ಅಭಿವೃದ್ಧಿಯ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಭಾರತ ಆರ್ಥಿಕತೆಯಲ್ಲಿ ಏರ್ಮುಖ ಪ್ರಗತಿಯನ್ನು ಕಾಣುತ್ತಿದೆ. ಕಳೆದ ಒಂಬತ್ತು ವರ್ಷಗಳಲ್ಲಿ ಭಾರತ ದೊಡ್ಡ ಮಟ್ಟದ ಸಾಧನೆ ಮೆರೆದು, ಇಂದು ಜಗತ್ತಿನ ಹೆಚ್ಚಿನ ರಾಷ್ಟ್ರಗಳಿಗೆ ಗಾಬರಿ ಮತ್ತು ಅಚ್ಚರಿ ಹುಟ್ಚಿಸಿದೆ ಎಂದರೆ ಅತಿಶಯವಾಗಲಾರದು.
ಭಾರತದ ಆರ್ಥಿಕ ಪ್ರಗತಿಗೆ ಸಂಬಂಧಿಸಿದ ಹಾಗೆ ಪ್ರಧಾನಿ ಮೋದಿ ಅವರು ಮಾತನಾಡಿದ್ದು, ಮುಂಬರುವ ವರ್ಷಗಳಲ್ಲಿ ಭಾರತವು ವಿಶ್ವದ ಅಗ್ರಗಣ್ಯ ಮೂರು ಆರ್ಥಿಕತೆಗಳ ಪೈಕಿ ಒಂದಾಗಲಿದೆ ಎಂಬ ವಿಶ್ವಾಸವನ್ನು ಮತ್ತೆ ವ್ಯಕ್ತಪಡಿಸಿದ್ದಾರೆ. ಆ ಮೂಲಕ ಭಾರತದ ಆರ್ಥಿಕ ಅಭಿವೃದ್ಧಿ ದೊಡ್ಡ ಮಟ್ಟದಲ್ಲಾಗುತ್ತಿದ್ದು, ಇದು ವಿಶ್ವದಲ್ಲೇ ಭಾರತದ ಆರ್ಥಿಕತೆಯನ್ನು ಗುರುತಿಸುವಂತೆ ಮಾಡುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಹಮದಾಬಾದ್‌ನ ಸೈನ್ಸ್ ಸಿಟಿಯಲ್ಲಿ ನಡೆದ ವೈಬ್ರಂಟ್ ಗುಜರಾತ್ ಗ್ಲೋಬಲ್ ಶೃಂಗಸಭೆಯಲ್ಲಿ ಮಾತನಾಡಿದ ಅವರು, ಭಾರತದ ಆರ್ಥಿಕತೆಯ ಏರುಗತಿಯ ಬಗ್ಗೆ ಮಾತನಾಡಿದ್ದಾರೆ. ದೇಶಕ್ಕೆ ಬೇಕಾದಷ್ಟು ಪ್ರಮಾಣದಲ್ಲಿ ಬೆಳವಣಿಗೆಯ ಅವಕಾಶಗಳನ್ನು ಹೊಂದಿರುವ ನವ ವಲಯಗಳಲ್ಲಿ ಹೂಡಿಕೆ ಮಾಡಲು ಮತ್ತು ಭಾರತ ದೇಶವನ್ನು 2047 ರ ಅವಧಿಯೊಳಗೆ ಸ್ವಾವಲಂಬಿ ರಾಷ್ಟ್ರವಾಗಿ ಅಭಿವೃದ್ಧಿಯಾಗುವಂತೆ ಕೊಡುಗೆ ನೀಡಲು ಅವರು ದೇಶದ ಉದ್ಯಮಿಗಳು ಮತ್ತು ಹೂಡಿಕೆದಾರರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ನಾನು ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ನನಗೆ ರಾಜ್ಯವನ್ನು ಭಾರತದ ಅಭಿವೃದ್ಧಿಯ ಎಂಜಿನ್ ಮಾಡುವ ಕನಸಿತ್ತು. ಈಗ ಭಾರತದ ಪ್ರಧಾನಿಯಾಗಿದ್ದೇನೆ. ಈ ಸಂದರ್ಭದಲ್ಲಿ ನನಗೆ ಭಾರತವನ್ನು ಪ್ರಪಂಚದ ಬೆಳವಣಿಗೆಯ ಎಂಜಿನ್ ಆಗಿ ಮಾಡಬೇಕು ಎನ್ನುವ ಕನಸಿರುವುದಾಗಿಯೂ ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ
ಇದೇ ಸಂದರ್ಭದಲ್ಲಿ ಶೃಂಗಸಭೆಯ ಇಪ್ಪತ್ತು ವರ್ಷಗಳ ವೈಭವದ ಪಯಣವನ್ನು ಅವರು ನೆನಪಿಸಿಕೊಂಡಿದ್ದಾರೆ. ವಿನಾಶಕಾರಿ ಭೂಕಂಪ ಮತ್ತು ಹಿಂಸಾಚಾರದ ಕಾರಣಕ್ಕೆ ಗುಜರಾತ್ ಆರ್ಥಿಕ ಸಂಕಷ್ಟಕ್ಕೆ ಈಡಾಗಿತ್ತು. ಆ ಸಂದರ್ಭದಲ್ಲಿ ಈ ಬೆಳವಣಿಗೆಯ ಕನಸಿನ ಜೊತೆಗೆ ಪಯಣ ಆರಂಭವಾಯಿತು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಹಾಗೆಯೇ ಗುಜರಾತ್ ಜಾಗತಿಕ ಶೃಂಗಸಭೆಯು ರಾಜ್ಯವನ್ನು ವಿದೇಶಿ ಹೂಡಿಕೆಗಳಿಗೆ ನೆಚ್ಚಿನ ತಾಣವಾಗಿ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿರುವುದನ್ನು ಅವರು ಸ್ಮರಿಸಿಕೊಂಡರು. ಕಳೆದ ಇಪ್ಪತ್ತು ವರ್ಷಗಳಲ್ಲಿ ಗುಜರಾತ್‌ನ ಚಿತ್ರಣವು ವ್ಯಾಪಾರಸ್ಥರ ರಾಜ್ಯದಿಂದ ಉತ್ಪಾದನಾ ಕೇಂದ್ರ ಎಂಬಂತೆ ಬದಲು ಮಾಡಿದೆ. ಇಂದು ವಿವಿಧ ಕ್ಷೇತ್ರಗಳಲ್ಲಿ ಗುಜರಾತ್ ಮುಂಚೂಣಿಯಲ್ಲಿದೆ ಎಂದು ಅವರು ತಿಳಿಸಿದ್ದಾರೆ.