ಇತಿಹಾಸ

ಸಿಕ್ಖರ ಗುರು ಅರ್ಜನ್ ದೇವರನ್ನು ಮುಗಲ ಮತಾಂಧ ಜಹಾಂಗೀರನು ಬಿಸಿ ನೀರಿನ ಹಂಡೆಯಲ್ಲಿ ಮುಳುಗಿಸಿ, ಕಾದ ಒಲೆಯ ಮೇಲಿಟ್ಟರೂ ಅವರು ಧರ್ಮ ಬಿಡಲಿಲ್ಲ!!

ಧರ್ಮ ಮತ್ತು ದೇಶದ ರಕ್ಷಣೆಗೆ ತಮ್ಮ ಜೀವನವನ್ನೇ ಪಣಕಿಟ್ಟವರು ಸಿಕ್ಖರು. ಆವತ್ತು ಮಾತ್ರವಲ್ಲ, ಇವತ್ತಿಗೂ ಹಗಲಿರುಳು ದೇಶದ ಗಡಿ ಕಾಯುತ್ತಾ ತಮ್ಮ
ಜೀವನವನ್ನು ಮುಡುಪಾಗಿಡುತ್ತಿದಾರೆ ಸಿಕ್ಖ್ ಸಮುದಾಯದವರು. ಮುಗಲ್ ಶಾಸನದ ಎಲ್ಲಾ ಅತ್ಯಾಚಾರಗಳನ್ನು ಧೈರ್ಯದಿಂದ ಸಹಿಸಿದರು ಮಾತ್ರವಲ್ಲ, ಮುಗಲರ ಬೆವರಿಳಿಸಿದವರು ಸಿಕ್ಖರು. ಹಲವಾರು ಸಿಕ್ಖ್ ಗುರುಗಳು ಮತ್ತು ಯೋಧರು ಧರ್ಮ ಮತ್ತು ದೇಶ ರಕ್ಷಣೆಗಾಗಿ ಪ್ರಾಣಾರ್ಪಣೆ ಮಾಡಿದ್ದಾರೆ. ಅಂತಹವರಲ್ಲಿ ಒಬ್ಬರು ಗುರು ಅರ್ಜನ್ ದೇವರು!

1581 ರಲ್ಲಿ ಸಿಕ್ಖರ ಐದನೇ ಗುರುವಾಗಿ ಪೀಠಾಸೀನರಾಗುತ್ತಾರೆ ಅರ್ಜನ್ ದೇವರು. ಆಗ ಭಾರತದಲ್ಲಿ ಅಕ್ಬರನ ಮಗ ಜಹಾಂಗೀರನ ಶಾಸನವಿತ್ತು. ಆತ ತನ್ನ ಪೂರ್ವಜರಂತೆಯೇ ಕಟ್ಟಾ ಇಸ್ಲಾಂನ ಅನುಯಾಯಿ. ಅರ್ಜನ್ ದೇವರ ಹೆಸರು ಸಿಕ್ಖ್ ಇತಿಹಾಸದಲ್ಲಿ ” ಹುತಾತ್ಮರ ಸರದಾರ” ಎನ್ನುವ ಹೆಸರಿನಿಂದ ಅಂಕಿತವಾಗಿದೆ. ಆಗಬೇಕಾದದ್ದೇ, ಏಕೆಂದರೆ ಅವರ ಬಲಿದಾನವೇ ಅಂತಹುದು. ಧರ್ಮ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡಿದ ಮಹಾನುಭಾವ ಅವರು. ಧರ್ಮ ರಕ್ಷಣೆಗಾಗಿ ಪ್ರಾಣಾರ್ಪಣೆ ಮಾಡಿದ ಮೊದಲ ಸಿಕ್ಖ್ ಗುರು ಅರ್ಜನ್ ದೇವ್ ಜೀ.

1563 ರಲ್ಲಿ ಹುಟ್ಟಿದ ಇವರು ಕೇವಲ ಹದಿನಾರನೇ ವಯಸ್ಸಿಗೇ ಗುರು ಪೀಠವೇರುತ್ತಾರೆ. ಅಲ್ಲಿಂದ ಇವರು ಧರ್ಮ ರಕ್ಷಣೆಯ ಕಾರ್ಯದಲ್ಲಿ ತೊಡಗುತ್ತಾರೆ. ಗುರು ನಾನಕರಿಂದ ಹಿಡಿದು ತಮಗಿಂತ ಮೊದಲನೆ ನಾಲ್ಕನೇ ಗುರುವಿನವರೆಗಿನ “ಗುರು ವಾಣಿ”ಯನ್ನು ಮಾತ್ರವಲ್ಲ, ಸಂತ ಕಬೀರದಾಸ, ಗೋರಖನಾಥರಂತಹ ಧರ್ಮಾತ್ಮರ ವಾಣಿಯನ್ನು ‘ಗುರು ಗ್ರಂಥ ಸಾಹಿಬ್’ನಲ್ಲಿ ಬರೆದು ಸಿಕ್ಖರ ಧರ್ಮ ಗ್ರಂಥಕ್ಕೆ ಭಾಷ್ಯ ಬರೆಯುತ್ತಾರೆ. ಇವರ ಕಾಲದಲ್ಲಿ ಮುಗಲರ ಅನಾಚಾರ ಮೇರೆ ಮೀರಿತ್ತು. ಆದ್ದರಿಂದ ಜನರನ್ನು ಉದ್ದಾರ ಮಾಡುವ ಕಾರ್ಯದಲ್ಲಿ ಅರ್ಜನ್ ದೇವ್ ಜೀ ತೊಡಗುತ್ತಾರೆ.

ಅರ್ಜನ್ ದೇವರಿಂದ ಪ್ರಭಾವಿತರಾದ ಸನಾತನ ಹಿಂದೂಗಳು ಮತ್ತು ಸಾವಿರಾರು ಮುಸಲ್ಮಾನರು ಸಿಕ್ಖ್ ಧರ್ಮವನ್ನು ಸ್ವೀಕಾರ ಮಾಡಲು ತೊಡಗುತ್ತಾರೆ. ಗುರು ಅರ್ಜನ್ ದೇವರ ಪ್ರಸಿದ್ದಿ ಸುತ್ತು ಮುತ್ತಲೆಲ್ಲ ಹರಡಿ, ಮತಾಂಧ ಮುಗಲರ ಕಿವಿಗೂ ಬೀಳುತ್ತದೆ. ಅಷ್ಟೇ, ಅವರು ಅರ್ಜನ್ ದೇವರನ್ನು ಮುಗಿಸುವ ಹುನ್ನಾರ ಮಾಡುತ್ತಾರೆ. ಅಂತೆಯೇ ಜಹಾಂಗೀರನ ಕಿವಿ ಕಚ್ಚುತ್ತಾರೆ. ಮೊದಲೇ ಮತಾಂಧ, ಇನ್ನು ಕಿವಿ ಕಚ್ಚಿದರೆ ಕೇಳಬೇಕೆ? ಆತ ಗುರು ಅರ್ಜನ್ ದೇವರನ್ನು ಬಂಧಿಸುವಂತೆ ಆಜ್ಞೆ ಹೊರಡಿಸುತ್ತಾನೆ.

ಜಹಾಂಗೀರನ ಬಂಟ ಚಂದೂ ಶಾಹ್ ಅರ್ಜನ್ ದೇವರನ್ನು ಬಂಧಿಸಿ ಮಹಲಿಗೆ ಕರೆ ತರುತ್ತಾನೆ. ತದನಂತರ ಆತ ಸತತ ನಾಲ್ಕು ದಿನ ಗುರೂಜೀ ಗೆ ಕೊಟ್ಟ ಶಿಕ್ಷೆಗಳಿವೆಯಲ್ಲಾ, ಅಬ್ಬಾ ಕೇಳಿದರೇನೇ ಮೈಯೆಲಾ ನಡುಗುವುದು.

ಮೊದಲನೇ ದಿನ ಅರ್ಜನ್ ದೇವರನ್ನು ಉಪವಾಸ ಕೆಡವಲಾಯಿತು. ಕುಡಿಯಲು ನೀರೂ ಸಹ ಕೊಡಲಿಲ್ಲ. ಮಾತ್ರವಲ್ಲ, ರಾತಿಯಿಡೀ ನಿದ್ದೆ ಮಾಡದಂತೆ ನೋಡಿ ಕೊಳ್ಳಲಾಯಿತು.

ಎರಡನೇ ದಿನ ಅವರನ್ನು ದೊಡ್ಡದೊಂದು ಹಂಡೆಯಲ್ಲಿ ಕುಳ್ಳಿರಿಸಲಾಯಿತು. ತದನಂತರ ಅದಕ್ಕೆ ನೀರು ತುಂಬಿ ಕೆಳಗಿನಿಂದ ಬೆಂಕಿ ಹಚ್ಚಿ ಆ ನೀರನ್ನು ಬಿಸಿ
ಮಾಡಲಾಯಿತು. ಗುರೂಜೀ ತರಕಾರಿ ಬೆಂದಂತೆ ಬೆಂದು ಹೋದರು. ಮೈಯೆಲ್ಲಾ ಬಬ್ಬುಗಳೆದ್ದವು. ಆದರೆ ಸಿಂಹದ ಗುಂಡಿಗೆ ಹೊಂದಿದ ಗುರೂಜೀ ತುಟಿ ಪಿಟಿಕ್ ಎನ್ನಲಿಲ್ಲ. ಬದಲಾಗಿ ಗುರುಬಾಣಿಯನ್ನು ಉಚ್ಚರಿಸುತ್ತಾ ಶಾಂತ ಚಿತ್ತರಾಗಿ ಎಲ್ಲವನ್ನೂ ಸಹಿಸಿಕೊಂಡರು.

ಮೂರನೇ ದಿನ ಶಿಕ್ಷೆ ಇನ್ನೂ ಘೋರವಾಗಿತ್ತು. ಕಾದ ಕಬ್ಬಿಣದ ತವದಲ್ಲಿ ಮರಳನ್ನು ಕೆಂಪಗೆ ಕಾಯಿಸಲಾಯಿತು. ಗುರುಜೀಯವರನ್ನು ಕಾದ ನೀರಿನೊಳಗೆ ಕುಳ್ಳಿರಿಸಿ ಮತ್ತೆ ಕುದಿಸಿ ಅವರ ಮೈಯೆಲ್ಲಾ ಗುಳ್ಳೆಗಳೆದ್ದಾಗ ಈ ಬಿಸಿ ಮರಳನ್ನು ಅವರ ಮೇಲೆ ಸುರಿಯಲಾಯಿತು. ಸ್ವಲ್ಪ ಯೋಚಿಸಿ ಬಬ್ಬು ಎದ್ದ ಮೈಗೆ ಬಿಸಿ ಮರಳು ಬಿದ್ದಾಗ ಎಷ್ಟು ಯಮ ಯಾತನೆಯಾಗುವುದೆಂದು. ಯೋಚಿಸಲೂ ಸಾಧ್ಯವಿಲ್ಲ ಅಲ್ಲವೇ? ಆದರೆ ಗುರೂಜೀ ಇದನ್ನೂ ತಡೆದುಕೊಂಡರು. ಮತ್ತೆ ವಾಹೇಗುರು ಜಪ ಮಡುತ್ತಾ ಎಲ್ಲಾ ನೋವನ್ನು ನುಂಗಿಕೊಂಡರು.

ನಾಲ್ಕನೇ ದಿನ ಕಾದ ಕಬ್ಬಿಣದ ತವದ ಮೇಲೆ ಮರಳನ್ನು ಬಿಸಿ ಮಾಡಿ ಆ ಬಿಸಿ ಮರಳಿನ ಮೇಲೆ ಗುರುಜೀಯವರನ್ನು ಕುಳ್ಳಿರಿಸಿ ಅಡಿಯಿಂದ ಬೆಂಕಿ ಹಚ್ಚಲಾಯಿತು. ಆಗಲೂ ಗುರೂಜೀ ಚೀರಾಡಲಿಲ್ಲ, ಕಿರುಚಲಿಲ್ಲ. ಅವರ ಶಿಷ್ಯರು ಗುರುಜೀಗಾದ ಅನ್ಯಾಯ ನೋಡಿ ಕಣ್ಣೀರಿಟ್ಟರು. ಆಜ್ಞೆ ಇತ್ತರೇ ಈಗಲೇ ಮುಗಲರನ್ನು ತರಿಯುವೆನೆಂದರು. ಆದರೆ ಗುರೂಜೀ ಅವರೆಲ್ಲರನ್ನೂ ಶಾಂತವಾಗಿಸಿದರು. ಇದು ವಾಹೇ ಗುರುವಿನ ಆಜ್ಞೆ ಎಲ್ಲರೂ ಶಾಂತ ಚಿತ್ತರಾಗಿರಿ ಎಂದರು ಮತ್ತು ಗುರುಬಾಣಿಯನ್ನೇ ಜಪಿಸುತ್ತಾ ಎಲ್ಲಾ ನೋವನ್ನು ಸಹಿಸಿಕೊಂಡರು. ಮತಾಂಧರು ಘನ ಘೋರ ಶಿಕ್ಷೆ ಕೊಟ್ಟರೂ ಧರ್ಮ ಬಿಡಲಿಲ್ಲ, ಇಸ್ಲಾಂಗೆ ಮತಾಂತರ ಹೊಂದಲಿಲ್ಲ.

ಐದನೇ ದಿನ ಚಂದೂ ಶಾಹ್ ಗುರೂಜೀಯನ್ನು ದನದ ಚರ್ಮದಲ್ಲಿ ಸುತ್ತಿ ಅವರನ್ನು ಚರ್ಮದ ಸಮೇತ ಹೊಲಿದು ಬಿಡುವ ಶಿಕ್ಷೆಯನ್ನು ಕೊಡುವವನಿದ್ದನು. ಆದರೆ ಗುರುಜೀ ಅದಕ್ಕೂ ಮುನ್ನ ತಾನು ರಾವಿ ನದಿಯಲ್ಲಿ ಸ್ನಾನ ಮಾಡಿ ಬರುವೆನೆಂದರು. ಮೈಯೆಲಾ ಬೆಂದು ಗಾಯಗಳಾಗಿದ್ದರಿಂದ ತಣ್ಣ ನೀರಿನಲ್ಲಿ ಇಳಿದ ಕೂಡಲೇ ಗುರುಜೀಗೆ ಅತೀವ ನೋವಾಗುವುದೆಂದು ತಿಳಿದು, ಖುಷಿ ಪಟ್ಟ ಚಂದೂ ಶಾಹ್ ಇದಕ್ಕೆ ಒಪ್ಪಿಗೆ ನೀಡುತ್ತಾನೆ. ಗುರೂಜೀ ತನ್ನ ಶಿಷ್ಯರನ್ನು ಕಡೆ ಬಾರಿ ನೋಡುತ್ತಾ ಶಾಂತ ಚಿತ್ತರಾಗಿರುವಂತೆ ನಿರ್ದೇಶಿಸುತ್ತಾ, ಗುರು ನಾಮ ಜಪಿಸುತ್ತಾ ನಿಧಾನವಾಗಿ ರಾವೀ ನದಿಯಲ್ಲಿ ಮುಳುಗುತ್ತಾರೆ. ಮತ್ತೆಂದೂ ಅವರು ಮೇಲೆ ಬರುವುದಿಲ್ಲ. ಇಡಿಯ ನದಿಯನ್ನು ಹುಡುಕಾಡಿದರೂ ಅವರ ಶರೀರ ದೊರಕುವುದಿಲ್ಲ. ಅರ್ಜನ್ ದೇವರು ಪರಮಾತ್ಮನಲ್ಲಿ ಲೀನವಾಗುತ್ತಾರೆ.

ಇಂತಹ ಧರ್ಮ ರಕ್ಷರನ್ನು ಹುತಾತ್ಮರ ಸರದಾರ ಎನ್ನದೆ ಇನ್ನೇನು ಹೇಳಲು ಸಾಧ್ಯ? ಕತ್ತಿ ತೋರಿಸಿದರೆ ಸಾಕು, ಆಮಿಷ ಒಡ್ದಿದರೆ ಸಾಕು ಧರ್ಮ ಪರಿವರ್ತನೆ ಮಾಡುವ ಹೇಡಿಗಳಿದ್ದಾರೆ. ಆದರೆ ಅಂತಹ ಬರ್ಬರ ಶಿಕ್ಷೆ ಕೊಟ್ಟರೂ ಅವರು ಧರ್ಮ ಬಿಡಲಿಲ್ಲ. ಇದಲ್ಲವೇ ದರ್ಮ ರಕ್ಷಣೆಯೆಂದರೆ. ಗುರುಜೀ ಜೀವನ ನಮಗೆಲ್ಲರಿಗೂ ಮಾರ್ಗದಶಕವಾಗಿರಬೇಕು. ಯಾವುದೇ ಕಾರಣಕ್ಕೂ ಧರ್ಮ ದ್ರೋಹ ಮಾಡಬಾರದು. ಧರ್ಮ ರಕ್ಷಣೆಯೇ ಜೀವನದ ಪರಮ ಗುರಿಯಾಗಿರಬೇಕು. ಧರ್ಮ ಒಡೆದವರು, ಮತಾಂತರ ಮಾಡಿಸಿದವರು ಉದ್ದಾರವಾದ ನಿದರ್ಶನಗಳಿಲ್ಲ. ಮುಂದೆಯೂ ಅಷ್ಟೆ ಧರ್ಮ ಒಡೆಯುವವರು ಸರ್ವನಾಶ ಹೊಂದುವರು ಇದು ಖಡಾ ಖಂಡಿತ.

-Sharvari

Tags

Related Articles

Close