ಖಲೀಸ್ತಾನಿ ಭಯೋತ್ಪಾದಕರಿಗೆ ನೆರವು ನೀಡುವ ಹಾಗೆ, ಭಾರತದ ವಿರುದ್ಧ ನಡೆಯುತ್ತಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ವಿರುದ್ಧ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈ ಶಂಕರ್ ಕಿಡಿ ಕಾರಿದ್ದಾರೆ.
ನಮ್ಮ ರಾಜಕೀಯ ಅನುಕೂಲಗಳಿಗೆ ಅವಲಂಬಿಸಿ ಭಯೋತ್ಪಾದನೆ, ಪ್ರತ್ಯೇಕವಾದ, ಹಿಂಸಾಚಾರಕ್ಕೆ ಪ್ರತಿಕ್ರಿಯೆ ನೀಡಬಾರದು ಎನ್ನುವ ಮೂಲಕ ಭಾರತ ವಿರೋಧಿ ಕೆನಡಾಗೆ ಜೈ ಶಂಕರ್ ಸೂಚಿಸಿದ್ದಾರೆ. ಕೆನಡಾದ ನೆಲದಲ್ಲಿ ಖಲೀಸ್ತಾನಿ ಭಯೋತ್ಪಾದಕರಿಗೆ ಭಾರತ ವಿರೋಧಿ ಕೃತ್ಯಕ್ಕೆ ಅನುಕೂಲಕರ ಎಂಬ ವಾತಾವರಣ ಇದ್ದು, ಕೆನಡಾ ಸರ್ಕಾರ ಅವರ ಪರ ಮೃದು ಧೋರಣೆ ತಾಳಿರುವುದಾಗಿಯೂ ಸಚಿವರು ಆರೋಪಿಸಿದ್ದಾರೆ.
ವಿಶ್ವಸಂಸ್ಥೆಯಲ್ಲಿ ಕೆನಡಾ ವಿರುದ್ಧ ಹರಿಹಾಯ್ದ ಅವರು, ಆ ಮೂಲಕ ವಿಶ್ವಸಂಸ್ಥೆಯ ಇತರ ಸದಸ್ಯ ರಾಷ್ಟ್ರಗಳಿಗೂ ಈ ರೀತಿಯ ವ್ಯವಹಾರ ಇರಿಸಿಕೊಳ್ಳದಂತೆ ಎಚ್ಚರಿಕೆಯ ಪಾಠ ಮಾಡಿದ್ದಾರೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆ ನಿನ್ನೆ ನಡೆದಿದ್ದು, ಈ ವೇಳೆ ಸಚಿವರು ನೇರವಾಗಿಯೇ ಕೆನಡಾ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು ವಾಗ್ದಾಳಿ ನಡೆಸಿದ್ದಾರೆ.
ಇದೇ ಸಂದರ್ಭದಲ್ಲಿ ಸದಸ್ಯ ರಾಷ್ಟ್ರಗಳನ್ನು ಸಹ ಉದ್ದೇಶಿಸಿ ಮಾತನಾಡಿದ್ದು, ಪ್ರಾದೇಶಿಕ ಸಮಗ್ರತೆಗೆ ನೀಡುವ ಗೌರವ, ಮತ್ತೊಬ್ಬರ ಆಂತರಿಕ ವಿಷಯಗಳಲ್ಲಿ ಮೂಗು ತೂರಿಸದೇ ಇರುವುದು ಎಲ್ಲರಿಗೂ ಅನ್ವಯವಾಗಬೇಕು. ಅದಲ್ಲದೆ, ಈ ವಿಚಾರ ಆಯ್ಕೆಗೆ ಸಂಬಂಧಿಸಿದ್ದಾಗಿರಬಾರದು ಎಂದು ಅವರು ಹೇಳಿದ್ದಾರೆ. ಮಾತು ಮತ್ತು ಮಾಡುವ ಕೆಲಸಕ್ಕೆ ಹೊಂದಾಣಿಕೆ ಬಾರದಿದ್ದಾಗ ಅದರ ವಿರುದ್ಧ ಮಾತನಾಡುವ, ಪ್ರಶ್ನೆ ಮಾಡುವ ಮತ್ತು ಅದನ್ನು ವಿರೋಧ ಮಾಡುವ ಧೈರ್ಯ ನಮ್ಮಲ್ಲಿ ಇರಬೇಕು ಎಂದು ಅವರು ತಿಳಿಸಿದ್ದಾರೆ.
ಭಾರತ ಮತ್ತು ಕೆನಡಾ ನಡುವೆ ಖಲೀಸ್ತಾನಿ ಭಯೋತ್ಪಾದಕರ ವಿಷಯಕ್ಕೆ ಸಂಬಂಧಿಸಿದ ಹಾಗೆ ರಾಜತಾಂತ್ರಿಕ ಬಿಕ್ಕಟ್ಟು ಉಂಟಾಗಿದೆ. ಇದೇ ಸಂದರ್ಭದಲ್ಲಿ ಸಚಿವ ಜೈ ಶಂಕರ್ ಅವರು ನೀಡಿರುವ ಈ ಹೇಳಿಕೆ ಮಹತ್ವ ಪಡೆದಿದೆ. ಹಾಗೆಯೇ ಕೆನಡಾ ಸರ್ಕಾರಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮುಖಭಂಗ, ಮುಜುಗರ ಉಂಟಾಗುವಂತೆಯೂ ಸಚಿವರ ಮಾತು ಪರಿಣಾಮ ಬೀರಿದೆ ಎನ್ನುವುದು ಸ್ವಾಗತಾರ್ಹ.
ಇನ್ನು ಕೆನಡಾದ ಇಂತಹ ಹೀನ ನಡೆಯ ಬಗ್ಗೆ ಶ್ರೀಲಂಕಾದ ವಿದೇಶಾಂಗ ಸಚಿವ ಅಲಿ ಸಬ್ರಿ ತಮ್ಮ ಅಭಿಪ್ರಾಯ ತಿಳಿಸಿದ್ದು, ಈ ಹಿಂದೆ ಶ್ರೀಲಂಕಾದ ವಿರುದ್ಧ ಸಹ ಕೆನಡಾ ಇಂತಹದ್ದೇ ಆರೋಪವನ್ನು ಮಾಡಿತ್ತು. ಸದ್ಯ ಕೆನಡಾವು ಭಯೋತ್ಪಾದಕರ ಸ್ವರ್ಗವಾಗಿದೆ. ಯಾವುದೇ ಸಾಕ್ಷ್ಯಾಧಾರ ಇಲ್ಲದೆಯೇ ಈಗ ಕೆನಡಾ ಪ್ರಧಾನಿ ಟ್ರುಡೋ ಭಾರತದ ವಿರುದ್ಧ ಸಹ ಆರೋಪ ಮಾಡುತ್ತಿರುವುದಾಗಿಯೂ ಅವರು ಹೇಳಿದ್ದಾರೆ.
ಒಟ್ಟಿನಲ್ಲಿ ವಿನಾ ಕಾರಣ ಭಾರತವನ್ನು ಎದುರು ಹಾಕಿಕೊಂಡ ಕೆನಡಾದ ಗ್ರಹಚಾರ ಕೆಟ್ಟಿದೆ ಎಂದು ವಿಶ್ವವೇ ಮಾತನಾಡುವಂತಾಗಿದೆ. ಕೂಡಲೇ ಕೆನಡಾ ಎಚ್ಚೆತ್ತುಕೊಂಡು ಈ ತಪ್ಪನ್ನು ಸರಿಪಡಿಸದೇ ಇದ್ದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಮತ್ತೆ ಮುಖಭಂಗ ಅನುಭವಿಸಲಿದೆ ಎನ್ನುವಿದರಲ್ಲಿ ಸಂದೇಹವಿಲ್ಲ.