ಕೊರೋನಾ ನಂತರದಲ್ಲಿ ವಿಶ್ವದ ಘಟಾನುಘಟಿ ದೇಶಗಳು ಸಹ ಆರ್ಥಿಕ ಸವಾಲನ್ನು ಎದುರಿಸುತ್ತಿದೆ. ಆರ್ಥಿಕ ಹಿಂಜರಿತಕ್ಕೆ ತುತ್ತಾಗಿ ನಲುಗುತ್ತಿರುವುದು ಸತ್ಯ. ಇಂತಹ ವಿಷಮ ಪರಿಸ್ಥಿತಿಯಲ್ಲಿಯೂ ಭಾರತ ಮಾತ್ರ ಆರ್ಥಿಕವಾಗಿ ಸದೃಢತೆಯನ್ನು ಕಾಪಾಡಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ತಂಡದ ದೂರದೃಷ್ಟಿತ್ವ, ಮುಂದಾಲೋಚನೆಯೇ ಭಾರತ ಆರ್ಥಿಕ ಸವಾಲನ್ನು ಜಯಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎನ್ನುವುದು ಸ್ಪಷ್ಟ.
ಪ್ರಪಂಚ ಬಹು ಆಯಾಮಗಳ ಸಂಘರ್ಷ ಎದುರಿಸುತ್ತಿರುವ ವಿಚಾರ ಎಲ್ಲರಿಗೂ ಗೊತ್ತು. ಹೀಗಿದ್ದರೂ ಭಾರತದ ಆರ್ಥಿಕತೆ ದೀರ್ಘ ಕಾಲದ ವರೆಗೆ ಜಾಗತಿಕ ಉಜ್ವಲ ತಾಣವಾಗಿಯೇ ಗುರುತಿಸಿಕೊಳ್ಳಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೆಪ್ಟೆಂಬರ್ 9 ರಿಂದ ನಡೆಯಲಿರುವ ಜಿ -20 ಶೃಂಗ ಸಭೆಗೂ ಮೊದಲು ಭೌಗೋಳಿಕ ರಾಜಕೀಯ ಅನಿಶ್ಚಿತತೆಗಳು, ವಿಶ್ವಾಸಾರ್ಹ ಜಾಗತಿಕ ಸಂಸ್ಥೆಗಳ ಅನಿವಾರ್ಯತೆಗಳು, ಆರ್ಥಿಕವಾಗಿ ಜವಾಬ್ದಾರಿ ರಹಿತ ನೀತಿಗಳ ಕಾರಣದಿಂದ ಉಂಟಾಗುವ ಅಪಾಯಗಳಿಂದ ಅಲುಗಾಡುತ್ತಿರುವ ಜಗತ್ತಿನಲ್ಲಿ ಭಾರತ ಎಂತಹ ಪಾತ್ರವನ್ನು ವಹಿಸಬೇಕಿದೆ ಎನ್ನುವುದರ ಬಗ್ಗೆ ಪ್ರಧಾನಿ ಮೋದಿ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿದ ಹಾಗೆ ಪ್ರಧಾನಿ ಅವರು ಖಾಸಗಿ ಮಾಧ್ಯಮಕ್ಕೆ ಸಂದರ್ಶನ ನೀಡಿದ್ದು, ಸಬ್ ಕಾ ಸಾತ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್, ಸಬ್ ಕಾ ಪ್ರಯಾಸ್ ಎಂಬಂತೆ ಕಳೆದ ಒಂಬತ್ತು ವರ್ಷಗಳಿಂದ ಕೇಂದ್ರ ಸರ್ಕಾರವು ಎಲ್ಲರ ಅಭಿವೃದ್ಧಿಯ ಜೊತೆಗೆ ದೇಶದ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಆಡಳಿತ ನಡೆಸಿಕೊಂಡು ಬರುತ್ತಿದೆ. ದೇಶದ ಪ್ರಗತಿಯನ್ನು ಮುಂದುವರಿಸಲು ಮತ್ತು ಪ್ರಗತಿಯನ್ನು, ಬೆಳವಣಿಗೆಯ ಫಲವನ್ನು ಕೊನೆಯ ಮೈಲಿಯ ವರೆಗೆ ತಲುಪಿಸುವ ನಿಟ್ಟಿನಲ್ಲಿ ಈ ಉಪಕ್ರಮ ಉತ್ತಮ ಲಾಭಾಂಶವನ್ನು ನೀಡಿದೆ. ಇಂತಹ ಯಶಸ್ಸಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ವಿಶೇಷ ಸ್ಥಾನಮಾನ ಸಹ ದೊರೆತಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಜಿ-20 ಶೃಂಗಸಭೆಯ ಹಿನ್ನೆಲೆಯಲ್ಲಿ ಭಾರತದ ದೃಷ್ಟಿಕೋನ ಏನು ಎಂಬುದನ್ನು ಒತ್ತಿ ಹೇಳಿರುವ ಪ್ರಧಾನಿ ಮೋದಿ ಅವರು, ಜಿ-20 ಶೃಂಗಸಭೆಗೆ ನಾವು ‘ವಸುದೈವ ಕುಟುಂಬಕಂ’ ಎಂಬ ಧ್ಯೇಯ ವಾಕ್ಯವನ್ನು ಇರಿಸಿದ್ದೇವೆ. ಇದು ಜಿ-20 ಪ್ರೆಸಿಡೆನ್ಸಿಯತ್ತ ನಮ್ಮ ದೃಷ್ಟಿಕೋನ ಏನು ಎಂಬುದನ್ನು ಹೆಚ್ಚು ಸ್ಪಷ್ಟವಾಗಿ ಸೆರೆ ಹಿಡಿಯುವ ಕಾರ್ಯ ಮಾಡುತ್ತದೆ. ನಮ್ಮ ದೇಶದ ದೃಷ್ಟಿಯಲ್ಲಿ ಇಡೀ ಭೂ ಮಂಡಲವೇ ಒಂದು ಕುಟುಂಬ ಎಂಬ ಕಲ್ಪನೆ ಇದೆ. ಯಾವುದೇ ಕುಟುಂಬ ಇರಲಿ, ಆ ಕುಟುಂಬದಲ್ಲಿ ಪ್ರತಿಯೊಬ್ಬ ಸದಸ್ಯರ ಭವಿಷ್ಯ ಇತರ ಸದಸ್ಯರ ಜೊತೆಗೂ ಆಳವಾಗಿ ಬೇರೂರಿರುತ್ತದೆ. ಆದ್ದರಿಂದ ಒಗ್ಗಟ್ಟಾಗಿ, ಒಟ್ಟಾಗಿ ಕಾರ್ಯ ನಿರ್ವಹಿಸಿದರೆ ಒಟ್ಟಿಗೆ ಪ್ರಗತಿ ಹೊಂದುವುದು ಸಾಧ್ಯವಾಗುತ್ತದೆ ಎಂದು ಅವರು ಹೇಳಿದ್ದಾರೆ.
ಜಿ-20 ಶೃಂಗಸಭೆಗಾಗಿ ಭಾರತವು ತನ್ನ ಕಾರ್ಯತಂತ್ರ ರೂಪಿಸಿದಾಗ, ಸಾರ್ವತ್ರಿಕವಾಗಿ ಅದನ್ನು ಸ್ವಾಗತಿಸಲಾಗಿದೆ. ಜಾಗತಿಕ ಸಮಸ್ಯೆಗಳಿಗೆ ಪರಿಹಾರವನ್ನು ಕಂಡು ಹಿಡಿಯುವ ಹಿನ್ನೆಲೆಯಲ್ಲಿ ಉಪಯೋಗವಾಗುವ ಹಾಗೆ ಭಾರತವು ತನ್ನ ಪೂರ್ವಭಾವಿ ಹಾಗೂ ಸಕಾರಾತ್ಮಕ ವಿಧಾನವನ್ನು ತರುವುದು ಎಲ್ಲರಿಗೂ ಗೊತ್ತು. ಈ ಶೃಂಗಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡ ಭಾರತವು ಜೈವಿಕ ಇಂಧನ ಒಕ್ಕೂಟ ಆರಂಭ ಮಾಡಲಿದೆ. ಇದು ಪ್ರಪಂಚದ ರಾಷ್ಟ್ರಗಳಿಗೆ ತಮ್ಮ ಶಕ್ತಿಯ ಅಗತ್ಯತೆಗಳನ್ನು ಪೂರೈಕೆ ಮಾಡಲು ಸಹಾಯ ಮಾಡುತ್ತದೆ. ಆರ್ಥಿಕವಾಗಿ ಸಬಲವಾಗುವುದಕ್ಕೂ ಸಹಾಯ ಮಾಡಲಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.