ಪ್ರಚಲಿತ

ಚೌಕಿದಾರನಿಗೆ ಅದ್ದೂರಿ ಸ್ವಾಗತ ಕೋರಲು ಸಜ್ಜಾದ ಕೇಸರಿ ಕೋಟೆ ಮಂಗಳೂರು! ರಾಜ್ಯ ರಾಜಕಾರಣಕ್ಕೆ ತಿರುವು ನೀಡಲಿದೆ ಮೋದಿಯ ಕರಾವಳಿ ಸಮಾವೇಶ!

ಕರಾವಳಿ ಭಾಗ ಎಂದರೆ ಅದು ಯಾವತ್ತಿಗೂ ಹಿಂದೂಪರ ಸಂಘಟನೆಗಳ ಪ್ರಾಬಲ್ಯ ಇರುವ ಪ್ರದೇಶ, ರಾಜಕೀಯವಾಗಿ ಅಥವಾ ಇತರ ಯಾವುದೇ ವಿಚಾರವಾಗಿ ಇರಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಎಂದರೆ ಅದು ದೇಶದ ರಾಜಕಾರಣಕ್ಕೆ ಒಂದು ಮಿಂಚಿನ ಸಂಚಲನ ನೀಡುವ ಪ್ರದೇಶ. ದೇಶದ ಯಾವುದೇ ಮೂಲೆಯಲ್ಲಿ ಹಿಂದೂ ಧರ್ಮ ಸಮ್ಮೇಳನ ಅಥವಾ ಇತರ ಯಾವುದೇ ಸಮಾವೇಶಗಳು ನಡೆಯಲಿ, ಅದಕ್ಕೆಲ್ಲಾ ಭದ್ರ ಬುನಾದಿ ಹಾಕಿ ಬಲ ಕಂಡುಕೊಳ್ಳುವುದು ಕರಾವಳಿಯಿಂದಲೇ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಅಥವಾ ಇತರ ಪರಿವಾರ ಸಂಘಟನೆಗಳೇ ಇರಲಿ ದೇಶದ ಹಿಂದೂಪರ ಸಂಘಟನೆಗಳ ತಳಹದಿ ಇರುವುದು ಕರಾವಳಿಯಲ್ಲಿ ಎಂಬುದು ಸತ್ಯ.‌ ಹೀಗಿರುವಾಗ ಭಾರತೀಯ ಜನತಾ ಪಕ್ಷಕ್ಕೂ ಹೆಚ್ಚಿನ ಬಲ ಕಂಡುಕೊಳ್ಳುವುದು ಕರಾವಳಿಯಲ್ಲೇ ಎಂಬುದು ವಿಶೇಷ.

೨೦೧೪ರಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಚುನಾವಣಾ ಪ್ರಚಾರದ ರಣಕಹಳೆಯನ್ನು ಕರಾವಳಿಯಿಂದಲೇ ಮೊಳಗಿಸಿದ್ದರು ಮತ್ತು ಮೋದಿಯವರ ಸಮಾವೇಶಕ್ಕೆ ಲಕ್ಷ ಲಕ್ಷ ಸಂಖ್ಯೆಯಲ್ಲಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ಸೇರಿದ್ದು ದೇಶದ ಇತಿಹಾಸದಲ್ಲೇ ಒಂದು ಹೊಸ ಚರಿತ್ರೆ ನಿರ್ಮಾಣ ಮಾಡಿತ್ತು. ಇದಾದ ನಂತರ ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲೂ ಮೋದಿ ಮಂಗಳೂರಿಗೆ ಬಂದು ಬಹಿರಂಗ ಸಮಾವೇಶದಲ್ಲಿ ಭಾಗವಹಿಸಿದ್ದರು. ಇದೀಗ ಮತ್ತೆ ೫ ವರ್ಷಗಳ ನಂತರ ಪ್ರಧಾನಿ ಮೋದಿ ಮಂಗಳೂರಿಗೆ ಬರಲಿದ್ದು ಇಡೀ ಕರಾವಳಿಯೇ ಮೋದಿಯವರನ್ನು ಸ್ವಾಗತಿಸಲು ಸಜ್ಜಾಗಿದೆ.!

ಹೌದು ಈಗಾಗಲೇ ಕರ್ನಾಟಕಕ್ಕೆ ಭೇಟಿ ನೀಡಿ ಮೈಸೂರು ಮತ್ತು ಚಿತ್ರದುರ್ಗದಲ್ಲಿ ಬಹಿರಂಗ ಸಮಾವೇಶದಲ್ಲಿ ಭಾಗವಹಿಸಿ ರಾಜ್ಯ ರಾಜಕಾರಣಕ್ಕೆ ಮಿಂಚಿನ ವೇಗ ನೀಡಿದ ಮೋದಿ, ಇದೇ ಎಪ್ರಿಲ್ ೧೩ರಂದು ಶನಿವಾರ ಮಂಗಳೂರಿಗೆ ಆಗಮಿಸಲಿದ್ದಾರೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಒಟ್ಟು ೧೩ ಕ್ಷೇತ್ರಗಳ ಪೈಕಿ ೧೨ ಬಿಜೆಪಿಯ ಕೈಯಲ್ಲಿದ್ದು ಈ ಬಾರಿಯ ಸಮಾವೇಶ ದೇಶದಲ್ಲೇ ಹೊಸ ಇತಿಹಾಸ ನಿರ್ಮಿಸಲು ಕೇಸರಿ ಪಾಳಯದ ನಾಯಕರು ನಿರ್ಧರಿಸಿದ್ದಾರೆ. ಬಿಜೆಪಿ ಅಧಿಕಾರದಲ್ಲಿ ಇರದ ಸಂದರ್ಭದಲ್ಲೇ ಅತೀ ಹೆಚ್ಚು ಜನರನ್ನು ಒಗ್ಗೂಡಿಸಿ ಮೋದಿಯವರ ಕೈ ಬಲಪಡಿಸಿದ್ದ ಕರಾವಳಿ, ಇದೀಗ ಬಿಜೆಪಿಯ ಪ್ರಾಬಲ್ಯ ಹೆಚ್ಚಿರುವಾಗ ಯಾವುದೇ ಕಾರಣಕ್ಕೂ ಜನ ಕಡಿಮೆ ಆಗಬಾರದು ಎಂಬ ಲೆಕ್ಕಾಚಾರದಿಂದ ಆಯೋಜಕರು ಹೊಸ ಹೊಸ ತಂತ್ರ ರೂಪಿಸಿದ್ದಾರೆ.!

ದೇಶದಲ್ಲೇ ಹೊಸ ಇತಿಹಾಸ ನಿರ್ಮಿಸಲಿದೆ ಮಂಗಳೂರು ಸಮಾವೇಶ!

ಎಪ್ರಿಲ್ ೧೩ರಂದು ನಡೆಯಲಿರುವ ಮಂಗಳೂರಿನ ಸಮಾವೇಶ ಪ್ರಧಾನಿ ಮೋದಿಯವರ ಈವರೆಗೆ ನಡೆದ ಎಲ್ಲಾ ರ್ಯಾಲಿಗಳಿಗಿಂತ ವಿಭಿನ್ನವಾಗಲಿದೆ ಮತ್ತು ಹೊಸ ಇತಿಹಾಸ ನಿರ್ಮಿಸಲಿದೆ ಎಂದು ಸಮಾವೇಶದ ಆಯೋಜಕರು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ರಾಜ್ಯದ ಯಾವುದೇ ಮೂಲೆಯಲ್ಲಿ ಸಮಾವೇಶ ನಡೆಯಲಿ, ಆದರೆ ದೇಶಾದ್ಯಂತ ಸುದ್ಧಿಯಾಗುವುದು ಮಂಗಳೂರಿನ ಸಮಾವೇಶ ಮಾತ್ರ ಎಂಬುದು ವಿಶೇಷ. ಇದೀಗ ಇಡೀ ಕರಾವಳಿಯ ಜನರು ಕಾಯುತ್ತಿದ್ದ ದಿನ ಬಂದೇ ಬಿಟ್ಟಿದೆ. ಈಗಾಗಲೇ ಕರಾವಳಿಯಲ್ಲಿ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಅವರ ಪರವಾಗಿ ಹೊಸ ಹೊಸ ಅಭಿಯಾನದ ಮೂಲಕ ಪ್ರಚಾರಕ್ಕಿಳಿದ ಕೇಸರಿ ಪಡೆ, ಇಡೀ ಕರಾವಳಿಯೇ ಕೇಸರಿಮಯವಾಗಿದೆ ಎಂಬುದರಲ್ಲಿ ಸಂಶಯವಿಲ್ಲ.

ನಳಿನ್ ಕುಮಾರ್ ಕಟೀಲ್ ಅವರು ಕಳೆದ ಬಾರಿ ೧.೪೦ ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು, ಆದರೆ ಈ ಬಾರಿ ಅದಕ್ಕಿಂತಲೂ ಹೆಚ್ಚಿನ ಮತಗಳ ಅಂತರದಿಂದ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಬಿಜೆಪಿ ನಾಯಕರು ಹೇಳಿಕೊಂಡಿದ್ದಾರೆ, ಮಾತ್ರವಲ್ಲದೆ ಕೆಲ ಸಮೀಕ್ಷೆಗಳ ಪ್ರಕಾರ ಕೂಡ ಬಿಜೆಪಿ ಸುಲಭವಾಗಿ ಗೆಲ್ಲಲಿದೆ ಎಂದು ಹೇಳಲಾಗಿದೆ. ಅದೇನೇ ಇರಲಿ ಒಟ್ಟಾರೆಯಾಗಿ ಹಿಂದೂಗಳ ಭದ್ರಕೋಟೆ ಕರಾವಳಿಯನ್ನು ಯಾವುದೇ ಕಾರಣಕ್ಕೂ ಎಡಪಕ್ಷಗಳಿಗೆ ಬಿಟ್ಟುಕೊಡಲು ತಯಾರಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಮೋದಿಯವರ ಸಮಾವೇಶದ ಮೂಲಕ ವಿಪಕ್ಷಗಳಿಗೆ ನೀಡಲಿದ್ದಾರೆ ಕರಾವಳಿಯ ಕೇಸರಿ ಕಲಿಗಳು..!

-ಪಿ ಆರ್ ಶೆಟ್ಟಿ

Tags

Related Articles

FOR DAILY ALERTS
Close