಕಾಂಗ್ರೆಸ್ ಸ್ವ ಲಾಭದ ದೃಷ್ಟಿಯಿಂದ ಆಡಳಿತ ನಡೆಸಿದರೆ, ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಈ ದೇಶದ ಜನರ ಒಳಿತಿಗಾಗಿ ಕೆಲಸ ಮಾಡುತ್ತಿದೆ ಎನ್ನುವುದು ಕಣ್ಣಿಗೆ ಕಾಣುವ ಸತ್ಯ.

ಪ್ರಧಾನಿ ಮೋದಿ ಅವರು ಕಾಂಗ್ರೆಸ್ ಬಗ್ಗೆ ಹರಿಹಾಯ್ದಿದ್ದು, ನಗರ ನಕ್ಸಲರ ಬೆಂಬಲದಿಂದ ಕಾಂಗ್ರೆಸ್ ಪಕ್ಷ ನಡೆಯುತ್ತಿದೆ. ಕಾಂಗ್ರೆಸ್ ಪಕ್ಷವೇನಾದರೂ ಭಾರತದ ಆಡಳಿತ ಚುಕ್ಕಾಣಿ ಹಿಡಿದರೆ ಈ ದೇಶದ ಅಭಿವೃದ್ಧಿಯ ವೇಗ ಕುಂಠಿತವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜೊತೆಗೆ ಬಿಜೆಪಿಯ ಅಭಿವೃದ್ಧಿ ಕಾರ್ಯಗಳನ್ನು ಸಮರ್ಥನೆ ಮಾಡಿಕೊಂಡಿರುವ ಅವರು, ಬಿಜೆಪಿ ನೀಡುವ ಭರವಸೆ ಗಳು ಈ ದೇಶದ ತಳ ಮಟ್ಟದ ಜನರಿಗೂ ತಲುಪುವ ಹಾಗೆ ಇರುತ್ತದೆ. ಮೋದಿ ಎಂದರೆ ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸುವ ಗ್ಯಾರಂಟಿ ಎಂದು ಹೇಳಿದ್ದಾರೆ. ಗರೀಬಿ ಹಠಾವೋ ಘೋಷಣೆಯನ್ನು ಕಾಂಗ್ರೆಸ್ ಪಕ್ಷ ಕಳೆದ ಐವತ್ತು ವರ್ಷಗಳ ಹಿಂದೆ ನೀಡಿತ್ತು. ಆದರೆ ಕಾಂಗ್ರೆಸ್ ಅಧಿಕಾರದಲ್ಲಿ ಇರುವವರೆಗೂ ಆ ಭರವಸೆಯನ್ನು ಈಡೇರಿಸುವ ಕೆಲಸವನ್ನು ಮಾಡಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಇದೇ ಸಂದರ್ಭದಲ್ಲಿ ಬಿಜೆಪಿಯ ಸಾಧನೆಗಳನ್ನು ಸಹ ಸಮರ್ಥಿಸಿಕೊಂಡ ಪ್ರಧಾನಿ ಮೋದಿ, ಕಳೆದ ಕೇವಲ ಐದು ವರ್ಷಗಳ ಅವಧಿಯಲ್ಲಿ ಬಿಜೆಪಿ ಆಡಳಿತ ಹಿನ್ನೆಲೆಯಲ್ಲಿ ಸುಮಾರು ಹದಿಮೂರೂವರೆ ಕೋಟಿ ಜನರು ಬಡತನದಿಂದ ಹೊರ ಬಂದಿದ್ದಾರೆ. ನಾವು ದೇಶದ ಹಿಂದುಳಿದ ವರ್ಗದ ಜನರಿಗೆ ನೀಡಿದ ಭರವಸೆಗಳನ್ನು ಆದ್ಯತೆಯ ಖಾತ್ರಿಯ ಮೂಲಕ ಈಡೇರಿಸಿಕೊಂಡು ಬರುವ ಕೆಲಸವನ್ನು ಮಾಡಿದ್ದೇವೆ. ಇಂದು ದೇಶದಲ್ಲಿ ಬಿಜೆಪಿಯು ಆಧುನಿಕ ರಸ್ತೆಗಳು, ವಿಶಾಲ ಹೆದ್ದಾರಿಗಳು, ಎಕ್ಸ್‌ಪ್ರೆಸ್‌ ವೇ ಗಳನ್ನು ನಿರ್ಮಾಣ ಮಾಡುತ್ತಿದ್ದು, ಇದು ಅಭಿವೃದ್ಧಿಯ ಸೂಚಕವಾಗಿದೆ ಎಂದು ಅವರು ನುಡಿದಿದ್ದಾರೆ.

ಹಾಗೆಯೇ ಭಾರತೀಯ ರೈಲ್ವೆಗೆ ಸಂಬಂಧಿಸಿದ ಹಾಗೆಯೂ ಸಾಕಷ್ಟು ಸಕಾರಾತ್ಮಕ ಬದಲಾವಣೆಗಳಾಗಿವೆ. ವಂದೇ ಭಾರತ್‌ನಂತಹ ರೈಲುಗಳು ಆರಂಭವಾಗಿವೆ.ಆಧುನಿಕ ರೈಲುಗಳನ್ನು ಪರಿಚಯಿಸಲಾಗುತ್ತಿದೆ. ರೈಲು ನಿಲ್ದಾಣಗಳು ಸುಸಜ್ಜಿತವಾಗಿವೆ. ಇದೆಲ್ಲಾ ಎನ್.ಡಿ.ಎ. ಆಡಳಿತದಲ್ಲಾಗುತ್ತಿದ್ದು, ಕಾಂಗ್ರೆಸ್‌ಗೆ ಇದು ಅರಗಿಸಲಾಗುತ್ತಿಲ್ಲ ‌ಎಂದು ಹೇಳಿದ್ದಾರೆ.

Tags

Related Articles

Close