ಪ್ರಚಲಿತ

ರಾಜನಾಥ್ ಸಿಂಗ್ ಪಾಲಿಸಿದ್ದು ಭಾರತೀಯ ಸಂಸ್ಕೃತಿಯನ್ನೇ ಆದರೂ ಇಷ್ಟೆಲ್ಲಾ ಗಲಭೆ ಏಕೆ ?

ಸ್ವಾತಂತ್ರ ದೊರಕುವ ಸಂದರ್ಭದಲ್ಲಿ ಅಖಂಡ ಭಾರತವನ್ನು ಧರ್ಮದ ಆಧಾರದಲ್ಲಿ ಎರಡು ದೇಶಗಳನ್ನಾಗಿ ವಿಭಜಿಸಲಾಯಿತು. ಹಿಂದೂ ಧರ್ಮೀಯರಿಗಾಗಿ ಭಾರತ ಮತ್ತು ಮುಸಲ್ಮಾನೀಯರಿಗಾಗಿ ಪಾಕಿಸ್ತಾನ. ಧರ್ಮದ ಆಧಾರದಲ್ಲೇ ರಚಿಸಲ್ಪಟ್ಟ ಪಾಕಿಸ್ತಾನವು ತನ್ನ ದೇಶದಲ್ಲಿ ತನ್ನ ಮುಸ್ಲಿಂ ಧರ್ಮದ ಅನುಯಾಯಿಗಳಿಗಾಗಿ ಸಾಕಷ್ಟು ವಿಚಾರಗಳನ್ನು ಸಂವಿಧಾನದ ಮೂಲಕವೇ ನೀಡುತ್ತದೆ. ಮತ್ತು ಸಂವಿಧಾನದಲ್ಲಿ ಮುಸ್ಲಿಂ ಧರ್ಮದ ಅನೇಕೆ ವಿಚಾರಗಳನ್ನು ಅಳವಡಿಸಿಕೊಂಡಿದೆ ಕೂಡ.ಆದರೆ ಅದೇ ಸಮಯದಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿರುವ ಹಿಂದೂಸ್ಥಾನ ಅಂದರೆ ಭಾರತ ದೇಶದಲ್ಲಿ ಹಿಂದುತ್ವ ಎಲ್ಲಿಯೂ ಕಾಣಸಿಗುವುದಿಲ್ಲ.ಪ್ರಪಂಚದ ಯಾವುದೇ ದೇಶವನ್ನು ಬೇಕಾದರೂ ನೋಡಿ ಎಲ್ಲಾ ದೇಶಗಳಿಗೂ ತಮ್ಮ ದೇಶದ ಧರ್ಮ,ಸಂಸ್ಕೃತಿ ಮತ್ತು ಇತಿಹಾಸದ ಕುರಿತಾಗಿ ಅತಿಯಾದ ಹೆಮ್ಮೆ ಇರುತ್ತದೆ ಮತ್ತು ಎಲ್ಲಾ ದೇಶದ ಸರಕಾರವೂ ತಮ್ಮ ದೇಶದ ಧರ್ಮ ಮತ್ತು ಸಂಸ್ಕೃತಿಯನ್ನು ಹೆಮ್ಮೆಯಿಂದ ಪ್ರಸ್ತುತಪಡಿಸುವುದು ಮಾತ್ರವಲ್ಲದೆ ಪ್ರಚಾರವನ್ನೂ ಮಾಡುತ್ತದೆ.ಕೆಲವೊಂದು ದೇಶಗಳು ತಮ್ಮ ದೇಶಕ್ಕೆ ಬರುವ ಪ್ರವಾಸಿಗಳೂ ಕೂಡ ತಮ್ಮ ದೇಶದ ಬಹುಸಂಖ್ಯಾತರ ಧರ್ಮವನ್ನು ಗೌರವಿಸಬೇಕೆಂದು ಬಯಸುತ್ತದೆ ಮಾತ್ರವಲ್ಲದೆ ಅದಕ್ಕಾಗಿ ಕಾನೂನನ್ನೂ ರೂಪಿಸಿಕೊಂಡಿವೆ.ಉದಾಹರಣೆಗೆ ಸೌದಿ ಅರೇಬಿಯಾವನ್ನೇ ತೆಗೆದುಕೊಳ್ಳಿ ,ಕೆಲದಿನಗಳ ಹಿಂದಿನ ವರೆಗೂ ಆ ದೇಶದಲ್ಲಿ ಕಟ್ಟಲೆಗಳು ಎಷ್ಟು ಕಠಿಣವಾಗಿದ್ದವೆಂದರೆ ಪ್ರವಾಸಿಗಳೂ ಕಡ್ಡಾಯವಾಗಿ ಹಿಜಾಬ್ ಧರಿಸಿ ತಮ್ಮ ಪುರುಷ ಬಂಧುವಿನ ಜೊತೆಯಲ್ಲೇ ತಿರುಗಾಡಬೇಕಾಗಿತ್ತು. ಈ ದೇಶದ ಕಾನೂನು ಅವರ ಧಾರ್ಮಿಕ ಗ್ರಂಥವಾದ ಖುರಾನ್ ನ ನ್ಯಾಯವನ್ನೇ ಪ್ರತಿಪಾದಿಸುತ್ತವೆ.

ಈ ದೇಶವು ಎಷ್ಟು ಧಾರ್ಮಿಕತೆಯನ್ನು ಹೊಂದಿದೆಯೆಂದರೆ,ರಂಜಾನ್ ಮಾಸದಲ್ಲಿ ಇತರ ಧರ್ಮದ ಪ್ರಜೆಗಳೂ ಕೂಡ ಸಾರ್ವಜನಿಕವಾಗಿ ಏನನ್ನೂ ತಿನ್ನುವಂತಿಲ್ಲ. ಶುಕ್ರವಾರ ನಮಾಜ್ ಮಾಡುವ ಸಮಯದಲ್ಲಿ ಯಾರೂ ಓಡಾಡುವಂತಿಲ್ಲ. ಯಾವುದೇ ಧರ್ಮದ ಮಹಿಳೆಯಾದರೂ ಸರಿ ಹಿಜಾಬ್ ಧರಿಸದೇ ಮನೆಯಿಂದ ಹೊರಬರುವಂತಿಲ್ಲ.ಇವುಗಳನ್ನೆಲ್ಲಾ ಅಲ್ಲಿಯ ಮುಸಲ್ಮಾನ ಪ್ರಜೆಗಳು ಬಹಳ ಹೆಮ್ಮೆಯಿನಿಂದ ಹೇಳಿಕೊಳ್ಳುತ್ತಾರೆ.ಮಾತ್ರವಲ್ಲದೆ ನಮ್ಮ ದೇಶದ ಮುಸಲ್ಮಾನರೂ ಹೇಳಿಕೊಳ್ಳುತ್ತಾರೆ.ಐರ್ಲಾಂಡ್ ದೇಶದಲ್ಲಿ ಕ್ರಿಶ್ಚಿಯಾನಿಟಿಯನ್ನು ಅನುಸರಿಸುತ್ತಾರೆ. ಗರ್ಭಪಾತವು ಅವರ ಧರ್ಮದಲ್ಲಿ ನಿಷಿದ್ಧ ,ಇದನ್ನು ಆ ದೇಶದ ಕಾನೂನು ಕೂಡ ಹೇಳುತ್ತದೆ..ಅವರ ಧಾರ್ಮಿಕತೆಯನ್ನು ಅನುಸರಿಸಿ ಭಾರತೀಯ ದಂತ ವೈದ್ಯೆ ಸವಿತಾ ಹಾಲಪ್ಪನವರ್ ಎಂಬ ಹೆಣ್ಣು ಮಗಳು ಜೀವವನ್ನೇ ಕಸಿದುಕೊಂಡಿತ್ತು ಅಲ್ಲಿನ ವೈದ್ಯಕೀಯ ವ್ಯವಸ್ಥೆ.ಪ್ರಪಂಚದ ಎಲ್ಲಾ ದೇಶಗಳೂ ತಮ್ಮ ತಮ್ಮ ದೇಶದ ಧಾರ್ಮಿಕ ನಂಬಿಕೆಗಳನ್ನು ಖಂಡಿತವಾಗಿಯೂ ಪಾಲಿಸುತ್ತದೆ..ಮತ್ತು ಅದನ್ನು ಅಲ್ಲಿಯ ಪ್ರಜೆಗಳೂ ಬೆಂಬಲಿಸುತ್ತಾರೆ. ಆದರೆ ತಮ್ಮ ದೇಶದ ಬಹುಸಂಖ್ಯಾತರ ಧಾರ್ಮಿಕ ನಂಬಿಕೆಗಳನ್ನು ಮತ್ತು ಸಂಸ್ಕೃತಿಯನ್ನು ಪಾಲಿಸುವ ಸರಕಾರವನ್ನು ಟೀಕಿಸುವ ಮತ್ತು ವಿರೋಧಿಸುವ ಪ್ರಜೆಗಳನ್ನು ಹೊಂದಿರುವ ಏಕೈಕ ದೇಶವೆಂದರೆ ಭಾರತ ಮಾತ್ರ ಇರಬಹುದು.

ದಸರಾ ಅಥವಾ ನವರಾತ್ರಿ ಭಾರತದ ಎಲ್ಲಾ ರಾಜ್ಯಗಳಲ್ಲೂ ವಿಜೃಂಭಣೆಯಿಂದ ಆಚರಿಸಲ್ಪಡುವ ಹಬ್ಬ..ದೇವಿ ಅಥವಾ ಶಕ್ತಿಯನ್ನು ವಿವಿಧ ೯ ರೂಪಗಳಲ್ಲಿ ಆರಾಧಿಸಲಾಗುತ್ತದೆ. ದೇವಿ ಮಹಿಷಾಸುರನೆಂಬ ರಾಕ್ಷಸನನ್ನು ವಧಿಸಿದ ಸಮಯ ರಾಮ ರಾವಣನನ್ನು ವಧಿಸಿದ ಗೆಲುವಿನ ಹಬ್ಬವನ್ನಾಗಿ ನವರಾತ್ರಿಯನ್ನು ಆಚರಿಸಲಾಗುತ್ತದೆ.. ಕೆಟ್ಟದ್ದರ ಮೇಲೆ ಒಳ್ಳೆಯದರ ಗೆಲುವನ್ನೇ ದಸರಾ ಹಬ್ಬದಲ್ಲಿ ಆಚರಿಸಲಾಗುತ್ತದೆ.ಹೀಗೆ ಆಚರಿಸುವ ಹಬ್ಬದಲ್ಲಿ ವಿಜಯದಶಮಿಯಂದು ಆಯುಧಪೂಜೆಯನ್ನು ಕೂಡಾ ಆಚರಿಸಲಾಗುತ್ತದೆ ..ಹಿಂದೂ ಐತಿಹಾಸಿಕ ಮಹಾಭಾರತ ಗ್ರಂಥದ ಪ್ರಕಾರ ವಿಜಯ ದಶಮಿಯಂದು ಹದಿನಾಲ್ಕು ವರ್ಷಗಳ ವನವಾಸ ಮತ್ತು ಒಂದು ವರ್ಷದ ಅಜ್ಞಾತವಾಸವನ್ನು ಮುಗಿಸಿದ ಅರ್ಜುನನು ಶಮೀ ವೃಕ್ಷದಿಂದ ತನ್ನ ಆಯುಧಗಳನ್ನಿಳಿಸಿ ಪುನಃ ಶಸ್ತ್ರಗಳನ್ನು ಧರಿಸಿದ್ದ..ಮತ್ತು ಮುಂದೆ ನಡೆದ ಕುರುಕ್ಷೇತ್ರ ಯುದ್ಧದಲ್ಲಿ ಗೆಲುವನ್ನೂ ಸಾಧಿಸಿದ. ಇಂದಿಗೂ ಭಾರತದಲ್ಲಿ ಆಯುಧ ಪೂಜೆಯನ್ನು ವಿಜೃಂಭಣೆಯಿಂದಲೇ ನಡೆಸಲಾಗುತ್ತದೆ.ಕ್ಷತ್ರಿಯರು ತಮ್ಮ ಶಸ್ತ್ರಾಸ್ತ್ರಗಳನ್ನು ಪೂಜಿಸಿದರೆ ಕೃಷಿಕರು ಕೃಷಿ ಯಂತ್ರೋಪಕರಣಗಳನ್ನು ಪೂಜಿಸುತ್ತಾರೆ.ಯಾವುದು ನಮ್ಮನ್ನು ರಕ್ಷಿಸುತ್ತದೆಯೋ,ನಮ್ಮನ್ನು ಪೊರೆಯುತ್ತದೋ ಅದನ್ನು ಪೂಜಿಸುವುದು ಸಂಸ್ಕೃತಿ..ಜನರು ತಮ್ಮ ವಾಹನಗಳನ್ನೂ ಶುಚಿಗೊಳಿಸಿ ಹೂಹಾರ ಹಾಕಿ ಗಂಧದಿಂದ ಓಂಕಾರವನ್ನು ಬರೆದು ನಿಂಬೆಹಣ್ಣಿನ ಮೇಲೆ ಗಾಡಿಯನ್ನು ಓಡಿಸಿ ತೆಂಗಿನ ಕಾಯಿಯನ್ನು ನೀವಾಳಿಸಿ ಒಡೆದು ವಾಹನ ಪೂಜೆಯನ್ನು ಆಚರಿಸುತ್ತಾರೆ ..ಇದು ನಮ್ಮ ಸಂಸ್ಕೃತಿ.

ಭಾರತದ ರಕ್ಷಣಾ ಮಂತ್ರಿಯಾದ ರಾಜನಾಥ್ ಸಿಂಗ್ ಅವರು ಮಾಡಿದ್ದು ಕೂಡಾ ಇದನ್ನೇ. ಫ್ರಾನ್ಸ್ ದೇಶವು ರಫೆಲ್ ಎಂಬ ಯುದ್ಧ ವಿಮಾನವನ್ನು ಫ್ರಾನ್ಸ್ ದೇಶದಲ್ಲೇ ರಾಜನಾಥ್ ಸಿಂಗ್ ಅವರಿಗೆ ಹಸ್ತಾಂತರಿಸಿತು.ಹಸ್ತಅಂತರ ಪ್ರಕ್ರಿಯೆಯು ಜರಗಿದ್ದು ವಿಜಯದಶಮಿಯಂದೇ ಎಂಬುದು ವಿಶೇಷ..ಮೊದಲಿದ್ದ ಸರಕಾರಗಳು ತಮ್ಮ ಧರ್ಮವನ್ನು ಸಂಸ್ಕೃತಿಯನ್ನು ಪ್ರತಿಪಾದಿಸುವುದಿರಲಿ ಹೇಳಿಕೊಳ್ಳುವುದಕ್ಕೂ ಹಿಂಜರಿಯುತ್ತಿದ್ದರೆ,ನರೇಂದ್ರ ಮೋದಿ ಸರ್ಕಾರದ ಸಚಿವರ್ಯಾರೂ ತಮ್ಮ ಧಾರ್ಮಿಕತೆಯನ್ನು ಮತ್ತು ಸಂಸ್ಕೃತಿಯನ್ನು ಹೆಮ್ಮೆಯಿಂದ ಜಗತ್ತಿಗೆ ಪರಿಚಯಿಸುತ್ತಿದ್ದಾರೆ.ಹೀಗೆ ವಿಜಯ ದಶಮಿಯಂದೇ ದೇಶದ ಶಕ್ತಿ ಹೆಚ್ಚಿಸುವ ರಫೆಲ್ ಸೈನ್ಯಕ್ಕೆ ಸೇರ್ಪಡೆಗೊಂಡಾಗ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಶಾಸ್ತ್ರೋಕ್ತವಾಗಿ ರಫೆಲ್ ಅನ್ನು ಶಸ್ತ್ರಪೂಜೆ ಮಾಡಿ ಸ್ವಾಗತಿಸಿದರು.ವಿಮಾನದ ಮೇಲೆ ಓಂ ಬರೆದು ಚಕ್ರಗಳ ಅಡಿಯಲ್ಲಿ ನಿಂಬೆಹಣ್ಣನ್ನು ಇತ್ತು ಭಾರತೀಯ ಸಂಸ್ಕೃತೆಯಂತೆ ಪೂಜೆ ಮಾಡಿದರು. ಅಷ್ಟಕ್ಕೇ ಭಾರತದ ಸೊ ಕಾಲ್ಡ್ ಜಾತ್ಯತೀತರ ಹೊಟ್ಟೆಯುರಿ ಸಾಮಾಜಿಕ ಜಾಲತಾಣಗಳಾದ್ಯಂತ ಹರಡಿತು. ಕಾಂಗ್ರೆಸ್ ನ ಪ್ರಮುಖರೊಬ್ಬರಂತೂ ಇದನ್ನು ನಾಟಕ ಎಂದು ಕರೆದು ಬಿಟ್ಟರು. ಮೂಢನಂಬಿಕೆ ಎಂದು ಇನ್ನು ಹಲವರು ಅಲವತ್ತು ಕೊಂಡರು.. ಕಾರಿಣೇ ಮೇಲೆ ಕಾಗೆ ಕುಳಿತಿತೆಂದು ಕಾರನ್ನು ಬದಲಾಯಿಸಿದ ಮುಖ್ಯಮಂತ್ರಿಯನ್ನು ನೀಡಿದ್ದ ಪಕ್ಷವೊಂದು ಪೂಜೆಯನ್ನು ನಾಟಕ ಎಂದಿತು..ನಿಂಬೆ ಹಣ್ಣನ್ನು ಹಿಡಿದು ತಿರುಗಾಡುತ್ತಿದ್ದ ಸಚಿವರನ್ನು ಹೊಂದಿದ್ದ ಸರ್ಕಾರದ ಚೇಲಾಗಳು ಮೂಢನಂಬಿಕೆಯ ಪಾಠ ಮಾಡಲು ಬರುತ್ತಿದ್ದಾರೆ.

ಅಷ್ಟಕ್ಕೂ ಭಾರತ ಶಸ್ತ್ರಪೂಜೆ ಮಾಡಿ ಯುದ್ಧ ವಿಮಾನವನ್ನು ಬರಮಾಡಿಕೊಂಡ ಮೊದಲ ದೇಶವೇನೂ ಅಲ್ಲ. ಅತ್ಯಂತ ಬಲಿಷ್ಠ ರಷ್ಯಾ ಕೂಡಾ ತಮ್ಮ ಪೂಜಾರಿಗಳಿಂದ ಪೂಜೆಯನ್ನು ಮಾಡಿಸುತ್ತದೆ. ಬೊಬ್ಬೆ ಹಾಕುವವರ ನೆಚ್ಚಿನ ಪಾಕಿಸ್ತಾನದಲ್ಲೂ ಕುರಿಯನ್ನು ಬಲಿನೀಡಿ ಸ್ವಾಗತಿಸಲಾಗುತ್ತದೆ.ಅಲ್ಲಿಯ ಜನರ್ಯಾರೂ ಅದನ್ನು ಮೂಢನಂಬಿಕೆ ನಾಟಕ ಎಂದು ಬೊಬ್ಬಿರಿಯುವುದಿಲ್ಲ.ಇಲ್ಲಿ ಕೂಡಾ ಬಹುಷಃ ಬಲಿ ನೀಡಿ ಸ್ವಾಗತಿಸಿದ್ದರೆ ಇಷ್ಟೆಲ್ಲ ಜನರು ಎದೆ ಹೊಡೆದುಕೊಂಡು ಅಳುತ್ತಿರಲಿಲ್ಲವೇನೋ,ಆದರೆ ರಾಜನಾಥ್ ಸಿಂಗ್ ಪಾಲಿಸಿದ್ದು ಬಹುಸಂಖ್ಯಾತ ಹಿಂದೂ ಗಳ ಸಂಪ್ರದಾಯವನ್ನು..ಇಷ್ಟು ವರ್ಷಗಳಿಂದ ಅನಾಗರೀಕರು ಮೂಢನಂಬಿಕೆ ಎಂದು ಬಿಂಬಿಸಲ್ಪಟ್ಟಿದ್ದ ಧರ್ಮವೊಂದು ಈಗ ಪ್ರದೇಶದಲ್ಲೂ ಪ್ರದರ್ಶಿಸಲ್ಪಡುವುದು ಎಡಚರಿಗೂ ಅಲ್ಪಸಂಖ್ಯಾತರನ್ನು ಓಲೈಸುವುದೇ ಜೀವನವೆಂದು ಭಾವಿಸಿದ ಜಾತ್ಯತೀತರಿಗೂ ನುಂಗಲಾರದ ತುತ್ತಾಗಿರುವುದಂತೂ ಖಂಡಿತವಾಗಿಯೂ ಗೋಚರಿಸುತ್ತಿದೆ.ಮುಸ್ಲಿಂ ಟೋಪಿ ಧರಿಸಿ ಹಿಂದೂಗಳುರಂಜಾನ್ ಆಚರಿಸುವುದೆಲ್ಲಾ ಸಹಿಷ್ಣುತೆಯಾದರೆ ,ಹಿಂದೂ ರಕ್ಷಣಾ ಸಚಿವ ತನ್ನ ಸಂಪ್ರದಾಯದಂತೆ ಯುದ್ಧ ವಿಮಾನವನ್ನು ಸ್ವಾಗತಿಸಿದರೆ ಇವರಿಗೇಕೆ ಹೊಟ್ಟೆಯುರಿ? ಮುಸ್ಲಿಮರು ವಂದೇ ಮಾತರಂ ಹೇಳುವುದು ನಮ್ಮ ಧರ್ಮಕ್ಕೆ ವಿರುದ್ಧ ಎಂದಾಗಲೂ ಉಸಿರೆತ್ತದೆ ಬಿಲದಲ್ಲಡಗಿದ್ದ ಜನರು ಇಂದು ಹಿಂದೂ ಧಾರ್ಮಿಕ ಸಂಪ್ರದಾಯವನ್ನು ಪಾಲಿಸುವಾಗ ಅರಚಾಡುವುದೇಕೆ?ಅಷ್ಟಕ್ಕೂ ಜಾತ್ಯತೀತತೆಯೇನೆಂಬುದು ಯಾವಾಗಲೂ ಹಿಂದೂಗಳು ಮಾತ್ರ ಪಾಲಿಸಬೇಕಾದದ್ದಾ??ಅಥವಾ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗಿ ಬೇಸರ ಪಡದಿರಬೇಕಾದದ್ದು ಬಹುಸಂಖ್ಯಾತ ಹಿಂದೂಗಳು ಮಾತ್ರವಾ??

-Deepashree M

Tags

Related Articles

FOR DAILY ALERTS
Close