ಪ್ರಚಲಿತ

ಪಶ್ಚಿಮ ಬಂಗಾಳದಲ್ಲೂ ಪ್ರದರ್ಶನವಾಗಲಿದೆ ದಿ ಕೇರಳ ಸ್ಟೋರಿ

ಪಶ್ಚಿಮ ಬಂಗಾಳದಲ್ಲಿ ಕೊನೆಗೂ ‘ದಿ ಕೇರಳ ಸ್ಟೋರಿ’ ಚಲನಚಿತ್ರ ಪ್ರದರ್ಶನಕ್ಕೆ ಹೇರಲಾದ ನಿಷೇಧ ತೆರವಾಗಿದೆ. ಈ ಚಲನಚಿತ್ರ ಪ್ರದರ್ಶನವನ್ನು ರಾಜ್ಯದಲ್ಲಿ ಮಾಡದಂತೆ ಪಶ್ಚಿಮ ಬಂಗಾಳ ಸರ್ಕಾರ ಮೇ ೮ ರಂದು ಆದೇಶಿಸಿತ್ತು. ಆದರೆ ಈ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿ ಆದೇಶ ಹೊರಡಿಸಿದೆ.

ರಾಜ್ಯದಲ್ಲಿ ಈ ಚಲನಚಿತ್ರದ ಪ್ರದರ್ಶನ ಮಾಡದಂತೆ ನಿಷೇಧ ಹೇರಲು ಅಲ್ಲಿನ ಸರ್ಕಾರ ನೀಡಿರುವ ಕಾರಣಗಳು ಅಸಮರ್ಪಕವಾಗಿದೆ ಎಂದು ಹೇಳಿರುವ ಸುಪ್ರೀಂ ಕೋರ್ಟ್, ಈ ನಿಷೇಧವನ್ನು ತೆರವುಗೊಳಿಸಿ ಆದೇಶ ಹೊರಡಿಸಿದೆ.

ಭಾರತದೆಲ್ಲೆಡೆ ಈ ಚಲನಚಿತ್ರ ಯಾವುದೇ ಸಮಸ್ಯೆ ಇಲ್ಲದೆ ಪ್ರದರ್ಶನ ಕಾಣುತ್ತಿದೆ. ಹಾಗಾಗಿ ಸಂಪೂರ್ಣ ಪಶ್ಚಿಮ ಬಂಗಾಳದಲ್ಲಿ ಈ ಚಲನಚಿತ್ರ ಪ್ರದರ್ಶನವನ್ನು ನಿಷೇಧ ಮಾಡಲು ಸಾಧ್ಯವಿಲ್ಲ. ಸಾರ್ವಜನಿಕ ಪ್ರದರ್ಶನದ ಮೂಲಭೂತ ಹಕ್ಕಿಗೆ ಚ್ಯುತಿ ತರಲು ಅವಕಾಶ ಇಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

ಹಾಗೆಯೇ ಚಿತ್ರ ಪ್ರದರ್ಶನಕ್ಕೆ ತಡೆ ಒಡ್ಡಲು ಯಾವುದೇ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಬಾರದು ಎಂಬುದಾಗಿಯೂ ಸುಪ್ರೀಂ ಕೋರ್ಟ್ ಪಶ್ಚಿಮ ಬಂಗಾಳದ ಸರ್ಕಾರಕ್ಕೆ ಸೂಚಿಸಿದೆ. ಈ ಚಲನಚಿತ್ರ ವೀಕ್ಷಣೆಗೆ ಬರುವ ಪ್ರೇಕ್ಷಕರ ಭದ್ರತೆಗೂ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಕೋರ್ಟ್ ಅಲ್ಲಿನ ಸರ್ಕಾರಕ್ಕೆ ಆಜ್ಞಾಪಿಸಿದೆ.

ಒಟ್ಟಿನಲ್ಲಿ ಕೇರಳದ ಕೆಲ ಹಿಂದೂ ಹೆಣ್ಣುಮಕ್ಕಳ ದುರಂತ ನೈಜ ಕಥೆಯನ್ನು ಹೇಳುವ, ಮತಾಂತರ, ಭಯೋತ್ಪಾದನೆ ಕರಾಳತೆಗೆ ಕನ್ನಡಿ ಹಿಡಿದಂತಿರುವ ಚಲನಚಿತ್ರ ‘ದಿ ಕೇರಳ ಸ್ಟೋರಿ’ ಗೆ ಪಶ್ಚಿಮ ಬಂಗಾಳದಲ್ಲಿಯೂ ಗೆಲುವು ದೊರೆತಿದೆ.

Tags

Related Articles

Close