ಪ್ರಚಲಿತ

ರಾಜದೀಪ್ ಸರದೇಸಾಯಿ ಕೈ ಯಲ್ಲಿ ಅತಿ ಪ್ರಾಮಾಣಿಕ, ಜಾತ್ಯಾತೀತ ಆದರ್ಶ ರಾಜಕಾರಣಿ ಎಂದು ಹಾಡಿ ಹೊಗಳಿಸಿಕೊಂಡ ಮಂಗಳೂರಿನ ಶಾಸಕ ಲೋಬೊ ಅವರ ನಿಜ ಬಣ್ಣ ಗೊತ್ತೆ?

ಎನ್.ಡಿ.ಟಿ.ವಿ, ರಾಜದೀಪ್, ಬರ್ಖಾ ದತ್ತ್ ಹಾಗೂ ಇವರದೆ ಓರಗೆಯ ಇನ್ನಿತರ ಮಾಧ್ಯಮಗಳ ಪತ್ರಕರ್ತರಿಗೆ ಕಾಂಗ್ರೆಸ್ ಅಂದರೆ ಅದೇನು ಪ್ರೀತಿ, ಅದೇನು ಆದರ? ಏನು ಗೌರವ, ಏನು ಭಯ -ಭಕ್ತಿ! ಇರಬೇಕಾದದ್ದೆ. ಏಕೆಂದರೆ ತಮ್ಮ ಮಾತೃ ಪಕ್ಷದವರಲ್ಲವೆ? ಕಾಲ ಕಾಲಕ್ಕೂ ಕಪ್ಪ ಕಾಣಿಕೆ ಸಲ್ಲಿಸುತ್ತಾ, ತಮಗೆ ಹೇಗೆ ಬೇಕೆಂದರೆ ಹಾಗೆ ಸತ್ಯಗಳನ್ನು ತಿರುಚುವ, ಬಾಯಿಗೆ ಬಂದದ್ದು ಬೊಗಳುವ “ಅಭಿವ್ಯಕ್ತಿ ಸ್ವಾತಂತ್ರ್ಯ” ಕೊಟ್ಟ ‘ಕೈ’ಗಳಿಗೆ ನಿಯತ್ತಿನ ನಾಯಿಯಂತೆ ಇರಬೇಕಾದದ್ದು ಇವರ ಪರಮ ಕರ್ತವ್ಯವಲ್ಲವೆ? ಹಾಗಾಗಿ ಈ ಎಲ್ಲಾ ಪತ್ರಕರ್ತರು ಕಾಂಗ್ರೆಸಿನ ನಾಯಕರನ್ನು ಹಾಡಿ ಹೊಗಳುತ್ತಿರುತ್ತಾರೆ.

ದೇಶದ್ರೋಹವೆ ಪರಮ ಗುರಿ ಆಗಿಸಿಕೊಂಡಿರುವ, ಸದಾ ಮೋದಿ ಮೇಲೆ ವಿಷಕಾರುವ ರಾಜದೀಪ್ ಇತ್ತೀಚೆಗೆ “ಎಲೆಕ್ಷನ್ ಆನ್ ಮೈ ಪ್ಲೇಟ್” ಎಂದು ತಟ್ಟೆ ಹಿಡಿದು ಮಂಗಳೂರಿನ ಬೀದಿ ಬೀದಿಗಳಲ್ಲಿ ಅಡ್ಡಾಡಿದ್ದಾನೆ. ಹೀಗೆ ಅಡ್ಡಾಡಿ ಅಡ್ಡಾಡಿ ಅವನು ಕಂಡು ಕೊಂಡ ಅಮೋಘ ವಿಚಾರವೆಂದರೆ ಮಂಗಳೂರಿನಲ್ಲಿ ಏಕೈಕ ಪರಮ ಪ್ರಾಮಾಣಿಕ ಮತ್ತು ಹುಟ್ಟಾ ಜಾತ್ಯಾತೀತ ಶಾಸಕ ಇದ್ದರೆ ಅದು ಜೆ.ಎಲ್.ಲೋಬೊ! ಅಹಾ…ಪ್ಲೇಟಿನಲ್ಲಿ ಯಾರ ಎಲುಬು ಬಿದ್ದಿದೆ ಎನ್ನುವುದು ಸುಸ್ಪಷ್ಟ. ಒಬ್ಬ ಕಳ್ಳ ಮತ್ತೊಬ್ಬ ಕಳ್ಳನನ್ನು ಹೊಗಳುವುದೆಂದರೆ ಇದೇಯೇನೊ? ಓತಿಕ್ಯಾತನಿಗೆ ಬೇಲಿ ಸಾಕ್ಷಿ.

16 ವರ್ಷದಿಂದ ಅಧಿಕಾರದಲ್ಲಿದ್ದರೂ ಒಂದು ರುಪಾಯಿ ಭ್ರಷ್ಟಾಚಾರ ಮಾಡದ, ತನಗಾಗಿ ಕವಡೆ ಕಾಸಿನ ಆಸ್ತಿಯೂ ಮಾಡದ ಮೋದಿ ಇವರ ಕಣ್ಣಿಗೆ ಕಾಣುವುದೆ ಇಲ್ಲ. ಆದರೆ ಭ್ರಷ್ಟಾಚಾರವನ್ನೆ ಚಾದರವಾಗಿ ಹೊದ್ದು ಕೊಂಡ ಕಾಂಗ್ರೆಸಿನ ಭ್ರಷ್ಟ ರಾಜಕಾರಣಿಗಳು ಇವರಿಗೆ ಪ್ರಾಮಾಣಿಕರಂತೆ!

ತಥಾಕಥಿತ ಜೆ.ಎಲ್.ಲೋಬೊ ಅವರ ಆಸ್ತಿ ಕಳೆದ ಐದೆ ವರ್ಷಗಳಲ್ಲಿ ದುಪ್ಪಟ್ಟು!!

ಯಾವ ರಾಜಕಾರಣಿಯನ್ನು ರಾಜದೀಪ್ ಪ್ರಾಮಾಣಿಕನೆಂದನೋ ಆ ರಾಜಕಾರಣಿಯ ಆಸ್ತಿ ಐದೆ ವರ್ಷಗಳಲ್ಲಿ ದುಪ್ಪಟ್ಟಾಗಿದೆ. 2013 ರಲ್ಲಿ ಮಂಗಳೂರಿನ ಶಾಸಕರಾಗಿ ಚುನಾಯಿತರಾದ ಲೋಬೊ ಅವರಲ್ಲಿ 3.07 ಕೋಟಿಯಷ್ಟು ಸಂಪತ್ತಿದ್ದರೆ, ಐದು ವರ್ಷಗಳಲ್ಲಿ, ಅಂದರೆ 2018 ರ ಹೊತ್ತಿಗೆ ಅವರ ಆಸ್ತಿ ಬರೋಬ್ಬರಿ 7.27 ಕೋಟಿ! ಐದು ವರ್ಷಗಳ ಅವಧಿಯಲ್ಲಿ ಲೋಬೊ ಅವರ ಆಸ್ತಿ ದುಪ್ಪಟ್ಟಾಗಿದ್ದರೂ ರಾಜದೀಪ್ ನಂತವರಿಗೆ ಇವರು ಪ್ರಾಮಾಣಿಕರು. ಲೋಬೊ ಅವರು ಸರ್ಕಾರಿ ಅಧಿಕಾರಿಯಾಗಿದ್ದವರು ಹಾಗೂ ಅವರ ಪತ್ನಿಯೂ ಕೂಡಾ ಸರಕಾರಿ ಅಧಿಕಾರಿಯೆ. ಪತ್ನಿಯ ಬಳಿ 3.21 ಕೋಟಿ ರುಪಾಯಿಯ ಸ್ಥಿರಾಸ್ತಿ ಇದ್ದರೆ, 79.49 ಲಕ್ಷದ ಚರಾಸ್ಥಿ ಇದೆ. ಲೋಬೊ ಬಳಿ 3.16 ಕೋಟಿ ರುಪಾಯಿಯ ಚರಾಸ್ಥಿ ಇದ್ದರೆ, 10 ಲಕ್ಷ ರುಪಾಯಿಯ ಸ್ಥಿರಾಸ್ತಿ ಇದೆ. ಇನ್ನು ಬೇನಾಮಿ ಆಸ್ತಿ ಎಷ್ಟಿದೆಯೋ ಆ ದೇವರೆ ಬಲ್ಲ!!

ಇನ್ನು ಲೋಬೊ ಜಾತ್ಯಾತೀತರೆನ್ನುವ ವಿಚಾರಕ್ಕೆ ಬಂದರೆ ಅದು ಕೂಡಾ ಶುದ್ದ ಸುಳ್ಳು!

ಕ್ರೈಸ್ತರ “ನೇಟಿವಿಟಿ ಹಬ್ಬ”, ಸೆಪ್ಟಂಬರ್ 8 ರಂದು ಸರಕಾರಿ ರಜೆ ಘೋಷಿಸುವಂತೆ ಮನವಿ ಮಾಡಿ ಸಿದ್ದು ಸರಕಾರಕ್ಕೆ ಪತ್ರ ಬರೆದವರು ಇದೆ ಲೋಬೊ. ಇದು ನಿಚ್ಚಳವಾಗಿಯೂ ತಮ್ಮ ಸಮುದಾಯದವರ ಓಲೈಕೆ ಮಾಡಲು ಮತ್ತು ಅದರಿಂದ ತಮ್ಮ ರಾಜನೀತಿಯ ಬೇಳೆ ಬೇಯಿಸಿಕೊಳ್ಳಲು ತೆಗೆದುಕೊಂಡತಹ ನಿರ್ಧಾರ. ಉಡುಪಿ ಮತ್ತು ಮಂಗಳೂರು ಕರಾವಳಿಯಲ್ಲಿ ಕ್ರೈಸ್ತ ಸಮುದಾಯದವರು ಹೆಚ್ಚಿರುವುದರಿಂದ ಅವರ ಓಲೈಕೆಗಾಗಿ ಲೋಬೊ ರಾಜ್ಯ ಸರಕಾರಕ್ಕೆ ಪತ್ರ ಬರೆದದ್ದು ಎನ್ನುವುದು ಗೊತ್ತಿರುವ ವಿಚಾರ.

ಆದರೆ ತಮ್ಮ ಜಿಲ್ಲೆಯಾದ ಮಂಗಳೂರಿನಲ್ಲೇ ಹತ್ತು ಹಿಂದೂ ಕಾರ್ಯಕರ್ತರ ಕೊಲೆಯಾದಾಗ ಬಾಯಿಗೆ ಬೀಗ ಜಡಿದು ಕುಳಿತಿದ್ದ ಲೋಬೊ ಒಂದೆ ಒಂದು ಶಬ್ದ ಮಾತನಾಡಿಲ್ಲ. ಮೃತರ ಪರಿವಾರದವರಿಗೆ ಸಾಂತ್ವನ ಹೇಳಿಲ್ಲ. ಮಂಗಳೂರಿನಲ್ಲಿ ಲೋಬೊ ಮೂಗಿನ ಕೆಳಗೆ ಅನೈತಿಕ ಅವ್ಯವಹಾರಗಳು ನಡೆಯುತ್ತಿದ್ದರೂ ಅದನ್ನು ಹತ್ತಿಕ್ಕುವ ಗೋಜಿಗೆ ಹೋಗಲಿಲ್ಲ. ಕೊಲೆಗಡುಕರು ಮುಸ್ಲಿಂ ಸಮುದಾಯದವರು ಅದರಲ್ಲೂ ಎಸ್.ಡಿ.ಪಿ.ಐ, ಪಿ.ಎಫ್.ಐ ಅಂತಹ ಆತಂಕವಾದಿ ಸಂಘಟನೆಗಳು ಎಂದು ಗೊತ್ತಾದ ಮೇಲೂ ಅವರ ಮೇಲೆ ಯಾವುದಾದರೂ ಕ್ರಮ ಕೈಗೊಂಡರಾ? ಅದೂ ಇಲ್ಲ. ತಮ್ಮಂತೆಯೆ ಬಂಟ್ವಾಳದ ಶಾಸಕ ರಮಾನಾಥ ರೈ ದ್ವೇಷ ರಾಜಕಾರಣ ಮಾಡುತ್ತಾ ಕಲ್ಲಡ್ಕದ ಅಮಾಯಕ ಮಕ್ಕಳ ಅನ್ನಕ್ಕೆ ಕಲ್ಲು ಹಾಕಿದಾಗ ಲೋಬೊ ತುಟಿ ಪಿಟಿಕ್ ಎನ್ನಲಿಲ್ಲ. ಮಕ್ಕಳ ಮೇಲೂ ದ್ವೇಷ ಸಾಧಿಸಿದ ಇವರು ಮನುಷ್ಯರೆ? ಹಾಗಾದರೆ ರಾಜದೀಪ್ ಯಾವ ಅರ್ಹತೆಯ ಮೇಲೆ ಇವರನ್ನು ಜಾತ್ಯಾತೀತರೆಂದು ಬಣ್ಣಿಸಿದ್ದು?

ಇನ್ನು ಮಂಗಳೂರಿನ ಲೈಟ್ ಹೌಸ್ ರಸ್ತೆಗೆ ಮುಲ್ಕಿ ಸುಂದರ ರಾಮ್ ಶೆಟ್ಟರ ಹೆಸರು ಇಡಬೇಕೆಂದು ಜನರು ಬಯಸಿದಾಗ, ಅಲೋಶಿಯಸ್ ಚರ್ಚ್ ಜೊತೆ ಸೇರಿ ರಸ್ತೆಗೆ ಸುಂದರ ರಾಮ್ ಶೆಟ್ಟಿ ನಾಮಕರಣ ಮಾಡದಂತೆ ತಡೆದದ್ದು ಇದೆ ಲೋಬೊ. ಇಲ್ಲಿಯೂ ಜಾತಿ ಸಮೀಕರಣದ ಲೆಕ್ಕಾಚಾರದ ಮೇಲೆಯೆ ಲೋಬೊ ಇಬ್ಬರ ಜಗಳದಲ್ಲಿ ಒಳ ನುಸುಳಿಕೊಂಡದ್ದು. ಇಂತಹ ಲೋಬೊ ಪ್ರಾಮಾಣಿಕ ಮತ್ತು ಜಾತ್ಯಾತೀತರಾ? ರಾಜದೀಪ್ ನ ಪ್ರಾಮಾಣಿಕತೆ ಏನೆಂಬುದು ದೇಶಕ್ಕೇ ಗೊತ್ತು ಅಂತಹದರಲ್ಲಿ ಅವನಿಂದ ಹೊಗಳಿಸಿಕೊಂಡ ಲೋಬೊ ಅವರನ್ನು ಪ್ರಾಮಾಣಿಕರೆಂದು ನಂಬಲು ಮಂಗಳೂರಿಗರಿಗೆ ತಲೆ ಕೆಟ್ಟಿದೆಯೆ? “ಬುದ್ದಿವಂತರ ಜಿಲ್ಲೆ” ಮಂಗಳೂರಿಗೆ ಎಲ್ಲರ “ಹಣೆಬರ” ಗೊತ್ತು. ರಾಜದೀಪ, ಬುರ್ಕಾ ಅಂತಹವರು ಬಂದು ಮಂಗಳೂರಿನ ಬಗ್ಗೆ, ಶಾಸಕರ ಬಗ್ಗೆ ಶಿಫಾರಸು ಪತ್ರ ಕೊಡುವುದು ಬೇಕಾಗಿಲ್ಲ. ಯಾರು ಶಿಫಾರಸು ಕೊಟ್ಟರೂ ಈ ಬಾರಿ “ಕಾಂಗ್ರೆಸ್ ಮುಕ್ತ ಮಂಗಳೂರು” ಆಗುವುದಂತೂ ಸೂರ್ಯನಷ್ಟೆ ಸತ್ಯ!

-ಶಾರ್ವರಿ

Tags

Related Articles

Close