ಪ್ರಚಲಿತ

ಸತ್ಯ ಮಾರ್ಗವನ್ನು ತುಳಿದ ಕಾರಣ ಸತ್ಯಕಾಮನಾದ, ಗುರುಗಳ ಮನಸ್ಸನ್ನು ನಿಷ್ಕಳಂಕವಾಗಿ ಗೆದ್ದಿದ್ದ.!ಸತ್ಯಕಾಮನ ಕಥೆಯಿದು…

ಶ್ರದ್ದೆ ಮತ್ತು ತಪಸ್ಸುಗಳು ಬ್ರಹ್ಮೋಪಾಸನೆಯ ಅಂಗಗಳು.ಇವುಗಳಿಲ್ಲದೆ ಸಾಧನೆಯನ್ನು ಮಾಡಲಾಗುವುದಿಲ್ಲ..ಸಾಧನೆಯನ್ನು ಮಾಡಲಾಗದೆ ಇರುವಾಗ,ಸಿದ್ದಿ ಲಭಿಸುವುದಿಲ್ಲ..ಈ ಶ್ರದ್ದೆ ಮತ್ತು ತಪಸ್ಸುಗಳ ಮಹತ್ವವನ್ನು ಒತ್ತಿಹೇಳಲು ಉಪನಿಷತ್ತು ಈ ಕಥೆಯನ್ನು ನಿರೂಪಿಸಿದೆ.ಉಪನಿಷತ್ತಿನ ಪ್ರತಿಯೊಂದು ಕಥೆಯೂ ಒಂದು ಶ್ರೇಷ್ಠ ತತ್ವವನ್ನು ಮತ್ತು ಸಾಧನೆಯ ಮಾರ್ಗವನ್ನು ತಿಳಿಸಿಕೊಡುತ್ತದೆ.ಇಷ್ಟೇ ಅಲ್ಲದೆ ಈ ಕಥೆಗಳು ಪ್ರಾಚೀನ ಭಾರತೀಯ ಸಮಾಜದ ರೀತಿನೀತಿಗಳು,ಸಂಪ್ರದಾಯಗಳು ಮತ್ತು ಸಾಂಸ್ಕೃತಿಕ ಅಂಶಗಳನ್ನು ಬಹಳ ಆಕರ್ಷಕವಾಗಿ ಬಿಂಬಿಸುತ್ತವೆ.ಹೀಗಾಗಿ ಛಂದೋಗ್ಯ ಉಪನಿಷತ್ತಿನ ಕಥೆಗಳು ಆಧ್ಯಾತ್ಮಿಕ ದರ್ಶನದ ದೀವಿಗೆಗಳಾಗಿವೆ ಮಾತ್ರವಲ್ಲದೆ,ಪ್ರಾಚೀನ ವೈದಿಕ ಸಂಸ್ಕೃತಿಯ ಆಕರಗಳೂ ಆಗಿವೆ.ಹೀಗಾಗಿ ಅವುಗಳು ಉಪನಿಷತ್ ನಲ್ಲಿ ಬಹಳ ಪ್ರಮುಖವಾದ ಸ್ಥಾನವನ್ನು ಪಡೆದುಕೊಳ್ಳುತ್ತವೆ.ಉಪನಿಷತ್ತು ಕಥೆಯನ್ನು ಹೀಗೆ ಆರಂಭಿಸುತ್ತದೆ.

ಬಹಳ ಹಿಂದೆ ಸತ್ಯಕಾಮನೆಂಬ ಬಾಲಕನಿದ್ದನು.ಅವನಿಗೆ ವಿದ್ಯಾಭ್ಯಾಸ ನಡೆಸಲು ಯೋಗ್ಯವಾದ ವಯಸ್ಸು ಬಂದಿತು.ಅವನು ತನ್ನ ತಾಯಿಯಾದ ಜಾಬಾಲೆಯಲ್ಲಿ “ಅಮ್ಮ ನಾನು ಬ್ರಹ್ಮಚರ್ಯ ವ್ರತವನ್ನು ಕೈಗೊಳ್ಳಬೇಕೆಂದು ಬಯಸುತ್ತೇನೆ,ಅದಕ್ಕೆ ನನಗೆ ಉಪನಯನವಾಗಬೇಕು..ಅದಕ್ಕಾಗಿ ಗುರುಗಳಿಗೆ ನನ್ನ ಗೋತ್ರವನ್ನು ಹೇಳಬೇಕು.ಉಪನಯನವಾದ ನಂತರವಷ್ಟೇ ಗುರುಗಳು ನನಗೆ ವಿದ್ಯಾಭ್ಯಾಸವನ್ನು ನೀಡುತ್ತಾರೆ. ಅಮ್ಮಾ ನಾನು ಯಾವ ಗೋತ್ರದವನು ದಯವಿಟ್ಟು ಹೇಳುವೆಯಾ?” ಎಂದು ಕೇಳುತ್ತಾನೆ. ಅದಕ್ಕೆ ಸತ್ಯಕಾಮನ ತಾಯಿ “ಮಗು ನೀನು ಯಾವ ಗೋತ್ರದವನೋ ನಾನು ಅರಿಯೆನು..ನಾನೊಬ್ಬ ಪರಿಚಾರಿಣಿ.ನನ್ನ ಗಂಡನ ಮನೆಯಲ್ಲಿ ಬರುವ ಅತಿಥಿ ಅಭ್ಯಾಗತರ ಸೇವೆ ಮಾಡುತ್ತಾ ಬಹಳ ವ್ಯಸ್ತಳಾಗಿದ್ದ ಯವ್ವನ ಕಾಲದಲ್ಲಿ ನಾನು ನಿನ್ನನ್ನು ಹಡೆದೆನು..ಹಾಗಾಗಿ ಗೋತ್ರಾದಿಗಳು ಯಾವುವು ಎಂದು ನೆನಪಿಟ್ಟುಕೊಳ್ಳುವ ಮನಸ್ಸು ನನಗಾಗ ಇರಲಿಲ್ಲ..ಆ ಸಮಯದಲ್ಲಿಯೇ ನಿನ್ನ ತಂದೆಯು ಗತಿಸಿದರು.ನಾನು ಅನಾಥೆಯಾಗಿಬಿಟ್ಟೆನು.ಈ ವಿಷಯದಲ್ಲಿ ನಾನು ಅಸಹಾಯಕಿಯಾಗಿದ್ದೇನೆ ಮಗೂ..ನಿನ್ನ ಗುರುಗಳು ಕರುಣಾಳುವಾಗಿದ್ದಾರೆ,ಮತ್ತು ದಯಾಳುವೂ ಆಗಿರುವ ಅವರು ನಿನ್ನ ಗೋತ್ರವನ್ನು ಕೇಳಿದರೆ ನಾನು ಇಷ್ಟನ್ನು ಹೇಳಿದೆನೆಂದು ಹೇಳು.ನಿನ್ನ ಹೆಸರು ಸತ್ಯಕಾಮನೆಂದು,ನನ್ನ ಹೆಸರು ಜಾಬಾಲೆ ಎಂದು.ನಿನ್ನ ಪೂರ್ಣ ನಾಮಧೇಯವು ಸತ್ಯಕಾಮ ಜಾಬಾಲ.ಎಂದು ಹೇಳಿದಳು.

ಮುಗ್ಧನಾದ ಆ ಪುಟ್ಟ ಬಾಲಕನು ಹಾಗೆಯೇ ಆಗಲಮ್ಮಾ ಎಂದು ತಾಯಿಗೆ ದೀರ್ಘದಂಡ ನಮಸ್ಕಾರ ಮಾಡಿ ಆಶೀರ್ವಾದವನ್ನು ಪಡೆದುಕೊಂಡು ಗುರುಗಳಾದ ಗೌತಮಗೌತಮರ ಆಶ್ರಮಕ್ಕೆ ಹೊರಟನು..ಆಶ್ರಮವನ್ನು ಸೇರಿದಾಗ ಗುರುಗಳು ಗಂಭೀರವಾದ ಧ್ಯಾನದಲ್ಲಿ ಮುಳುಗಿದ್ದರು.ಸತ್ಯಕಾಮನು ಕೈ ಮುಗಿದು ಗುರುಗಳ ಪಕ್ಕದಲ್ಲಿಯೇ ನಿಂತುಕೊಂಡನು.ಬಹಳ ಕಾಲವಾದ ಮೇಲೆ ಗುರುಗಳು ಧ್ಯಾನದಿಂದ ಮೇಲೆದ್ದರು.ತಮ್ಮ ಮುಂದುಗಡೆ ವಿನಯದಿಂದ ಕೈಮುಗಿದುಕೊಂಡಿದ್ದ ಬಾಲಕನನ್ನು ನೋಡಿ “ ಮಗೂ ಯಾರಪ್ಪಾ ನೀನು? ನನ್ನಿಂದ ನಿನಗೆ ಏನಾಗಬೇಕು?ಎಂದು ಮಧುರವಾದ ಧ್ವನಿಯಲ್ಲಿ ಕೇಳಿದರು. “ ಗುರುಗಳೇ ನಾನು ನಿಮ್ಮಬಳಿ ಬ್ರಹ್ಮಚರ್ಯ ವ್ರತವನ್ನು ಪಾಲಿಸುತ್ತಾ ವೇದಾಧ್ಯಯನ ಮಾಡಬೇಕೆಂದು ಇಚ್ಛಿಸುತ್ತೇನೆ.ದಯವಿಟ್ಟು ನನಗೆ ಉಪನಯನವನ್ನು ಮಾಡಿಸಿ ನಿಮ್ಮ ಶಿಷ್ಯನನ್ನಾಗಿ ಸ್ವೀಕರಿಸಿ ವೇದಾಧ್ಯಯನವನ್ನು ಮಾಡಿಸಿರಿ”ಎಂದು ಬಾಲಕನು ಕೇಳಿಕೊಳ್ಳುತ್ತಾನೆ. “ ಮಗೂ ನೀನು ಯಾವ ಗೋತ್ರದವನಪ್ಪಾ.? ಕುಲಗೋತ್ರಗಳನ್ನು ಅರಿತುಕೊಂಡು ತಾನೇ ನಾವು ಶಿಷ್ಯನಿಗೆ ಉಪನಯನ ಮಾಡಿಸಬೇಕು” ಎಂದು ಗುರುಗಳು ಕೇಳುತ್ತಾರೆ.ಆಗ ಸತ್ಯಕಾಮನು ಸ್ವಲ್ಪವೂ ಭಯಪಡದೆ ಆತ್ಮವಿಶ್ವಾಸದಿಂದ ಸತ್ಯವನ್ನೇ ಹೇಳಿದನು “ ಭಗವಾನ್ ನನ್ನ ಗೋತ್ರ ಯಾವುದು ಎಂದು ನನಗೆ ತಿಳಿಯದು.ನನ್ನ ತಾಯಿಯನ್ನು ಈ ಬಗ್ಗೆ ಕೇಳಿದಾಗ ಅವಳು ಮಗು ನೀನು ಯಾವ ಗೋತ್ರದವನೋ ನಾನು ಅರಿಯೆನು..ನಾನೊಬ್ಬ ಪರಿಚಾರಿಣಿ.ನನ್ನ ಗಂಡನ ಮನೆಯಲ್ಲಿ ಬರುವ ಅತಿಥಿ ಅಭ್ಯಾಗತರ ಸೇವೆ ಮಾಡುತ್ತಾ ಬಹಳ ವ್ಯಸ್ತಳಾಗಿದ್ದ ಯವ್ವನ ಕಾಲದಲ್ಲಿ ನಾನು ನಿನ್ನನ್ನು ಹಡೆದೆನು..ಹಾಗಾಗಿ ಗೋತ್ರಾದಿಗಳು ಯಾವುವು ಎಂದು ನೆನಪಿಟ್ಟುಕೊಳ್ಳುವ ಮನಸ್ಸು ನನಗಾಗ ಇರಲಿಲ್ಲ..ಆ ಸಮಯದಲ್ಲಿಯೇ ನಿನ್ನ ತಂದೆಯು ಗತಿಸಿದರು.ನಾನು ಅನಾಥೆಯಾಗಿಬಿಟ್ಟೆನು.ಈ ವಿಷಯದಲ್ಲಿ ನಾನು ಅಸಹಾಯಕಿಯಾಗಿದ್ದೇನೆ ಮಗೂ” ಎಂದು ಹೇಳಿದ್ದಾಳೆ ಗುರುಗಳೇ ಇಷ್ಟನ್ನು ಬಿಟ್ಟು ನನಗೆ ಗೋತ್ರದ ಬಗ್ಗೆ ಬೇರೆ ಏನೂ ಗೊತ್ತಿಲ್ಲ.ಭಗವಾನ್ ,ನಿಮಗೆ ನಮಸ್ಕಾರ ಮಾಡಿ ಹೇಳುತ್ತೇನೆ ನಾನು ಸತ್ಯಕಾಮ ಜಾಬಾಲ.ದಯವಿಟ್ಟು ನನಗೆ ನೀವು ಉಪನಯನ ಮಾಡಬೇಕು”

ಇದನ್ನು ಕೇಳಿದ ಗೌತಮರ ಮನಸ್ಸು ಸ್ವಲ್ಪ ಕಳವಳಕ್ಕೆ ಒಳಗಾಯಿತು. ಮುಖದಲ್ಲಿ ಚಿಂತೆಯ ಸುಕ್ಕುಗಳು ಕಾಣಿಸಿಕೊಂಡವು.ಸ್ವಲ್ಪ ಹೊತ್ತು ಚಿಂತಿಸಿದರು. ಗೋತ್ರವೇ ಗೊತ್ತಿಲ್ಲದ ಹುಡುಗನಿಗೆ ಉಪನಯನ ಮಾಡುವುದಾದದರೂ ಹೇಗೆ?ಇದು ಸಂಪ್ರದಾಯಕ್ಕೆ ಹೊರತಾದ ವಿಚಾರವಾಗುವುದಲ್ಲ..ಆದರೆ ಈ ಬಾಲಕನು ಶ್ರದ್ದೆಯಿಂದ ಕೂಡಿದ್ದಾನೆ.ಇದಕ್ಕಿಂತ ಹೆಚ್ಚಾಗಿ ಗುರುಕುಲವನ್ನು ಸೇರಲು ಸುಳ್ಳು ಹೇಳಲಿಲ್ಲ.ತನ್ನ ತಾಯಿಯು ಹೇಳಿದ್ದನ್ನೇ ಯಥಾವತ್ತಾಗಿ ನನ್ನ ಎದುರಿಗೆ ಬಿನ್ನವಿಸಿದ್ದಾನೆ.ಇವನು ಸತ್ಯನಿಷ್ಠನಾಗಿದ್ದಾನೆ ಜೊತೆಗೆ ಶ್ರದ್ದಾವಂತನೂ ಆಗಿದ್ದಾನೆ.ಹೀಗಾಗಿ ಇವನು ಉತ್ತಮ ಕುಲದವನೇ ಆಗಿರಬೇಕು.ಏನೇ ಆಗಲಿ ಇವನಿಗೆ ನಾನು ಉಪನಯನ್ನು ಮಾಡಿಯೇ ತೀರುತ್ತೇನೆ,ಇದು ಶಾಸ್ತ್ರದ ವಿರುದ್ದವಾಗುವುದಿಲ್ಲ.ಹೀಗೆ ಯೋಚಿಸಿದ ಗುರುಗಳು ಸತ್ಯಕಾಮನಿಗೆ “ ಸತ್ಯನಿಷ್ಠೆಯೇ ಒಬ್ಬ ವಿದ್ಯಾರ್ಥಿಗಿರಬೇಕಾದ ನಿಜವಾದ ಅರ್ಹತೆ.ನೀನು ಸತ್ಯಮಾರ್ಗವನ್ನು ಬಿಟ್ಟು ಚಲಿಸಲಿಲ್ಲ..ಆದ್ದರಿಂದ ಉಪನಯನ ಸಂಸ್ಕಾರಕ್ಕೆ ಬೇಕಾದ ಸಮಿತ್ತನ್ನು ತೆಗೆದುಕೊಂಡು ಬಾ” ಎಂದು ಹೇಳಿದರು..ಹೀಗೆ ಸತ್ಯಮಾರ್ಗದಲ್ಲಿ ಚಲಿಸಿ ಸತ್ಯಕಾಮನು ಗುರುಗಳ ಮನಸ್ಸನ್ನು ಗೆದ್ದಿದ್ದ.

-Deepashree M

Tags

Related Articles

FOR DAILY ALERTS
Close