ಭಾರತದ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೆ ಏರಿಸಿದವರು, ಭಾರತವನ್ನು ವಿಶ್ವ ಮಾನ್ಯ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಿದವರು ಪ್ರಧಾನಿ ನರೇಂದ್ರ ಮೋದಿ.
ದೇಶದ ಅಭಿವೃದ್ಧಿ, ಪ್ರಗತಿಗಾಗಿ ಶ್ರಮಿಸಿದವರು ಪ್ರಧಾನಿ ಮೋದಿ. ಸೆಪ್ಟೆಂಬರ್ 17 ರಂದು ಪ್ರಧಾನಿ ನರೇಂದ್ರ ಮೋದಿ ಅವರ 73 ನೇ ಜನ್ಮದಿನ. ಈ ನಿಟ್ಟಿನಲ್ಲಿ ಭಾರತೀಯ ಜನತಾ ಪಕ್ಷ ‘ಸೇವಾ ಪಖ್ವಾಡಾ’ ಅಥವಾ ‘ಸೇವಾ ಪಾಕ್ಷಿಕ’ ಅಭಿಯಾನವನ್ನು ಆಯೋಜನೆ ಮಾಡುವ ಯೋಜನೆಯನ್ನು ಅನಾವರಣ ಮಾಡಿದೆ.
ಪಕ್ಷದ ಮೂಲಗಳು ಈಗಾಗಲೇ ನೀಡಿರುವ ಮಾಹಿತಿಯ ಪ್ರಕಾರ, ಸೇವಾ ಪಾಕ್ಷಿಕದ ಭಾಗವಾಗಿ ಹದಿನಾರು ದಿನಗಳ ‘ಸೇವಾ ಹಿ ಸಂಘಟನ್’ ಕಾರ್ಯಕ್ರಮವನ್ನು ಕಾರ್ಯಗತ ಮಾಡಲು ಬಿಜೆಪಿ ಈಗಾಗಲೇ ಸಕಲ ಸಿದ್ಧತೆಗಳನ್ನು ನಡೆಸಿದೆ. ಸೆಪ್ಟೆಂಬರ್ 17 ರ ಪ್ರಧಾನಿ ಮೋದಿ ಅವರ ಹುಟ್ಟುಹಬ್ಬದ ದಿನದಿಂದ ತೊಡಗಿ, ಅಕ್ಟೋಬರ್ 2 ರ ಗಾಂಧಿ ಜಯಂತಿ ವರೆಗೆ ದೇಶವ್ಯಾಪಿ ಸೇವಾ ಕಾರ್ಯಕ್ರಮಗಳನ್ನು ನಡೆಸುವ ನಿಟ್ಟಿನಲ್ಲಿ ಬಿಜೆಪಿ ರೂಪುರೇಶೆಗಳನ್ನು ಹಾಕಿಕೊಳ್ಳುತ್ತಿದೆ.
ಈ ಮಹತ್ಕಾರ್ಯದ ನಿರ್ಣಯವನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ತರುಣ್ ಚುಗ್, ವಿನೋದ್ ತಾವ್ಡೆ, ಸುನಿಲ್ ಬನ್ಸಾಲ್, ಸಂಜಯ್ ಬಂಡಿ, ಕೈಲಾಶ್ ವಿಜಯವರ್ಗಿಯಾ ಅವರನ್ನು ಒಳಗೊಂಡಂತೆ ಪಕ್ಷದ ಪ್ರಮುಖ ನಾಯಕರ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ. ಈ ಸಭೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬ ಆಚರಣೆಗೆ ಸಂಬಂಧಿಸಿದ ಹಾಗೆ ನಡೆಸಲಾಗಿದೆ ಎಂಬುದಾಗಿಯೂ ಪಕ್ಷದ ಮೂಲಗಳು ಹೇಳಿವೆ.
ಸೇವಾ ಪಾಕ್ಷಿಕದ ಜೊತೆ ಜೊತೆಗೆ ‘ಮೇರಿ ಮಾಟಿ, ಮೇರಾ ದೇಶ್’ ಎಂಬ ದೇಶದ ಎಪ್ಪತ್ತಾರನೇ ಸ್ವಾತಂತ್ರ್ಯ ಸಂಭ್ರಮದ ಸವಿನೆನಪಿನಲ್ಲಿ ಆರಂಭ ಮಾಡಲಾಗಿರುವ ಅಭಿಯಾನದ ಕುರಿತಾಗಿಯೂ ಮಹತ್ವದ ಚರ್ಚೆಗಳನ್ನು ನಡೆಸಲಾಗಿದೆ. ಇದರೊಂದಿಗೆ ಇನ್ನಿತರ ಮಹತ್ವದ ಕಾರ್ಯಕ್ರಮಗಳ ಬಗೆಗೂ ಈ ಸಭೆಯಲ್ಲಿ ಬಿಜೆಪಿ ಸದಸ್ಯರು ಚರ್ಚೆ ನಡೆಸಿದ್ದಾಗಿ ಪಕ್ಷದ ಮೂಲಗಳು ಹೇಳಿವೆ.
ಪ್ರಧಾನಿ ಮೋದಿ ಅವರು ದೇಶದ ಪ್ರಮುಖ ಮತ್ತು ಮಹತ್ವದ ದಿನಗಳಂದು ಸಮಾಜಮುಖಿ ಕಾರ್ಯಗಳನ್ನು ರಾಷ್ಟ್ರಾದ್ಯಂತ ಆಯೋಜನೆ ಮಾಡುವ ಮೂಲಕ ದೇಶ, ಪ್ರಕೃತಿ, ಸಂಸ್ಕೃತಿಯ ಬಗ್ಗೆ, ಮಹಾ ಪುರುಷರ ಬಗ್ಗೆ ಜನರಲ್ಲಿ ಜಾಗೃತಿ ಹೆಚ್ಚುವಂತಹ ಕಾರ್ಯಕ್ರಮಗಳನ್ನು ನಡೆಸುವಲ್ಲಿ ನಿಸ್ಸೀಮರು. ಅಂತಹ ಮಹಾತ್ಮನ ಜನ್ಮದಿನದಂದು ದೇಶಾದ್ಯಂತ ಸೇವೆಯ ಮಹತ್ವವನ್ನು ಸಾರುವ ಸಲುವಾಗಿ ಹದಿನಾಲ್ಕು ದಿನಗಳ ಕಾರ್ಯಕ್ರಮ ಹಮ್ಮಿಕೊಳ್ಳಲು ಹೊರಟಿರುವ ಬಿಜೆಪಿಯ ನಡೆ ಮಾದರಿ ಮತ್ತು ಶ್ಲಾಘನೀಯ.