ಅಂಕಣ

ಪಾಂಡವರ ತಾಯಿಗೆ ಇದೆಂತಹ ದುಸ್ಥಿತಿ…. ರಾಜವೈಭೋಗದಲ್ಲಿ ಮೆರೆಯಬೇಕಾಗಿದ್ದ ಕುಂತಿಯ ಪಾಡು ಇತಿಹಾಸವನ್ನೇ ಸೃಷ್ಟಿಸಿತ್ತು!!!

ದು ಹದಿನೆಂಟು ದಿನಗಳ ಮಹಾಭಾರತ ಯುದ್ಧ!! ಅಲ್ಲಿದ್ದಾರೆ ಅರ್ಜುನ, ದ್ರೋಣ, ಭೀಷ್ಮ, ಕರ್ಣ, ಭೀಮ, ದುರ್ಯೋಧನನಿಂದ ಹಿಡಿದು ಉತ್ತರಕುಮಾರನವರೆಗೆ. ಎಲ್ಲರೂ ನೆತ್ತರ ಚೆಲ್ಲಲಿಕ್ಕೆ- ಹರಿಸಲಿಕ್ಕೆ ಸಮರ್ಥರಾದವರು. ಇಂಥಹ ನೆತ್ತರ ಹೊಳೆಯಲ್ಲಿ ಮಾತೃತ್ವದ ಛಾಯೆಯು ಅಲ್ಲಲ್ಲಿ ಮಮತೆಯ ಪತಾಕೆಯನ್ನು ಹಾರಿಸುತ್ತ ಕಾಣಿಸಿಕೊಂಡು ಮರೆಯಾಗುತ್ತದೆ…… ಮಾತೃತ್ವದ ಹಾಯಿದೋಣಿ. ಗಂಗೆಯಿಂದ ಭಾನುಮತಿಯವರೆಗೆ, ಕುಂತಿಯಿಂದ ರಾಧೆವರೆಗೆ ಹತ್ತಾರು ಅಮ್ಮಂದಿರು ಮಹಾಭಾರತದಲ್ಲಿ ಕಾಣಿಸಿಕೊಳ್ಳುತ್ತಾರೆ.

ಆದರೆ “ಕುತೂಹಲ” ಎನ್ನುವುದು ಮಾನವನ ಸಹಜ ಗುಣ. ಎಲ್ಲಾ ವಿಷಯಗಳನ್ನು ತಿಳಿಯಬೇಕು ಎಂಬ ಮಾನವನ ಮಹತ್ವಾಕಾಂಕ್ಷೆಯೇ ಇಂದು ಸೃಷ್ಟಿಯ ರಹಸ್ಯವನ್ನು ಭೇದಿಸುವತ್ತ ಸಾಗಿದೆ. ಅದರಲ್ಲೂ ಗುಟ್ಟಾದ ವಿಷಯಗಳನ್ನು ತಿಳಿಯುವುದೆಂದರೆ ಮಾನವರಿಗೆ ಎಲ್ಲಿಲ್ಲದ ಕುತೂಹಲ. ಈ ಕುತೂಹಲ ಅತಿಯಾದರೆ ಆಗುವ ಅನಾಹುತವನ್ನು ಮಹಾಭಾರತದ ಪಂಚ ಪಾಂಡವರ ಹೆತ್ತಬ್ಬೆ “ಕುಂತಿ” ಯ ಮೂಲಕ ತಿಳಿಯಬಹುದು!!

ಹೌದು…. ಮಹಾರಾಜ ಶೂರಸೇನನ ಮಗಳಾದ ಪೃಥೆ ಅಥವಾ ಪೃಥಾಳು ವಸುದೇವನ ಸಹೋದರಿ. ಹೀಗಾಗಿ ಶ್ರೀಕೃಷ್ಣನಿಗೆ ಸೋದರತ್ತೆಯಾಗುತ್ತಾಳೆ!! ಆದರೆ ಅವಳು ಎಳೆಯ ಮಗುವಾಗಿದ್ದಾಗಲೇ ಶೂರಸೇನ ಅವಳನ್ನು ಚಕ್ರವರ್ತಿ ಕುಂತಿಭೋಜನಿಗೆ ದತ್ತು ನೀಡಿರುತ್ತಾನೆ. ಕುಂತಿಭೋಜನ ಸಾಕುಮಗಳಾದ್ದರಿಂದ ಅವಳು ಕುಂತಿಯೆಂದೇ ಪ್ರಸಿದ್ಧಳಾದಳು!! ಹೀಗಾಗಿ ಪಾಂಡವರನ್ನು ಕೌಂತೇಯರೆಂದೂ ಪಾರ್ಥರೆಂದೂ ಕರೆಯುತ್ತಾರೆ. ಎಲ್ಲ ಪಾಂಡವರೂ ಪಾರ್ಥರಾದರೂ ಇದು ಅರ್ಜುನನಿಗೆ ಮಾತ್ರ ಪ್ರಸಿದ್ಧ ನಾಮಧೇಯವಾಗುತ್ತದೆ.

Image result for mahabharata kunti

ಯದುವಂಶದ ಲಲನೆ, ಪೃಥೆ ಎಂದೂ ಕುಂತಿಯನ್ನು ಕರೆಯುತ್ತಿದ್ದುದೂ ಉಂಟು!! ಕುಂತಿಭೋಜನ ಸಾಕು ಮಗಳಾದ ಕುಂತಿ ಒಂದು ಮಹತ್ತರ ಕಾರ್ಯಕ್ಕಾಗಿ ಜನ್ಮ ತಳೆದವಳು. ಹಸ್ತಿನಾವತಿಯ ಸಿಂಹಾಸನವನ್ನು ಕೌರವರಿಂದ ಮತ್ತೆ ಪಾಂಡುವಿನ ಮಕ್ಕಳಿಗೆ ಸಿಗುವಂತೆ ಮಾಡುವ ಪ್ರಭಾವೀ ಪಾತ್ರ ಅವಳದ್ದಾದರೂ ಅವಳ ಜೀವನ ಅಷ್ಟೇ ದುಃಖದಾಯಕವೂ ಹೌದು. ಚಿಕ್ಕವಳಿದ್ದಾಗ ಅವಳ ತಂದೆಯ ಆಸ್ಥಾನಕ್ಕೆ ಬಂದ ದೂರ್ವಾಸ ಮುನಿಯವರನ್ನು ಆದರದಿಂದ ಉಪಚರಿಸಿದ ಪರಿಣಾಮ, ದೂರ್ವಾಸರು ಅವಳ ಸೇವೆಗೆ ಸಂತೃಪ್ತರಾಗಿ ಒಂದು ಮಂತ್ರೋಪದೇಶ ಮಾಡುತ್ತಾರೆ. ಅದರಂತೆ ಅವಳು ತನಗೆ ಇಷ್ಟವಾದ ಐದು ದೇವತೆಗಳನ್ನು ಪ್ರತ್ಯಕ್ಷ ಮಾಡಿಕೊಂಡು ಅವರಿಂದ ಮಕ್ಕಳನ್ನು ಪಡೆಯಬಹುದಾಗಿರುತ್ತದೆ. ದೂರ್ವಾಸರು ಅವಳ ಜೀವನದ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಈ ವರಗಳನ್ನು ನೀಡಿರುತ್ತಾರೆ. ಮುಂದೆ ಈ ವರಗಳಿಂದ ಕುಂತಿಗೆ ಬಹಳ ಪ್ರಯೋಜನವಾಗುತ್ತದೆ ನಿಜ.

ಆದರೆ ಈ ಮಂತ್ರಗಳನ್ನು ಹೇಳಿದರೆ ತನಗಿಷ್ಟವಾದ ದೇವರು ಪ್ರತ್ಯಕ್ಷನಾಗುತ್ತನೆಯೋ ಇಲ್ಲವೋ ಎಂಬ ಕುತೂಹಲವೇ ಕುಂತಿಯನ್ನು ಆಜೀವ ಪರ್ಯಂತ ದುಃಖಕ್ಕೆ ದೂಡುತ್ತದೆ. ಹುಡುಗಾಟಿಕೆಯ ವಯಸ್ಸಿನ ಕುಂತಿಯು ಸೂರ್ಯ ನಾರಾಯಣನನ್ನು ಕಂಡು, ಮುಂಬರುವ ಪರಿಣಾಮವನ್ನು ಯೋಚಿಸದೇ, ಮಂತ್ರ ಹೇಳಿ ಪ್ರತ್ಯಕ್ಷ ಮಾಡಿಕೊಳ್ಳುತ್ತಾಳೆ. ತನ್ನೆದುರು ತನಗಿಷ್ಟವಾದ ದೇವರು ನಿಂತಿರುವುದನ್ನು ಕಂಡು ಆನಂದಿಸುತ್ತಾಳೆ. ಹಾಗಿದ್ದರೆ ಈ ಮಂತ್ರಗಳನ್ನು ಹೇಳಿಕೊಂಡು ಯಾವ ದೇವರನ್ನಾದರೂ ಪ್ರತ್ಯಕ್ಷ ಮಾಡಿಕೊಳ್ಳಬಹುದು ಎಂದು ಹಿಗ್ಗುತ್ತಾಳೆ.

ಅಷ್ಟರಲ್ಲಿ ಸೂರ್ಯನು ತನ್ನ ಒಂದು ಅಂಶದಿಂದ ಮಗುವನ್ನು ಸೃಷ್ಟಿಸಿ ಅವಳ ಕೈಗೆ ಕೊಟ್ಟಾಗ ಅವಳಿಗೆ ಆಘಾತವಾಗುತ್ತದೆ. ಆಗ ಅವಳಿಗೆ ದೂರ್ವಾಸರು ಕೊಟ್ಟ ವರದಂತೆ ತನಗಿಷ್ಟವಾದ ದೇವರನ್ನು ಪ್ರತ್ಯಕ್ಷ ಮಾಡಿಕೊಳ್ಳುವುದರ ಜೊತೆಗೆ ಅವರಿಂದ ಮಗು ಪಡೆಯುವ ಬಗ್ಗೆಯೂ ಹೇಳಿದ್ದು ನೆನಪಾಗುತ್ತದೆ. ಆಗ ತಾನು ಮಾಡಿದ ತಪ್ಪಿನ ಅರಿವಾಗುತ್ತದೆ. ಅನಿರೀಕ್ಷಿತವಾದ ಈ ಆಘಾತದಿಂದ ತತ್ತರಿಸಿ, ಇದರಿಂದ ಹೇಗೆ ಹೊರಬರುವುದೆಂದು ಗೊತ್ತಾಗದೇ ಚಡಪಡಿಸುತ್ತಾಳೆ. ತನಗಿನ್ನೂ ಮದುವೆಯಾಗಿಲ್ಲ, ತಾನಿನ್ನೂ ಬಾಲೆ ಎಂದು ಸೂರ್ಯನಲ್ಲಿ ಗೋಗರೆಯುತ್ತಾಳೆ.

Related image

ಆದರೆ ಸೂರ್ಯ ಅದು ಯಾವುದನ್ನೂ ಗಮನಿಸದೇ ತನ್ನ ಕರ್ತವ್ಯವನ್ನು ತಾನು ಮಾಡುತ್ತಿರುವುದಾಗಿ ಹೇಳಿ, ಅವಳಿಗೆ ಮಗುವನ್ನು ಕೊಟ್ಟು ಮಾಯವಾಗುತ್ತಾನೆ. ಕುಂತಿ ಸಮಾಜಕ್ಕೆ, ಮನೆಯವರಿಗೆ ಹೆದರಿ ಮಗುವನ್ನು ಗಂಗೆಯಲ್ಲಿ ತೇಲಿ ಬಿಡುತ್ತಾಳೆ. ತಾನು ಮಾಡುತ್ತಿರುವುದು ಘೋರ ಅಪರಾಧ ಎಂದು ಅವಳಿಗೆ ಗೊತ್ತಿದ್ದರೂ ಅವಳಿಗೆ ಬೇರೆ ವಿಧಿಯಿಲ್ಲದೇ ಮಗುವನ್ನು ತ್ಯಜಿಸುತ್ತಾಳೆ. ಇದರಿಂದಾಗಿ ಕುಂತಿ ತಾನು ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುವುದಲ್ಲದೇ ಜೀವನ ಪರ್ಯಂತ ಕೊರಗುವಂತೆಯೂ ಆಯ್ತು!!

ಕುಂತಿ ತನ್ನ ಮಗುವನ್ನು ನೀರಿನಲ್ಲಿ ಬಿಟ್ಟ ಕೆಲ ಸಮಯದಲ್ಲೇ ಅವಳ ತಂದೆ ಅವಳ ಸ್ವಯಂವರ ಏರ್ಪಡಿಸಿದಾಗಲೂ ಕುಂತಿ ದ್ವಂದ್ವದಲ್ಲಿ ತೊಳಲುತ್ತಾಳೆ. “ಈ ವಿಷಯ ತಿಳಿಸದೇ ಯಾರನ್ನಾದರೂ ಮದುವೆಯಾಗುವುದಾದರೂ ಹೇಗೆ?? ಎಂದು ಕೊರಗುತ್ತಾಳೆ. ನಂತರ ” ಈ ವಿಷಯ ತಿಳಿದರೆ ಯಾರು ತಾನೇ ತನ್ನನ್ನು ಪತ್ನಿಯಾಗಿ ಸ್ವೀಕರಿಸುತ್ತಾರೆ ” ಯಾರು ತಾನೇ ನನ್ನೊಡನೆ ಸಂಸಾರ ಮಾಡುತ್ತಾರೆ?? ಎಂದು ಯೋಚಿಸಿ ಒಂದು ನಿರ್ಧಾರಕ್ಕೆ ಬರುತ್ತಾಳೆ. ಆ ನಿರ್ಧಾರದಂತೆ ಸ್ವಯಂವರಕ್ಕೆ ಬಂದವರಲ್ಲಿ ಒಂದು ಪ್ರಶ್ನೆ ಕೇಳುತ್ತಾಳೆ ಅದೇನೆಂದರೆ: “ಅಹಲ್ಯೆ ಮಹರ್ಷಿ ಗೌತಮರಿಗೆ ವಂಚಿಸಿ ಅವರಿಂದ ಶಾಪ ಪಡೆದಿದ್ದರೂ, ಶ್ರೀರಾಮ ಅವಳನ್ನು ಯಾಕೆ ಶಾಪಮುಕ್ತಳನ್ನಾಗಿಸಿದ” ಎಂದು ಪ್ರಶ್ನಿಸುತ್ತಾಳೆ.

Image result for pandavas

ಆಗ ಸ್ವಯಂವರಕ್ಕೆ ಬಂದಿದ್ದ ಎಲ್ಲರೂ “ರಾಮ ಏನು ಮಾಡಿದರೂ ಸರಿ, ಏಕೆಂದರೆ ರಾಮ ದೇವರು” ಅಂತೊಬ್ಬರು, “ಅಹಲ್ಯೆ ಪತಿವ್ರತಾ ಶಿರೋಮಣಿ, ಅದಕ್ಕಾಗಿ ಶಾಪದಿಂದ ಮುಕ್ತಿಗೊಳಿಸಿದ” ಎಂದು ಮತ್ತೊಬ್ಬರು ಉತ್ತರಗಳನ್ನು ಕೊಡುತ್ತಾರೆ. ಆದರೆ ಎಲ್ಲರಂತೆ ಸ್ವಯಂವರಕ್ಕೆ ಬಂದಿದ್ದ ಪಾಂಡು ಮಾತ್ರ “ಅಹಲ್ಯೆ ಬೇಕಂತಲೇ ಗೌತಮನನ್ನು ವಂಚಿಸಲಿಲ್ಲ. ದೇವೇಂದ್ರ ಗೌತಮ ಮುನಿಗಳ ವೇಷ ಹಾಕಿ ಬಂದು ಅಹಲ್ಯೆಯನ್ನು ವಂಚಿಸಿದ. ಗೊತ್ತಿಲ್ಲದೇ ಮಾಡಿದ ತಪ್ಪಿಗೆ ಶಿಕ್ಷೆ ಕೊಡುವುದು ಸರಿಯಲ್ಲ. ಹಾಗಾಗಿ ರಾಮ ಅವಳ ಶಾಪ ವಿಮೋಚನೆ ಮಾಡಿದ” ಎಂದು ಹೇಳಿ ಕುಂತಿಯ ಮನಸ್ಸನ್ನು, ಹೃದಯವನ್ನು ಗೆಲ್ಲುತ್ತಾನೆ. ಇಲ್ಲಿ ಕುಂತಿಯ ಪ್ರಾಮಾಣಿಕತೆ ಮಹತ್ವ ಪಡೆಯುತ್ತದೆ!!

ಕುಂತಿ ಒರ್ವ ಚಕ್ರವರ್ತಿಗೆ ಮಗಳಾಗಿ, ಮತ್ತೊಬ್ಬ ಚಕ್ರವರ್ತಿಯ ಸಾಕುಮಗಳಾಗಿ, ಕುರುಕುಲದಂಥಾ ಶ್ರೇಷ್ಠ ಕುಲದ ಸಾಮ್ರಾಟ ಪಾಂಡುರಾಜನ ಪತ್ನಿಯಾಗುತ್ತಾಳೆ. ಅಷ್ಟೈಶ್ವರ್ಯ ಸಕಲ ವೈಭವಗಳು ಇವಳ ಕಾಲಬಳಿ ಆಶ್ರಯ ಪಡೆದಿರುತ್ತವೆ. ಇದನ್ನು ಕಂಡು ವಿಧಿಗೆ ಅಸೂಯೆಯಾಯಿತೋ ಎಂಬಂತೆ ಕುಂತಿಯ ಬಾಳಿನ ಅವರೋಹಣ ಪ್ರಾರಂಭವಾಗುತ್ತದೆ. ಮದುವೆಯಾಗಿ ಎರಡು ವರ್ಷವಾದರೂ ಮಕ್ಕಳಾಗದಿದ್ದರಿಂದ ಪಾಂಡು ಮಾದ್ರಿಯನ್ನು ವಿವಾಹವಾಗುತ್ತಾನೆ. ಆದರೆ ಋಷಿಯ ಶಾಪಕ್ಕೆ ತುತ್ತಾಗಿ ಪಾಂಡು ನಿರ್ಬಲನಾಗುತ್ತಾನೆ!! ಕುಂತಿ ಮಾದ್ರಿಯರು ಪಾಂಡುವಿನೊಡನೆ ವನವಾಸಿಗಳಾಗುತ್ತಾರೆ. ಯಮ, ವಾಯು ಹಾಗೂ ಇಂದ್ರರ ಅನುಗ್ರಹದಿಂದ ಕುಂತಿಗೆ ಧರ್ಮ, ಭೀಮಾರ್ಜುನರು ಹುಟ್ಟಿದರೆ ಯಮಳ ಸಹೋದರರಿಂದ ಮಾದ್ರಿಗೆ ನಕುಲ ಸಹದೇವರು ಜನಿಸುತ್ತಾರೆ. ಇನ್ನು ಕಾಡಿನಲ್ಲಿ ಪಾಂಡು ಮರಣ ಹೊಂದಿದಾಗ ಮಾದ್ರಿ ಅವನೊಂದಿಗೆ ಸಹಗಮನ ಮಾಡುತ್ತಾಳೆ. ಈ ಐದೂ ಮಕ್ಕಳ ಜವಾಬ್ದಾರಿ ಕುಂತಿಯ ಹೆಗಲೇರುತ್ತದೆಯಲ್ಲದೇ ಇಲ್ಲಿಂದ ಕುಂತಿಗೆ ಜೀವನದ ಕಠಿಣ ಪರೀಕ್ಷೆಗಳು ಎದುರಾಗುತ್ತವೆ.

ವಿಧವೆಯಾದ್ದರಿಂದ ರಾಣಿವಾಸದ ಕುಹಕ ವ್ಯಂಗ್ಯ ಸಹಿಸಬೇಕಾಗುತ್ತದೆ. ಐದು ಮಕ್ಕಳನ್ನು ಕಾಪಾಡುವುದೆಂದರೇನು ಸಾಮಾನ್ಯವೇ? ಅಡಿಗಡಿಗೂ ವಿಷಕಾರುವ ಕೌರವ ಹಾಗೂ ಅವನ ಸಹೋದರರಿಂದ ಪಾಂಡವರೈವರನ್ನು ಜೋಪಾನ ಮಾಡುವುದೇ ಅವಳಿಗೆ ದೊಡ್ಡ ಹೋರಾಟದಂತೆ. ವಿದುರ ಹಾಗೂ ವಿದುರನ ಪತ್ನಿ ಯಾವತ್ತೂ ಕುಂತಿಯ ಬೆಂಬಲಕ್ಕೆ ಇರುತ್ತಾರೆ. ಭೀಷ್ಮದ್ರೋಣ ಕೃಪಾದಿಗಳಿಗೆ ಕುಂತಿಯ ಮೇಲೆ ಕರುಣೆ ಗೌರವಗಳಿದ್ದರೂ ವಿಧವೆಯ ದುರ್ಭರ ಜೀವನವನ್ನು ಅರಿಯುವಷ್ಟು ಸೂಕ್ಷ್ಮಗ್ರಾಹಿಗಳಲ್ಲ. ಹೀಗಾಗಿ ಕುಂತಿ ಬದುಕಿನುದ್ದಕ್ಕೂ ಕಷ್ಟಗಳನ್ನೇ ಪಡಬೇಕಾಯಿತು. ಕೌರವನ ಅಸೂಯೆಯಿಂದ ಮಕ್ಕಳೊಡನೆ ವನವಾಸ ಉಪವಾಸಗಳನ್ನು ಮಾಡಬೇಕಾಗುತ್ತದೆ.

ಆದರೆ ಕುಂತಿಯ ಅತ್ಯಂತ ನೆಮ್ಮದಿಯ ದಿನಗಳು ಎಂದರೆ ಇಂದ್ರಪ್ರಸ್ಥದಲ್ಲಿ ಪಾಂಡವರು ರಾಜ್ಯಭಾರ ಮಾಡುವ ಸಮಯ. ಅವಳೂ ಆಗ ಸ್ವಲ್ಪ ನೆಮ್ಮದಿಯಿಂದ ಇದ್ದಳೇನೋ ಎನ್ನಬಹುದು. ಆದರೆ ಅದೂ ಅಲ್ಪ ಕಾಲ!! ಕುಂತಿಯ ನೆಮ್ಮದಿ ವಿಧಿಗೆ ಇಷ್ಟವಿರಲಿಲ್ಲವೇನೋ ಗೊತ್ತಿಲ್ಲ… ಶಕುನಿಯ ಕುತಂತ್ರದಿಂದಾಗಿ ಕೌರವರ ಆಹ್ವಾನದ ಮೆರೆಗೆ ಪಾಂಡವರು ರಾಜ್ಯಕೋಶಾದಿಗಳನ್ನು ಕಳೆದುಕೊಂಡು ಅರಣ್ಯವಾಸಿಗಳಾಗಬೇಕಾಯಿತು. ಆಗ ಕುಂತಿ ವೃದ್ಧಳಾದ್ದರಿಂದ ಅವಳು ವನವಾಸಕ್ಕೆ ಹೋಗುವುದಿಲ್ಲ. ವಿದುರನ ಮನೆಯಲ್ಲಿಯೇ ಇರುತ್ತಾಳೆ. ಐದು ಜನ ಲೋಕೋತ್ತರ ವೀರರ ತಾಯಿಯಾಗಿ ಹಂಗಿನ ಅನ್ನಕ್ಕೆ ಕೈಯೊಡ್ಡುವ ಪರಿಸ್ಥಿತಿ ಬಹು ಶೋಚನೀಯ.

Image result for pandavas playing pagade

13 ವರ್ಷಗಳಲ್ಲಿ ಆಕೆ ಮಕ್ಕಳಿಗಾಗಿ ಪರಿತಪಿಸುತ್ತಾ, ಅವರ ಶ್ರೇಯಸ್ಸನ್ನು ಬಯಸುತ್ತಾ, ಕಣ್ಣೀರಿಡುತ್ತಾ ಕಾಲ ಕಳೆಯುತ್ತಾಳೆ. ಸಂಧಾನಕ್ಕಾಗಿ ಬಂದ ಕೃಷ್ಣ ಕುಂತಿಯನ್ನು ಭೇಟಿಯಾದಾಗ ಅವಳ ಅಳಲಿನ ಕಟ್ಟೆ ಒಡೆಯುತ್ತದೆ. ತನ್ನ ಹಾಗೂ ತನ್ನ ಮಕ್ಕಳ ಪರಿಸ್ಥಿತಿಗಾಗಿ ಬಿಕ್ಕಿ ಬಿಕ್ಕಿ ಅಳುತ್ತಾಳೆ. ಪಾಪ ಆ ತಾಯ ಹೃದಯ ಎಷ್ಟು ನೊಂದಿರಬಹುದು. ಕರ್ಣನೇ ತನ್ನ ಮಗ ಎಂದು ತಿಳಿಯೋದು ಕೂಡ ಇದೇ ಸಮಯದಲ್ಲಿ!! ಕುಂತಿ ಕರ್ಣನನ್ನು ಪಾಂಡವರ ಜೊತೆ ಬರಲು ಕೇಳಿದಾಗ ತನಗೆ ಕುಂತಿ ಮಾಡಿದಂತೆ ತನ್ನನ್ನು ಸಾಕಿದವರಿಗೆ ದ್ರೋಹ ಮಾಡೋದಿಲ್ಲ ಅಂತ ಹೇಳಿದರೂ ಕೂಡ ತಾಯಿಗಾಗಿ ಒಂದು ಮಾತು ಕೇಳುತ್ತಾನೆ!! ಅದರಂತೆಯೇ ಅರ್ಜುನನ ಜೊತೆ ಯುದ್ಧ ನಡೆಯುತ್ತದೆ, ಕುಂತಿಯ ಎಲ್ಲಾ ಮಕ್ಕಳು ಉಳಿದರೂ ಕರ್ಣ ಸಾವನ್ನಪ್ಪುತ್ತಾನೆ!! ಕುಂತಿಯ ಐದು ಮಕ್ಕಳು ಉಳಿಯುತ್ತಾರಾದರೂ ಅರ್ಜುನ ತನಗೆ ತಿಳಿಯದೇ ತನ್ನ ಅಣ್ಣನನ್ನು ಕೊಲ್ಲುತ್ತಾನೆ!!

ಯುದ್ಧದಲ್ಲಿ ಪಾಂಡವರು ಗೆದ್ದು ಹಸ್ತಿನಾವತಿಯ ಅರಸರಾದರೂ ಎಲ್ಲಾ ಬಂಧುಬಳಗದ ಸಾವಿನಿಂದಾಗಿ ಕುಂತಿಗೆ ವ್ಯಥೆಯೇ ಹೊರತೂ ಸಂತೋಷವಿಲ್ಲ. ನಂತರ ತನಗಿಂತಲೂ ವೃದ್ಧರಾದ ದೃತರಾಷ್ಟ್ರ ಗಾಂಧಾರಿಯರ ಶುಶ್ರೂಷೆ ಮಾಡುತ್ತ ಉಳಿದ ಆಯುಷ್ಯವನ್ನು ಕಳೆಯುತ್ತಾಳೆ. ಕೊನೆಯಲ್ಲಿ, ಕುಂತಿ, ವಿಧುರ, ದೃತರಾಷ್ಟ್ರ ಹಾಗೆಯೇ ಗಾಂಧಾರಿ ಜೊತೆ ಹಿಮಾಲಯಕ್ಕೆ ಹೋಗುತ್ತಾರೆ ಅಲ್ಲಿ ಕಾಡ್ಗಿಚ್ಚಿನಿಂದ ಸಾವನ್ನಪ್ಪಿ ಸ್ವರ್ಗ ಸೇರುತ್ತಾರೆ ಅನ್ನೋ ನಂಬಿಕೆಯೂ ಇದೆ!!

– ಅಲೋಖಾ

Tags

Related Articles

FOR DAILY ALERTS
Close