ಪ್ರಚಲಿತ

ಜೀವಿತಾವಧಿಯಲ್ಲೇ ಪರಮವೀರ ಚಕ್ರವನ್ನು ಮುಡಿಗೇರಿಸಿಕೊಂಡಿದ್ದ ಮೊದಲ ಸೈನಿಕರಿವರು.! ಕ್ಯಾಪ್ಟನ್ ಕರಮ್ ಸಿಂಗ್ ಎಂಬ ಭಾರತೀಯ ಸೈನ್ಯದ ಹುಲಿಯ ಕಥೆ.!

ಕ್ ದೇಶ್ ಸಂದೇಶ್ ಏಕ್ ಹೇ,ಏಕ್ ಹಮಾರಾ ನಾರಾಹೆ,ಸಂತಾನ್ ಹೇ ಹಮ್ ಭಾರತ್ ಮಾಕಿ ಭಾರತ್ ದೇಶ್ ಹಮಾರಾಹೆ”. ಹಿಂದಿ ದೇಶಭಕ್ತಿಗೀತೆಯೊಂದರ ಸಾಲುಗಳಿವು.ನಾವೆಲ್ಲರೂ ಭಾರತ ಮಾತೆಯ ಮಕ್ಕಳು ಹಾಗು ಭಾರತ ದೇಶ ನಮ್ಮದು ಎಂದು ಹೆಮ್ಮೆಯಿಂದ ಹೇಳುವ ಸಾಲುಗಳಿವು. ನಮ್ಮ ದೇಶದ ಬಗ್ಗೆ ಅತೀವ ಹೆಮ್ಮೆಯಿರುವ ಭಾರತೀಯರು ನಾವೆಂದು ಹೇಳಿಕೊಳ್ಳಲು ನಮಗೆ ಹೆಮ್ಮೆಯಿದೆ.ಹೀಗೆ ದೇಶದ ಮೇಲಿನ ಹೆಮ್ಮೆಯಿಂದ ದೇಶಕ್ಕೋಸ್ಕರ ಸೇವೆಸಲ್ಲಿಸುವವರಿಗೇನೂ ಕೊರತೆಯಿಲ್ಲ. ವಿಜ್ಞಾನಿಗಳಾಗಿ,ಪೊಲೀಸರಾಗಿ,ಕ್ರೀಡಾಪಟುಗಳಾಗಿ ಅಥವಾ ಸೈನಿಕರಾಗಿ ದೇಶಕ್ಕೆ ಸೇವೆ ಸಲ್ಲಿಸುವುದು ಎಲ್ಲರಿಗೂ ಹೆಮ್ಮೆಯ ವಿಚಾರ.. ಸೈನಿಕರಾಗಿ ಸೈನ್ಯ ಸೇರಿ ಶತ್ರುಗಳಿಂದ ದೇಶವನ್ನು ರಕ್ಷಿಸುವುದು ಸೈನಿಕನಿಗೆ ಅತ್ಯಂತ ಹೆಮ್ಮೆಯ ವಿಚಾರ,ಸೈನಿಕನಿಗೆ ಮಾತ್ರವಲ್ಲ ಸೈನಿಕನ ಕುಟುಂಬದವರಿಗೂ ಹೆಮ್ಮೆಯ ವಿಚಾರವೇ ಸರಿ,ಯಾವುದೇ ಗುರುತಿಸುವಿಕೆ ಪ್ರಶಸ್ತಿಗಳ ಹಂಬಲವಿಲ್ಲದೆ,ದೇಶಕ್ಕೋಸ್ಕರ ಸೇವೆಯನ್ನು ಸಲ್ಲಿಸುವುದೇ ಪರಮ ಗುರಿಯಾಗಿರುವ ಸೈನಿಕರ ಬದುಕು,ಶಿಸ್ತು,ಸಂಯಮಗಳು ನಮ್ಮಂತಹಾ ಅನೇಕ ಸಾಮಾನ್ಯ ಜನರಿಗೆ ಎಂದಿಗೂ ಮಾದರಿ ವಿಷಯವೇ ಆಗಿದೆ.

೧೯೧೫ ರ ಸೆಪ್ಟೆಂಬರ್ ೧೫ ರಂದು ಪಂಜಾಬ್ ನ ಸಂಗ್ರೂರ್ ಜಿಲ್ಲೆಯ ಭಲಿಯಾವಾಲಾ ಗ್ರಾಮದಲ್ಲಿ ಕ್ಯಾಪ್ಟನ್ ಕರಮ್ ಸಿಂಗ್ ಅವರು ಜನಿಸಿದರು.ರೈತ ಉತ್ತಮ ಸಿಂಗ್ ಅವರ ಪುತ್ರರಾದ ಕರಮ್ ಸಿಂಗ್ ಬಾಲ್ಯದಿಂದಲೇ ಸಾಹಸ ಮತ್ತು ಚಟುವಟಿಕೆಗಳಿಂದ ವ್ಯಸ್ತರಾಗಿರುವ ಜೀವನಶೈಲಿಯಲ್ಲಿ ಆಸಕ್ತಿಯನ್ನು ಹೊಂದಿದ್ದರು.ಸೈನ್ಯದಲ್ಲಿ ಜೆಸಿಓ ಆಗಿ ಸೇವೆಸಲ್ಲಿಸುತ್ತಿದ್ದ ಚಿಕ್ಕಪ್ಪನಿಂದ ಸೈನ್ಯದ ಜೀವನದ ಬಗ್ಗೆ ಪ್ರಭಾವಿತರಾದ ಕರಮ್ ಸಿಂಗ್,ಚಿಕ್ಕಪ್ಪನ ಹೆಜ್ಜೆಯ ಗುರುತುಗಳನ್ನೇ ಅನುಸರಿಸಿದರು.ಸೆಪ್ಟೆಂಬರ್ ೧೫ ೧೯೪೧ರೆಂದು ತಮ್ಮ ೨೬ ನೇ ವಯಸ್ಸಿನಲ್ಲಿ ತಮ್ಮ ಜನ್ಮದಿನದಂದು ಸೈನ್ಯಕ್ಕೆ ಸೇರಿಕೊಂಡರು.ರಾಂಚಿಯಲ್ಲಿ ತಮ್ಮ ತರಬೇತಿಯನ್ನು ಪೂರ್ಣಗೊಳಿಸಿದ ಕರಮ್ ಸಿಂಗ್ ೧೯೪೨ ರಲ್ಲಿ ಸಿಖ್ ರೆಜಿಮೆಂಟ್ ಗೆ ಸೇರ್ಪಡೆಗೊಂಡು ಸೈನ್ಯದಲ್ಲಿ ಸೇವೆಸಲ್ಲಿಸಲು ಪ್ರಾರಂಭಿಸಿದರು. ಸೈನ್ಯದಲ್ಲಿಉತ್ತಮ ಕ್ರೀಡಾಪಟುವಾಗಿ ಗುರುತಿಸಿಕೊಂಡಿದ್ದ ಕರಮ್ ಸಿಂಗ್ ಪೊಲ್ ವಾಲ್ಟ್ ಮತ್ತು ಲಾಂಗ್ ಜಂಪ್ ನಲ್ಲಿ ಹೆಸರನ್ನು ಸಂಪಾದಿಸಿದರು.ಎರಡನೇ ಮಹಾಯುದ್ಧದಲ್ಲಿ ಭಾಗವಹಿಸಿ ತಮ್ಮ ಸಮರ್ಪಣೆ ಮತ್ತು ಸಾಮರ್ಥ್ಯವನ್ನು ಸಾಬೀತು ಪಡಿಸಿದ ಕಾರಣ ಬ್ರಿಟಿಷ್ ಸರಕಾರವು ಕರಮ್ ಸಿಂಗ್ ಅವರಿಗೆ ಬ್ರಿಟನ್ ದೇಶದ ಧೀರ ಪ್ರಶಸ್ತಿಯಾದ ಮಿಲಿಟರಿ ಪದಕವನ್ನು ನೀಡಿ ಗೌರವಿಸಿತು.೧೯೪೫ ರಲ್ಲಿ ಬರ್ಮಾ ಫ್ರಂಟ್ ನಲ್ಲಿ ಜಪಾನ್ ಸೈನಿಕರೊಂದಿಗೆ,ಬರ್ಮಾದ ದಟ್ಟವಾದ ಕಾಡುಗಳಲ್ಲಿ ಹೋರಾಟವನ್ನು ನಡೆಸಿದ್ದರು. ೧೪ ಮಾರ್ಚ್ ೧೯೪೪ ರಂದು ಅವರು ಬ್ರಿಟಿಷ್ ಸರಕಾರದ “ ಮಿಲಿಟರಿ ಪದಕ” ದಿಂದ ಪುರಸ್ಕರಿಸಲ್ಪಟ್ಟರು.

೧೯೪೮ ರ ಬೇಸಿಗೆ ಸಮಯದಲ್ಲಿ ಭಾರತೀಯ ಸೈನ್ಯವು ತೀಥವಾಲ್ ವಲಯದ ಮೇಲೆ ಪರಿಸ್ಥಿತಿಯ ಸಾಕಷ್ಟು ಲಾಭವನ್ನು ಪಡೆದುಕೊಂಡರು. ಪರಿಣಾಮವಾಗಿ ಮೇ ೨೩ ರಂದು ತೀಥವಾಲ್ ವಲಯದ ನಿಯಂತ್ರಣವನ್ನು ವಶಪಡಿಸಿಕೊಂಡರು.ಇದರ ಪರಿಣಾಮವಾಗಿ ತೀತ್ವಾಲ್ ಅನ್ನು ವಶಪಡಿಸಿಕೊಳ್ಳುವ ಮಿಷನ್ ಅನ್ನು ತ್ಯಜಿಸುವುದರ ಹೊರತಾಗಿ ಶತ್ರುಗಳ ಬಳಿಯಲ್ಲಿ ಬೇರೆ ಯಾವುದೇ ಆಯ್ಕೆಯಿರಲಿಲ್ಲ.ಆದರೂ ತಿತ್ವಾಲ್ ಅನ್ನು ಭಾರತೀಯರಿಗೆ ಒಪ್ಪಿಸುವುದನ್ನು ಇಷ್ಟಪಡದ ಪಾಕಿಸ್ತಾನಿ ಸೈನಿಕರು ಕಳೆದುಕೊಂಡ ಪ್ರದೇಶವನ್ನು ವಶಪಡಿಸಿಕೊಳ್ಳುವ ಉದ್ದೇಶದಿಂದ ತಿಂಳಾನುಗಟ್ಟಲೆ ಕದನವನ್ನು ಮುಂದುವರೆಸಿದರು. ಆದರೂ ಭಾರತೀಯ ಸೈನಿಕರಿಗೆ ಹಾನಿಯುಂಟುಮಾಡಿ ತಿತ್ವಾಲ್ ಅನ್ನು ಪುನಃ ವಶಪಡಿಸಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ.ಇದರಿಂದಾಗಿ ಕೊನೆಗೆ ಫಿರಂಗಿ ದಳದೊಂದಿಗೆ ಉತ್ತಮ ತಂಡವೊಂದನ್ನು ತಿತ್ವಾಲ್ ಅನ್ನು ವಶಪಡಿಸಿಕೊಳ್ಳಲು ನಿಯೋಜಿಸಲಾಯಿತು.

ಅಕ್ಟೋಬರ್ ೧೩,೧೯೪೮ರಂದು ಪಾಕಿಸ್ತಾನಿ ಸೇನೆಯು ತಿತ್ವಾಲ್ ಪ್ರದೇಶದಿಂದ ಭಾರತೀಯ ಸೇನೆಯನ್ನು ಹೊರದಬ್ಬಿ ತಾವು ಸ್ಥಳವನ್ನು ವಶಪಡಿಸಿಕೊಳ್ಳುವ ಉದ್ದೇಶದೊಂದಿಗೆ ದಾಳಿಯನ್ನು ಪ್ರಾರಂಭಿಸಿತು.ಈ ದಾಳಿಯಲ್ಲಿ ರೀಚ್ಮಾರ್ ಗಾಲಿಪ್ರದೇಶದಲ್ಲಿ ಗನ್ ಮತ್ತು ಶೆಲ್ ದಾಳಿಯನ್ನು ಬಳಸಲಾಯಿತು.ಬೆಂಕಿಯನ್ನುಗುಳುತ್ತಿದ್ದ ಫಿರಂಗಿಗಳು ಶತ್ರುಗಳಿಗೆ ಮಾರ್ಗವನ್ನು ತೆರವುಗೊಳಿಸಿ ನೀಡುತ್ತಿತ್ತು.ಈ ಸಮಯದಲ್ಲಿ ಲಾನ್ಸ್ ನಾಯಕರಾಗಿದ್ದ ಕರಮ್ ಸಿಂಗ್ ರೀಚ್ಮಾರ್ ಪ್ರದೇಶದಲ್ಲಿ ಫಾರ್ವರ್ಡ್ ಪೋಸ್ಟ್ ನಲ್ಲಿ ತಂಡವನ್ನು ಮುನ್ನಡೆಸುತ್ತಿದ್ದರು.ಶತ್ರು ಪಡೆಗಳು ಸಿಖ್ ರೆಜಿಮೆಂಟ್ ನ ಮೇಲೆ ೮ ಕ್ಕೂ ಹೆಚ್ಚುಬಾರಿ ಫಿರಂಗಿದಾಳಿಯನ್ನು ನಡೆಸಿತ್ತು. ಕರಮ್ ಸಿಂಗ್ ತೀವ್ರವಾಗಿ ಹೋರಾಟವನ್ನು ನಡೆಸುತ್ತಿದ್ದ ತನ್ನ ಸೈನಿಕರಿಗೆ ಶತ್ರುಗಳ ವಿರುದ್ಧ ಹೋರಾಡಲು ಜೊತೆಗೂಡಲು ಹೊರಟರು.ಆದರೆ ಅಂತಿಮವಾಗಿ ಕರಮ್ ಸಿಂಗ್ ರ ತಂಡದ ಬಳಿಯಲ್ಲಿ ಸಂಗ್ರಹಿಸಲ್ಪಟ್ಟ ಮದ್ದುಗುಂಡುಗಳು ಮುಗಿದು ಹೋದವು,ಈ ಸಂದರ್ಭದಲ್ಲಿ ಕರಮ್ ಸಿಂಗ್ ಮುಂಚೂಣಿಯಲ್ಲಿ ನಿಂತು ಹೋರಾಡಲು ಪ್ರಾರಂಭಿಸಿದರು ಮತ್ತು ಶತ್ರುಗಳ ಗುಂಡಿನಿಂದ ಗಾಯಗೊಂಡರು.ಆದರೆ ಭರವಸೆಯನ್ನು ಕಳೆದುಕೊಳ್ಳದ ಕರಮ್ ಸಿಂಗ್ ತನ್ನಿಬ್ಬರು ಸಹಯೋಧರನ್ನು ರಕ್ಷಿಸಲು ಮುಂದಾದರು. ತಮ್ಮ ಮೇಲೆ ಬರುತ್ತಿದ್ದ ಗುಂಡುಗಳನ್ನು ಲೆಕ್ಕಿಸದೆ ತಮ್ಮ ಮೊದಲಿನ ಸ್ಥಾನಕ್ಕೆ ಹಿಂತಿರುಗಿದ ಅವರು ತಮ್ಮ ಸೈನಿಕರನ್ನು ಹೋರಾಡಲು ಪ್ರೋತ್ಸಾಹಿಸುತ್ತಾ ಗ್ರನೇಡ್ ಗಳಿಂದ ಹೋರಾಟವನ್ನು ಮುಂದುವರೆಸಿದರು.. ತೀವ್ರವಾಗಿ ಗಾಯಗೊಂಡಿದ್ದರೂ ಸ್ಥಳಾಂತರಗೊಳ್ಳಲು ಒಪ್ಪದ ಕರಮ್ ಸಿಂಗ್ ಶತ್ರುಗಳು ಧಾಳಿಯನ್ನು ನಡೆಸುವ ಸಂದರ್ಭದಲ್ಲಿ ಇಬ್ಬರು ಶತ್ರುಗಳನ್ನು ನಿರಾಯುಧರಾಗಿ ವಧಿಸಿದರು.ಅಂತಿಮವಾಗಿ ಅಕ್ಟೋಬರ್ ೧೩ ರಂದು ನಡೆದ ಕೊನೆಯ ದಾಳಿಯವರೆಗೂ ಹೋರಾಟವನ್ನು ಮುಂದುವರೆಸಿದರು. ಕೊನೆಯಲ್ಲಿ ಭಾರತೀಯ ಸೈನ್ಯವು ೧೫ ಸೈನಿಕರನ್ನು ಕಳೆದುಕೊಂಡಿದ್ದರೆ ಪಾಕಿಸ್ತಾನವು ೩೦೦ ಸೈನಿಕರನ್ನು ಕಳೆದುಕೊಂಡಿತ್ತು. ಕೊನೆಗೂ ಶತ್ರುಗಳಿಗೆ ಕನಿಷ್ಠ ಒಂದೇ ಒಂದು ಬಂಕರ್ ಕೂಡಾ ವಶಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ದೇಶಕ್ಕಾಗಿ ಸ್ವಂತ ಪ್ರಾಣವನ್ನು ನಿರ್ಲಕ್ಷಿಸಿ,ದೇಶದೆಡೆಗೆ ತೋರಿದ ನಿಷ್ಠೆ,ಸಾಹಸ ಮತ್ತು ಧೈರ್ಯಕ್ಕಾಗಿ ಭಾರತ ಸರ್ಕಾರವು ಕರಮ್ ಸಿಂಗ್ ರನ್ನು “ ಪರಮವೀರಚಕ್ರ” ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಮುಂದೆ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಾ ಸುಬೇದಾರ್ ಹಾಗು ಕ್ಯಾಪ್ಟನ್ ಪದವಿಗೇರಿ ನಿವೃತ್ತರಾದ ಕರಮ್ ಜೂನ್ ೨೦ ೧೯೯೩ ರಲ್ಲಿ ತಮ್ಮ ೭೭ ನೇ ವಯಸ್ಸಿನಲ್ಲಿ ದಿವಂಗತರಾದರು. ಮರಣವನ್ನಪ್ಪುವ ಮೊದಲೇ ಅಂದರೆ ತನ್ನ ಜೀವಿತಾವಧಿಯಲ್ಲಿ ಪರಮವೀರಚಕ್ರ ಪ್ರಶಸ್ತಿಗೆ ಭಾಜನರಾದ ಮೊದಲ ಸೈನಿಕರೆಂಬ ಇತಿಹಾಸ ನಿರ್ಮಿಸಿದ ಕರಮ್ ಸಿಂಗ್, ಬ್ರಿಟಿಷ್ ಸರಕಾರದ ಮಿಲಿಟರಿ ಪ್ರಶಸ್ತಿ ಮತ್ತು ಭಾರತೀಯ ಸರಕಾರದ ಪರಮವೀರಚಕ್ರ ಹೀಗೆ ಎರಡು ಪ್ರಶಸ್ತಿಗೆ ಭಾಜನರಾದ ಏಕೈಕ ಸೈನಿಕರಾಗಿದ್ದಾರೆ.. ನಿಷ್ಠೆ,ಧೈರ್ಯ ಮತ್ತು ಸಾಹಸಗಳಿಗೆ ಅತ್ಯುತ್ತಮ ಉದಾಹರಣೆಯಾಗಿರುವ ಕರಮ್ ಸಿಂಗ್ ನಮ್ಮಂತಹಾ ಅನೇಕ ಸಾಮಾನ್ಯ ಜನರಿಗೆ ಸ್ಫೂರ್ತಿಯಾಗಿದ್ದಾರೆ.

-Deepashree M

Tags

Related Articles

FOR DAILY ALERTS
Close