ಪ್ರಚಲಿತ

ಸನಾತನ ಧರ್ಮದ ಮೇಲೆ ಉದಯ ನಿಧಿಗೇಕೆ ಕೋಪ?

ತಮಿಳುನಾಡಿನ ಮುಖ್ಯಮಂತ್ರಿ ಸ್ಟ್ಯಾಲಿನ್ ಪುತ್ರ ಉದಯ ನಿಧಿ ಸ್ಟ್ಯಾಲಿನ್ ಮತ್ತೆ ಸುದ್ದಿಯಲ್ಲಿದ್ದಾರೆ. ಸನಾತನ ಧರ್ಮದ ವಿರುದ್ದ ಮತ್ತೆ ಹೇಳಿಕೆ ನೀಡಿ, ಸನಾತನ ಹಿಂದೂ ಧರ್ಮೀಯರ ಕೆಂಗಣ್ಣಿಗೆ ತುತ್ತಾಗಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾದಂತಹ ರೋಗಗಳಿಗೆ ಹೋಲಿಕೆ ಮಾಡಿದ್ದ ಉದಯ ನಿಧಿ ಆ ಮೂಲಕ ದೇಶಾದ್ಯಂತ ಭಾರೀ ವಿರೋಧಕ್ಕೆ ಗುರಿಯಾಗಿದ್ದರು. ಹೀಗಿದ್ದರೂ ಎಚ್ಚೆತ್ತುಕೊಳ್ಳದ ಅವರು ಈಗ ಮತ್ತೊಮ್ಮೆ ಸನಾತನ ಧರ್ಮದ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡುವ ಮೂಲಕ ಮತ್ತೆ ಹಿಂದೂ ಧರ್ಮೀಯರ ಕೋಪಕ್ಕೆ ಗುರಿಯಾಗಿದ್ದಾರೆ.

ಸನಾತನ ಧರ್ಮವನ್ನು ನಿರ್ಮೂಲನೆ ಮಾಡಿದರೆ ಅಸ್ಪೃಶ್ಯತೆ ತೊಲಗುತ್ತದೆ. ಹಾಗಾಗಿ ಸನಾತನ ಧರ್ಮವನ್ನು ತೊಡೆದು ಹಾಕಬೇಕು ಎಂದು ನಾವು ಹೇಳುತ್ತೇವೆ ಎಂಬುದಾಗಿ ಅವರು ತಿಳಿಸಿದ್ದಾರೆ. ಸನಾತನ ಧರ್ಮ ನಾಶವಾದರೆ ಅಸ್ಪೃಶ್ಯತೆ ಸಹ ನಾಶವಾಗುತ್ತದೆ ಎಂದು ನಾವು ನಂಬುತ್ತೇವೆ ಎಂಬುದಾಗಿ ಅವರು ತಿಳಿಸಿದ್ದಾರೆ. ಆ ಮೂಲಕ ಸನಾತನ ಹಿಂದೂ ಧರ್ಮವನ್ನು ಅವಹೇಳನ ಮಾಡುವ ಮೂಲಕ ಭಾರತದ ಹಿಂದೂಗಳನ್ನು ಕೆರಳಿಸಿದ್ದಾರೆ.

ಹಾಗೆಯೇ ಸನಾತನ ಧರ್ಮದ ನಾಶಕ್ಕಾಗಿಯೇ ಡಿ ಎಂ ಕೆ ಸ್ಥಾಪಿಸಲಾಗಿದೆ ಎಂದು ಅವರು ಹೇಳಿದ್ದಾರೆ. ನೂತನ ಸಂಸತ್ ಭವನ ಉದ್ಘಾಟನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸದಿರುವುದೇ ಅಸ್ಪೃಶ್ಯತೆಗೆ ಸಾಕ್ಷಿ. ಅವರು ಪರಿಶಿಷ್ಟ ಪಂಗಡಕ್ಕೆ ಸೇರಿದ್ದಾರೆ ಎನ್ನುವ ಕಾರಣಕ್ಕೆ ಅವರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ ಎಂಬುದಾಗಿಯೂ ಅವರು ನಾಲಿಗೆ ಹರಿ ಬಿಟ್ಟಿದ್ದಾರೆ.

ನಾನು ಈ ಹಿಂದೆ ಸನಾತನ ಧರ್ಮದ ಬಗೆಗಿನ ಹೇಳಿಕೆಯನ್ನು ಬಿಜೆಪಿ ತಿರುಚಿ ಪ್ರಚಾರ ಮಾಡಿದ್ದಾರೆ. ಜನರು ನನ್ನ ತಲೆಗೆ ಬೆಲೆ ಕಟ್ಟಿದ್ದಾರೆ. ಆದರೆ ನಾನಿದಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಉದಯನಿಧಿ ಹೇಳಿದ್ದಾರೆ.

ಒಟ್ಟಿನಲ್ಲಿ ಸನಾತನ ಧರ್ಮದ ಬಗೆಗಿನ ತಮ್ಮ ಅಸಮಾಧಾನ, ಭಯವನ್ನು ಉದಯ ನಿಧಿ ಈ ರೀತಿಯ ಹೇಳಿಕೆಗಳ ಮೂಲಕ ಜಗಜ್ಜಾಹೀರು ಮಾಡುತ್ತಿದ್ದಾರೇನೋ ಎಂಬ ಮಾತುಗಳು ಸಹ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ. ಇರಲಾರದೆ ಇರುವೆ ಬಿಟ್ಟುಕೊಂಡ ಎಂಬಂತೆ ಸನಾತನ ಧರ್ಮದ ಬಗ್ಗೆ ವಿನಾ ಕಾರಣ ಅವಹೇಳನಕಾರಿ ಹೇಳಿಕೆ ನೀಡುವ ಮೂಲಕ, ಜನರ ಹಾದಿ ತಪ್ಪಿಸಲು ಪ್ರಯತ್ನಿಸುವ ಕೆಲಸವನ್ನು ಉದಯ ನಿಧಿ ಮಾಡುತ್ತಿದ್ದಾರೆ.

ತಾನು ಸಮಾಜದ ಮುಖ್ಯ ಭೂಮಿಕೆಯಿಂದ ಮರೆಗೆ ಸರಿಯುತ್ತಿದ್ದೇನೆ ಎಂಬುದನ್ನು ಅರಿತ ಉದಯ ನಿಧಿ, ತನಗೆ ತಾನು ಪ್ರಚಾರ ನೀಡಿಕೊಳ್ಳಲು ಸನಾತನ ಧರ್ಮವನ್ನು ಅವಹೇಳನ ಮಾಡುತ್ತಿದ್ದಾರೋ ಎಂಬ ಸಂಶಯ ಎಲ್ಲರದು. ಈ ಪ್ರಶ್ನೆಗೆ ಕಾಲವೇ ಉತ್ತರ ನೀಡಬೇಕಿದೆ.

Tags

Related Articles

Close