ಪ್ರಚಲಿತ

ಅವಮಾನ ಎದುರಾದರೂ ಸ್ವಾಭಿಮಾನ ಬಿಡದ ಛಲಗಾತಿ ಇವಳು.!ತನ್ನೈದು ಗಂಡದಿರ ತಪ್ಪನ್ನೂ ಕ್ಷಮಿಸಿದ ಅಭಿನವ ಭೂಮಾತೆ ದ್ರೌಪದಿ…

ಇಂದು ಸಮಾಜವು ಬಹಳ ಮುಂದುವರೆದಿದೆ.ಮಹಿಳಾ ಸಮಾನತೆ ಎಂಬುದು ಕೆಲವು ವರ್ಷಗಳಿಂದೀಚೆಗೆ ಬಹಳ ಪ್ರಸಿದ್ದವಾಗಿರುವ ಶಬ್ದವಾಗಿದೆ. ತನ್ನ ವಿರುದ್ದದ ಅತ್ಯಾಚಾರ ಅನಾಚಾರಗಳ ವಿರುದ್ಧ ಕಾನೂನು ಪ್ರಕಾರ ಹೋರಾಡಲೂ ಸ್ತ್ರೀಯರು ಹಿಂದೆ ಮುಂದೆ ನೋಡುವುದಿಲ್ಲ.ಯಾವುದನ್ನೂ ಸಹಿಸಿಕೊಂಡು ಕೂರದ ನಾರಿಯೂ ಇಂದು ಸಿಡಿದೇಳುತ್ತಾಳೆ,ತನ್ನ ತನ್ನ ಸಂತಾನದ ಹಿತಕ್ಕಾಗಿ ಯಾರೊನಿಗೂ ಯುದ್ಧಕ್ಕೆ ನಿಲ್ಲುವ ಆತ್ಮಸ್ಥೈರ್ಯವನ್ನೂ ತೋರುತ್ತಾಳೆ..ಯಾವುದೇ ಪುರುಷನ ಸಹಾಯವಿಲ್ಲದೆಯೇ ತನ್ನ ಜೀವನವನ್ನು ಮುನ್ನಡೆಸುತ್ತಾಳೆ.ಮಗನನ್ನು ಕಳೆದುಕೊಂಡ ಅತ್ತೆ ಮಾವನಿಗೆ ಮಗನಂತೆಯೇ ಜವಾಬ್ದಾರಿಯನ್ನು ಹೊತ್ತು ಹೆಗಲು ಕೊಡುತ್ತಾಳೆ.ಹೊರಗಿನ ನೌಕರಿಯೊಂದಿಗೆ ಮನೆ ಮಕ್ಕಳನ್ನೂ ಸಂಭಾಳಿಸುತ್ತಾಳೆ.ವೈದ್ಯೆಯಾಗಿ ರೋಗಿಗಳ ಸೇವೆ ಸಲ್ಲಿಸುತ್ತಾಳೆ,ಸೈನ್ಯಕ್ಕೂ ಸೇರಿ ಯುದ್ಧದಲ್ಲಿ ಭಾಗವಹಿಸುತ್ತಲೇ. ಕುಸ್ತಿಯಾಡುತ್ತಾಳೆ,ಫುಟ್ಬಾಲ್ ಮತ್ತು ಕಬ್ಬಡ್ಡಿಯೂ ಆಡುತ್ತಾಳೆ..ಅಪ್ಪ ಅಮ್ಮ ಹೆಮ್ಮೆ ಪಡುವಂತೆ ಬಾಹ್ಯಾಕಾಶಕ್ಕೂ ಜಿಗಿಯುತ್ತಾಳೆ.ಹೀಗೆ ಆಧುನಿಕ ನಾರಿಯು ತನ್ನನ್ನು ತಾನು ಎರಡನೇ ದರ್ಜೆಯ ನಾಗರೀಕಳನ್ನಾಗಿ ಎಲ್ಲೂ ತೋರಿಸಿಕೊಳ್ಳುವುದಿಲ್ಲ.

ಹಾಗೆ ನೋಡಿದಾದರೆ ಭಾರತದ ಪರಂಪರೆಯುದ್ದಕ್ಕೂ ಮಹಿಳೆ ಎಲ್ಲೂ ಎರಡನೆಯ ದರ್ಜೆಯ ಪ್ರಜೆಯಾಗಿ ಅಬಲಳಾಗಿ ಉಳಿದಿರಲಿಲ್ಲ. ಇಂದಿನ ಭಾರತದ ಮಹಿಳಾ ಸಮಾನತೆಗೆ ದ್ರೌಪದಿ ಬಹುದೊಡ್ಡ ಪ್ರೇರಣಾ ಶಕ್ತಿ.ತನ್ನನ್ನು ಶಿಶ್ಯರ ಮುಖಾಂತರ ಸೋಲಿಸಿ ಹೆಡೆಮುರಿ ಕಟ್ಟಿ ಅವಮಾನಿಸಿದ ದ್ರೋಣಾಚಾರ್ಯರನ್ನು ಸೋಲಿಸುವ ಪುತ್ರನಿಗಾಗಿ ಅಪೇಕ್ಷಿಸುತ್ತಿದ್ದ ಪಾಂಚಾಲ ನರೇಶ ದ್ರುಪದನಿಗೆ ಜನಿಸಿದವಳೇ ದ್ರೌಪದಿ.. ಇಂದಿಂಗೂ ನಮ್ಮ ದೇಶದಲ್ಲಿ ಬಹಳಷ್ಟು ಜನರು ಪುತ್ರ ಸಂತಾನವನ್ನೇ ಅಪೇಕ್ಷಿಸುತ್ತಾರೆ. ಅಂತಹಾ ಪರಿಸ್ಥಿತಿಯಲ್ಲಿ ಜನಿಸಿದ್ದರೂ ದ್ರೌಪದಿ ಅತ್ಯಂತ ಉತ್ತಮ ಜ್ಞಾನ ಸಹನೆ ಮತ್ತು ಜ್ಞಾನವನ್ನು ಸಂಪಾದಿಸಿಕೊಂಡಿದ್ದಳು. ತಂದೆ ಸ್ವಯಂವರವನ್ನು ಏರ್ಪಡಿಸಿದಾಗ ವಿಜಯಿಯಾದವನ್ನು ವರಿಸುತ್ತೇನೆಂದು ಒಪ್ಪಿಕೊಂಡವಳು ,ಸ್ವಯಂವರದಲ್ಲಿ ಒಬ್ಬ ಸಾಮಾನ್ಯ ಬ್ರಾಹ್ಮಣ ಗೆದ್ದಾಗ ಮಾತಿಗೆ ತಪ್ಪದೆ ಬ್ರಾಹ್ಮಣನೊಂದಿಗೆ ಆತನ ಗುಡಿಸಲಿಗೆ ತೆರಳುತ್ತಾಳೆ. ಕ್ಷತ್ರಿಯರು ಇಂದಿಗೂ ತಮ್ಮ ಮಾತಿಗೆ ಬದ್ಧರಾಗಿರುತ್ತಾರೆ ಮತ್ತು ನೀಡಿದ ವಚನವನ್ನು ಇಂತಹುದೇ ಪರಿಸ್ಥಿತಿಯಲ್ಲೂ ನಿಭಾಯಿಸುತ್ತಾರೆ. ಕ್ಷತ್ರಿಯ ಕುಲದಲ್ಲಿ ಜನಿಸಿ ಅಂತಃಪುರದಲ್ಲಿ ಯುವರಾಣಿಯಾಗಿ ಸಕಲ ಸೌಲಭ್ಯಗಳ ನಡುವೆ ಜೀವಿಸಿದ್ದ ದ್ರೌಪದಿ ಒಬ್ಬ ಸಾಮಾನ್ಯ ಬ್ರಾಹ್ಮಣನನ್ನು ವರಿಸಿ ಎಲ್ಲಾ ಸೌಕರ್ಯಗಳನ್ನು ತೊರೆದು ಗುಡಿಸಲಿನಲ್ಲಿ ವಾಸಿಸಬೇಕಾದ ಪರಿಸ್ಥಿತಿ ಬಂದಾಗಲೂ ನೀಡಿದ ವಚನದಂತೆ ಪತಿಯನ್ನು ಹಿಂಬಾಲಿಸಿ ನಡೆದುಬಿಡುತ್ತಾಳೆ.

ಹಿರಿಯರ ಮಾತುಗಳನ್ನು ಪಾಲಿಸುವ ಸಂಸ್ಕಾರವಂತ ರಾಜಕುಮಾರಿ ,ಅರಿಯದೆ ಅತ್ತೆಯು ಹೇಳಿದ ಮಾತಿನಂತೆ ಐವರು ಪತಿಯರ ಪತ್ನಿಯಾದಳು.ಒಬ್ಬ ರಾಜ ಅಥವಾ ರಾಣಿಯು ಹೇಗೆ ಯಾವುದೇ ಬೇಧಭಾವಗಳಿಲ್ಲದೆ ತನ್ನಎಲ್ಲಾ ಪ್ರಜೆಗಳನ್ನು ಸಮಾನವಾಗಿ ಪ್ರೀತಿಸುತ್ತಾ ಪರಿಪಾಲಿಸುವಂತಯೇ ತನ್ನ ಐವರು ಪತಿಯಂದಿರನ್ನೂ ಯಾವುದೇ ಬೇಧಗಳಿಲ್ಲದಂತೆ ಸಮಾನವಾಗಿ ಪ್ರೀತಿಸುತ್ತಿದ್ದಳು. ರಾಜ ಅಥವಾ ರಾಣಿಯು ಹೇಗೆ ಹಿರಿಯರಿಂದ ದೊರಕಿದ ತನ್ನ ರಾಜ್ಯವು ಯಾವುದೇ ಸ್ಥಿತಿಯಲ್ಲಿದ್ದರೂ,ಎಷ್ಟೇ ಸಣ್ಣ ಅಥವಾ ದೊಡ್ಡದಾದರೂ ಅದನ್ನು ಜೀವಿಸಲು ಅತ್ಯುತ್ತಮವಾದ ರಾಜ್ಯವಾಗಿಸಬೇಕೆಂಬ ದೃಷ್ಟಿಯಿಂದ ಆಡಳಿತ ನಡೆಸುತ್ತಾರೆ. ಒಪ್ಪಂದದಂತೆ ಕುರುಕುಲಾಧೀಶ ಧೃತರಾಷ್ಟ್ರ ಮತ್ತು ಭೀಷ್ಮರು ತಮಗೆ ನೀಡಿದ ಸಣ್ಣ ಮತ್ತು ಹಿಂದುಳಿದ ಬರಡು ಪ್ರದೇಶದ ಬಗ್ಗೆ ತಿಳಿದ ಪಾಂಡವರು ಮೋಸದ ಬಗ್ಗೆ ಹಲುಬುತ್ತಿದ್ದಾಗ ಸುಮ್ಮನಿರದ ದ್ರೌಪದಿ ತಾನೇ ಸ್ವತಃ ಉತ್ಸಾಹವನ್ನು ತಂದುಕೊಂಡು ಪ್ರತಿ ಕ್ಷಣ ಪಾಂಡವರನ್ನು ಪ್ರೋತ್ಸಾಹಿಸಿ ಇಂದ್ರಪ್ರಸ್ಥದ ಅರಮನೆಯೆಂಬ ಅದ್ಭುತವನ್ನು ನಿರ್ಮಿಸಲು ಕಾರಣಕರ್ತಳಾದಳು. ತನ್ನ ಅಪೂರ್ವ ಜ್ಞಾನದಿಂದಲೇ ಪತಿಯ ನಂಬಿಕೆ ಮತ್ತು ಭರವಸೆಯನ್ನು ಪಡೆದುಕೊಂಡ ದ್ರೌಪದಿ ಇಂದ್ರಪಸ್ಥದ ಸಂಪೂರ್ಣ ಹಣಕಾಸಿನ ವಿಭಾಗದ ಜವಾಬ್ಧಾರಿಯನ್ನು ನಿರ್ವಹಿಸಿದಳು..ಮನೆಯಲ್ಲಿ ಅತ್ಯಂತ ಮೇಧಾವಿಗಳಾದ ಐದು ಗಂಡಸರಿದ್ದಾಗಲೂ ಮಹಿಳೆಯೊಬ್ಬಳು ಸಮರ್ಥವಾಗಿ ಹಣಕಾಸಿನ ನಿರ್ವಹಣೆಯನ್ನು ಮಾಡುತ್ತಿದ್ದದ್ದು ದ್ರೌಪದಿಯ ಕುಶಲತೆಗೆ ಮತ್ತು ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ.

ಮುಂದೆ ಮೋಸದ ಪಗಡೆಯಾಟದಲ್ಲಿ ಸೋತ ಧರ್ಮರಾಯ ತಮ್ಮಂದಿರನ್ನು ಪಾನದಲ್ಲಿತ್ತು ಸೋತು ಕೊನೆಗೆ ತನ್ನನ್ನೂ ಸೋತು ಪತ್ನಿಯಾದ ದ್ರೌಪದಿಯನ್ನೂ ಪಣಕ್ಕಿಟ್ಟು ಸೋತಾಗ..ಅಂತಃಪುರದಿಂದ ಎರಡೆರಡು ಬಾರಿ ರಾಜ್ಯಸಭೆಗೆ ಬರುವಂತೆ ಕರೆ ಬಂದಾಗಲೂ ಆತ್ಮಾಭಿಮಾನವನ್ನು ಕಳೆದುಕೊಳ್ಳಲು ಬಯಸದೆ ಕೋಣೆಯಿಂದ ಹೊರಗೆ ಬರಲಿಲ್ಲ.ಕೊನೆಯಲ್ಲಿ ದುಷ್ಟ ದುಶ್ಯಾಸನನು ಸೀರೆಯನ್ನು ಸೆಳೆಯುವಾಗ ತುಂಬಿದ ಸಭೆಯಲ್ಲೂ ರೋಷದಿಂದ ನ್ಯಾಯಾನ್ಯಾಯಗಳನ್ನು ವಿಮರ್ಶಿಸಿದ್ದು ದ್ರೌಪದಿಯ ಜ್ಞಾನ ಮತ್ತು ಸ್ವಾಭಿಮಾನವನ್ನು ಎತ್ತಿ ತೋರುತ್ತದೆ.ಹಿರಿಯರಾದ ಭೀಷ್ಮ ದ್ರೋಣ ಗಾಂಧಾರಿಯರು ಕೂಡ ಅನ್ಯಾಯವನ್ನು ನೋಡುತ್ತಾ ಸುಮ್ಮನಿದ್ದಾಗ ದ್ರೌಪದಿ ತನ್ನನ್ನು ತಾನೇ ಸೋತುಹೋದ ವ್ಯಕ್ತಿಯು ನನ್ನನ್ನು ಪಣಕ್ಕಿಡುವ ಅಧಿಕಾರವನ್ನು ಕಳೆದುಕೊಂಡಿದ್ದಾನೆ ಮಾತ್ರವಲ್ಲದೆ ತಾನು ಧರ್ಮರಾಯನಿಗೆ ಮಾತ್ರವಲ್ಲದೆ ಇತರ ನಾಲ್ವರಿಗೂ ಪತ್ನಿಯಾಗಿದ್ದೇನೆ ಎಂದು ನ್ಯಾಯೋಚಿತವಾದ ವಾದವನ್ನೂ ಮಂಡಿಸಿದ್ದಳು.ಕೊನೆಗೆ ಯಾರೂ ನ್ಯಾಯವನ್ನು ಬೆಂಬಲಿಸದೆ ಅಸಹಾಯಕಳಾದಾಗ ಭಗವಂತನನ್ನು ನೆನೆದಳು.

ತುಂಬಿದ ಸಭೆಯಲ್ಲಿ ತನ್ನನು ತೊಡೆಯಲ್ಲಿ ಕೂರೆಂದು ಅಟ್ಟಹಾಸಗೈದ ಕೌರವನ ತೊಡೆಯನ್ನು ತನ್ನ ಪತಿ ಮುರಿಯುವ ತನಕ ಮುಡಿಯನ್ನು ಕಟ್ಟುವುದಿಲ್ಲವೆಂಬ ಭೀಕರ ಪ್ರತಿಜ್ಞೆಯನ್ನು ಕೂಡಾ ಮಾಡಿದ ದ್ರೌಪದಿ ತನ್ನ ಐವರು ಮಕ್ಕಳನ್ನು ಅತ್ತೆಯ ಬಳಿಯಲ್ಲಿ ತೊರೆದು,ಜೂಜಾಟದಲ್ಲಿ ತನ್ನ ಅಭಿಮಾನಕ್ಕೆ ಧಕ್ಕೆ ತಂದಿದ್ದ ಪತಿಯರನ್ನು ಕ್ಷಮಿಸಿ ಅವರೊಂದಿಗೆ ವನವಾಸಕ್ಕೂ ತೆರಳಿದಳು.ಅಜ್ಞಾತವಾಸದ ಸಮಯದಲ್ಲಿ ಸೈರಂಧ್ರಿಯಾಗಿದ್ದ ಅವಳನ್ನು ಕೆಣಕಿ ಅತ್ಯಾಚಾರವೆಸಗಲು ಬಂದ ಕೀಚಕನನ್ನು ಏನೂ ಮಾಡಲಿಲ್ಲ ಎಂದು ಪತಿಯರನ್ನು ಕೂಡಾ ತರಾಟೆಗೆ ತೆಗೆದುಕೊಂಡ ಧೈರ್ಯವಂತೆ ದ್ರೌಪದಿ.. ಕೊನೆಗೂ ಭೀಮಸೇನನನ್ನು ಉತ್ತೇಜಿಸಿ ತನ್ನ ಅಭಿಮಾನವನ್ನು ಕೆಣಕಲು ಬಂದಿದ್ದ ಕೀಚಕನಿಗೆ ತಕ್ಕ ಪಾಠವನ್ನು ಕಳಿಸಿದ್ದಳು. ರಾಜಕುಮಾರಿಯಾಗಿ,ರಾಣಿಯಾಗಿ ಮೆರೆದ ದ್ರೌಪದಿ ರಾಣಿಯ ಪರಿಚಾರಿಕೆಯಾಗಿ ಸೇವೆ ಸಲ್ಲಿಸಲೂ ಸಿದ್ಧಳಾಗಿದ್ದಳು.

ಕುರುಕ್ಷೇತ್ರ ಯುದ್ಧದಲ್ಲಿ ತನ್ನ ಐದೂ ಮಕ್ಕಳಾದ ಉಪಪಾಂಡವರನ್ನು ಕೊಂಡ ಅಶ್ವತ್ತಾಮನನ್ನೂ ‘ ತನ್ನಂತೆ ಮಕ್ಕಳನ್ನು ಕಳೆದುಕೊಂಡ ದುಃಖವನ್ನು ಬೇರೆ ತಾಯಿ ಅನುಭವಿಸುವುದು ಬೇಡ’ ಎಂಬ ಕಾರಣದಿಂದ ಕ್ಷಮಿಸಿ ಬಿಡುವ ದ್ರೌಪದಿಯಲ್ಲಿ ನಮಗೆ ದಯಾಳುವಾದ ರಾಣಿಯೂ ಕಾಣಿಸುತ್ತಲೇ. ಲಿಂಗ ಬೇಧವಿಲ್ಲದೆ ಶ್ರೀಕೃಷನನ್ನೇ ತನ್ನ ಆಪ್ತ ಸ್ನೇಹಿತನನ್ನಾಗಿ ಆಯ್ದುಕೊಂಡಿದ್ದ ದ್ರೌಪದಿಯು ಕೃಷ್ಣನ ತಂಗಿ ಸುಭದ್ರೆಯನ್ನು ತನ್ನ ಸವತಿಯಾಗಿದ್ದರೂ ಸ್ವಂತ ತಂಗಿಯಂತೆಯೇ ಭಾವಿಸಿದ್ದಳು.ಹದಿನಾಲ್ಕುವರ್ಷಗಳ ವನವಾಸ ಒಂದು ವರ್ಷದ ಅಜ್ಞಾತವಾಸ ಮತ್ತು ತನ್ನ ಅಭಿಮಾನ ಹರಣಕ್ಕೆ ಪರೋಕ್ಷವಾಗಿ ಕಾರಣಕರ್ತರಾದ ಧೃತರಾಷ್ಟ್ರ ಮತ್ತು ಗಾಂಧಾರಿಯರನ್ನು ಮುಂದೆ ತನ್ನ ಪಾಲಕರಂತೆಯೇ ಸೇವೆಸಲ್ಲಿಸುತ್ತಾ ಉತ್ತಮವಾಗಿ ನೋಡಿಕೊಂಡಿದ್ದಳೆಂಬುದು ಆಕೆಯ ಉತ್ತಮವಾದ ಸಂಸ್ಕಾರವನ್ನು ತೋರುತ್ತದೆ.ಸ್ವಭಾವತಃ ಶಾಂತಳಾದ ದ್ರೌಪದಿಯು ಭೀಮನಿಂದ ಕತ್ತರಿಸಲ್ಪಟ್ಟ ಕೌರವನ ತೊಡೆಯನ್ನು ನೋಡಿ ಅಟ್ಟಹಾಸದಿಂದ ನಗುತ್ತಾ ರಕ್ತವನ್ನು ಲೇಪಿಸಿ ೧೫ ವರ್ಷಗಳ ಬಳಿಕ ಕೂದಲನ್ನು ಗಂಟು ಹಾಕಿಕೊಂಡಿದ್ದಳು..ಇದು ಆಕೆಯ ಅವಮಾನದ ಪ್ರತೀಕಾರವಾಗಿತ್ತು.

ಹೀಗೆ ಒಬ್ಬ ಪುತ್ರಿ,ಪತ್ನಿ,ಸೊಸೆ,ತಾಯಿ ,ಸ್ನೇಹಿತೆ ಮತ್ತು ಎಲ್ಲಕ್ಕಿಂತಲೂ ಮಿಗಿಲಾಗಿ ನಮಗೆ ದ್ರೌಪದಿಯಲ್ಲಿ ಸಮರ್ಥ ಕ್ಷತ್ರಿಯ ಹೆಣ್ಣು ಕಾಣಿಸುತ್ತಾಳೆ. ಆತ್ಮಾಭಿಮಾನ, ಸಾಹಸ,ತ್ಯಾಗ,ಸಹನೆ ಎಲ್ಲವನ್ನೂ ಮೈಗೂಡಿಸಿಕೊಂಡಿದ್ದ ದ್ರೌಪದಿ ಇಂದಿನ ಶತಮಾನ ಮಾತ್ರವನ್ನು ಮುಂದಿನ ಹಲವಾರು ಶತಮಾನಗಳಿಗೂ ಮಾದರಿ ಹೆಣ್ಣಾಗಿ ಕಾಣಿಸುತ್ತಾಳೆ. ಎಲ್ಲಿ ತಲೆ ತಗ್ಗಿಸಬೇಕು ಎಂಬುದು ಮಾತ್ರವಲ್ಲ ಎಲ್ಲಿ ತಲೆ ಎತ್ತಿ ತನಗಾಗುತ್ತಿರುವ ಅನ್ಯಾಯವನ್ನು ಪ್ರತಿನ್ಹತಿಸಬೇಕು ಎಂಬುದನ್ನೂ ದ್ರೌಪದಿ ನಮಗೆಲ್ಲರಿಗೂ ತಿಳಿಸುತ್ತಾಳೆ..

-Deepashree M

Tags

Related Articles

FOR DAILY ALERTS
Close