ಪ್ರಚಲಿತ

ರಾಜಕಾರಣಿಗಳೇ ಹುಷಾರ್.. ದೈವ ದೇವರ ಬಗ್ಗೆ ತುಟಿ ಮೀರಿ ಮಾತನಾಡುವ ಮೊದಲು ಆಲೋಚಿಸಿ..

ಈ ಹಿಂದೆ ಕೊನೇ ಪಕ್ಷ ಚುನಾವಣೆ ಬಂದಾಗಲಾದರೂ ರಾಜಕಾರಣಿಗಳಿಗೆ ದೈವ ದೇವರುಗಳ ಮೇಲೆ ಭಕ್ತಿ ಬರುತ್ತಿತ್ತು. ಆದರೆ ಕಾಲ ಬದಲಾದ ಹಾಗೆ ರಾಜಕಾರಣಿಗಳು ದೈವ ದೇವರುಗಳನ್ನು ಒಂದೋ ಗುತ್ತಿಗೆ ತೆಗೆದುಕೊಂಡಂತೆ ಅಥವಾ ದೈವ ದೇವರನ್ನು ಅವಹೇಳನ ಮಾಡುವ ಹಾಗೆ ಮಾತನಾಡುವುದು ತೀರಾ ಸಾಮಾನ್ಯ ಎಂಬಂತಾಗಿದೆ.

ಈ ಛಾಳಿ ಯಾವುದೋ ಒಂದು ಪಕ್ಷಕ್ಕೆ ಮಾತ್ರ ಸೀಮಿತವಾಗಿಲ್ಲ. ದೇಶದಲ್ಲಿರುವ ಸಾಮಾನ್ಯ ಎಲ್ಲಾ ಪಕ್ಷಗಳ ಕೆಲವು ರಾಜಕಾರಣಿಗಳ ಸ್ಥಿತಿ ಇದೇ ಆಗಿದೆ. ಜೊತೆಗೆ ಅಂತಹ ಕೆಲ ರಾಜಕಾರಣಿಗಳಿಂದಾಗಿ ಆ ಪಕ್ಷದ ನಿಜವಾದ ದೈವಭಕ್ತ ರಾಜಕಾರಣಿಗಳ ಮೇಲೆ, ಒಟ್ಟಿನಲ್ಲಿ ಇಡೀ ಪಕ್ಷದ ಮೇಲೆಯೇ ಜನರಿಗೆ ಕೆಟ್ಟ ಅಭಿಪ್ರಾಯ ಹುಟ್ಟುಕೊಳ್ಳುವಂತಾಗುತ್ತಿರುವುದು ಶೋಚನೀಯ.

ಮಾಂಸ ತಿಂದು ದೇಗುಲಕ್ಕೆ ಪ್ರವೇಶಿಸುವಲ್ಲಿಂದ ಹಿಡಿದು, ದೈವ ದೇವರುಗಳ ಹೆಸರನ್ನು ಹೇಳಿಕೊಂಡು ಅವಹೇಳನ ಮಾಡುವಂತಹ ರಾಜತಾರಣಿಗಳಿಂದಾಗಿ, ಆ ಪಕ್ಷದ ನಾಯಕರುಗಳ ಜೊತೆಗೆ ಕಾರ್ಯಕರ್ತರು ಸಹ ಮುಜುಗರಕ್ಕೆ ಒಳಗಾಗುತ್ತಿದ್ದಾರೆ. ಜೊತೆಗೆ ಅತ್ತ ವಿರೋಧಿಸಲೂ ಆಗದೆ, ಇತ್ತ ಅವರ ಹೇಳಿಕೆಗಳನ್ನು ಸಮರ್ಥಿಸಿಕೊಳ್ಳುವುದಕ್ಕೂ ಮನಸ್ಸು ಒಪ್ಪದೆ ಉಭಯಸಂಕಟಕ್ಕೆ ತುತ್ತಾಗುವ ಸ್ಥಿತಿಯನ್ನು ಎಲ್ಲಾ ಪಕ್ಷಗಳ ಕಾರ್ಯಕರ್ತರೂ ಅನುಭವಿಸುತ್ತಿದ್ದಾರೆ ಎನ್ನುವುದು ವಾಸ್ತವ. ಆದರೂ ಕೆಲವು ದೈವ ಭಕ್ತರು ತಮ್ಮ ಪಕ್ಷದವರೇ ದೈವ ದೇವರುಗಳನ್ನು ಅವಹೇಳನ ಮಾಡಿದಾಗ ದೈರ್ಯವಾಗಿ ಅವರನ್ನು ಖಂಡಿಸುತ್ತಿರುವುದು ಸಂತಸದ ವಿಷಯ. ಇಂತಹ ಅಲ್ಪಮತಿಯ ರಾಜಕಾರಣಿಗಳಿಂದಾಗಿ ಅಭಿವೃದ್ಧಿ‌ಯ ಮೂಲಕವೇ ಜನರ ಮನಸ್ಸನ್ನು ಗೆದ್ದಿರುವ ಅದೇ ಪಕ್ಷದ ನಾಯಕರಿಗೂ ಸಾರ್ವಜನಿಕ ವಲಯದಲ್ಲಿ ಛೀಮಾರಿ ಬೀಳುತ್ತಿರುವುದು ನೋವಿನ ವಿಷಯ.

ಕೆಲ ರಾಜಕಾರಣಿಗಳು ವರ್ಷಪೂರ್ತಿ ದೇವರನ್ನು, ದೈವಗಳನ್ನು ಹೀಯಾಳಿಸಿ, ಅವಹೇಳನ ಮಾಡಿದರೂ, ಚುನಾವಣೆಯ ಸಮಯದಲ್ಲಿ ಎಲ್ಲಿ ಇಲ್ಲದ ಭಕ್ತಿ ಮೈಮೇಲೆ ಬಂದಂತೆ ದೇವಾಲಯಗಳಿಗೆ ಹೋಗುವುದು, ಪೂಜೆ ಪುನಸ್ಕಾರಗಳನ್ನು ಮಾಡುವುದು ಮಾಡುವ ಮೂಲಕ ಜನರನ್ನು ಮೋಡಿ ಮಾಡಲು ನಾಟಕವನ್ನಾದರೂ ಮಾಡುತ್ತಾರೆ. ಆದರೆ ಇನ್ನೂ ಕೆಲ ಪಕ್ಷಗಳು ದೇವಾಲಯಗಳಿಗೆ ತಮ್ಮ ಕೈಲಾದ ಸೇವೆ ಸಲ್ಲಿಸುವಾಗ, ಅದೇ ಪಕ್ಷದ ಇನ್ನೂ ಕೆಲವರು ಬೇರೆ ಪಕ್ಷವನ್ನು ಹೀಗಳೆವ ನೆಪದಲ್ಲಿ, ದೈವ ದೇವರನ್ನು ಸಹ ಅವಹೇಳನ ಮಾಡುತ್ತಿರುವುದು ಖೇದಕರ.

ಎಲ್ಲಾ ಪಕ್ಷಗಳ ಅಂತಹ ರಾಜಕಾರಣಿಗಳಿಗೆ ದೈವ ದೇವರುಗಳೇ ಬುದ್ಧಿ ನೀಡಬೇಕಷ್ಟೇ. ಮಾತು ಆಡಿದರೆ ಹೋಯ್ತು… ಮುತ್ತು ಒಡೆದರೆ ಹೋಯ್ತು.. ಎಂಬ ಮಾತನ್ನು ಅರಿತುಕೊಂಡು, ತುಟಿ ಮೀರಿ ಮಾತನಾಡುವ ಮುನ್ನ ಆಲೋಚಿಸಿದಲ್ಲಿ ಉತ್ತಮ. ಇಲ್ಲವೇ ಸಾರ್ವಜನಿಕರು ಕಲಿಸಬೇಕಾದ ಸಮಯಕ್ಕೆಯೇ ನಿಮಗೆ ತಕ್ಕ ಶಾಸ್ತಿ ಮಾಡಿಯಾರು.. ಜೋಕೆ..

ಹಾಗೆಯೇ ದೈವ ದೇವರುಗಳನ್ನು ಸಿನೆಮಾ, ನಾಟಕಗಳಿಗೆ ತರುವವರೂ ಸಹ ಇನ್ನು ಮುಂದಾದರೂ ಕೊಂಚ ಆಲೋಚಿಸಿದಲ್ಲಿ ಉತ್ತಮ.

Tags

Related Articles

Close