ಪ್ರಚಲಿತ

ದೇಶವಾಸಿಗಳಿಗೆ ರಕ್ಷಾ ಬಂಧನದ ಗಿಫ್ಟ್ ಕೊಟ್ಟ ಪ್ರಧಾನಿ ಮೋದಿ ಸರ್ಕಾರ

ದಿನ ಬಳಕೆಯ ವಸ್ತುಗಳ ಬೆಲೆ ಗಗನಮುಖಿಯಾಗಿದ್ದು, ಸಾಮಾನ್ಯ ಜನರು ಸಂಕಷ್ಟ ಅನುಭವಿಸುವಂತಾಗಿತ್ತು. ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಬಡ ಜನರಿಗೆ ಕೊಂಚ ರಿಲೀಫ್ ನೀಡುವ ನಿಟ್ಟಿನಲ್ಲಿ ಎಲ್‌ಪಿ‌ಜಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಕೊಂಚ ಮಟ್ಟಿಗೆ ಇಳಿಕೆ ಮಾಡುವ ಮೂಲಕ ಬಿಗ್ ರಿಲೀಫ್ ನೀಡಿದೆ.

ದೇಶವಾಸಿಗಳಿಗೆ ರಕ್ಷಾ ಬಂಧನದ ಉಡುಗೊರೆ ಎಂಬಂತೆ ಈ ಬಾರಿಯ ರಕ್ಷಾ ಬಂಧನ ಹಬ್ಬದ ಸಂದರ್ಭದಲ್ಲಿಯೇ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 200ರೂ. ಗಳನ್ನು ಕಡಿತಗೊಳಿಸುವ ಮೂಲಕ ದೇಶವಾಸಿಗಳ ಮುಖದಲ್ಲಿ ಮಂದಹಾಸ ನೀಡುವಂತೆ ಕೇಂದ್ರದ ಪ್ರಧಾನಿ ಮೋದಿ ಸರ್ಕಾರ ಮಾಡಿದೆ. ಸಾಮಾನ್ಯ ಎಲ್‌ ಪಿ ಜಿ ಬಳಕೆದಾರರಿಗೆ 200 ರೂ. ಮತ್ತು ಪ್ರಧಾನ ಮಂತ್ರಿಗಳ ಮಹತ್ವಾಕಾಂಕ್ಷೆಯ ಉಜ್ವಲ ಯೋಜನೆಯ ಫಲಾನುಭವಿಗಳಿಗೆ 400 ರೂ. ಗಳನ್ನು ಇಳಿಕೆ ಮಾಡುವುದಾಗಿಯೂ ಕೇಂದ್ರ ಸರ್ಕಾರ ಘೋಷಿಸಿದೆ.

ಈ ಸಂಬಂಧ ಕೇಂದ್ರ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು ಮಾಧ್ಯಮಗಳ ಜೊತೆಗೆ ಮಾತನಾಡಿದ್ದು, ಪ್ರಧಾನಮಂತ್ರಿ ಉಜ್ವಲಾ ಯೋಜನೆಯಡಿ ಪ್ರತಿ ಎಲ್‌ ಪಿ ಜಿ ಸಿಲಿಂಡರ್‌ಗೆ ಹೆಚ್ಚುವರಿಯಾಗಿ 200 ರೂ. ಸಬ್ಸಿಡಿ ನೀಡಲು ಕೇಂದ್ರ ಸಚಿವ ಸಂಪುಟ ಸಮ್ಮತಿ ನೀಡಿದೆ ಎಂದು ಹೇಳಿದ್ದಾರೆ. ಈ ಯೋಜನೆಗೆ ಒಳಪಡದ ಗ್ರಾಹಕರಿಗೆ ಹದಿನಾಲ್ಕು ಕಿಲೋ ಗ್ರಾಮ್‌ನ ಗ್ಯಾಸ್ ಸಿಲಿಂಡರ್ ಖರೀದಿಯಲ್ಲಿ 200 ರೂ. ಗಳನ್ನು ಇಳಿಕೆ ಮಾಡುವುದಾಗಿಯೂ ಅವರು ಹೇಳಿದ್ದಾರೆ. ಇದರಿಂದ ಪ್ರತಿ ಸಿಲಿಂಡರ್‌ಗೆ 900 ರೂ. ಗಳನ್ನು ಪಾವತಿ ಮಾಡುವ ಮೂಲಕ ಅಡುಗೆ ಅನಿಲ ಖರೀದಿಸಲು ಸಾಧ್ಯವಾಗಲಿದೆ ಎಂದು ಅವರು ಹೇಳಿದ್ದಾರೆ.

ಹಾಗೆಯೇ ಕೇಂದ್ರದ ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ಉಜ್ವಲಾ ಯೋಜನೆಯಡಿ ನೋಂದಣಿ ಮಾಡಿಕೊಂಡಿರುವ ಗ್ರಾಹಕರಿಗೆ ಒಟ್ಟು 400 ರೂ. ಸಬ್ಸಿಡಿ ದೊರೆಯಲಿದ್ದು, ಇದರಿಂದ 700 ರೂ. ಗಳಿಗೆ ಅಡುಗೆ ಅನಿಲ ಪಡೆದುಕೊಳ್ಳುವುದು ಸಾಧ್ಯವಾಗಲಿದೆ. ಅಡುಗೆ ಅನಿಲಕ್ಕೆ ಸಬ್ಸಿಡಿ ನೀಡುವ ಈ ನಿರ್ಣಯದಿಂದ ಕೇಂದ್ರ ಸರ್ಕಾರಕ್ಕೆ ಸುಮಾರು ಏಳು ಸಾವಿರದ ಐನೂರು ಕೋಟಿ ರೂ. ಗಳಷ್ಟು ಆರ್ಥಿಕ ಹೊರೆ ಸಂಭವಿಸಲಿದೆ. ಆದರೂ ದೇಶದ ಬಡ ಜನರ ಆರ್ಥಿಕ ಸ್ಥಿತಿಯನ್ನು ಮನಗಂಡ ಕೇಂದ್ರ ಸರ್ಕಾರ ಅಡುಗೆ ಅನಿಲದ ಬೆಲೆ ಇಳಿಸುವ ಮೂಲಕ ಅವರಿಗೆ ಕೊಂಚ ಮಟ್ಟಿಗೆ ನಿರಾಳತೆಯನ್ನು ಒದಗಿಸಲು ಮುಂದಾಗಿರುವುದು ಶ್ಲಾಘನೀಯ.

ರಕ್ಷಾ ಬಂಧನ ಮತ್ತು ಓಣಂ ಹಬ್ಬದ ಹಿನ್ನೆಲೆಯಲ್ಲಿ ಗೃಹ ಬಳಕೆಯ ಅಡುಗೆ ಅನಿಲದ ಬೆಲೆಯನ್ನು ಇಳಿಸುವ ಮೂಲಕ ಭಾರತೀಯ ಸಹೋದರಿಯರಿಗೆ ಪ್ರಧಾನಿ ಮೋದಿ ಸರ್ಕಾರ ಅತ್ಯುತ್ತಮ ಉಡುಗೊರೆ ನೀಡಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ದೇಶದ ಸುಮಾರು ಎಪ್ಪತ್ತ ಮೂರಕ್ಕೂ ಅಧಿಕ ಮಹಿಳಾ ಫಲಾನುಭವಿಗಳಿಗೆ ಅನುಕೂಲವಾಗಲಿದೆ. ಆ ಮೂಲಕ ದೇಶವಾಸಿಗಳಿಗೆ ಆರ್ಥಿಕ ಹೊರೆಯನ್ನು ಮತ್ತಷ್ಟು ಕಡಿಮೆ ಮಾಡಲು ಹೊರಟ ಕೇಂದ್ರ ಸರ್ಕಾರದ ನಡೆ ಮಾದರಿ.

Tags

Related Articles

Close