ಪ್ರಚಲಿತ

ಉಚಿತ ಹೆಸರಿನ ಭಾಗ್ಯದ ನಿಜವಾದ ವಾರೀಸುದಾರರು ಯಾರು?

ಜನರಿಗೆ ಉಚಿತ ಭಾಗ್ಯಗಳ ಆಮಿಷವನ್ನೊಡ್ಡಿ ಕಾಂಗ್ರೆಸ್ ಪಕ್ಷ ಕಳೆದ ವಿಧಾನಸಭಾ ಚುನಾವಣೆ ಗೆದ್ದಿದೆ. ಹಾಗೆಯೇ, ಅಧಿಕಾರದ ಗದ್ದುಗೆ ಏರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾರೆ.

ಚುನಾವಣೆಗೂ ಮುನ್ನ ಜನರನ್ನು ತಮ್ಮತ್ತ ಸೆಳೆದುಕೊಳ್ಳುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಮತದಾರರಿಗೆ ಕೆಲವೊಂದು ಉಚಿತ ಭಾಗ್ಯಗಳನ್ನು ‌ನೀಡುವ ವಾಗ್ದಾನ ಮಾಡಿತ್ತು. ಅದರಂತೆ ಈಗ ಕೆಲವೊಂದು ಶರತ್ತುಗಳ ಮೂಲಕ ಆ ಭರವಸೆಗಳನ್ನು ಈಡೇರಿಸಲು ಹೊರಟಿದೆ.

ಅಂದ ಹಾಗೆ ಬಡ ಜನರ ಜೀವನಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಸರ್ಕಾರ ಪ್ರಯತ್ನ ಪಡುವುದು ಅದರ ಕರ್ತವ್ಯವೂ ಹೌದು. ಹಾಗೆಂದು ಮಾತ್ರಕ್ಕೆ ಬಿಟ್ಟಿ ಭಾಗ್ಯಗಳನ್ನು ನೀಡುವ ಮೂಲಕ ಜನರನ್ನು ದಾರಿ ತಪ್ಪಿಸುವ ಕೆಲಸಕ್ಕೆ ಹೊರಡುವ ವಿಚಾರವನ್ನು ಉತ್ತಮ ಕಾರ್ಯ ಎಂದು ಶ್ಲಾಘಿಸಿದರೆ, ನಮ್ಮ ರಾಜ್ಯದ ಆರ್ಥಿಕ ಮಟ್ಟ ಕುಸಿದು, ರಾಜ್ಯ ಮುಂದೊಮ್ಮೆ ಸಾಲದ ಸುಳಿಗೆ ಸಿಕ್ಕಿ ನರಳುವಾಗ ಆ ಪಾಪದಲ್ಲಿ ನಾವೂ ಪಾಲು ಪಡೆದಂತಾಗುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಇಂತಹ ಸೋ ಕಾಲ್ಡ್ ಉಚಿತಗಳನ್ನು ನೀಡಲು ಯಾವೊಬ್ಬ ರಾಜಕಾರಣಿ ಸಹ ಅವರ ಖಾತೆಯ, ಅವರ ಕುಟುಂಬದ, ಅವರ ದುಡಿಮೆಯ ಮೊತ್ತವನ್ನು ವ್ಯಯಿಸುವುದಿಲ್ಲ ಎನ್ನುವುದು ಸತ್ಯ. ಈ ವಿಚಾರವನ್ನು ಜನತೆ ಅರಿತುಕೊಳ್ಳಬೇಕು. ಹಾಗಾದರೆ, ಈ ಯೋಜನೆಗಳ ಜಾರಿಗೆ ಬೇಕಾದ ಹಣವನ್ನು ಹೊಂದಿಸಿಕೊಳ್ಳುವ ಮಾರ್ಗ ಯಾವುದು ಎಂಬುದನ್ನು ನಾವೆಲ್ಲರೂ ತಿಳಿಯಬೇಕು. ಸರ್ಕಾರ ತನ್ನ ಭರವಸೆಗಳ ಈಡೇರಿಕೆಗೆ ಬಳಕೆ ಮಾಡುವುದು ನಾವೇ ಸರ್ಕಾರಕ್ಕೆ ಸಲ್ಲಿಸಿದ ತೆರಿಗೆ ಹಣವನ್ನು.

ನಮ್ಮದೇ ಹಣದಲ್ಲಿ ನಮಗೆ ನೀಡುವ ಯೋಜನೆಗಳನ್ನು ‘ಉಚಿತ’ ಎಂಬ ಹೆಸರಿನಲ್ಲಿ ನೀಡಿದರೆ, ಅದು ಉಚಿತ ಹೇಗಾಗುತ್ತದೆ. ಇನ್ನು ನಾವು ಕಟ್ಟಿದ ತೆರಿಗೆಯ ಹಣವೂ ಈ ಭರಪೂರ ಉಚಿತಗಳನ್ನು ನೀಡಲು ಸಾಲದೆ‌ ಹೋದಲ್ಲಿ ಮುಂದೆ ಅದರ ಭಾರವನ್ನೂ ಹೊರಬೇಕಾದವರು ನಾವೇ ಹೊರತು, ಈ ಬಿಟ್ಟಿ ಕೊಡುತ್ತೇವೆ ಎಂದು ಕೊಚ್ಚಿ ಕೊಲ್ಲುವ ಯಾವ ರಾಜಕಾರಣಿಯೋ ಅಥವಾ ಅದನ್ನು ಸಮರ್ಥಿಸಿ ಮಾತನಾಡುವ ಯಾವ ಹಿಂಬಾಲಕರೂ ಅಲ್ಲ ಎಂಬುದು ಸತ್ಯ. ಈ ಸತ್ಯ ನಮಗೆ ಅರಿವಾಗದಿರುವ ಕಾರಣದಿಂದಲೇ, ಅಯ್ಯೋ ಅವರೆಷ್ಟು ಒಳ್ಳೆಯವರು, ನಮಗೆಲ್ಲವನ್ನೂ ಉಚಿತವಾಗಿಯೇ ನೀಡುತ್ತಿದ್ದಾರೆ ಎಂದುಕೊಳ್ಳುತ್ತೇವೆ. ಅವರನ್ನು ಗೊಗಳುವ ಭರದಲ್ಲಿ ನಮ್ಮ ದುಡಿಮೆ, ನಮ್ಮ ಜೇಬಿಗೆಯೇ ಕತ್ತರಿ ಬಿದ್ದಿದೆ ಎನ್ನುವ ಕಲ್ಪನೆಯೂ ನಮಗೆ ಬಾರದಿರುವುದು ದುರಾದೃಷ್ಟವೇ ಸರಿ.

ನಾವು ಕಟ್ಟುವ ತೆರಿಗೆ ಹಣವೂ ಇದಕ್ಕೆ ಸಾಲದೇ ಹೋದಲ್ಲಿ ಮತ್ತೆ ಈಗಾಗಲೇ ಇರುವ ಬಡವರ ಸ್ನೇಹಿ ಯೋಜನೆಗಳಿಗೆ ಕತ್ತರಿ ಹಾಕುವುದು, ಹೆಚ್ಚುವರಿ ಹಣಕ್ಕೆ ಕೇಂದ್ರ ಸರ್ಕಾರಕ್ಕೆ ಬೇಡಿಕೆ ಇಡುವುದು, ಸಾಲ ಮಾಡುವುದು ಹೀಗೆ… ಸಾಲು ಸಾಲು ನಾಟಕಗಳು ನಡೆಯುತ್ತವೆ. ಒಂದು ವೇಳೆ ರಾಜ್ಯ ಸಾಲದ ಶೂಲಕ್ಕೆ ಏರಿದಲ್ಲಿ ಮುಂದಿನ ದಿನಗಳಲ್ಲಿ ಆ ಆರ್ಥಿಕ ಹೊರೆಯೂ ನಮ್ಮ ಬೆನ್ನೇರುವುದೇ ಹೊರತು ಈಗ ಬಿಟ್ಟಿ ಕೊಡುವಂತೆ ಶೋ ಮಾಡುವ ಯಾವ ರಾಜಕಾರಣಿಯೂ ಇದರ ಉತ್ತರವಾದಿತ್ವವನ್ನು ತೆಗೆದುಕೊಳ್ಳುವುದಿಲ್ಲ ಎನ್ನುವುದು ಕಟು ಸತ್ಯ.

ಇನ್ನು ಈಗಾಗಲೇ ಕಾಂಗ್ರೆಸ್ ಉಚಿತದ ಹೆಸರಲ್ಲಿ ನೀಡುವ ಭಾಗ್ಯಗಳನ್ನಿರಿಸಿಕೊಂಡು ಬಿಜೆಪಿ ಹಿಂಹಾಲಕರನ್ನು, ಹಿಂದೂ ಸಂಘಟನೆಗಳನ್ನು ಹೀಯಾಳಿಸುವ ಕೆಲಸ ಸಹ ನಡೆಯುತ್ತಿದೆ. ಹೀಗೆ ಹೀಯಾಳಿಸುವ ನಾಲಾಯಕುಗಳು ಅರ್ಥ ಮಾಡಿಕೊಳ್ಳಬೇಕಿರುವುದು ಒಮ್ಮೆ ಗೆದ್ದು ಸರ್ಕಾರ ರಚನೆಯಾದ ಮೇಲೆ ಪಕ್ಷಾತೀತವಾಗಿ ಕೆಲಸ ಮಾಡಬೇಕು ಎಂಬುದನ್ನು. ಹಾಗೆಯೇ ಈ ಸೋ ಕಾಲ್ಡ್ ಬಿಟ್ಟಿ ಭಾಗ್ಯಗಳನ್ನು ನೀಡಲು ಕೇವಲ ಕಾಂಗ್ರೆಸ್, ಅದರ ಹಿ ಬಾಲಕರ ತೆರಿಗೆ ಮಾತ್ರ ಬಳಸುತ್ತಿಲ್ಲ. ಬದಲಾಗಿ ರಾಜ್ಯದ ಎಲ್ಲಾ ಸಾರ್ವಜನಿಕರ ತೆರಿಗೆ ಹಣ ಬಳಕೆಯಾಗುತ್ತದೆ ಎಂದು.

ಹೀಯಾಳಿಸುವ ಮೊದಲು ಸತ್ಯ ಅರಿಯಿರಿ. ಮತ್ತೆ ನುಡಿಯಿರಿ.

Tags

Related Articles

Close